ಬಳ್ಳಾರಿ ಜೂನ್ 25. ಯಾವುದೇ ಕೈಗಾರಿಕೆ ಅಥವಾ ಕಾರ್ಖಾನೆ ಸ್ಥಾಪನೆಯ ಸಂದರ್ಭದಲ್ಲಿ ಜಮೀನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಜಮೀನು ಮಾಲೀಕರಿಗೆ ಪರಿಹಾರ ಮತ್ತು ಉದ್ಯೋಗ ನೀಡಬೇಕೆಂಬ ನಿಯಮವಿದೆ, ಈ ರೀತಿಯಾಗಿ ಜೆ ಎಸ್ ಡಬ್ಲ್ಯೂ ಕಾರ್ಖಾನೆ ನಮ್ಮ ಜಮೀನನ್ನು ರಸ್ತೆಗಾಗಿ ವಶಪಡಿಸಿಕೊಂಡು ಇಂದಿಗೆ ಸುಮಾರು ಐದು ವರ್ಷಗಳಾಗಿವೆ, ನಮ್ಮ ಜಮೀನಿಗೆ ಕೇವಲ ಪರಿಹಾರವನ್ನು ಮಾತ್ರ ನೀಡಿರುವ ಕಾರ್ಖಾನೆ ನಮ್ಮ ಕುಟುಂಬಕ್ಕೆ ಉದ್ಯೋಗವನ್ನು ನೀಡದೇ ವಂಚನೆ ಮಾಡುತ್ತಾ ಬರುತ್ತಿದೆ ಕಾರಣ ತಾವುಗಳು ನಮಗೆ ನ್ಯಾಯ ಕೊಡಿಸಬೇಕೆಂದು ಕುಡುತಿನಿ ಗ್ರಾಮದ ಭೂಸಂತ್ರಸ್ತ ರೈತರು ಇಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು.
ಕುಡುತಿನಿ ಗ್ರಾಮದ ಸುಮಾರು ಹತ್ತು ಕುಟುಂಬಗಳ ರೈತರು ಇಂದು ಲೋಕಾಯುಕ್ತ ಕಚೇರಿಗೆ ದೂರ ಸಲ್ಲಿಸಿ ಮಾಧ್ಯಮದ ಜೊತೆ ಮಾತನಾಡಿ, ಜಮೀನು ಕಳೆದುಕೊಂಡ ರೈತನ ಮಗ ಸಿ ಆನಂದ್ ಕುಮಾರ್, ಜೆ ಎಸ್ ಡಬ್ಲ್ಯೂ ಕಾರ್ಖಾನೆ ನಮ್ಮ ಜಮೀನನ್ನು ವಶಪಡಿಸಿಕೊಂಡಿದ್ದು ನಮ್ಮ ಕುಟುಂಬಕ್ಕೆ ಕೈಗಾರಿಕಾ ಕಾನೂನು ಪ್ರಕಾರ ಒಂದು ಉದ್ಯೋಗವನ್ನು ನೀಡಬೇಕಾಗಿರುತ್ತದೆ ಆ ಉದ್ಯೋಗಕ್ಕಾಗಿ ನಾವು ಪದೇ ಪದೇ ಅಲೆದು ಅಲೆದು ನಮಗೆ ಸಾಕಾಗಿ ಹೋಗಿ ಮೇಲ್ಕಂಡ 10 ಕುಟುಂಬಗಳ ರೈತರ ಮನೆಗೆ ಒಂದರಂತೆ 10 ಉದ್ಯೋಗಗಳನ್ನು ಕೊಡಿಸಬೇಕೆಂದು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿಕೊಂಡಿದ್ದವು ನಮ್ಮ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಜಿಂದಾಲ್ ಕಾರ್ಖಾನೆಗೆ ಉದ್ಯೋಗ ನೀಡುವಂತೆ ಪತ್ರವನ್ನು ಸಹ ಬರೆದಿರುತ್ತಾರೆ ಈ ಪತ್ರಕ್ಕೆ ಕ್ಯಾರೆ ಎನ್ನದ ಜೆ ಎಸ್. ಡಬ್ಲ್ಯೂ ಅಧಿಕಾರಿಗಳು ಇಂದಿಗೂ ಸಹ ನಮಗೆ ಉದ್ಯೋಗವನ್ನು ನೀಡದೆ ಆಗ ಈಗ ಎಂದು ವಂಚಿಸುತ್ತಾ ಬರುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶಕ್ಕೂ ಸಹ ಮಣಿಯದ ಜಿಂದಾಲ್ ಅಧಿಕಾರಿಗಳು ಇಲ್ಲಿಯವರೆಗೂ ನಮಗೆ ಉದ್ಯೋಗವನ್ನು ಒದಗಿಸಿರುವುದಿಲ್ಲ ಇದರಿಂದ ನಮ್ಮ ಕುಟುಂಬ ನಡೆಸುವುದು ಬಹಳ ದುಃಸ್ತರವಾಗಿದೆ.
ಜಿಲ್ಲಾಧಿಕಾರಿಗಳು ಸಹ ನಮಗೆ ನ್ಯಾಯ ಒದಗಿಸಿ ಕೊಡದೆ ನಿರ್ಲಕ್ಷ್ಯ ಧೋರಣೆ ತಳೆದಿರುತ್ತಾರೆ, ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿ, ಡಿ ವೈ ಎಸ್ಪಿ ಇವರುಗಳು ಜಿಂದಾಲ್ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ನಮಗೆ ಅನುಮಾನ ಉಂಟು ಮಾಡಿದೆ ಎಂದು ಅವರು ಅನುಮಾನವನ್ನು ವ್ಯಕ್ತಪಡಿಸಿದರು.






