ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಬಂಧಿತರಾಗಿ ನಿನ್ನೆ ಜೈಲಿನಿಂದ ಬಿಡುಗಡೆಯಾದ ರಾಜ್ಯದ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕೇಂದ್ರದ ಬಿಜೆಪಿ ಸರ್ಕಾರವು ಕಾಂಗ್ರೆಸ್ ಮತ್ತು ವಿಪಕ್ಷಗಳ ಸರ್ಕಾರಗಳನ್ನು ಬೀಳಿಸಲು ಪ್ರಯತ್ನ ನಡೆಸುತ್ತಿದೆ. ಆದುದರಿಂದ ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ತಮ್ಮನ್ನು ಬಂಧಿಸಲಾಗಿದೆ ಎಂದು ನೀಡಿರುವ ಹೇಳಿಕೆಯನ್ನು ಬಿಜೆಪಿ ಧುರೀಣ, ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕರಾದ ಜಿ.ಜನಾರ್ದನರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ. ಅವರ ಹೇಳಿಕೆಯು ಬಳ್ಳಾರಿ ಜನತೆಗೆ ನಗೆ ತರಿಸುವಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಜನಾಂಗದವರ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಈ ಹಿಂದೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದರು. ಆದರೆ ಇದೀಗ ವಾಲ್ಮೀಕಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಂಗ್ರೆಸ್ ಸರ್ಕಾರದ ಹೆಗ್ಗಳಿಕೆ ಎಂದು ಟೀಕಿಸಿದರು.
ಈ ಹಿಂದೆ 2011ರ ಸೆಪ್ಟಂಬರ್ನಲ್ಲಿ ನನ್ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಅಂತೆಯೇ 2012 ರಲ್ಲಿ ಶಾಸಕ ಬಿ.ನಾಗೇಂದ್ರ ಅವರ ಬಂಧನವಾದಾಗಲೂ ಯುಪಿಎ ಸರ್ಕಾರವೇ ಅಧಿಕಾರದಲ್ಲಿತ್ತು. 2012ರಲ್ಲಿ ಆನಂದ್ಸಿAಗ್, ಸುರೇಶ್ ಬಾಬು, ನಾಗೇಂದ್ರ, ಸತೀಶ್ಶೈಲ್ ಸೇರಿ ಐವರು ಶಾಸಕರನ್ನು ಬಂಧಿಸಲಾಗಿತ್ತು. ಯುಪಿಎ ಸರ್ಕಾರದಲ್ಲಿ ನಾಗೇಂದ್ರರ ಬಂಧನವಾಗಿ ಎರಡು ವರ್ಷ ಜೈಲಿನಲ್ಲಿದ್ದುದನ್ನು ಅವರು ಮರೆಯಬಾರದು ಎಂದು ರೆಡ್ಡಿ ಟಾಂಗ್ ನೀಡಿದರು.







