

4th June 2025

ಬಳ್ಳಾರಿ : ಬಳ್ಳಾರಿ ತಾಲೂಕಿನ ಧನಲಕ್ಷ್ಮೀ ಕ್ಯಾಂಪ್ನ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಎಐಡಿಎಸ್ಓ ಸಂಘಟನೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಧನಲಕ್ಷ್ಮೀ ಕ್ಯಾಂಪ್ನ ನಾಗರೀಕರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಂತರ ಬಳ್ಳಾರಿ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮಕ್ಕಳಲ್ಲಿ ಮೌಲ್ಯಗಳನ್ನು ತುಂಬಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ಬೆಳೆಸಬೇಕಿರುವುದು ಶಿಕ್ಷಣದ ಜವಾಬ್ದಾರಿ. ಶಿಕ್ಷಣ ಪಡೆಯಲು ಮುಂದೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಂಪೂರ್ಣ ಉಚಿತ ಶಿಕ್ಷಣ ನೀಡಬೇಕಾಗಿರುವುದು ಸರ್ಕಾರದ ಸಂಪೂರ್ಣ ಜವಾಬ್ದಾರಿ. ಆದರೆ ಈ ಜವಾಬ್ದಾರಿಯಿಂದ ಸರ್ಕಾರವು ದೂರ ಸರಿಯುತ್ತಿರುವುದು ಅತ್ಯಂತ ಆಘಾತದ ವಿಷಯವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಬಳ್ಳಾರಿ ತಾಲೂಕಿನ ಧನಲಕ್ಷ್ಮೀ ಕ್ಯಾಂಪ್, ಅತೀ ಹೆಚ್ಚು ದಿನಗೂಲಿ-ರೈತ ಕಾರ್ಮಿಕರನ್ನು ಹಾಗೂ ವಲಸೆ ಕಾರ್ಮಿಕರನ್ನು ಹೊಂದಿರುವುದು ಈ ಕ್ಯಾಂಪ್, ಈ ಕ್ಯಾಂಪ್ನಲ್ಲಿ ಸರ್ಕಾರಿ ತೆಲುಗು ಕಿರಿಯ ಪ್ರಾಥಮಿಕ ಶಾಲೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಶಿಕ್ಷಣದ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ. ಧನಲಕ್ಷ್ಮೀ ಕ್ಯಾಂಪ್ ನಲ್ಲಿ ಇರುವ ಈ ಶಾಲೆಯು ಮೂರು ಕೊಠಡಿಗಳನ್ನು ಒಳಗೊಂಡಿದ್ದು, ಆ ಕಟ್ಟಡವು ಸಂಪೂರ್ಣವಾಗಿ ಹಾಳಾಗಿದೆ. ಮಳೆ ಬಂದರೆ ಮೇಲಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ನರುಳುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಯ ತನ್ನ ಗುಣಮಟ್ಟ ಕಳೆದು ಕೊಳ್ಳುತ್ತಿದ್ದು, ಪ್ರತಿವರ್ಷ ದಾಖಲಾತಿ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಹೇಳಿದ್ದಾರೆ.
ಹಾಗೆಯೇ ಇಲ್ಲಿ ತೆಲುಗು ಮಾಧ್ಯಮ ಮಾತ್ರ ಇರುವುದು 5ನೇ ತರಗತಿ ನಂತರ ಮುಂದಿನ ಶಿಕ್ಷಣಕ್ಕೆ ಶಂಕರಬಂಡೆಗೆ ಹೋಗಬೇಕು. ಅಲ್ಲಿ ಕೂಡ ತೆಲುಗು ಇಲ್ಲದೇ ಇರುವುದರಿಂದ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಇದೇ ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭವಾದರೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತದೆ ಎಂದು ಈ ಕ್ಯಾಂಪ್ನ ಜನರ ಒತ್ತಾಯವಾಗಿದೆ.
ಈ ಬಡ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯಕ್ಕೆ ಯಾವುದೇ ಸಮಸ್ಯೆಯಾಗದಂತೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಧನಲಕ್ಷ್ಮೀ ಕ್ಯಾಂಪ್ ಶಾಲೆಯ ಕಟ್ಟಡ ದುರಸ್ತಿಗೊಳಿಸಿ ಮತ್ತು ಕಟ್ಟಡ ಸಂಖ್ಯೆ ಹೆಚ್ಚಿಸಿ, ಶಾಲೆಗೆ ಶೌಚಾಲಯ ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ. ಹಾಗೂ ಸರ್ಕಾರಿ ತೆಲುಗು ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಿ, ಈ ಶಾಲೆಗೆ ನೂತನ ಕಾಂಪೌಂಡ್ ಅನ್ನು ನಿರ್ಮಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪ್ರತಿಭಟನೆ ಹಾಗೂ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಎಐಡಿಎಸ್ಓ ಸಂಘಟನೆಯ ಜಿಲ್ಲಾಧ್ಯಕ್ಷ ಈರಣ್ಣ, ಮುಖಂಡರಾದ ಶಾಂತಿ, ಉಮಾ, ರಾಮಾಂಜಿನೇಲು, ಸುರೇಶ್, ಮಹೇಶ್ ಸೇರಿದಂತೆ ಧನಲಕ್ಷ್ಮಿ ಕ್ಯಾಂಪ್ನ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ