

8th May 2026

ಬಳ್ಳಾರಿ, ಮೇ.08: ಪಡಿತರ ಅಕ್ಕಿ ಸಾಗಾಣಿಕೆ ವಾಹನವನ್ನು ತಡೆದು ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಮೋಕಾ ಪೊಲೀಸ್ ಠಾಣೆ ಪೊಲೀಸರು ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಇಬ್ಬರನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ದಿನಾಂಕ 28.04.2026 ರಂದು ರಾತ್ರಿ 3.30 ರಿಂದ 5.30ರ ಅವಧಿಯಲ್ಲಿ ಶರಬಯ್ಯ ಎಂಬುವವರಿಗೆ ಸೇರಿದ ಪಡಿತರ ಅಕ್ಕಿ ಸಾಗಾಣಿಕೆ ವಾಹನವನ್ನು ಮೋಕಾ ಪಾರೆಸ್ಟ್ ಸಮೀಪ ತಡೆದು ನಿಲ್ಲಿಸಿದ್ದ ಆರೋಪಿಗಳು, ಬೆದರಿಕೆ ಹಾಕಿ ₹5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಬಳಿಕ ₹3 ಲಕ್ಷ ರೂ.ಗಳನ್ನು ಸುಲಿಗೆ ಮಾಡಿಕೊಂಡಿರುವ ಕುರಿತು ದೂರು ದಾಖಲಾಗಿತ್ತು.
ಈ ಸಂಬಂಧ ಮೋಕಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.53/2026 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯ ವೇಳೆ ಆರೋಪಿತರಾದ ದೇವರಾಜ್ ಎ.ಪಿ.ಸಿ. 87 ಹಾಗೂ ಸಾಯಿ ರಾಮ್ ಅವರನ್ನು 07.05.2026 ರಂದು ಬಂಧಿಸಲಾಗಿದೆ.
ಬಂಧಿತರಿಂದ ಸುಲಿಗೆ ಮಾಡಲಾದ ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ದೇವರಾಜ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗನ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಸ್ಪಿ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಕೃತ್ಯ ಎಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.
ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿತರ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪನ್ನೇಕರ್ ತಿಳಿಸಿದ್ದಾರೆ.

ಎರಡು ವರ್ಷಗಳ ಬಳಿಕ ಮಹಿಳೆ, ಬಾಲಕ ಪತ್ತೆ ವಿಜಯವಾಡದಲ್ಲಿ ಪತ್ತೆ ಹಚ್ಚಿದ ಎಎಚ್ಟಿಯು ತಂಡ; ಕುಟುಂಬಕ್ಕೆ ಒಪ್ಪಣೆ