

16th May 2026

ಬಳ್ಳಾರಿ, ಮೇ 16: ನಗರದ ಫಿಟ್ನೆಸ್ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿರುವ ‘ಸ್ಟೀಲ್ ಸಿಟಿ ರನ್’ ಕಾರ್ಯಕ್ರಮದ 5ನೇ ಆವೃತ್ತಿಯನ್ನು ಆಗಸ್ಟ್ 2ರಂದು ಬಳ್ಳಾರಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಬಳ್ಳಾರಿ ಸೈಕ್ಲಿಸ್ಟ್ಸ್ ಮತ್ತು ರನ್ನರ್ಸ್ ಫೌಂಡೇಶನ್ (BCRF) ತಿಳಿಸಿದೆ.
2022ರಲ್ಲಿ ಆರಂಭವಾದ ಈ ಓಟ ಸ್ಪರ್ಧೆ ಮೊದಲ ಆವೃತ್ತಿಯಲ್ಲಿ ಸುಮಾರು 1,100ಕ್ಕೂ ಹೆಚ್ಚು ಓಟಗಾರರನ್ನು ಸೆಳೆದಿತ್ತು.
ನಂತರದ ಆವೃತ್ತಿಗಳಲ್ಲಿ ಭಾಗವಹಿಸುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಾ ಬಂದಿದ್ದು, 2ನೇ ಆವೃತ್ತಿಯಲ್ಲಿ 2,500ಕ್ಕೂ ಹೆಚ್ಚು ಹಾಗೂ 3ನೇ ಮತ್ತು 4ನೇ ಆವೃತ್ತಿಗಳಲ್ಲಿ 4,200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಈ ಬಾರಿ 5ನೇ ಆವೃತ್ತಿಯನ್ನು ಇನ್ನಷ್ಟು ವಿಶೇಷವಾಗಿ ಆಯೋಜಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ವರ್ಷದ ವಿಶೇಷ ಆಕರ್ಷಣೆಯಾಗಿ ತರಬೇತಿ ಪಡೆದ ಗಂಭೀರ ಓಟಗಾರರಿಗಾಗಿ ಮೊದಲ ಬಾರಿಗೆ 16 ಕಿ.ಮೀ. (10 ಮೈಲರ್) ಟೈಮ್ಡ್ ರನ್ ಪರಿಚಯಿಸಲಾಗಿದೆ. ಜೊತೆಗೆ ಪ್ರತಿವರ್ಷದಂತೆ 10 ಕಿ.ಮೀ., 5 ಕಿ.ಮೀ. ಟೈಮ್ಡ್ ರನ್ ಹಾಗೂ 3 ಕಿ.ಮೀ. ಮಜ್ಜಾ (ಫನ್) ರನ್ ಕೂಡ ನಡೆಯಲಿದೆ.
16 ಕಿ.ಮೀ. ಓಟಕ್ಕೆ ₹800, 10 ಕಿ.ಮೀ.ಗೆ ₹600, 5 ಕಿ.ಮೀ.ಗೆ ₹500 ಹಾಗೂ 3 ಕಿ.ಮೀ. ಮಜ್ಜಾ ರನ್ಗೆ ₹450 ಶುಲ್ಕ ನಿಗದಿಪಡಿಸಲಾಗಿದೆ.
ವಯೋಮಿತಿಯೂ ವಿಭಾಗಾನುಸಾರ ನಿಗದಿಯಾಗಿದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ₹7 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಹುಮಾನಗಳನ್ನು ವಯಸ್ಸು ಮತ್ತು ಲಿಂಗ ಆಧಾರದಲ್ಲಿ ನೀಡಲಾಗುತ್ತದೆ.
ಭಾಗವಹಿಸುವ ಎಲ್ಲರಿಗೂ ಇವೆಂಟ್ ಟೀ-ಶರ್ಟ್, ಬಿಬ್ ಸಂಖ್ಯೆ, ಉಪಾಹಾರ, ಕುರುಕಲು ತಿಂಡಿ, ನೀರಿನ ವ್ಯವಸ್ಥೆ, ಮಾರ್ಗ ಸಹಾಯ ಹಾಗೂ ಉಚಿತ ಛಾಯಾಚಿತ್ರ ಸೌಲಭ್ಯ ಕಲ್ಪಿಸಲಾಗುತ್ತದೆ. 16 ಕಿ.ಮೀ., 10 ಕಿ.ಮೀ. ಮತ್ತು 5 ಕಿ.ಮೀ. ವಿಭಾಗಗಳಲ್ಲಿ ಭಾಗವಹಿಸುವವರಿಗೆ ಚಿಪ್ ಟೈಮಿಂಗ್, ಫಿನಿಷರ್ ಮೆಡಲ್ ಮತ್ತು ಇ-ಪ್ರಮಾಣಪತ್ರವೂ ಲಭ್ಯವಾಗಲಿದೆ.
ಸ್ಟೀಲ್ ಸಿಟಿ ರನ್-2026ಕ್ಕೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಆಸಕ್ತರು ಅಧಿಕೃತ ವೆಬ್ಸೈಟ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಪ್ರತಿ ವಿಭಾಗದಲ್ಲೂ ಸ್ಥಾನಗಳು ಸೀಮಿತವಾಗಿರುವುದರಿಂದ ಶೀಘ್ರ ನೋಂದಣಿ ಮಾಡಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
2015ರಲ್ಲಿ ಬಳ್ಳಾರಿ ಸೈಕ್ಲಿಂಗ್ ಕ್ಲಬ್ ಹಾಗೂ ಬಳ್ಳಾರಿ ರನ್ನರ್ಸ್ ಗುಂಪುಗಳಿಂದ ಆರಂಭವಾದ BCRF ಸಂಸ್ಥೆ, ಆರೋಗ್ಯ ಜಾಗೃತಿ, ಫಿಟ್ನೆಸ್, ಮತದಾನ ಜಾಗೃತಿ ಹಾಗೂ ಮಾದಕ ವಸ್ತು ವಿರೋಧಿ ಅಭಿಯಾನಗಳಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
“ಸ್ಟೀಲ್ ಸಿಟಿ ರನ್ ಕೇವಲ ಓಟದ ಸ್ಪರ್ಧೆಯಲ್ಲ; ಇದು ಆರೋಗ್ಯ, ಫಿಟ್ನೆಸ್ ಮತ್ತು ಸಮುದಾಯದ ಒಗ್ಗಟ್ಟಿನ ಹಬ್ಬವಾಗಿದೆ.
ಮೊದಲ ಬಾರಿ ಓಡುವವರು ಹಾಗೂ ಕುಟುಂಬ ಸಮೇತ ಭಾಗವಹಿಸುವವರಿಗೂ ಇದು ಉತ್ತಮ ವೇದಿಕೆ” ಎಂದು ಸಂಘಟಕರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನರೇಂದ್ರ ಗಾಂಧಿ, ಕಾರ್ಯದರ್ಶಿ ವಿಕಾಸ್ ಜೈನ್, ಜಂಟಿ ಕಾರ್ಯದರ್ಶಿ ಪ್ರಶಾಂತ್ ಸರ್ದಾ, ಖಜಾಂಚಿ ವಿನೋದ್ ಜೈನ್, ಡಾ. ಬಿ.ಕೆ. ಸುಂದರ್, ಡಾ. ರವಿಶಂಕರ್ , ಡಾ.ಸೋಮನಾಥ , ಡಾ.ತಿಪ್ಪರೆಡ್ಡಿ , ಮತ್ತಿತರರು ಉಪಸ್ಥಿತರಿದ್ದರು.

ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾಗಿ ಚಲ್ಲಾ ಮಹೇಶ್ ಆಯ್ಕೆ ಡೀಸೆಲ್ ಬೆಲೆ ಏರಿಕೆ ವಿರುದ್ಧ ಲಾರಿ ಮಾಲೀಕರ ಹೋರಾಟಕ್ಕೆ ಭರವಸೆ ಲಾರಿ ಮಾಲೀಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಚಲ್ಲಾ ಮಹೇಶ್

ಜೀನ್ಸ್ ಪಾರ್ಕ್ ಭೂಸ್ವಾಧೀನದಲ್ಲಿ ರೈತರಿಗೆ ಅನ್ಯಾಯ: ಹೊನ್ನುರಸ್ವಾಮಿ ಕೆ.ಟಿ. ಆರೋಪ ನ್ಯಾಯಯುತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ