

19th May 2026

ಬಳ್ಳಾರಿ: ಕಂಪ್ಲಿ ತಾಲೂಕಿನ ಶ್ರೀರಾಮರಂಗಾಪುರ ಗ್ರಾಮದಲ್ಲಿ ವಸತಿ ಹೀನ ದಲಿತ ಕುಟುಂಬಗಳಿಗೆ ವಸತಿ ನಿವೇಶನ ಮಂಜೂರು ಮಾಡಿಸುವಂತೆ ಒತ್ತಾಯಿಸಿ ಕರ್ನಾಟಕ ಮಾದಿಗ ರಕ್ಷಣೆ ವೇದಿಕೆ, ಕರ್ನಾಟಕ ಜನಶಕ್ತಿ ಹಾಗೂ ಭೂಮಿ–ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
2014-15ನೇ ಸಾಲಿನಲ್ಲಿ ಗ್ರಾಮದ ಜಮೀನುದಾರ ಭೀಮನೇನಿ ಸೋಮಪ್ಪ ಅವರ ವಶದಲ್ಲಿದ್ದ 135 ಎಕರೆ ಜಮೀನನ್ನು ಹೋರಾಟದ ಮೂಲಕ ಕಂದಾಯ ಇಲಾಖೆಯಿಂದ ಬಿಡುಗಡೆಗೊಳಿಸಿಕೊಂಡಿದ್ದೇವೆ. ಆದರೆ ಆ ಸಂದರ್ಭದಲ್ಲೇ ಗ್ರಾಮದ ದಲಿತ ಸಮುದಾಯವನ್ನು ಆರ್ಥಿಕವಾಗಿ ಬಹಿಷ್ಕಾರ ಮಾಡಲಾಗಿತ್ತು ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಆ ವೇಳೆ ಸರ್ಕಾರಕ್ಕೆ ಆರ್ಥಿಕ ಭದ್ರತೆ, ನೇರ ಸಾಲ ಹಾಗೂ ವಸತಿ ನಿವೇಶನಕ್ಕಾಗಿ ಮನವಿ ಮಾಡಲಾಗಿದ್ದು, ಆದಿ ಜಾಂಬವ ನಿಗಮದ ಮೂಲಕ 86 ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ನೇರ ಸಾಲ ಮಂಜೂರಾಗಿದೆ. ಆದರೆ ವಸತಿ ನಿವೇಶನ ಮಂಜೂರಿಗೆ ಇಂದಿಗೂ ಯಾವುದೇ ಪ್ರಗತಿ ಕಂಡಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದ ದಲಿತ ಮಾದಿಗ ಸಮುದಾಯದ ಅನೇಕ ಕುಟುಂಬಗಳು ಒಂದೇ ಮನೆಯಲ್ಲಿ ಸಂಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು, ಮಳೆಗಾಲದಲ್ಲಿ ಇನ್ನಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಜಾಗದ ತೀವ್ರ ಕೊರತೆ ಎದುರಾಗಿದೆ ಎಂದು ತಿಳಿಸಿದರು.
ಗ್ರಾಮದಲ್ಲಿರುವ ಡಾ. ಗುರುಮೂರ್ತಿ ಅವರ ಜಮೀನಿನ ಸರ್ವೆ ನಂ.256/ಡಿ ಪೈಕಿ 1 ಎಕರೆ 40 ಸೆಂಟ್ಸ್ ಹಾಗೂ ಸರ್ವೆ ನಂ.257/ಎ/1 ಪೈಕಿ 2 ಎಕರೆ 54 ಸೆಂಟ್ಸ್ ಪ್ರದೇಶವನ್ನು ವಸತಿ ನಿವೇಶನಕ್ಕಾಗಿ ಖರೀದಿಸಲು ಮಾತುಕತೆ ನಡೆದಿದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯ ಪ್ರಕಾರ ಒಟ್ಟು 3 ಎಕರೆ 94 ಸೆಂಟ್ಸ್ ಜಮೀನಿಗೆ ಸುಮಾರು ₹2.56 ಕೋಟಿ ವೆಚ್ಚವಾಗಲಿದೆ.
ಈ ಮೊತ್ತವನ್ನು 101 ದಲಿತ ಕುಟುಂಬಗಳು ಭರಿಸುವುದು ಅಸಾಧ್ಯವಾಗಿರುವುದರಿಂದ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಿ ನಿವೇಶನ ಮಂಜೂರು ಮಾಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರಿಯಪ್ಪ ಗುಡಿಮಣಿ, ಹುಲುಗಪ್ಪ, ಈರಣ್ಣ, ನವೀನ್, ಮಲ್ಲಮ್ಮ, ಮೋಹನ್ ರಾಜ್ ಸೇರಿದಂತೆ ಗ್ರಾಮದ ಹಲವು ಮುಖಂಡರು ಉಪಸ್ಥಿತರಿದ್ದರು.

ಶ್ರೀರಾಮರಂಗಾಪುರ ದಲಿತ ಕುಟುಂಬಗಳಿಗೆ ವಸತಿ ನಿವೇಶನಕ್ಕೆ ಆಗ್ರಹ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ

ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ವಾಗ್ದಾಳಿ “ಮೂರು ವರ್ಷದ ಸಾಧನೆ ಎಂದರೆ ನೂರು ಸುಳ್ಳಿನ ಸಮಾವೇಶ” ಆರೋಪ