

14th May 2026

ಬಳ್ಳಾರಿ,ಮೇ 14 :
ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕರ ಜೀವ ರಕ್ಷಣೆಗಾಗಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನಾಗರಿಕರ ಪ್ರಾಣ ರಕ್ಷಣೆಯು ಕಾನೂನಿನ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆ, ಸಂಚಾರಿ ಪೊಲೀಸ್ ಠಾಣೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ, ಹೆಲ್ಮೆಟ್ ವಿತರಣೆ ಹಾಗೂ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾನೂನು ಎಂಬುದು ಸಾರ್ವಜನಿಕರ ಹಿತರಕ್ಷಣೆಗಾಗಿ ನಾವೇ ಮಾಡಿಕೊಂಡಿರುವುದು ಎಂಬ ಅರಿವು ಎಲ್ಲರಲ್ಲಿ ಇರಬೇಕು. ಹೆಲ್ಮೆಟ್ ಕಡ್ಡಾಯದಿಂದ ವಿನಾಯಿತಿ ನೀಡುವಂತೆ ಯಾರೂ ಮನವಿ ಮಾಡಬಾರದು. ವಿನಾಯಿತಿ ಕೇಳುವುದು ಎಂದರೆ ‘ಜನರ ಪ್ರಾಣ ರಕ್ಷಣೆ ಮಾಡಬೇಡಿ’ ಮತ್ತು ‘ಕುಟುಂಬದ ಬಗ್ಗೆ ಕಾಳಜಿ ಇಲ್ಲ’ ಎಂದು ಹೇಳಿದಂತೆ ಎಂದು ಅವರು ತಿಳಿಸಿದರು.
ಬಳ್ಳಾರಿಯ ಜನರು ಈಗಾಗಲೇ ಸಕಾಲ ಸೇವೆ ಮತ್ತು ಜನಗಣತಿ ಕಾರ್ಯಗಳಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನ ಪಡೆದು ತಮ್ಮ ಇಚ್ಛಾಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ಅದೇ ರೀತಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಜಿಲ್ಲೆಯ ಹೆಸರನ್ನು ಎತ್ತಿಹಿಡಿಯಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಬೈಕ್ ಅಪಘಾತಗಳ ಅಂಕಿಅAಶಗಳು ಆತಂಕಕಾರಿಯಾಗಿದ್ದು, ಪ್ರತಿಯೊಬ್ಬ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಜೀವ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯೊಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ (2023 ರಿಂದ 2026ರ ಏಪ್ರಿಲ್ ವರೆಗೆ) ಬೈಕ್ ಅಪಘಾತಗಳಿಂದಾಗಿ ಒಟ್ಟು 462 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಸರಾಸರಿ ಪ್ರತಿ ಎರಡು ದಿನಕ್ಕೆ ಒಂದು ಸಾವು ಬೈಕ್ ಅಪಘಾತದಿಂದ ಸಂಭವಿಸುತ್ತಿದೆ. ಅಂದರೆ ವರ್ಷಕ್ಕೆ ಸುಮಾರು 150ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅಂಕಿ-ಅAಶ ವಿವರಿಸಿದರು.
ಸಂಚಾರ ನಿಯಮಗಳನ್ನು ಕೇವಲ ದಂಡ ಅಥವಾ ಪೊಲೀಸರ ಭಯಕ್ಕಾಗಿ ಪಾಲಿಸಬಾರದು. ನಮ್ಮ ಶಿರ (ತಲೆ) ಸುರಕ್ಷಿತವಾಗಿದ್ದರೆ ಮಾತ್ರ ದೇಹಕ್ಕೆ ಚೈತನ್ಯವಿರುತ್ತದೆ ಎಂಬುದು ಪ್ರತಿಯೊಬ್ಬರ ಮನವರಿಕೆಯಾಗಬೇಕು.
ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಲು ಯಾವುದೇ ಜಿಲ್ಲೆಗಳಿಗೂ ಅವಕಾಶವಿಲ್ಲ. ಉರಿಬಿಸಿಲು ಅಥವಾ ಇತರ ಕಾರಣಗಳನ್ನು ನೀಡುವುದು ಸರಿಯಲ್ಲ, ಇದು ನಮ್ಮ ಮತ್ತು ನಮ್ಮ ಕುಟುಂಬದ ಸುರಕ್ಷತೆಗಾಗಿ ಮಾಡುವ ಸಣ್ಣ ಹೂಡಿಕೆಯಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ಇಂದಿನ ಕಾಲದಲ್ಲಿ ಜನರು ತಾವು ಬಳಸುವ ಬೆಲೆಬಾಳುವ ಮೊಬೈಲ್ ಫೋನ್ಗಳಿಗೆ ನೀಡುವಷ್ಟೂ ಸುರಕ್ಷತೆಯನ್ನು ತಮ್ಮ ಜೀವಕ್ಕೆ ನೀಡುತ್ತಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ಮೊಬೈಲ್ ಕೆಳಗೆ ಬಿದ್ದರೆ ಸ್ಕ್ರೀನ್ ಒಡೆಯಬಾರದು ಎಂದು ಸ್ಕಿçÃನ್ ಗಾರ್ಡ್ ಹಾಕಿಸುವ ನಾವು, ಅದಕ್ಕಿಂತಲೂ ಅಮೂಲ್ಯವಾದ ನಮ್ಮ ಮೆದುಳು ಮತ್ತು ಜೀವದ ರಕ್ಷಣೆಗೆ ಹೆಲ್ಮೆಟ್ ಧರಿಸಲು ನಿರ್ಲಕ್ಷö್ಯ ಮಾಡುತ್ತಿದ್ದೇವೆ. ನಾವು ಜೀವಂತವಾಗಿದ್ದರೆ ಮಾತ್ರ ಈ ಜಗತ್ತು ನಮಗೆ ಅಸ್ತಿತ್ವದಲ್ಲಿರುತ್ತದೆ. ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡರೆ ಅಥವಾ ಗಂಭೀರ ಗಾಯಗಳಾದರೆ ಆ ಕುಟುಂಬ ಅನುಭವಿಸುವ ನೋವು ಮತ್ತು ಸಂಕಷ್ಟಗಳು ಅಪಾರವಾಗಿದೆ ಎಂದರು.
ಬರುವ ಜೂನ್ 1 ರಿಂದ ಜಿಲ್ಲಾದ್ಯಂತ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುವುದು. ನಮ್ಮ ಕುಟುಂಬದವರ, ಸ್ನೇಹಿತರ ಮತ್ತು ನಮ್ಮವರ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಈ ನಿಯಮವನ್ನು ಪಾಲಿಸಿ, ಹೆಲ್ಮೆಟ್ ಧರಿಸುವ ಮೂಲಕ ಅಮೂಲ್ಯವಾದ ಜೀವಗಳನ್ನು ಉಳಿಸೋಣ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಸೆಖೆ ಅಥವಾ ಅಸ್ವಸ್ಥತೆಯ ಕಾರಣ ನೀಡಿ ಹೆಲ್ಮೆಟ್ ಧರಿಸುವುದನ್ನು ಕಡೆಗಣಿಸಬಾರದು. ಸ್ವಲ್ಪ ಸಮಯದ ಅನಾನುಕೂಲಕ್ಕಿಂತ ಪ್ರಾಣ ರಕ್ಷಣೆ ಮುಖ್ಯ. ನಿಮ್ಮ ಮತ್ತು ನಿಮ್ಮ ಕುಟುಂಬದ ಹಿತದೃಷ್ಟಿಯಿಂದ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಹೇಳಿದರು.
ಇದಕ್ಕೂ ಮುನ್ನ ಗಣ್ಯರು ‘ಹೆಲ್ಮೆಟ್ ಧರಿಸಿ- ಜೀವ ಉಳಿಸಿ’ ಎನ್ನುವ ಭಿತ್ತಿಪತ್ರಗಳನ್ನು ಅನಾವರಣಗೊಳಿಸಿದರು. ಬಳಿಕ ಪೌರಕಾರ್ಮಿಕರಿಗೆ, ಸಾರ್ವಜನಿಕರು ಒಳಗೊಂಡAತೆ 100 ಹೆಲ್ಮೆಟ್ ಗಳನ್ನು ವಿತರಿಸಲಾಯಿತು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಡಿಎಆರ್ ಡಿಎಸ್ಪಿ ತಿಪ್ಪೇಸ್ವಾಮಿ, ಬಳ್ಳಾರಿ ನಗರ ಡಿಎಸ್ಪಿ ಗೋವಿಂದರಾಜು, ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರುದ್ರಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮಂ ಸೇರಿದಂತೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.
ಆಕರ್ಷಕ ಬೈಕ್ ರ್ಯಾಲಿ:
ಹೆಲ್ಮೆಟ್ ಜಾಗೃತಿ ಅಂಗವಾಗಿ ನಗರದಲ್ಲಿ ಆಕರ್ಷಕ ಬೈಕ್ ರ್ಯಾಲಿ ನಡೆಯಿತು. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಜಾಗೃತಿ ಅಂಗವಾಗಿ ಸ್ವತಃ ತಾವೇ ಬೈಕ್ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು.
ರ್ಯಾಲಿಯು ಜಿಲ್ಲಾ ಪೊಲೀಸ್ ಕಚೇರಿಯಿಂದ ಪ್ರಾರಂಭಗೊAಡು - ದುರ್ಗಮ್ಮ ದೇವಸ್ಥಾನ ರೈಲ್ವೆ ಸೇತುವೆ ಕೆಳ ರಸ್ತೆ-ಯುಬಿ ಸರ್ಕಲ್-ಗಡಿಗಿ ಚೆನ್ನಪ್ಪ ವೃತ್ತ - ಬೆಂಗಳೂರು ರಸ್ತೆ- ತೇರುಬೀದಿ-ಹೆಚ್.ಆರ್. ಗವಿಯಪ್ಪ ವೃತ್ತ-ಅಂಬೇಡ್ಕರ್ ವೃತ್ತ-ಸುಧಾ ಕ್ರಾಸ್- ಇನ್ಪೆಂಟ್ರಿ ರಸ್ತೆ-ಎಸ್.ಪಿ ಸರ್ಕಲ್-ದುರ್ಗಮ್ಮ ದೇವಸ್ಥಾನ-ಕೆಇಬಿ ಸರ್ಕಲ್-ಬಸವೇಶ್ವರ ನಗರ-ಎಸ್.ಎನ್ ಪೇಟೆ ಮೇಲು ಸೇತುವೆ-ಕೂಲ್ ಕಾರ್ನರ್-ಡಿಎಆರ್ ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು.