

7th June 2026

ಬಳ್ಳಾರಿ, ಜೂ. 7: ನಗರದ ಡಿ.ಸಿ. ಕ್ಯಾಂಪ್ ರಸ್ತೆಯ ಸಮೀಪ ಹರಿಯುವ ಅಂದ್ರಾಳ್ ಹಳ್ಳದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಭಾನುವಾರ ಬೆಳಿಗ್ಗೆ ಸ್ಥಳೀಯರು ಹಳ್ಳದ ಬಳಿ ತೆರಳಿದ ವೇಳೆ ನೀರಿನಲ್ಲಿ ಮಹಿಳೆಯ ಮೃತದೇಹ ತೇಲುತ್ತಿರುವುದು ಕಂಡುಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ರಾತ್ರಿ ಬಳ್ಳಾರಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರಿಂದ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯ ಮೃತದೇಹ ಮಳೆ ನೀರಿನೊಂದಿಗೆ ಬೇರೆ ಪ್ರದೇಶದಿಂದ ಕೊಚ್ಚಿಕೊಂಡು ಬಂದಿರಬಹುದೇ ಅಥವಾ ದುಷ್ಕರ್ಮಿಗಳು ಕೊಲೆ ಮಾಡಿ ಹಳ್ಳಕ್ಕೆ ಎಸೆದಿರಬಹುದೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಮೃತ ಮಹಿಳೆಯ ಶವವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಪ್ರಕರಣದ ಸುತ್ತ ಮತ್ತಷ್ಟು ಸಂಶಯಗಳನ್ನು ಹುಟ್ಟುಹಾಕಿದೆ. ಇದು ಅಪಘಾತ, ಆತ್ಮಹತ್ಯೆ ಅಥವಾ ಕೊಲೆ ಪ್ರಕರಣವೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಹಿಳೆಯ ಶವ ಪತ್ತೆಯಾದ ಹಿನ್ನೆಲೆ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ಬಹಿರಂಗವಾಗಬೇಕೆಂದು ಒತ್ತಾಯಿಸಿದ್ದಾರೆ.
ಮಾಹಿತಿ ಪಡೆದ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನಾ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದ್ದು, ಮಹಿಳೆಯ ಗುರುತು ಹಾಗೂ ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಬಳಿಕವೇ ಸಾವಿನ ಹಿಂದಿನ ನಿಜವಾದ ಕಾರಣ ಬಹಿರಂಗವಾಗುವ ಸಾಧ್ಯತೆ ಇದ್ದು, ಸದ್ಯ ಪ್ರಕರಣವನ್ನು ಎ.ಪಿ.ಎಂ.ಸಿ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯರ ಗಮನ ಸೆಳೆದಿರುವ ಈ ಘಟನೆ ನಗರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಗಂಗಾವತಿ: ಕ್ಷುಲ್ಲಕ ಜಗಳಕ್ಕೆ ಹೆತ್ತ ತಂದೆ, ಅಕ್ಕನನ್ನು ಕತ್ತು ಸೀಳಿ ಕೊಂದ ಪಾಪಿ ತಮ್ಮ!- ಆನ್ ಲೈನ್ ಗೇಮ್ ಬೆಡವೆಂದು ಬುದ್ದಿವಾದಕ್ಕೆ ಸಿಟ್ಟು

ಕೋಟ್ಯಂತರ ರೂ. ಮೌಲ್ಯದ ಆಸ್ತಿ ಸರ್ಕಾರದ ಸುಪರ್ದಿಗೆ ಮೆಸೋನಿಕ್ ಹಾಲ್ ಜಮೀನು ಜಿಲ್ಲಾಡಳಿತ ವಶಕ್ಕೆ

ಅಹಿಂದ ಕೇವಲ ರಾಜಕೀಯ ಘೋಷಣೆಯಾಗಬಾರದು; ಅದು ಸಮಾಜ ಪರಿವರ್ತನೆಯ ಮಹಾ ಚಳವಳಿಯಾಗಬೇಕು – ಹೊನ್ನುರಸ್ವಾಮಿ ಕೆ.ಟಿ