ಹುಬ್ಬಳ್ಳಿ: ವಾಯುವ್ಯ ಸಾರಿಗೆ ಸಂಸ್ಥೆ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದೆ. ಇದು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನೌಕರಸ್ನೇಹಿ ವ್ಯವಸ್ಥೆ ಹಾಗೂ ಕಾರ್ಯಕ್ಷಮತೆ ವೃದ್ಧಿ ಹಾಗೂ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್) ನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.
ವ್ಯವಸ್ಥೆಯ ಪ್ರಾಯೋಗಿಕತೆ ಯಶಸ್ವಿಯಾಗಿದ್ದು, ಸದ್ಯ ಮೊದಲ ಹಂತದಲ್ಲಿ ಹುಬ್ಬಳ್ಳಿ ಕೇಂದ್ರ ಕಚೇರಿ ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗಿದೆ. ಸೆಪ್ಟೆಂಬರ್‌ನಿಂದ ಸಂಸ್ಥೆ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲೂ ಎಚ್‌ಆರ್‌ಎಂಎಸ್ ಲಭ್ಯವಾಗಲಿದ್ದು, ಸಾರಿಗೆ ನೌಕರರಿಗೆ ಆ್ಯಪ್ ಮೂಲಕ ಬೆರಳಂಚಿನಲ್ಲೇ ಸಮಗ್ರ ಮಾಹಿತಿ ದೊರೆಯಲಿದೆ. ಕೆಎಸ್ಆರ್ಟಿಸಿ ಹೊರತುಪಡಿಸಿ ಸಾರಿಗೆ ಇಲಾಖೆಯಲ್ಲಿ ಎಚ್‌ಆರ್‌ಎಂಎಸ್ ಸಾಫ್ಟ್‌ವೇರ್ ಹಾಗೂ ಆ್ಯಪ್ ಪರಿಚಯಿಸಿದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎನ್‌ಡಬ್ಲ್ಯು, ಕೆಆರ್‌ಟಿಸಿ ಪಾತ್ರವಾಗಿದೆ.
ಹಾಜರಾತಿ, ವೇತನ ಪ್ರಕ್ರಿಯೆ, ಬಡ್ತಿ, ವರ್ಗಾವಣೆ, ರಜೆ ನಿರ್ವಹಣೆ, ಸೇವಾ ದಾಖಲಾತಿ, ಆಡಳಿತಾತ್ಮಕ ಪ್ರಕ್ರಿಯೆ ಹೀಗೆ ಎಲ್ಲದರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ ಸುಲಭ ನಿರ್ವಹಣೆಗೆ ಸಹಕಾರಿಯಾಗುವ ಸಾಫ್ಟ್‌ವೇರ್ ಹಾಗೂ ಆ್ಯಪ್ ಇದಾಗಿದೆ. ಇದರಿಂದ ಮಾನವ ಸಂಪನ್ಮೂಲ, ಖರ್ಚು- ವೆಚ್ಚ ಉಳಿತಾಯದ ಜೊತೆಗೆ ಸಾರಿಗೆ ನೌಕರರು ಪ್ರತಿಯೊಂದು ಮಾಹಿತಿಗಾಗಿಯೂ ಕಚೇರಿಗೆ ಅಲೆದಾಡುವುದು, ವಾರಗಟ್ಟಲೇ ಕಾಯುವುದು ತಪ್ಪಲಿದೆ. ಬೆಂಗಳೂರಿನ 'ಕ್ಯಾರಿಟರ್' ಕಂಪನಿಯು ಎಚ್‌ಆರ್‌ಎಂಎಸ್ ತಂತ್ರಾಂಶ ಸಿದ್ದಪಡಿಸಿದ್ದು, ನಿರ್ವಹಣೆಗಾಗಿ 5 ವರ್ಷಗಳವರೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ಹಾವೇರಿ ಸೇರಿ 6 ಜಿಲ್ಲೆ, 9 ವಿಭಾಗಗಳನ್ನು ಒಳಗೊಂಡಿದೆ. ಸಂಸ್ಥೆಯಲ್ಲಿ 22 ಸಾವಿರ ನೌಕರರಿದ್ದು, ಈವರೆಗೂ ಅವರ ಎಲ್ಲ ದಾಖಲೆಗಳನ್ನು ಕಾಗದದಲ್ಲೇ ನಿರ್ವಹಣೆ ಮಾಡಬೇಕಿತ್ತು. ಹೀಗಾಗಿ ಪ್ರತಿಯೊಂದು ಕೆಲಸವು ನಿಧಾನವಾಗಿ ನಡೆಯುತ್ತಿತ್ತು.
ಇದೀಗ ಸಾರಿಗೆ ನೌಕರರು ಬಳಸಲು ಎಚ್‌ಆರ್‌ಎಂಎಸ್ ಆ್ಯಪ್ ಹಾಗೂ ಆಡಳಿತದ ದೃಷ್ಟಿಯಿಂದ ಕಚೇರಿಗಳಲ್ಲಿ ದಾಖಲೆಗಳ ನಿರ್ವಹಣೆಗೆ ಸಾಫ್ಟ್‌ವೇರ್ ಸಿದ್ಧಪಡಿಸಲಾಗಿದೆ. ಇದರಿಂದ ಸಮಯ, ಕಾಗದ ಬಳಕೆ ಉಳಿತಾಯದ ಜೊತೆಗೆ ಎಲ್ಲ ಪ್ರಕ್ರಿಯೆಗಳು ವೇಗವಾಗಿ ನಡೆಯಲಿವೆ. ಅಲ್ಲದೇ, ನಿಖರ ಮಾಹಿತಿ ದೊರೆಯಲಿದೆ.
ಈ ಕುರಿತಂತೆ ವಾಯುವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿ, ಬೇರೆ ಸಂಸ್ಥೆಗಳಿಗೆ ಹೋಲಿಕೆ ಮಾಡಿದರೆ ಸಾರಿಗೆ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಹೆಚ್ಚಿಗೆ ಇರುತ್ತದೆ. ಇದರ ನಿರ್ವಹಣೆ ಮಾಡಲು ಪ್ರಾಯೋಗಿಕವಾಗಿ ಹೆಚ್ಆರ್ಎಂಎಸ್ ಅನ್ನು ಕಳೆದ 6 ತಿಂಗಳಿಂದ ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಸೆಪ್ಟೆಂಬರ್ 1 ರಿಂದ ಪರಿಪೂರ್ಣವಾಗಿ ಜಾರಿಯಾಗಲಿದೆ ಎಂದರು.
ಇದರಿಂದ ನೌಕರರ ವೇತನ, ರಜೆ, ಪಿಎಫ್ ಸೇರಿದಂತೆ ಎಲ್ಲವನ್ನು ಆನ್ಲೈನ್ ಮೂಲಕ ಮಾಡಬಹುದಾಗಿದೆ. ಆನ್ಲೈನ್ ಅಪ್ಡೇಟ್ ಸಹ ಪಡೆದುಕೊಳ್ಳಬಹುದು. ರಜೆಗಳು ಎಷ್ಟು ಇವೆ. ರಜೆ ಮಂಜೂರಾಗಿದೆಯಾ? ಸೇರಿದಂತೆ ಎಲ್ಲವನ್ನು ಆನ್ಲೈನ್ ಮಾಡಲಾಗಿದೆ. 21 ಸಾವಿರ ನೌಕರರಿದ್ದು, ಅವರೆಲ್ಲರ ಮಾಹಿತಿ ಇದರಲ್ಲಿ ಸಿಗಲಿದೆ. ಒಂದೇ ಕಡೆ ಎಲ್ಲವನ್ನು ಕ್ರೋಡೀಕರಿಸಿ ಒಂದು ಸಾಫ್ಟ್‌ವೇರ್ ಅಭಿವೃದ್ದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆಎಸ್ಆರ್ಟಿಸಿ ಹೊರತುಪಡಿಸಿದರೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವ ಎರಡನೇ ಸಂಸ್ಥೆಯಾಗಿದೆ. ಅದಕ್ಕಿಂತಲೂ ಒಂದಿಷ್ಟು ವಿಭಿನ್ನವಾಗಿ ಅಭಿವೃದ್ದಿಪಡಿಸಲಾಗಿದೆ. ಇದರಲ್ಲಿ ನೌಕರರ ಶಿಸ್ತು ಕ್ರಮದ ಕುರಿತಂತೆ ಇದರಲ್ಲಿ ಮಾಹಿತಿ ಸಿಗಲಿದೆ. ಅಪಘಾತ, ಜಾರ್ಜ್ ಶೀಟ್, ಶಿಕ್ಷೆಯಾಗಿದ್ದರೆ ಆ ಮಾಹಿತಿಯ ಇದರಲ್ಲಿ ಲಭ್ಯವಾಗಲಿದೆ ಎಂದರು.
ಓರ್ವ ನೌಕರ ಕೆಲಸಕ್ಕೆ ಹಾಜರಾದ ದಿನದಿಂದ ನಿವೃತ್ತಿಯವರೆಗೂ ಎಲ್ಲ ಮಾಹಿತಿ ಹೆಚ್ಆರ್ಎಂಎಸ್ನಲ್ಲಿ ಅಳವಡಿಕೆ ಮಾಡಲಾಗತ್ತದೆ. ನೌಕರರ ಎಲ್ಲಾ ಮಾಹಿತಿ ಒಂದೇ ಕ್ಲಿಕ್ ಅಲ್ಲಿ ಲಭ್ಯವಾಗಲಿದೆ. ಅವರ ಬಗ್ಗೆ ಮಾಹಿತಿ ಇಲ್ಲ. ಸಂಬಳ ಬಂದಿಲ್ಲ ಎಂಬ ಸಮಸ್ಯೆ ಇರುವುದಿಲ್ಲ. ಇದರಿಂದ ದೂರುಗಳ ಸಂಖ್ಯೆ ಕಡಿಮೆಯಾಗಲಿದೆ. ನೌಕರರಿಗೆ ವಿಶ್ವಾಸ ಹೆಚ್ಚಾಗಲಿದೆ ಎಂದರು.
ಸಿಬ್ಬಂದಿಗೆ ಅನುಕೂಲ: ವಾಯುವ್ಯ ಸಾರಿಗೆ ಸಂಸ್ಥೆ ನೌಕರರಿಗೆ ಇದರಿಂದ ಬಹಳ ಉಪಯೋಗವಾಗಿದೆ. ಸಂಬಳ, ಒಟಿ, ರಜೆ ಸೇರಿದಂತೆ ಎಲ್ಲವನ್ನು ಆನ್ಲೈನ್ ಮಾಡಿದ್ದಾರೆ. ಇದರಿಂದ ನಮ್ಮ ಮೊಬೈಲ್ನಲ್ಲಿಯೇ ಎಲ್ಲವನ್ನು ನೋಡಿಕೊಳ್ಳಲು ಅವಕಾಶವಿದೆ. ಇದರಿಂದ ಸಮಯ ಉಳಿತಾಯವಾಗಲಿದೆ. ರಜೆ ತೆಗೆದುಕೊಳ್ಳಲು ಹಿರಿಯ ಅಧಿಕಾರಗಳ ಬಳಿ ಹೋಗಿ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಇದೀಗ ಯಾವುದೇ ತೊಂದರೆ ಇಲ್ಲದೆ ನಾವು ಇದ್ದಲ್ಲಿಯೇ ರಜೆಯನ್ನು ಆನ್ಲೈನ್ನಲ್ಲಿ ಹಾಕಿ ಪಡೆಯಬಹುದಾಗಿದೆ ಎಂದು ಈಟಿವಿ ಭಾರತಕ್ಕೆ ಹುಬ್ಬಳ್ಳಿ ಗ್ರಾಮೀಣ ಘಟಕದ ಸಿಬ್ಬಂದಿ ಮೆಹಬೂಬ್ ಅಲಿ ನದಾಫ್ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೋರ್ವ ನೌಕರ ಸಿದ್ಧಲಿಂಗೇಶ್ವರ ಶಿವಪ್ಪಯ್ಯಮಠ ಮಾತನಾಡಿ, ಹೆಚ್ ಆರ್ ಎಂಸಿ ಮಾಡಿದ್ದರಿಂದ ಸಿಬ್ಬಂದಿಗಳಿಗೆ ಬಹಳ ಅನುಕೂಲವಾಗಿದೆ. ನಾವು ಅನಾವಶ್ಯಕವಾಗಿ ಅಲೆದಾಟ ತಪ್ಪಿದೆ. ರಜೆ ಸೇರಿದಂತೆ ಪ್ರತಿಯೊಂದು ಇದರಲ್ಲಿ ಲಭ್ಯ ಇರುವುದರಿಂದ ನಮಗೆ ಹೆಚ್ಚು ಸಹಕಾರಿಯಾಗಿದೆ. ಆದ್ರೆ ರಜೆಯನ್ನು 24 ಗಂಟೆ ಮೊದಲೇ ಹಾಕಬೇಕು. ಹಿರಿಯ ಅಧಿಕಾರಿಗಳು ಅದನ್ನು ನೋಡಿ ರಜೆ ಮಂಜೂರು ಮಾಡುವುದರಿಂದ ರಜೆಗಾಗಿ ಕಚೇರಿ ಅಲೆದಾಟ ತಪ್ಪಿದೆ ಎಂದರು.
ಮೊಬೈಲ್ ಆ್ಯಪ್‌ನಲ್ಲೇ ನಿರ್ವಹಣೆ: ಈವರೆಗೆ ಹಾಜರಾತಿ ನಮೂದು, ರಜೆ, ಬಡ್ತಿ, ಅಪಘಾತ ಹಾಗೂ ಅಶಿಸ್ತು ನಡವಳಿಕೆ ಕಂಡುಬಂದರೆ ನೌಕರರ ವಿರುದ್ಧ ಕ್ರಮ, ವರ್ಗಾವಣೆ, ಇವೆಲ್ಲವೂ ಮ್ಯಾನ್ಯುಯೆಲ್ ಆಗಿ ನಡೆಯುತ್ತಿತ್ತು. ಇನ್ನು ಮುಂದೆ ಎಚ್‌ಆರ್‌ಎಂಎಸ್ ಮೂಲಕವೇ ನಿರ್ವಹಿಸಲಾಗುತ್ತದೆ. ಪ್ರತಿದಿನದ ಹಾಜರಾತಿ, ತಮಗೆ ಯಾವ ದಿನ ರಜೆ ಬೇಕು ಎಂಬುದನ್ನು ನೌಕರರು ಎಚ್‌ಆರ್‌ಎಂಎಸ್ ಮೊಬೈಲ್ ಆ್ಯಪ್‌ನಲ್ಲೇ ನಮೂದಿಸಬಹುದು. ಅಲ್ಲಿಯೇ ಪರಿಶೀಲಿಸಿಕೊಳ್ಳಬಹುದು.

