

27th September 2025

ಹೊಳಲ್ಕೆರೆ : ಪಟ್ಟಣದ ಪ್ರತಿಷ್ಟಿತ ವಾಗ್ದೇವಿ ವಿದ್ಯಾ ಸಂಸ್ಥೆ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹೊಳಲ್ಕೆರೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ʼವಾಗ್ದೇವಿ ಬಾಲ ದಸರಾ-2025ʼ ಕಾರ್ಯಕ್ರಮವು ಹೊಳಲ್ಕೆರೆ ಪಟ್ಟಣದ ಗಣಪತಿ ದೇವಸ್ಥಾನದಿಂದ ವಾಗ್ದೇವಿ ಶಾಲೆಯವರೆಗೆ ವಿವಿಧ ಕಲಾ ತಂಡಗಳು, ನೃತ್ಯ ಪ್ರಕಾರಗಳು, ಚಂಡೆ, ಕೋಲಾಟ, ಕಂಸಾಳೆ, ಡೊಳ್ಳು, ಬಂಜಾರ ನೃತ್ಯ ಇನ್ನೂ ಹಲವಾರು ವಿಶೇಷತೆಗಳೊಂದಿಗೆ ಬೃಹತ್ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಹೊಳಲ್ಕೆರೆ ಪಟ್ಟಣದ ಗಣಪತಿ ದೇವಾಲಯದ ಮುಂಭಾಗದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹೊಳಲ್ಕೆರೆ ಪುರಸಭೆಯ ಅಧ್ಯಕ್ಷರಾದ ವಿಜಯ ಸಿಂಹ ಖಾಟ್ರೋತ್ರವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ವಿವಿಧ ಗೊಂಬೆಗಳು, ಕೀಲು ಕುದುರೆ ವೇಷ ಧರಿಸಿದ್ದ ವೇಷಧಾರಿಗಳು ಮೆರವಣಿಗೆಯುದ್ದಕ್ಕೂ ಮಕ್ಕಳು, ಪೋಷಕರು ಮತ್ತು ಸಾರ್ವಜನಿಕರನ್ನು ರಂಜಿಸಿದವು. ಚಂಡೆ, ಕೋಲಾಟ, ಕಂಸಾಳೆ, ಬಂಜಾರ ನೃತ್ಯ ಎಲ್ಲರ ಗಮನ ಸೆಳೆದವು. ಕರ್ನಾಟಕದ ನಾಡಗೀತೆಯನ್ನು ಕುವೆಂಪುರವರು ರಚಿಸಿ 100 ವರ್ಷ ಪೂರ್ಣಗೊಂಡ ಸಂಭ್ರಮದ ಸಾಂಕೇತಿಕವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಪುರಸಭೆ ಸದಸ್ಯರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು ಕೆಂಪು-ಹಳದಿ ಶಾಲು ಧರಿಸಿ ನಾಡಗೀತೆಯನ್ನು ಹೊಳಲ್ಕೆರೆ ಮುಖ್ಯ ವೃತ್ತದಲ್ಲಿ ಹಾಡುವ ಮೂಲಕ ಆಚರಿಸಿದ್ದು ವಿಶೇಷವಾಗಿತ್ತು. ಆಪರೇಷನ್ ಸಿಂಧೂರ, ನವದುರ್ಗೆಯರು, ರಾವಣ ಸಂಹಾರ, ಅಂಬಿನೋತ್ಸವ ಸ್ತಬ್ದ ಚಿತ್ರಗಳು ಎಲ್ಲರ ಗಮನ ಸೆಳೆದವು.
ಮೆರವಣಿಗೆಯಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ವಿಜಯಕುಮಾರ್, ತಾಲ್ಲೂಕು ಉಪ ನಿರೀಕ್ಷಕರಾದ ಸಚಿನ್ ಪಾಟೀಲ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್ ಶಿವಮೂರ್ತಿ ಹಾಗೂ ಸದಸ್ಯರು, ಪುರಸಭೆಯ ಸದಸ್ಯರುಗಳಾದ ರುದ್ರಪ್ಪ.ಬಿ.ಎಸ್, ಮಲ್ಲಿಕಾರ್ಜುನ.ಪಿ.ಆರ್, ರಮೇಶ್.ಕೆ.ಸಿ, ಸೈಯದ್ ಸಜಿಲ್, ಪುರಸಭೆಯ ನಾಮನಿರ್ದೇಶಿತ ಸದಸ್ಯರಾದ ಬಸವರಾಜ್.ಜಿ.ಹೆಚ್, ವಾಗ್ದೇವಿ ಸಂಸ್ಥೆಯ ಕಾರ್ಯದರ್ಶಿಗಳಾದ ಸಿದ್ದಲಿಂಗಸ್ವಾಮಿ.ಪಿ, ಆಡಳಿತಾಧಿಕಾರಿಗಳಾದ ಶಿವರಾಂ.ಬಿ, ಸಂಸ್ಥೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾವವಹಿಸಿದ್ದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ