

28th May 2026

ಬೆಂಗಳೂರು, ಮೇ.28: ಕರ್ನಾಟಕ ಕಾಂಗ್ರೆಸ್ನಲ್ಲಿ ಇದೀಗ “ಮಾದಿಗ ಸಮುದಾಯಕ್ಕೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡಬೇಕು” ಎಂಬ ಬೇಡಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಜಾತಿ ಸಮತೋಲನ ಹಾಗೂ ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಮಹತ್ವ ಪಡೆದುಕೊಂಡಿದೆ.
ಮಾದಿಗ ಸಮುದಾಯದ ಹಲವು ಸಂಘಟನೆಗಳು ಹಾಗೂ ದಲಿತ ಮುಖಂಡರು, ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮ ಸಮುದಾಯಕ್ಕೆ ಸಮರ್ಪಕ ರಾಜಕೀಯ ಪ್ರತಿನಿಧಿತ್ವ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಎಸ್ಸಿ ಸಮುದಾಯದೊಳಗಿನ ದೊಡ್ಡ ವರ್ಗವಾಗಿರುವ ಮಾದಿಗರಿಗೆ ಡಿಸಿಎಂ ಹುದ್ದೆ ನೀಡುವುದರಿಂದ “ಸಾಮಾಜಿಕ ನ್ಯಾಯ”ದ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕತ್ವ ಪುನರ್ವ್ಯವಸ್ಥೆ ಕುರಿತು ಚರ್ಚೆ ನಡೆಸುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಸಾಧ್ಯತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ಪಾತ್ರ, ಪ್ರಾದೇಶಿಕ ಮತ್ತು ಜಾತಿ ಸಮತೋಲನ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ರಾಜಕೀಯ ಫಾರ್ಮುಲಾ ರೂಪಿಸುವ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ “ಒಬ್ಬ ಪ್ರಭಾವಿ ಮಾದಿಗ ನಾಯಕನಿಗೆ ಡಿಸಿಎಂ ಸ್ಥಾನ” ನೀಡುವ ಪ್ರಸ್ತಾವವೂ ಒಳಮಟ್ಟದಲ್ಲಿ ಚರ್ಚೆಗೆ ಬಂದಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಸದ್ಯ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಆದರೆ ಕಾಂಗ್ರೆಸ್ನ ದಲಿತ ನಾಯಕರು ಹಾಗೂ ಮಾದಿಗ ಸಮುದಾಯದ ಕೆಲ ಹಿರಿಯ ನಾಯಕರ ಹೆಸರುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.
ಕೆಲವರು ಸಚಿವ ಕೆ.ಎಚ್. ಮುನಿಯಪ್ಪ ಅವರ ಹೆಸರನ್ನೂ ಪ್ರಸ್ತಾಪಿಸುತ್ತಿದ್ದರೂ, ಪಕ್ಷದ ಅಧಿಕೃತ ನಿಲುವು ಇನ್ನೂ ಪ್ರಕಟವಾಗಿಲ್ಲ.
ಇತ್ತೀಚೆಗೆ ಮಾದಿಗ ಸಂಘಟನೆಗಳ ಒಕ್ಕೂಟ ರಾಜ್ಯದ ವಿವಿಧ ಭಾಗಗಳಲ್ಲಿ ಸಭೆಗಳು ಹಾಗೂ ಪ್ರತಿಭಟನೆಗಳನ್ನು ನಡೆಸಿ ಡಿಸಿಎಂ ಸ್ಥಾನ, ಎಸ್ಸಿ ಒಳಮೀಸಲಾತಿ ಜಾರಿ ಹಾಗೂ ಹೆಚ್ಚಿನ ರಾಜಕೀಯ ಪ್ರತಿನಿಧಿತ್ವಕ್ಕೆ ಆಗ್ರಹಿಸಿದೆ.
ಈ ಕುರಿತ ಸಭೆಗಳ ವಿಡಿಯೋಗಳು ಹಾಗೂ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಾಜಕೀಯ ವಿಶ್ಲೇಷಕರ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಈಗ “ಸಾಮಾಜಿಕ ನ್ಯಾಯ ಫಾರ್ಮುಲಾ”ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ದಲಿತ, ಒಬಿಸಿ, ಲಿಂಗಾಯತ ಹಾಗೂ ವಕ್ಕಲಿಗ ಸಮುದಾಯಗಳ ನಡುವೆ ಸಮತೋಲನ ಸಾಧಿಸುವುದು ಪಕ್ಷದ ಪ್ರಮುಖ ಗುರಿಯಾಗಿದೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರಿದರೆ, ದಲಿತ ಸಮುದಾಯಕ್ಕೆ ಪ್ರಭಾವಿ ಡಿಸಿಎಂ ಹುದ್ದೆ ನೀಡುವ ಸಾಧ್ಯತೆ ಹೆಚ್ಚಿದ್ದು, ಅದರಲ್ಲಿ ಮಾದಿಗ ಸಮುದಾಯಕ್ಕೆ ಆದ್ಯತೆ ಸಿಗಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಇನ್ನೊಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಒಳಜಗಳ ಹಾಗೂ ಅಧಿಕಾರ ಹಂಚಿಕೆ ರಾಜಕೀಯದ ಭಾಗವಾಗಿ ಈ ಬೇಡಿಕೆ ಮುಂದಿಟ್ಟಲಾಗಿದೆ ಎಂದು ವಿರೋಧ ಪಕ್ಷ ಟೀಕಿಸಿದೆ.
ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.
ಡಿಸಿಎಂ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವುದೇ ಅಥವಾ ಹೊಸ ಮುಖಗಳಿಗೆ ಅವಕಾಶ ನೀಡಬೇಕೇ ಎಂಬ ಚರ್ಚೆ ಮುಂದುವರಿದಿದೆ.
ಮುಂದಿನ ಕೆಲ ದಿನಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ಸಭೆಗಳ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯ ಅಂದಾಜಿಸಿದೆ.
— ಹಿರಿಯ ಪತ್ರಕರ್ತ ಎಂ. ಜಂಬುನಾಥ

ಅಕ್ರಮ ಪಡಿತರ ಅಕ್ಕಿ ಸಾಗಣೆ ಭೇದಿಸಿದ ಪೊಲೀಸರು 22.10 ಟನ್ ಅಕ್ಕಿ, ₹10 ಲಕ್ಷ ಮೌಲ್ಯದ ಲಾರಿ ಜಪ್ತಿ

ಬಾಲ್ಯವಿವಾಹ ಹಾಗೂ ಅಪ್ರಾಪ್ತರ ಗರ್ಭಧಾರಣೆ ತಡೆಗೆ ಕಠಿಣ ಕ್ರಮಕ್ಕೆ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ