

21st May 2026

ಬಳ್ಳಾರಿ, ಮೇ.21: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಖಾಸಗಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಯುವ ಜಾಗೃತಿ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ನೆಲದ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು, ಕನ್ನಡಿಗರಿಗೆ ಸಿಗಬೇಕಾದ ಅವಕಾಶಗಳು ಹಿಂದಿ ಮಾತಾಡುವವರ ಪಾಲಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ನೆಲ ನಮ್ಮ ಹಕ್ಕು - ನಮ್ಮ ಉದ್ಯೋಗ ನಮ್ಮ ಹಕ್ಕು ಎಂಬ ಘೋಷಣೆಯಡಿ ಹೋರಾಟ ಕಟ್ಟೋಣ ಎಂದು ಕರೆ ನೀಡಿದ ಅವರು ನಮ್ಮ ಯುವಕರಿಗೆ ಉದ್ಯೋಗ ದೊರಕಿಸುವುದಕ್ಕೆ ನಾನು ಬದ್ಧ ಎಂದರು.
ನಗರದಲ್ಲಿ ಜನರು, ಅಕ್ಕ ತಂಗಿಯರು ನನ್ನನ್ನು ಭೇಟಿ ಮಾಡಿದಾಗ ಉದ್ಯೋಗ ಕೊಡಿಸುವಂತೆ ಕೇಳುತ್ತಾರೆ, ಆದರೆ ನಮ್ಮ ನೆಲದಲ್ಲಿ ಸಾವಿರಾರು ಕೋಟಿ ಸಂಪಾದಿಸುವ ಕಾರ್ಖಾನೆಯವರು ಹೊರ ರಾಜ್ಯದವರಿಗೆ ಉದ್ಯೋಗ ನೀಡುತ್ತಾರೆ ಎಂದರು.
ನಾವೆಲ್ಲ ಸೇರಿ ಹೋರಾಟ ಕಟ್ಟೋಣ, ನಾವೆಲ್ಲ ಸೇರಿ ನಮ್ಮ ಯುವಕರ ಬೇಡಿಕೆಗಳಿಗಾಗಿ ಹೋರಾಡೋಣ, ಯುವ ಶಕ್ತಿ ಮುಂದೆ ಯಾವ ಶಕ್ತಿಯೂ ಇಲ್ಲ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳೋಣ ಎಂದರು.
ನನಗೆ ಹಣ ಮಾಡುವ ಉದ್ಧೇಶ ಇಲ್ಲ, ನನ್ನ ತಂದೆ ಉದ್ಯಮಿ - ಶ್ರೀಮಂತ ವ್ಯಕ್ತಿ, ನಾನು ಕೂಡ ಆರ್ಥಿಕವಾಗಿ ಸ್ಥಿತಿವಂತ, ನನಗೆ ರಾಜಕೀಯದ ಮೂಲಕ ಹಣ ಸಂಪಾದಿಸಬೇಕಿಲ್ಲ, ನಿಮ್ಮ ಬೇಡಿಕೆಗಳಿಗಾಗಿ ನನ್ನ ಹೋರಾಟ ಪ್ರಾಮಾಣಿಕವಾಗಿರುತ್ತದೆ ಎಂದರು.
ನಮ್ಮ ನೆಲ ನಮ್ಮ ಜಲ ನಮ್ಮ ಹಕ್ಕು ಆಗಿದೆ, ಸ್ಥಳೀಯವಾಗಿ ಇರುವ ಉದ್ಯೋಗಗಳನ್ನು ಸ್ಥಳೀಯರಿಗೇ ನೀಡಬೇಕೆಂದು ಸಿಎಂ-ಡಿಸಿಎಂ ಅವರಿಗೆ ಮನವಿ ಮಾಡುವೆ ಎಂದ ಅವರು ಯುವಕರಿಗೆ ಉದ್ಯೋಗ ದೊರಕಿಸುವ ಸಂಬಂಧ ಸ್ಥಳೀಯವಾಗಿ ಬೃಹತ್ ಹೋರಾಟ ಆಯೋಜಿಸಲಿದ್ದೇವೆ, ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದರು.
ನಮ್ಮ ಭಾಗದ ಯುವಕರು ಸಣ್ಣ ಪುಟ್ಟ ಉದ್ಯೋಗ ಮಾಡುವುದನ್ನು ಕಂಡಾಗ ನನಗೆ ನೋವಾಗುತ್ತದೆ, ನಮ್ಮ ನೆಲದಲ್ಲಿ ಎಲ್ಲ ಸವಲತ್ತು ಪಡೆದು ಕಾರ್ಖಾನೆ ಸ್ಥಾಪಿಸಿದವರು ನಮಗೆ ಉದ್ಯೋಗ ಕೊಡುವವರೆಗೆ ಬಿಡುವುದಿಲ್ಲ ಎಂದರು.
ನಾವು ಯುವಕರು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು, ಗುಮಾಸ್ತನಿಂದ ಪ್ರಧಾನಿಯವರಿಗೆ ಎಲ್ಲರನ್ನೂ ಪ್ರಶ್ನೆ ಮಾಡಬೇಕು, ನಿಮಗೆ ಪ್ರಶ್ನಿಸುವ ಹಕ್ಕಿದೆ, ಮಾತಾಡಿ, ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಅಧಿಕಾರವನ್ನು ನಾವು ಬಳಸೋಣ, ಡಾ.ಅಂಬೇಡ್ಕರ್ ಅವರನ್ನು ಸ್ಮರಿಸೋಣ, ಐತಿಹಾಸಿಕ ವ್ಯಕ್ತಿಗಳ ಬಗ್ಗೆ ತಿಳಿಯೋಣ ಎಂದರು.
ಇತ್ತೀಚೆಗೆ ಮಾದಕ ವಸ್ತುಗಳ ಬಳಕೆ ಯುವಕರಲ್ಲಿ ಹೆಚ್ಚಾಗಿದೆ, ಯುವಕರು ಇದರಿಂದ ದೂರ ಇರಬೇಕು, ಈ ನಿಟ್ಟಿನಲ್ಲಿ ಜಾಗೃತಿ ಮಾಡೋಣ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ಸಂಘಟನೆಯ ಸಂಸ್ಥಾಪಕ ಯಾಳ್ಪಿ ವಲಿ ಬಾಷ ಮತ್ತು ನಿಯೋಜಿತ ಪದಾಧಿಕಾರಿಗಳು ವೇದಿಕೆ ಮೇಲಿದ್ದರು.

ಶ್ರೀರಾಮರಂಗಾಪುರ ದಲಿತ ಕುಟುಂಬಗಳಿಗೆ ವಸತಿ ನಿವೇಶನಕ್ಕೆ ಆಗ್ರಹ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ

ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ವಾಗ್ದಾಳಿ “ಮೂರು ವರ್ಷದ ಸಾಧನೆ ಎಂದರೆ ನೂರು ಸುಳ್ಳಿನ ಸಮಾವೇಶ” ಆರೋಪ