

25th April 2026

ಬಳ್ಳಾರಿ, ಏ.25: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ಪರಿಕರಗಳ ಮಾರಾಟಗಾರರ ಸಂಘವು ಏಪ್ರಿಲ್ 27ರಂದು ದೇಶವ್ಯಾಪ್ತಿಯಾಗಿ ಕೃಷಿ ಪರಿಕರಗಳ ಮಾರಾಟ ಬಂದ್ಗೆ ಕರೆ ನೀಡಿದೆ.
ಇದರ ಭಾಗವಾಗಿ ಬಳ್ಳಾರಿ ಜಿಲ್ಲೆಯಲ್ಲಿಯೂ ಬಂದ್ ನಡೆಸಲಾಗುವುದಾಗಿ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್. ತಿಮ್ಮನಗೌಡ ತಿಳಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿರುವ ಸಂಘವು ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿದೆ.
ಯೂರಿಯಾ ಸೇರಿದಂತೆ ಇತರ ರಸಗೊಬ್ಬರಗಳನ್ನು ಎಫ್ಎಲ್ (FL) ವ್ಯವಸ್ಥೆಯ ಮೂಲಕವೇ ವಿತರಿಸಬೇಕು, ಕೃಷಿ ಪರಿಕರಗಳು ಕಳಪೆ ಗುಣಮಟ್ಟದ್ದಾಗಿದ್ದರೆ ಉತ್ಪಾದಕರನ್ನೇ ಹೊಣೆಗಾರರನ್ನಾಗಿ ಮಾಡಬೇಕು, ಮಾರಾಟಗಾರರನ್ನು ಕೇವಲ ಸಾಕ್ಷಿಗಳನ್ನಾಗಿ ಪರಿಗಣಿಸಬೇಕು ಎಂದು ಮನವಿ ಮಾಡಲಾಗಿದೆ.
ಇದಲ್ಲದೆ, ಎಲ್ಲಾ ರಾಸಾಯನಿಕ ಗೊಬ್ಬರಗಳ ಮಾರಾಟದ ಮೇಲೆ 8% ಲಾಭಾಂಶ ನೀಡಬೇಕು, ಬೀಜಗಳ ಸಾತಿ–ಪೋಟಲು ಮಾರಾಟವನ್ನು ಸುಲಭಗೊಳಿಸಬೇಕು, ರೈತರಿಗೆ ರಸಗೊಬ್ಬರ ವಿತರಣೆಗಾಗಿ ಬಳಸುತ್ತಿರುವ ಎಫ್ಐಡಿಕೆ ಕಿಸಾನ್ ತಂತ್ರಾಂಶದ ಅನಿವಾರ್ಯತೆಯಿಂದ ವಿನಾಯಿತಿ ನೀಡಬೇಕು ಎಂಬ ಬೇಡಿಕೆಗಳನ್ನು ಕೂಡ ಮುಂದಿರಿಸಲಾಗಿದೆ.
ಅಧಿಕಾರಿಗಳು ತಪಾಸಣೆಗಾಗಿ ಅಂಗಡಿಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ನೀಡುವ ಹೇಳಿಕೆಗಳಲ್ಲಿ “ದಾಳಿ” ಎಂಬ ಪದ ಬಳಕೆ ತಪ್ಪಿಸಬೇಕು ಹಾಗೂ ಅಂಗಡಿಗಳ ಚಿತ್ರಗಳನ್ನು ಪ್ರಕಟಿಸಬಾರದು ಎಂದು ಸಂಘವು ಒತ್ತಾಯಿಸಿದೆ.
ಎಫ್ಐಡಿ ವ್ಯವಸ್ಥೆಯ ಮೂಲಕ ರಸಗೊಬ್ಬರ ಮಾರಾಟ ಮಾಡುವ ಕ್ರಮವನ್ನು ಸಂಘವು ಸ್ವಾಗತಿಸಿದರೂ, ನೀರಾವರಿ ಹಾಗೂ ಒಣಬೇಸಾಯ ರೈತರಿಗೆ ಬೆಳೆ ಆಧಾರಿತವಾಗಿ ರಸಗೊಬ್ಬರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬಾಲ್ಯ ವಿವಾಹ ಪ್ರಕರಣ: ಮೂವ್ವರಿಗೆ ಜೈಲು ಶಿಕ್ಷೆ- ಗಂಗಾವತಿ ನ್ಯಾಯಾಲಯದಲ್ಲಿ ತೀರ್ಪು ಪ್ರಕಟ