

13th May 2026

ಹೊಳಲ್ಕೆರೆ: ತಾಲೂಕಿನಲ್ಲಿ ಕಬ್ಬಿಣದ ಅದಿರು ಸಾಗಾಣಿಕೆಯಿಂದ ರೈತರಿಗೆ ಉಂಟಾಗುತ್ತಿರುವ ಧೂಳು ಸಮಸ್ಯೆ ಹಾಗೂ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಹುಚ್ಚವನಹಳ್ಳಿ ಮಂಜುನಾಥ್ ಬಣದ ನೇತೃತ್ವದಲ್ಲಿ ಹಗಲು-ರಾತ್ರಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಾನ್ ನೈನ್ಸ್ ವೇದಾಂತ್ ಮೈನ್ಸ್ ಹಾಗೂ ಬೊಮನ್ ಮೈನ್ಸ್ ಕಂಪನಿಗಳಿಂದ ಕಬ್ಬಿಣದ ಅದಿರನ್ನು ಟಿಪ್ಪರ್ ಲಾರಿಗಳ ಮೂಲಕ ರೈಲ್ವೆ ಸ್ಟಾಪ್ ಯಾರ್ಡ್ಗೆ ಸಾಗಿಸಲಾಗುತ್ತಿದೆ.
ಈ ಸಾಗಾಣಿಕೆ ಮಾರ್ಗ ಡಿ.ಮದಿಕೆಪುರ ಗ್ರಾಮದ ರೈತರ ಜಮೀನುಗಳ ಪಕ್ಕದಿಂದ ಹಾದು ಹೋಗುತ್ತಿರುವುದರಿಂದ ರೈತರು ತೀವ್ರ ಧೂಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಕುರಿತು ಮೈನ್ಸ್ ಕಂಪನಿಗಳ ವ್ಯವಸ್ಥಾಪಕರಿಗೆ ಈ ಹಿಂದೆಯೇ ಮನವಿ ಸಲ್ಲಿಸಿ, ಏ.25ರೊಳಗೆ ಸೂಕ್ತ ನಿರ್ಧಾರ ತಿಳಿಸುವಂತೆ ರೈತರು ಆಗ್ರಹಿಸಿದ್ದರು.
ಆದರೆ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸರ್ವೇ ನಂ.45ರ ಅಜ್ಜಪ್ಪ ಬಿನ್ ನಾಗಪ್ಪ ಅವರ ಜಮೀನಿನ ಬಳಿ ರಸ್ತೆಯಲ್ಲಿ ಶಾಮಿಯಾನ ಹಾಕಿ ಮೇ 11ರಿಂದ ಹಗಲು-ರಾತ್ರಿ ಧರಣಿ ಆರಂಭಿಸಲಾಗಿದೆ ಎಂದು ತಿಳಿಸಿದರು.
“ನಮ್ಮ ಬೇಡಿಕೆಗಳು ಈಡೇರುವವರೆಗೆ ಮುಷ್ಕರವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ” ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಮೈನ್ಸ್ ಕಂಪನಿಯ ವ್ಯವಸ್ಥಾಪಕರಾದ ಶುಭಾಷ್ ಚಾವಣ್ ಅವರು ಮಾತನಾಡಿ, ರೈತರ ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್, ಜಿಲ್ಲಾ ಅಧ್ಯಕ್ಷ ಸೂರಪ್ಪ, ಜಿಲ್ಲಾ ಉಪಾಧ್ಯಕ್ಷ ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಪ್ಪ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಸಿದ್ದರಾಜು, ವಸಂತ್ ಕುಮಾರ್, ತಿಪ್ಪೇಸ್ವಾಮಿ ಟಿ., ಗೌರವಾಧ್ಯಕ್ಷ ಶಿವಣ್ಣ ಎನ್.ಟಿ., ಭರಮಸಾಗರ ಹೋಬಳಿ ಅಧ್ಯಕ್ಷ ಆಂಜಿನಪ್ಪ, ಸಂಚಾಲಕ ಗಂಗಾಧರ್, ಕಾರ್ಯದರ್ಶಿ ರಮೇಶ್ ಆರ್., ಹಿರೇಕಂದೋಡಿ ರಾಜಪ್ಪ, ಗೌರಿ ರಾಜಕುಮಾರ ಸೇರಿದಂತೆ ನೂರಾರು ರೈತ ಮುಖಂಡರು ಹಾಗೂ ವಾಹನ ಚಾಲಕರು ಭಾಗವಹಿಸಿದ್ದರು.

ಹೆಲ್ಮೆಟ್ ಜಾಗೃತಿಗಾಗಿ ಬೈಕ್ ಸವಾರಿ ಮಾಡಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಹೆಲ್ಮೆಟ್ ಧರಿಸುವುದು ಕಡ್ಡಾಯ