

30th May 2026

ಜೂನ್ 2ರಂದು 105 ಟ್ರ್ಯಾಕ್ಟರ್ಗಳೊಂದಿಗೆ ಹೋರಾಟ; ಸರ್ಕಾರಕ್ಕೆ ಎಚ್ಚರಿಕೆ
ಬಳ್ಳಾರಿ, ಮೇ 30: ತುಂಗಭದ್ರ ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹೂಳು ಸಂಗ್ರಹದಿಂದ ನೀರು ಸಂಗ್ರಹ ಸಾಮರ್ಥ್ಯ ಕುಸಿಯುತ್ತಿದ್ದು, ಜಲಾಶಯದ ಸಮಗ್ರ ಹೂಳು ತೆರವಿಗೆ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತುಂಗಭದ್ರ ರೈತ ಸಂಘವು ಜೂನ್ 2ರಂದು ಸಾಂಕೇತಿಕ ಹೂಳು ತೆರವು ಅಭಿಯಾನ ಹಮ್ಮಿಕೊಂಡಿದೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ, ಜಲಾಶಯದ ಹೂಳು ತೆರವುಗೊಳಿಸುವಂತೆ ಹಲವು ವರ್ಷಗಳಿಂದ ಸರ್ಕಾರಗಳ ಗಮನ ಸೆಳೆಯಲಾಗುತ್ತಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಕ್ರಮಗಳು ಜರುಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2017ರಲ್ಲಿ ರೈತ ಸಂಘದ ನೇತೃತ್ವದಲ್ಲಿ 31 ದಿನಗಳ ಕಾಲ ಹೂಳು ತೆರವು ಜಾತ್ರೆ ನಡೆಸಿ, ದಾನಿಗಳ ನೆರವಿನಿಂದ ಸುಮಾರು ₹31 ಲಕ್ಷ ವೆಚ್ಚದಲ್ಲಿ ಕಾರ್ಯ ಕೈಗೊಳ್ಳಲಾಗಿತ್ತು. ಆದಾಗ್ಯೂ ಸರ್ಕಾರದ ಮಟ್ಟದಲ್ಲಿ ಸಮಗ್ರ ಹೂಳು ತೆರವಿಗೆ ಅಗತ್ಯ ಯೋಜನೆಗಳು ಜಾರಿಯಾಗಿಲ್ಲ ಎಂದು ಅವರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಮತ್ತೊಮ್ಮೆ ಎಚ್ಚರಿಸುವ ಉದ್ದೇಶದಿಂದ 105 ಟ್ರ್ಯಾಕ್ಟರ್ಗಳ ಮೂಲಕ ಸಾಂಕೇತಿಕ ಹೋರಾಟ ಆಯೋಜಿಸಲಾಗಿದೆ.
ಜೂನ್ 1ರಂದು ದರೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಟ್ರ್ಯಾಕ್ಟರ್ಗಳ ಮೆರವಣಿಗೆ ತುಂಗಭದ್ರ ಜಲಾಶಯದತ್ತ ಪ್ರಯಾಣ ಬೆಳೆಸಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಂದು ಟ್ರ್ಯಾಕ್ಟರ್ಗೆ ₹3 ಸಾವಿರ ಡೀಸೆಲ್ ವೆಚ್ಚವನ್ನು ಸಂಘವೇ ಭರಿಸಲಿದೆ ಎಂದು ತಿಳಿಸಿದರು.
ಜೂನ್ 2ರಂದು ಜಲಾಶಯದ ಹಿಂಭಾಗದಲ್ಲಿರುವ ಗೂಂಡಾ ಫಾರೆಸ್ಟ್ ಗೆಸ್ಟ್ ಹೌಸ್ ಸಮೀಪ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಹೂಳು ತೆರವು ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಎರಡು ಜೆಸಿಬಿಗಳ ಸಹಾಯದಿಂದ ಜಲಾಶಯದ ಹೂಳನ್ನು ಟ್ರ್ಯಾಕ್ಟರ್ಗಳಲ್ಲಿ ತುಂಬಿ ಸಾಂಕೇತಿಕವಾಗಿ ಹೊರತೆಗೆಯುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ತುಂಗಭದ್ರ ಜಲಾಶಯದ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ರೈತರ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದ್ದು, ಸರ್ಕಾರಗಳು ಕೂಡಲೇ ಸಮಗ್ರ ಹೂಳು ತೆರವು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ದರೂರು ಪುರುಷೋತ್ತಮಗೌಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷ್ಣಾನಗರ ಶಿವಯ್ಯ, ಶ್ರೀಧರಗಡ್ಡೆ ವೀರನಗೌಡ, ದರೂರು ಆಕಾಶ್, ಜಾಲಿಹಾಳ ಶ್ರೀಧರ್, ವೀರಭದ್ರ ನಾಯಕ, ಕೊಂಚಿಗೇರಿ ಗೋವಿಂದಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

ಹೊರನಾಡ ಕನ್ನಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲು ಒತ್ತಾಯ ಆಂಧ್ರ ದೇಶ ಕನ್ನಡ ಶಿಕ್ಷಕರ ಸಂಘದಿಂದ ಸರ್ಕಾರಕ್ಕೆ ಮನವಿ

ಕಾಂಗ್ರೆಸ್ನಲ್ಲಿ ಮಾದಿಗರಿಗೆ ಡಿಸಿಎಂ ಸ್ಥಾನ ಬೇಡಿಕೆ ಜೋರು ಹೈಕಮಾಂಡ್ ಮಟ್ಟದಲ್ಲಿ ಸಾಮಾಜಿಕ ಸಮತೋಲನ ಚರ್ಚೆ

ಅಕ್ರಮ ಪಡಿತರ ಅಕ್ಕಿ ಸಾಗಣೆ ಭೇದಿಸಿದ ಪೊಲೀಸರು 22.10 ಟನ್ ಅಕ್ಕಿ, ₹10 ಲಕ್ಷ ಮೌಲ್ಯದ ಲಾರಿ ಜಪ್ತಿ