

22nd April 2026

ಬಳ್ಳಾರಿ,ಏ.22:ಜಿಲ್ಲೆಯಲ್ಲಿ ದಿನೇ ದಿನೇ ಏರುತ್ತಿರುವ ತಾಪಮಾನ ಮತ್ತು ಪರಿಸರ ಮಾಲಿನ್ಯದ ನಡುವೆಯೂ ಹಸಿರನ್ನು ಉಳಿಸುವ ಉದ್ದೇಶದಿಂದ “ಗಿಡ ಬೆಳೆಸಿ, ಜೀವ ಉಳಿಸಿ” ಎಂಬ ಘೋಷವಾಕ್ಯದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಗೊಂಡಿರುವ ಪರಿಸರ ಜಾಗೃತಿ ಅಭಿಯಾನ ಜನರಲ್ಲಿ ಗಮನ ಸೆಳೆಯುತ್ತಿದೆ.
ಪತ್ರಕರ್ತ ಅಸ್ಲಾಂ ಭಾಷ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನವು ಸಾರ್ವಜನಿಕರಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಪ್ರಸ್ತುತ ಬಳ್ಳಾರಿಯಲ್ಲಿ ತಾಪಮಾನ ಹೆಚ್ಚಳದಿಂದ ಉಂಟಾಗುತ್ತಿರುವ ತೀವ್ರ ಬಿಸಿಲಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು,ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಗಿಡಗಳ ಸರಿಯಾದ ಬೆಳವಣಿಗೆಗಾಗಿ ನಿಯಮಿತವಾಗಿ ನೀರುಣಿಸುವುದು ಅಗತ್ಯವಾಗಿದ್ದು, ವಿಶೇಷವಾಗಿ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ನೀರು ಹಾಕುವುದು ಸೂಕ್ತವೆಂದು ತಿಳಿಸಲಾಗಿದೆ.
ಜೊತೆಗೆ ನೀರನ್ನು ನೇರವಾಗಿ ಗಿಡದ ಬೇರುಗಳಿಗೆ ತಲುಪಿಸುವ ಮೂಲಕ ಉತ್ತಮ ಬೆಳವಣಿಗೆ ಸಾಧಿಸಬಹುದು ಎಂದು ತಿಳಿಸಿದ್ದಾರೆ.ಮಳೆ ನೀರನ್ನು ಸಂಗ್ರಹಿಸಿ ಗಿಡಗಳಿಗೆ ಬಳಸಿಕೊಳ್ಳುವ ಕ್ರಮಕ್ಕೂ ಮಹತ್ವ ನೀಡಲಾಗಿದೆ.
ಇದಲ್ಲದೆ,ಸ್ಥಳೀಯವಾಗಿ ಬೆಳೆಯುವ ಗಿಡಗಳನ್ನು ನೆಡುವುದು ಪರಿಸರಕ್ಕೆ ಹೆಚ್ಚು ಅನುಕೂಲಕರವಾಗಿದ್ದು, ಕಡಿಮೆ ನೀರಿನಲ್ಲಿ ಅವು ಸುಲಭವಾಗಿ ಬೆಳೆಯುತ್ತವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಅಭಿಯಾನವನ್ನು ಮತ್ತಷ್ಟು ಬಲಪಡಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪರಿಸರ ತಜ್ಞರ ಪ್ರಕಾರ, ಒಂದು ಗಿಡವು ವರ್ಷಕ್ಕೆ ಗಮನಾರ್ಹ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ವಾತಾವರಣವನ್ನು ಶುದ್ಧಗೊಳಿಸುವುದಲ್ಲದೆ, ತಾಪಮಾನ ನಿಯಂತ್ರಣದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ, ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸುವುದು ಅವಶ್ಯಕವಾಗಿದೆ ಎಂದು ಪತ್ರಕರ್ತ ಅಸ್ಲಾಂ ಭಾಷ ಹೇಳಿದರು.
“ಇಂದು ನೆಟ್ಟ ಗಿಡ – ನಾಳೆಯ ಜೀವ ರಕ್ಷಕ” ಎಂಬ ಸಂದೇಶದೊಂದಿಗೆ ಈ ಅಭಿಯಾನವು ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಬಾಲ್ಯ ವಿವಾಹ ಪ್ರಕರಣ: ಮೂವ್ವರಿಗೆ ಜೈಲು ಶಿಕ್ಷೆ- ಗಂಗಾವತಿ ನ್ಯಾಯಾಲಯದಲ್ಲಿ ತೀರ್ಪು ಪ್ರಕಟ