

30th May 2026

ಬಳ್ಳಾರಿ, ಮೇ 30: ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೊರನಾಡ ಕನ್ನಡ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಆಂಧ್ರ ದೇಶ ಕನ್ನಡ ಶಿಕ್ಷಕರ ಸಂಘವು ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಕನ್ನಡ ಪಠ್ಯಪುಸ್ತಕಗಳನ್ನು ವಿತರಿಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಅಲ್ಲದೆ, ಕರ್ನಾಟಕ ಸರ್ಕಾರದ ಶಿಕ್ಷಕರಿಗೆ ನೀಡಲಾಗುವ ಸೇವಾನಿರತ ಶಿಕ್ಷಣ ತರಬೇತಿಯಲ್ಲಿ ಆಂಧ್ರ ಭಾಗದ ಹೊರನಾಡ ಕನ್ನಡ ಶಿಕ್ಷಕರಿಗೂ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕರಿಗೆ ವಿತರಿಸಲಾಗುವ ಶಿಕ್ಷಣ ಸಾಮಗ್ರಿಗಳನ್ನು ಹೊರನಾಡ ಕನ್ನಡ ಶಿಕ್ಷಕರಿಗೂ ನೀಡಬೇಕು. ಜೊತೆಗೆ, ಕರ್ನಾಟಕ ಸರ್ಕಾರದಿಂದ ಪ್ರತಿ ವರ್ಷ ಪ್ರದಾನ ಮಾಡಲಾಗುವ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಂಧ್ರ ಪ್ರದೇಶದ ಕನ್ನಡ ಶಿಕ್ಷಕರನ್ನೂ ಪರಿಗಣಿಸಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದರು.
ಹೊರನಾಡ ಕನ್ನಡಿಗರ ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಅಧ್ಯಕ್ಷ ಎನ್. ಮರಿಸ್ವಾಮಿ ರೆಡ್ಡಿ, ಆಂಧ್ರ ದೇಶ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಗಿರಿಜಾಪತಿ, ಉಪಾಧ್ಯಕ್ಷ ಬಿ. ಇರಳಪ್ಪ, ಖಜಾಂಚಿ ಜಿ. ತಿಪ್ಪೇಸ್ವಾಮಿ, ಎಲ್. ಶ್ರೀನಾಥ್, ಬಿ. ಹೊನ್ನೂರು, ರಿಯಾಜ್, ರಂಜಾನ್ ಹಾಗೂ ಎಂ. ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಂಗ್ರೆಸ್ನಲ್ಲಿ ಮಾದಿಗರಿಗೆ ಡಿಸಿಎಂ ಸ್ಥಾನ ಬೇಡಿಕೆ ಜೋರು ಹೈಕಮಾಂಡ್ ಮಟ್ಟದಲ್ಲಿ ಸಾಮಾಜಿಕ ಸಮತೋಲನ ಚರ್ಚೆ

ಅಕ್ರಮ ಪಡಿತರ ಅಕ್ಕಿ ಸಾಗಣೆ ಭೇದಿಸಿದ ಪೊಲೀಸರು 22.10 ಟನ್ ಅಕ್ಕಿ, ₹10 ಲಕ್ಷ ಮೌಲ್ಯದ ಲಾರಿ ಜಪ್ತಿ