

13th May 2026

ಬಳ್ಳಾರಿ, ಮೇ.13: ನಗರದ ಬೀಮ್ಸ್ ಆಸ್ಪತ್ರೆ ಮುಂಭಾಗದ ಬಸ್ ನಿಲ್ದಾಣದಲ್ಲಿ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದ ಅನಾಥ ವೃದ್ಧೆ ಮಹಿಳೆಗೆ ಸ್ಥಳೀಯ ಪತ್ರಕರ್ತ ಹಾಗೂ ಸಮಾಜಸೇವಕ ಎಂ. ಜಂಬುನಾಥ್ ಮಾನವೀಯತೆ ಮೆರೆದ ಘಟನೆ ಬುಧವಾರ ನಡೆದಿದೆ.
ಬಸ್ ನಿಲ್ದಾಣದ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧೆಯನ್ನು ಗಮನಿಸಿದ ಜಂಬುನಾಥ್ ತಕ್ಷಣವೇ 112 ಸಹಾಯವಾಣಿ ವಾಹನಕ್ಕೆ ಕರೆ ಮಾಡಿ ಸ್ಥಳಕ್ಕೆ ಸಿಬ್ಬಂದಿಯನ್ನು ಕರೆಸಿದರು.
ಬಳಿಕ 108 ಆಂಬುಲೆನ್ಸ್ ಸೇವೆಯ ಸಹಾಯದಿಂದ ಮಹಿಳೆಯನ್ನು ಚಿಕಿತ್ಸೆಗಾಗಿ ಬೀಮ್ಸ್ ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡರು.
ಈ ಕುರಿತು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆ ಹಾಗೂ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ಸಹ ಸ್ಥಳಕ್ಕೆ ಆಗಮಿಸಿ ಮಹಿಳೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು.
ಬಳಿಕ ಬೀಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರಿಗೆ ಮಹಿಳೆ ಅನಾಥೆಯಾಗಿರುವ ಕುರಿತು ತಿಳಿಸಿ ದಾಖಲಿಸುವ ವ್ಯವಸ್ಥೆ ಮಾಡಿದರು.
ಮಾಹಿತಿಯ ಪ್ರಕಾರ, ಕಳೆದ ಒಂದು ವಾರದಿಂದ ವೃದ್ಧೆ ಮಹಿಳೆ ಆಸ್ಪತ್ರೆ ಮುಂಭಾಗದ ಬಸ್ ನಿಲ್ದಾಣದಲ್ಲೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.
ಗುರುತು ತಿಳಿಯದ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯ ಎರಡು ಕಾಲು ಹಾಗೂ ಸೊಂಟ ಭಾಗಕ್ಕೆ ಗಾಯಗಳಾಗಿವೆ ಎನ್ನಲಾಗಿದೆ.
ಪೊಲೀಸ್ ಸಿಬ್ಬಂದಿ ವಿಚಾರಿಸಿದಾಗ ಮಹಿಳೆ ತನ್ನ ಹೆಸರು ಲಕ್ಷ್ಮೀದೇವಿ ಎಂದು ತಿಳಿಸಿದ್ದು, ಕೊಳಗಲ್ಲು ಗ್ರಾಮದ ನಿವಾಸಿಯಾಗಿರುವುದಾಗಿ ಹೇಳಿದ್ದಾಳೆ.
ತಾನು ಉಪ್ಪಾರ ಸಮುದಾಯಕ್ಕೆ ಸೇರಿದವಳು ಹಾಗೂ ಕುಟುಂಬದವರು ಯಾರೂ ಇಲ್ಲ ಎಂದು ತಿಳಿಸಿದ್ದಾಳೆ.
ತೀವ್ರ ಬಿಸಿಲಿನಲ್ಲೂ ಸರಿಯಾದ ಬಟ್ಟೆ ಇಲ್ಲದೆ ವೃದ್ಧೆ ನರಳುತ್ತಿದ್ದರೂ, ದಿನನಿತ್ಯ ಸಾವಿರಾರು ಜನ ಸಂಚರಿಸುವ ಆ ಪ್ರದೇಶದಲ್ಲಿ ಯಾರೂ ಸಹಾಯಕ್ಕೆ ಮುಂದಾಗಿರಲಿಲ್ಲ ಎನ್ನುವುದು ಗಮನಾರ್ಹವಾಗಿದೆ.
ಬಸ್ ನಿಲ್ದಾಣದ ಸುತ್ತಮುತ್ತ ವ್ಯಾಪಾರ ಮಳಿಗೆಗಳು, ಸಾರ್ವಜನಿಕರು, ಬಸ್ ಚಾಲಕರು ಹಾಗೂ ನಿರ್ವಾಹಕರು ಮಹಿಳೆಯನ್ನು ಗಮನಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದ ಘಟನೆಗಳು ಕಂಡುಬಂದಿವೆ.
ಇಂತಹ ಪರಿಸ್ಥಿತಿಯಲ್ಲಿ ಪತ್ರಕರ್ತ ಎಂ. ಜಂಬುನಾಥ್ ಮಾನವೀಯತೆ ತೋರಿಸಿ ವೃದ್ಧೆಯ ಚಿಕಿತ್ಸೆಗೆ ಮುಂದಾಗಿರುವುದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಕೊಪ್ಪಳದಲ್ಲಿ ಹತ್ತು ದಿನಗಳ ಮಾವು ಮೇಳೆಕ್ಕೆ ಚಾಲನೆ: 200 ತಳಿಯ ಮಾವಿನ ಹಣ್ಣುಗಳ ಪ್ರದರ್ಶನ- 1 ಕೆಜಿಗೆ ರೂ.2.5ಲಕ್ಷ ಬೆಲೆಯ 'ಮೀಯಾ ಜಾಕಿ' ಮಾವು