

18th May 2026

“ಸರ್ಕಾರಿ ಶಾಲೆ ಉಳಿಸಿ” ಎಂದು ಮೆರವಣಿಗೆ, ಮನವಿ ಸಲ್ಲಿಕೆ
ಬಳ್ಳಾರಿ, ಮೇ 18: ತಾಲೂಕಿನ ಕೊರಲ್ಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಶಾಲೆಗೆ ವಿಲೀನ ಮಾಡುವ ಸರ್ಕಾರದ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳ ಪೋಷಕರಿಂದ ಸೋಮವಾರ ತೀವ್ರ ಪ್ರತಿಭಟನೆ ನಡೆಯಿತು.
ಆಲ್ ಇಂಡಿಯಾ ಡೆಮೊಕ್ರಟಿಕ್ಸ್ ಸ್ಟುಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಸ್ವಾಗತ ಕೋರಿ ಶಾಲೆ ಮುಂದೆ ಬ್ಯಾನರ್ ಕಟ್ಟುವ ಮೂಲಕ ಶಾಲೆ ಉಳಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರು ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, “ಶಾಲೆ ಮುಚ್ಚಿದರೆ ತಳ ಸಮುದಾಯದ ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಸರ್ಕಾರಿ ಶಾಲೆಗಳನ್ನು ಹಂತಹಂತವಾಗಿ ಮುಚ್ಚುವ ಹುನ್ನಾರವಾಗಿದೆ” ಎಂದು ಆರೋಪಿಸಿದರು.
ಕೊರಲ್ಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಂತಹ ಶಾಲೆಯನ್ನು ವಿಲೀನಗೊಳಿಸುವ ಬದಲು ಅಗತ್ಯ ಕಟ್ಟಡ ನಿರ್ಮಾಣ, ಶಿಕ್ಷಕರ ನೇಮಕ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಜನರ ತೀವ್ರ ವಿರೋಧದ ನಡುವೆಯೂ ಶಾಲೆ ವಿಲೀನ ಪ್ರಕ್ರಿಯೆ ಮುಂದುವರಿಸಿದರೆ ಜನಸಾಮಾನ್ಯರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ನಾಗರತ್ನ ಎಸ್.ಜಿ., ಗ್ರಾಮಸ್ಥರಾದ ಗಾದಿಲಿಂಗ, ಸೋಮಶೇಖರ್, ಸಮೀರ್, ಎಸ್ಡಿಎಂಸಿ ಅಧ್ಯಕ್ಷ ವೀರೇಶ್, ಪ್ರಸನ್ನ, ಶಿವಪ್ಪ, ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾಗಿ ಚಲ್ಲಾ ಮಹೇಶ್ ಆಯ್ಕೆ ಡೀಸೆಲ್ ಬೆಲೆ ಏರಿಕೆ ವಿರುದ್ಧ ಲಾರಿ ಮಾಲೀಕರ ಹೋರಾಟಕ್ಕೆ ಭರವಸೆ ಲಾರಿ ಮಾಲೀಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಚಲ್ಲಾ ಮಹೇಶ್