

10th June 2026

ಹೊಳಲ್ಕೆರೆ, ಜೂ.10: ಕನ್ನಡಪ್ರಭ ಹಾಗೂ ಉದಯವಾಣಿ ದಿನಪತ್ರಿಕೆಗಳಲ್ಲಿ ಪ್ರಕಟವಾದ “ಹೊಳಲ್ಕೆರೆ ಪುರಸಭೆಗೆ ಮುತ್ತಿಗೆ” ಶೀರ್ಷಿಕೆಯ ವರದಿ ಕುರಿತು ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಉಮೇಶ್ ಡಿ ಸ್ಪಷ್ಟನೆ ನೀಡಿದ್ದು, ವರದಿಯಲ್ಲಿ ಪ್ರಕಟವಾದ ಹಲವು ಅಂಶಗಳು ವಾಸ್ತವಾಂಶಗಳಿಗೆ ವಿರುದ್ಧವಾಗಿವೆ ಎಂದು ತಿಳಿಸಿದ್ದಾರೆ.
ವಾರ್ಡ್ ನಂ.5ರ ಸಿದ್ದಪ್ಪ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಪುರಸಭೆಯ ನಿರ್ಲಕ್ಷ್ಯದ ಕುರಿತು ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿದ ಅವರು, ಜೂನ್ 8ರಂದು ಬಡಾವಣೆಯ ನಿವಾಸಿಗಳು ಪುರಸಭೆ ಕಚೇರಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಚರ್ಚಿಸಿದ್ದು, ಸ್ಥಳ ಪರಿಶೀಲನೆಯ ವೇಳೆ ಕೆಲವು ಪ್ರಭಾವಿಗಳ ಕುಮ್ಮಕ್ಕಿನಿಂದ ಜೆಸಿಬಿ ಮೂಲಕ ರಸ್ತೆ ಅಗೆದು ಮಣ್ಣನ್ನು ರಸ್ತೆಯ ಮೇಲೆಯೇ ಹಾಕಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಈ ವೇಳೆ ಕುಡಿಯುವ ನೀರಿನ ಪೈಪ್ಲೈನ್ ಕೂಡ ಹಾನಿಗೊಳಗಾಗಿದ್ದು, ಪರಿಣಾಮವಾಗಿ ಸ್ಥಳೀಯರಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆ ತಕ್ಷಣವೇ ಪೈಪ್ಲೈನ್ ದುರಸ್ತಿ ಕಾರ್ಯ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಸಿದ್ದಪ್ಪ ಬಡಾವಣೆ ಅನಧಿಕೃತ ಬಡಾವಣೆಯಾಗಿದ್ದರೂ, ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು, ವಿದ್ಯುತ್ ಹಾಗೂ ಕಸ ವಿಲೇವಾರಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಉಮೇಶ್ ಹೇಳಿದ್ದಾರೆ.
ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಪ್ರಸ್ತುತ ಪುರಸಭೆಯಲ್ಲಿ ಅನುದಾನದ ಕೊರತೆ ಇರುವುದರಿಂದ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.
ಅನುದಾನ ಬಿಡುಗಡೆಯಾದ ಕೂಡಲೇ ಆಡಳಿತಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಮೊದಲ ಆದ್ಯತೆಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದಲ್ಲದೆ, ಸಾರ್ವಜನಿಕರಿಗೆ ತಾತ್ಕಾಲಿಕ ತೊಂದರೆ ಉಂಟಾಗದಂತೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತು ಕಿರಿಯ ಅಭಿಯಂತರರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.
ಈ ವೇಳೆ ನಿವಾಸಿಗಳು ಪುರಸಭೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
ಕೆಲವರ ಹಾಗೂ “ಕಾಣದ ಕೈಗಳ” ಪ್ರಭಾವದಿಂದ ವಾಸ್ತವಾಂಶಗಳನ್ನು ಪರಿಶೀಲಿಸದೆ ಕೆಲವು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದೆ ಎಂದು ಆರೋಪಿಸಿರುವ ಮುಖ್ಯಾಧಿಕಾರಿ, ಸಂಬಂಧಿತ ಮಾಧ್ಯಮಗಳು ತಮ್ಮ ಸ್ಪಷ್ಟೀಕರಣವನ್ನು ಪ್ರಕಟಿಸಿ ಸಾರ್ವಜನಿಕರಿಗೆ ನೈಜ ಮಾಹಿತಿ ತಲುಪಿಸಬೇಕೆಂದು ಮನವಿ ಮಾಡಿದ್ದಾರೆ.

ಗಾಲಿ ಲಕ್ಷ್ಮೀ ಅರುಣ ಜನ್ಮದಿನ: ಅನುಗ್ರಹ ಆಶ್ರಮದಲ್ಲಿ ಅನ್ನದಾನ, ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮ