Skip to main content
ಹೊಸಅಧ್ಯಾಯ
News

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

12 Jul 2026

ಬಳ್ಳಾರಿ, ಜು.12: ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಮಿಕರು, ಎಚ್‌ಐವಿ ಸೋಂಕಿತರು ಹಾಗೂ ಇತರ ವಂಚಿತ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡುವ ಉದ್ದೇಶದಿಂದ ಸ್ಥಾಪಿತಗೊಂಡಿರುವ ಸಮೃದ್ಧಿ ಫೌಂಡೇಶನ್ ಕಚೇರಿ ನಗರದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕಚೇರಿಯಲ್ಲಿ ಅಕ್ಕಯಮ್ಮ ಪದ್ಮಶಾಲಿ ಅವರ ಅಮೃತಹಸ್ತಗಳಿಂದ ಉದ್ಘಾಟನೆಯಾಯಿತು.


ಸಂಸ್ಥೆಯ ಸಂಸ್ಥಾಪಕಿ ವೀಣಾ ಅವರು ಮಾತನಾಡಿ, ಮೇ 30, 2026ರಂದು ಬಳ್ಳಾರಿ ಜಿಲ್ಲೆಯಲ್ಲಿ ಸಮೃದ್ಧಿ ಫೌಂಡೇಶನ್ ನೋಂದಣಿಯಾಗಿದ್ದು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಮಿಕರು, ಎಚ್‌ಐವಿ ಸೋಂಕಿತ ಸಮುದಾಯದ ಕುಟುಂಬಗಳ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ಅಂಗವಿಕಲರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.


ಸಾಮಾಜಿಕ ಕಳಂಕ, ತಾರತಮ್ಯ ಹಾಗೂ ಲಿಂಗಭೇದ ನಿವಾರಣೆ, ಆರೋಗ್ಯ, ಶಿಕ್ಷಣ, ಉದ್ಯೋಗ, ಜೀವನೋಪಾಯ, ಸಾಮಾಜಿಕ ಭದ್ರತೆ ಮತ್ತು ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ವಕಾಲತ್ತು ಕಾರ್ಯಕ್ರಮಗಳ ಮೂಲಕ ಸಮಾನ ಅವಕಾಶ ಕಲ್ಪಿಸಲು ಫೌಂಡೇಶನ್ ಶ್ರಮಿಸಲಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ನಿತ್ಯಜೀವನ ನೆಟ್ವರ್ಕ್ ನಿರ್ದೇಶಕ ಕುಮಾರ್ ಮಾತನಾಡಿ, 2004ರಿಂದ ಎಚ್‌ಐವಿ ಸೋಂಕಿತರಿಗೆ ಪೌಷ್ಟಿಕ ಆಹಾರ ಹಾಗೂ ಪುನರ್ವಸತಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಮೃದ್ಧಿ ಫೌಂಡೇಶನ್ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.


ಸಮೃದ್ಧಿ ಫೌಂಡೇಶನ್ ಅಧ್ಯಕ್ಷ ಎಂ. ನಾಗರಾಜ್ ಮಾತನಾಡಿ, ಜಿಲ್ಲೆಯ ವಿವಿಧ ಸಮುದಾಯಗಳ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸೋಂಕಿತರಿಗೆ ಪೌಷ್ಟಿಕ ಆಹಾರ ಮತ್ತು ಉತ್ತಮ ಜೀವನ ನಿರ್ಮಾಣಕ್ಕೆ ಸಂಸ್ಥೆ ಸದಾ ಬದ್ಧವಾಗಿರಲಿದೆ ಎಂದರು.


ಕರ್ನಾಟಕ ರಾಜ್ಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ರಾಜ್ ಮಾತನಾಡಿ, ಸಮುದಾಯದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ಸಮುದಾಯ ಸೇವೆಯಲ್ಲಿ ಹಿನ್ನಡೆಯಾಗಬಾರದು. ಒಕ್ಕೂಟವು ಸದಾ ಸಮೃದ್ಧಿ ಫೌಂಡೇಶನ್ ಜೊತೆ ನಿಲ್ಲಲಿದೆ ಎಂದು ಹೇಳಿದರು.


ಒಂದೆಡೆ ಸಂಸ್ಥೆಯ ಉತ್ತರ ಕರ್ನಾಟಕ ಫೀಲ್ಡ್ ಕೋ-ಆರ್ಡಿನೇಟರ್ ಮಾಯಾ ಎಸ್.ಆರ್. ನಾಯಕ್ ಮಾತನಾಡಿ, ಸಂಸ್ಥೆ ಕಟ್ಟುವುದು ಮತ್ತು ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ಸವಾಲಿನ ಕೆಲಸವಾಗಿದ್ದು, ಸಮೃದ್ಧಿ ಫೌಂಡೇಶನ್‌ಗೆ ತಮ್ಮ ಸಂಸ್ಥೆಯ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.


ಕರ್ನಾಟಕ ಅಂತರ್ಲಿಂಗಿ ಅಸೋಸಿಯೇಷನ್ ಅಧ್ಯಕ್ಷೆ ಅಬೆದಾ ಬೇಗಂ ಮಾತನಾಡಿ, ಅಂತರ್ಲಿಂಗಿ ಸಮುದಾಯದ ಹಕ್ಕುಗಳಿಗಾಗಿ ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತಿದ್ದು, ಸಮೃದ್ಧಿ ಫೌಂಡೇಶನ್ ಜೊತೆಗೂಡಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.

ಪ್ರಗತಿ ಸದಾ ಸೇವಾ ಸಂಸ್ಥೆಯ ಅಧ್ಯಕ್ಷೆ ಪರ್ವೀನ್ ಬಾನು ಮಾತನಾಡಿ, ಸಮಾಜದಲ್ಲಿ ಸವಾಲುಗಳಿದ್ದರೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಎಲ್ಲವನ್ನೂ ಸಾಧಿಸಬಹುದು ಎಂದು ಕರೆ ನೀಡಿದರು.


ಸುಪ್ರೀಂ ಕೋರ್ಟ್ ಸಮಾನ ಅವಕಾಶಗಳ ಸಮಿತಿ ಸದಸ್ಯೆ ಅಕ್ಕಯಮ್ಮ ಮಾತನಾಡಿ, ಬಳ್ಳಾರಿಯಲ್ಲಿ ಸಮೃದ್ಧಿ ಫೌಂಡೇಶನ್ ಸ್ಥಾಪನೆಯಾಗಿರುವುದು ಸಂತಸದ ಸಂಗತಿಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ನಡೆದ ಕಾನೂನು ಹೋರಾಟಗಳು, ಸುಪ್ರೀಂ ಕೋರ್ಟ್ ತೀರ್ಪುಗಳು ಹಾಗೂ ಇತ್ತೀಚಿನ ಕಾನೂನು ಬದಲಾವಣೆಗಳಿಂದ ಎದುರಾಗಿರುವ ಸವಾಲುಗಳ ಕುರಿತು ವಿವರಿಸಿದರು. ಸಮುದಾಯದವರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕೆಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ, ಕರ್ನಾಟಕ ಅಂತರ್ಲಿಂಗಿ ಅಸೋಸಿಯೇಷನ್, ಒಂದೆಡೆ, ಪ್ರಕೃತಿಕಲಾ ಸೇವಾ ಸಮಿತಿ ಟ್ರಸ್ಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಎಚ್‌ಐವಿ/ಏಡ್ಸ್ ನಿಯಂತ್ರಣಾಧಿಕಾರಿ ಡಾ. ಇಂದ್ರಾಣಿ ಹಾಗೂ ಹಲವು ಸಾಮಾಜಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಸಮೃದ್ಧಿ ಫೌಂಡೇಶನ್ ಕಾರ್ಯಚಟುವಟಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.

News

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್‌ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ

11 Jul 2026

ಹೊಳಲ್ಕೆರೆ, ಜು. 11: ತಾಲೂಕು ಆಡಳಿತದ ವತಿಯಿಂದ ಹೊಳಲ್ಕೆರೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ವಿದ್ಯಾರ್ಥಿನಿಯರಿಗೆ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಎಸ್., ಮತದಾನವು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಹಾಗೂ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಮತದಾರರ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು.


ಹಳೆಯ ಮತದಾರರ ಗುರುತಿನ ಚೀಟಿಯನ್ನು (ವೋಟರ್ ಐಡಿ) ಅಗತ್ಯವಿದ್ದಲ್ಲಿ ನವೀಕರಿಸಿಕೊಳ್ಳುವ ಮೂಲಕ ಮತದಾರರ ಪಟ್ಟಿಯನ್ನು ಸಮರ್ಪಕವಾಗಿಡಲು ಸಹಕರಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.


ವಿದ್ಯಾರ್ಥಿನಿಯರು ತಮ್ಮ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸುವಂತೆ ಅವರು ಸಲಹೆ ನೀಡಿದರು.


ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಿಬ್ಬಂದಿ ವಿನಯ್ ಕುಮಾರ್, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ವರದಿ: ನಾಗರಾಜ್ ಕೆ.

News

ತಾಳ್ಯ ಗ್ರಾಮ ಪಂಚಾಯಿತಿಯಲ್ಲಿ ಎಸ್‌ಐಆರ್ ಜಾಗೃತಿ ಅಭಿಯಾನಕ್ಕೆ ಚಾಲನೆ

10 Jul 2026

ಹೊಳಲ್ಕೆರೆ, ಜು. 10: ತಾಲೂಕಿನ ತಾಳ್ಯ ಗ್ರಾಮ ಪಂಚಾಯಿತಿ ವತಿಯಿಂದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳಾದ ಶಿವಪ್ರಕಾಶ್ ಎಸ್. ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸಿ, ಎಸ್‌ಐಆರ್ ಅಭಿಯಾನದಡಿ ಮನೆ ಬಾಗಿಲಿಗೆ ಆಗಮಿಸುವ ಬಿ.ಎಲ್.ಒ.ಗಳಿಗೆ ಸಾರ್ವಜನಿಕರು ಅಗತ್ಯ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಮನವಿ ಮಾಡಿದರು.


ಪ್ರತಿಯೊಬ್ಬ ಅರ್ಹ ಮತದಾರರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶುಭ ಉಪಸ್ಥಿತರಿದ್ದರು. ಜಾಗೃತಿ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಎಸ್‌ಐಆರ್ ಕುರಿತು ಅರಿವು ಮೂಡಿಸಿದರು.


ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಿಬ್ಬಂದಿ ವಿನಯ್ ಕುಮಾರ್, ಗಿರಿಧರ್, ತಾಳ್ಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿವಮೂರ್ತಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ತಿಮ್ಮೇಶ್, ಡೇಟಾ ಆಪರೇಟರ್ ಕುಮಾರಿ ಜ್ಯೋತಿ, ಕಾಲೇಜಿನ ಪ್ರಾಂಶುಪಾಲರು, ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಎನ್‌ಆರ್‌ಎಲ್‌ಎಂ ಸಿಬ್ಬಂದಿ ವಿಜಯ್ ಕುಮಾರ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ: ನಾಗರಾಜ ಕೆ.

News

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಚಾಲನೆ

07 Jul 2026

ಹೊಳಲ್ಕೆರೆ, ಜು. 7: ಹೊಳಲ್ಕೆರೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.


ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಎಸ್. ಹಾಗೂ ತಾಲೂಕು ದಂಡಾಧಿಕಾರಿ ವಿಜಯಕುಮಾರ್ ಕೊರಲಗುಂದಿ ಅವರು ಸಂಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮತದಾರರ ಪಟ್ಟಿಯನ್ನು ನಿಖರ ಹಾಗೂ ಸಮಗ್ರವಾಗಿ ಪರಿಷ್ಕರಿಸುವ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಿದರು.


ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಅನಗತ್ಯ ಹೆಸರುಗಳ ತೆರವು ಕಾರ್ಯವನ್ನು ನಿಯಮಾನುಸಾರ ಕೈಗೊಳ್ಳುವಂತೆ ಅಧಿಕಾರಿಗಳು ತಿಳಿಸಿದರು. ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಂಡು ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಸಂಬಂಧಪಟ್ಟ ವಿಆರ್‌ಡಬ್ಲ್ಯು (VRW) ಸಿಬ್ಬಂದಿ, ತಾಲೂಕು ಪಂಚಾಯಿತಿ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

News

ಉಪನ್ಯಾಸಕರಿಗೆ ಪ್ರೌಢಶಾಲಾ ಬೋಧನೆ ಕರಡು ತಿದ್ದುಪಡಿ ಹಿಂಪಡೆಯಲು ಆಗ್ರಹ: ಜು. 9ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ

06 Jul 2026

ಹೊಳಲ್ಕೆರೆ, ಜು. 6: ಕರ್ನಾಟಕ ಸರ್ಕಾರವು ಕರ್ನಾಟಕ ನಾಗರೀಕ ಸೇವಾ ನಿಯಮಗಳು–2006ಕ್ಕೆ ತಿದ್ದುಪಡಿ ಮಾಡುವ ಮೂಲಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಪ್ರೌಢಶಾಲೆಯ 9 ಮತ್ತು 10ನೇ ತರಗತಿಗಳಿಗೆ ಬೋಧನೆ ಮಾಡುವ ಅವಕಾಶ ಕಲ್ಪಿಸಿರುವ ಕರಡು ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ, ಜುಲೈ 9ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಚಾರ್ಯರ ಸಂಘದ ಸಹಯೋಗದಲ್ಲಿ ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳಲಾಗಿದೆ.


ರಾಜ್ಯಾಧ್ಯಕ್ಷ ಎ. ಹೆಚ್. ನಿಂಗೇಗೌಡ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ಹೊಳಲ್ಕೆರೆ ತಾಲ್ಲೂಕಿನ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಚಾರ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಮುಖಂಡರು ಕರೆ ನೀಡಿದರು.


ಈ ಸಂದರ್ಭದಲ್ಲಿ ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಆರ್. ಚಂದ್ರಶೇಖರ ಮಾತನಾಡಿ, ಪದವಿ ಪೂರ್ವ ಶಿಕ್ಷಣದ ಗುಣಮಟ್ಟ ಮತ್ತು ಉಪನ್ಯಾಸಕರ ಸೇವಾ ಹಿತದೃಷ್ಟಿಯಿಂದ ಈ ಕರಡು ತಿದ್ದುಪಡಿಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.


ಸಭೆಯಲ್ಲಿ ಪ್ರಾಚಾರ್ಯರಾದ ಅಶೋಕ್ ಎನ್., ಮಹೇಶ್ವರಪ್ಪ, ನಿರಂಜನಕುಮಾರ್, ಶಿವರುದ್ರಮೂರ್ತಿ ಹಾಗೂ ಶಿವಣ್ಣ ಉಪಸ್ಥಿತರಿದ್ದರು. ಉಪನ್ಯಾಸಕರ ಸಂಘದ ಪದಾಧಿಕಾರಿಗಳಾದ ಭೈರಪ್ಪ, ಮಹಾಂತೇಶ್, ಸಿದ್ದೇಶ್, ಕರಿಬಸವೇಶ್ವರ, ಮಂಜಪ್ಪ, ಉಮೇಶ್, ವಿಜಯ್, ರಂಗಸ್ವಾಮಿ, ಮಲ್ಲಿಕಾರ್ಜುನ, ಮೂರ್ತಿ, ಗಣೇಶ್, ಜಿ.ಆರ್. ಮಂಜುನಾಥ್ ಮತ್ತು ಮಂಜಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

News

ಐದು ದಿನದಲ್ಲೇ ಎಸ್‌ಐಆರ್ ವಿಶೇಷ ಮತಪಟ್ಟಿ ಪರಿಷ್ಕರಣೆ ಪೂರ್ಣ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ. ಉಮೇಶ್‌ಗೆ ತಹಸಿಲ್ದಾರರ ಅಭಿನಂದನೆ

06 Jul 2026

ಹೊಳಲ್ಕೆರೆ, ಜು. 6: ವಿಶೇಷ ಮತಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಕೇವಲ ಐದು ದಿನಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಅಮೃತಾಪುರ ಮತಗಟ್ಟೆಯ ಬಿ.ಎಲ್.ಒ. ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ. ಉಮೇಶ್ ಅವರನ್ನು ಹೊಳಲ್ಕೆರೆ ತಹಸಿಲ್ದಾರ ವಿಜಯಕುಮಾರ್ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ ವಿಜಯಕುಮಾರ್, "ಟಿ.ಪಿ. ಉಮೇಶ್ ಅವರು ತಮ್ಮ ವ್ಯಾಪ್ತಿಯ ಮತದಾರರ ಮಾಹಿತಿ ಸಂಗ್ರಹ, ದಾಖಲೆಗಳ ಪರಿಶೀಲನೆ ಹಾಗೂ ಎಸ್‌ಐಆರ್ ವಿಶೇಷ ಮತಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ಮತ್ತು ಸಮಯಪ್ರಜ್ಞೆಯಿಂದ ನಿರ್ವಹಿಸಿ ಕೇವಲ ಐದು ದಿನಗಳಲ್ಲೇ ಪೂರ್ಣಗೊಳಿಸಿದ್ದಾರೆ. ಅವರ ಕಾರ್ಯಶ್ರದ್ಧೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಇತರ ಬಿ.ಎಲ್.ಒ.ಗಳಿಗೆ ಮಾದರಿಯಾಗಿದೆ" ಎಂದು ಶ್ಲಾಘಿಸಿದರು.


"ಶಿಕ್ಷಕರಾಗಿ ಶಿಕ್ಷಣ ಇಲಾಖೆಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಉಮೇಶ್ ಅವರು, ಚುನಾವಣಾ ಇಲಾಖೆಯ ಕರ್ತವ್ಯಗಳನ್ನೂ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಸ್‌ಐಆರ್ ಕಾರ್ಯದ ಅವಧಿಯಲ್ಲಿ ಮನೆಗೆ ತೆರಳದೆ ಅಮೃತಾಪುರದಲ್ಲೇ ಹಗಲು-ರಾತ್ರಿ ಉಳಿದು ಪ್ರತಿಯೊಬ್ಬ ಮತದಾರರ ಮಾಹಿತಿಯನ್ನು ಖುದ್ದಾಗಿ ಸಂಗ್ರಹಿಸಿ ದಾಖಲಿಸಿದ್ದಾರೆ. ರಾಜ್ಯದಲ್ಲಿಯೇ ಅತ್ಯಂತ ವೇಗವಾಗಿ ಈ ಕಾರ್ಯವನ್ನು ಪೂರ್ಣಗೊಳಿಸಿರುವುದು ಅವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಅವರ ಈ ಸಾಧನೆಯನ್ನು ತಾಲ್ಲೂಕು ಆಡಳಿತ ಗೌರವದಿಂದ ಅಭಿನಂದಿಸುತ್ತದೆ" ಎಂದು ಹೇಳಿದರು.


ಈ ಸಂದರ್ಭದಲ್ಲಿ ಚುನಾವಣಾ ನೋಂದಣಾಧಿಕಾರಿ (ಆರ್‌.ಓ.) ಚಂದ್ರಕುಮಾರ್, ಗ್ರಾಮ ಆಡಳಿತಾಧಿಕಾರಿ ಮಹಂತೇಶ್ ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

News

ವೋಲ್ಟೇಜ್ ಸಮಸ್ಯೆ; ಚಿಟ್ಟಿಚಂದ್ರಶೇಖರ ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ

05 Jul 2026

ಬಳ್ಳಾರಿ,ಜು.೦೫: ನಗರದ ಗುಗ್ಗರಹಟ್ಟಿ ವ್ಯಾಪ್ತಿಯ ಸಾಯಿಕಾಲೋನಿಯಿಂದ ಕೃಷ್ಣಕಾಲೋನಿಯವರೆಗೆ ಕಳೆದ ಹಲವು ವರ್ಷಗಳಿಂದ ವಿದ್ಯುತ್ ವೋಲ್ಟೇಜ್ ಸಮಸ್ಯೆ ಉಲ್ಬಣಿಸಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.


ಈ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ಸ್ಥಳೀಯ ನಿವಾಸಿಗಳು ಜೂನ್ ೨೮ ರಂದು ಜೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್ ಬಾಬು ಮತ್ತು ಕಿರಿಯ ಇಂಜಿನಿಯರ್ ಚಿಟ್ಟಿ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ವೋಲ್ಟೇಜ್ ಸಮಸ್ಯೆಯಿಂದಾಗಿ ವಿದ್ಯುತ್ ಉಪಕರಣಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ದೈನಂದಿನ ಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದರು.


ಮನವಿಗೆ ಸ್ಪಂದಿಸಿದ ಕಿರಿಯ ಇಂಜಿನಿಯರ್ ಚಿಟ್ಟಿ ಚಂದ್ರಶೇಖರ್ ಅವರು ಶುಕ್ರವಾರದಂದು ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿದರು. ಸ್ಥಳೀಯರ ಸಮಸ್ಯೆ ಆಲಿಸಿದ ಅವರು, ವಿದ್ಯುತ್ ವೋಲ್ಟೇಜ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಿವಾಸಿಗಳಾದ ನೂರ್, ಶರ್ಮಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

News

ಒಲಿಂಪಿಯಾಡ್‌ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

04 Jul 2026

ಚಿಕ್ಕಜಾಜೂರು, ಜು. 4: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಎಸ್‌ಸಿ (CSC) ಸೇವಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಆನ್‌ಲೈನ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿಕ್ಕಜಾಜೂರು ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.


ತಾಲೂಕಿನ 652 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದು, ಶೇಕಡಾ 80ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ ಮಾತನಾಡಿ, ಒಲಿಂಪಿಯಾಡ್ ಪರೀಕ್ಷೆಯು 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು, ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.


ಪರೀಕ್ಷೆಯು ಕೇವಲ ಶಾಲಾ ಪಠ್ಯಕ್ರಮಕ್ಕೆ ಸೀಮಿತವಾಗಿರದೆ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಆಳವಾದ ಜ್ಞಾನ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದೆ.


ಜಾಗತಿಕ ಮಟ್ಟದ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಇಂತಹ ಪರೀಕ್ಷೆಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ಉಮಾಪತಿ, ಶಿಕ್ಷಕಿ ಮಂಜುಳಾ ಬಾಯಿ, ಯೋಜನೆಯ ಮೇಲ್ವಿಚಾರಕಿ ಶಾರದ, ತಾಲೂಕು ನೋಡಲ್ ಅಧಿಕಾರಿ ಅಜಯ್, ಸೇವಾ ಪ್ರತಿನಿಧಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

News

ವಿಬಿಜಿ ರಾಮ್ ಜಿ ಯೋಜನೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ

02 Jul 2026

ಹೊಳಲ್ಕೆರೆ, ಜು. 2: ಹೊಳಲ್ಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಬಿಜಿ ರಾಮ್ ಜಿ (VBG RAM G) ಯೋಜನೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಎಸ್.ಆರ್. ಬಾಬು ಅವರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ, ವಿಬಿಜಿ ರಾಮ್ ಜಿ ಯೋಜನೆಯ ಉದ್ದೇಶ ಹಾಗೂ ಮಹತ್ವದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

ನಂತರ ಎಡಿಪಿಸಿ ಮೋಹನ್ ಮಾತನಾಡಿ, ವಿಬಿಜಿ ರಾಮ್ ಜಿ ಯೋಜನೆ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಉದ್ಯೋಗ ಖಾತ್ರಿ) ನಡುವಿನ ವ್ಯತ್ಯಾಸವನ್ನು ವಿವರಿಸಿದರು.


ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ಅವರು ಮಾತನಾಡಿ, ವಿಬಿಜಿ ರಾಮ್ ಜಿ ಯೋಜನೆಯ ಅನುಷ್ಠಾನ, ಸಾಮಾಜಿಕ ಲೆಕ್ಕಪರಿಶೋಧನೆ (ಸೋಶಿಯಲ್ ಆಡಿಟ್) ಹಾಗೂ ಸ್ಥಳೀಯ ಲೆಕ್ಕಪರಿಶೋಧನೆ (ಲೋಕಲ್ ಆಡಿಟ್) ಕುರಿತು ಮಾಹಿತಿ ನೀಡಿದರು.


ಹೊಳಲ್ಕೆರೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಎಸ್. ಅವರು ಮಾತನಾಡಿ, ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು. ಅಲ್ಲದೆ, ತಾಲೂಕಿನಲ್ಲಿ ತಕ್ಷಣದಿಂದಲೇ ಎನ್‌ಎಂಆರ್ (NMR) ಜನರೇಟ್ ಮಾಡುವಂತೆ ಸೂಚಿಸಿದರು.


ತರಬೇತಿಯ ಮಾಸ್ಟರ್ ಟ್ರೈನರ್ ಹಾಗೂ ವಿಬಿಜಿ ರಾಮ್ ಜಿ ಸಹಾಯಕ ನಿರ್ದೇಶಕ ನಟರಾಜ್ ಅವರು ಯೋಜನೆಯ ವಿವಿಧ ಅಂಶಗಳು, ಕಾರ್ಯವಿಧಾನ ಹಾಗೂ ಅನುಷ್ಠಾನದ ಕುರಿತು ಸಮಗ್ರ ತರಬೇತಿ ನೀಡಿದರು.


ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಸುರೇಶ್, ಎಂಐಎಸ್ ಕೋ-ಆರ್ಡಿನೇಟರ್ ಜಗದೀಶ್, ಐಸಿಎಫ್ ಕೋ-ಆರ್ಡಿನೇಟರ್ ಉಮಾಶಂಕರ್ ಜಿ.ಆರ್., ಟಿಸಿ ಪ್ರತಾಪ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.


ತಾಲೂಕಿನ 29 ಗ್ರಾಮ ಪಂಚಾಯಿತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಟಿಎಟಿ, ಡಿಇಒ, ಬಿಎಫ್‌ಟಿ ಹಾಗೂ ಜಿಕೆಎಂ ಸಿಬ್ಬಂದಿ ತರಬೇತಿಯಲ್ಲಿ ಭಾಗವಹಿಸಿ ಯೋಜನೆಯ ಕುರಿತು ಮಾಹಿತಿ ಪಡೆದುಕೊಂಡರು.

News

ರಾಷ್ಟ್ರೀಯ 'ಇನ್‌ಸ್ಪೈರಿಂಗ್ ಚೆಸ್ಟ್ ಸ್ಪೆಷಲಿಸ್ಟ್ ಆಫ್ ಇಂಡಿಯಾ–2026' ಪ್ರಶಸ್ತಿ ಡಾ. ಹರೀಶ್ ಜಿ.ಎಂ.ಗೆ

02 Jul 2026

ಬಳ್ಳಾರಿ, ಜು. 2: ಎದೆರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಸಲ್ಲಿಸಿರುವ ವೈದ್ಯರಾದ ಡಾ. ಹರೀಶ್ ಜಿ.ಎಂ. ಅವರಿಗೆ ಪ್ರತಿಷ್ಠಿತ The Economic Times of India ವತಿಯಿಂದ ಪ್ರದಾನಗೊಳ್ಳುವ 'Inspiring Chest Specialist of India–2026' ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಎದೆರೋಗ ಚಿಕಿತ್ಸೆಯಲ್ಲಿ ತೋರಿದ ವೈದ್ಯಕೀಯ ಪರಿಣತಿ, ರೋಗಿಗಳ ಮೇಲಿನ ಮಾನವೀಯ ಕಾಳಜಿ, ನಿಷ್ಠಾವಂತ ಸೇವೆ ಹಾಗೂ ಸಮಾಜದ ಆರೋಗ್ಯ ರಕ್ಷಣೆಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಡಾ. ಹರೀಶ್ ಜಿ.ಎಂ. ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ವೈದ್ಯಕೀಯ ವೃತ್ತಿಯಲ್ಲಿ ಸೇವಾ ಮನೋಭಾವ, ಶಿಸ್ತು ಮತ್ತು ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಚಿಕಿತ್ಸಾ ವಿಧಾನಗಳಿಂದ ಡಾ. ಹರೀಶ್ ಜಿ.ಎಂ. ಅವರು ವಿಶಿಷ್ಟ ಗುರುತನ್ನು ಗಳಿಸಿದ್ದಾರೆ. ಎದೆರೋಗಗಳಿಂದ ಬಳಲುತ್ತಿರುವ ಅನೇಕ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಮೂಲಕ ಅವರ ಬದುಕಿನಲ್ಲಿ ಆಶಾಕಿರಣವಾಗಿದ್ದಾರೆ.


ಡಾ. ಹರೀಶ್ ಜಿ.ಎಂ. ಅವರ ವೈದ್ಯಕೀಯ ಸೇವೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಈ ಪ್ರತಿಷ್ಠಿತ ಗೌರವ ನೀಡಿರುವುದು ವೈದ್ಯಕೀಯ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅವರ ಈ ಸಾಧನೆಗೆ ವಿವಿಧ ಗಣ್ಯರು, ವೈದ್ಯರು, ಸಮಾಜಮುಖಂಡರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ಮುಂದೆಯೂ ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸಿ ಹೊಸ ಮೈಲಿಗಲ್ಲುಗಳನ್ನು ನಿರ್ಮಿಸಲಿ ಎಂದು ಶುಭ ಹಾರೈಸಿದ್ದಾರೆ.