

4th June 2026

ಬಳ್ಳಾರಿ, ಜೂ.4: ಕೌಲ್ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಮನೆಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ₹16.80 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸುಮನ್ ಡಿ. ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನವೀನ್ ಕುಮಾರ್ ಹಾಗೂ ಬಳ್ಳಾರಿ ನಗರ ಉಪವಿಭಾಗದ ಡಿಎಸ್ಪಿ ಗೋವಿಂದ ರಾಜು ಅವರ ಮೇಲ್ವಿಚಾರಣೆಯಲ್ಲಿ ಕೌಲ್ಬಜಾರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಷಣ್ಮುಖಪ್ಪ ಜಿ.ಆರ್. ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು.
ಈ ವೇಳೆ ಜಾನಕುಂಟೆ ತಾಂಡ ನಿವಾಸಿಗಳಾದ ಅನಿಲ್ ಕುಮಾರ್ ನಾಯ್ಕ ಹಾಗೂ ಮಲ್ಲಿಕಾರ್ಜುನ ನಾಯ್ಡ್ ಅಲಿಯಾಸ್ ಲಂಬಾಣಿ ಮಲ್ಲಿ ಅವರನ್ನು ಮೇ 30ರಂದು ಬಂಧಿಸಿ ವಿಚಾರಣೆ ನಡೆಸಲಾಗಿದೆ. ತನಿಖೆ ವೇಳೆ ಆರೋಪಿಗಳು ಕೌಲ್ಬಜಾರ್ ಠಾಣೆ ವ್ಯಾಪ್ತಿಯ 11 ಮನೆಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರಿಂದ ಠಾಣೆ ಗುನ್ನೆ ಸಂಖ್ಯೆ 115/2026 ಸೇರಿದಂತೆ ಒಟ್ಟು 11 ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ₹15.90 ಲಕ್ಷ ಮೌಲ್ಯದ 159 ಗ್ರಾಂ ಚಿನ್ನಾಭರಣ, ₹70 ಸಾವಿರ ಮೌಲ್ಯದ 350 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹20 ಸಾವಿರ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಆಸ್ತಿಯ ಒಟ್ಟು ಮೌಲ್ಯ ₹16.80 ಲಕ್ಷ ಎಂದು ತಿಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಎಸ್ಪಿ ಗೋವಿಂದ ರಾಜು, ಪಿಐ ಷಣ್ಮುಖಪ್ಪ ಜಿ.ಆರ್., ಪಿಎಸ್ಐಗಳಾದ ನಿಂಗಪ್ಪ, ರವಿ, ಲಾರೆನ್ಸ್, ತೇಜೋ ವಿಕಾಸ್ ಹಾಗೂ ಸಿಬ್ಬಂದಿಗಳಾದ ನಾಗರಾಜ, ಅನ್ವರ್ ಬಾಷಾ, ಸೋಮಪ್ಪ, ಠಾಕೂರ್ ನಾಯ್ಕ, ಜಡಿಯಪ್ಪ, ಶ್ರೀನಿವಾಸ ಮತ್ತು ಶಾಂತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸರಣಿ ಮನೆಕಳ್ಳತನ ಪ್ರಕರಣಗಳನ್ನು ಭೇದಿಸಿ ಕಳುವಾದ ಆಸ್ತಿಯನ್ನು ಮರುಪಡೆಯುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸುಮನ್ ಡಿ. ಪನ್ನೇಕರ್ ಶ್ಲಾಘಿಸಿ ಅಭಿನಂದಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

ಹೊರನಾಡ ಕನ್ನಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲು ಒತ್ತಾಯ ಆಂಧ್ರ ದೇಶ ಕನ್ನಡ ಶಿಕ್ಷಕರ ಸಂಘದಿಂದ ಸರ್ಕಾರಕ್ಕೆ ಮನವಿ