

14th June 2026

ಬಳ್ಳಾರಿ, ಜೂನ್ 14: ನಗರದ ಬಾಲಾ ಹೋಟೆಲ್ನಲ್ಲಿ ಸೂರ್ಯ ನ್ಯೂಸ್ ಕನ್ನಡ ಮಾಧ್ಯಮದ ವತಿಯಿಂದ ಭಾನುವಾರ ಅದ್ಧೂರಿಯಾಗಿ ಆಯೋಜಿಸಲಾದ ವಾರ್ಷಿಕೋತ್ಸವ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಸೂರ್ಯ ನ್ಯೂಸ್ ಕನ್ನಡದ ಸಂಪಾದಕರಾದ ಹೇಮಂತ್ ರಾಜ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಈ ಸಂದರ್ಭದಲ್ಲಿ ಸಮಾಜಮುಖಿ ಪತ್ರಿಕೋದ್ಯಮ, ಜನಪರ ಹೋರಾಟಗಳು ಹಾಗೂ ನಿರಂತರ ಮಾಧ್ಯಮ ಸೇವೆಯ ಮೂಲಕ ಗುರುತಿಸಿಕೊಂಡಿರುವ ಸಿಂಧೂರ ಭಾರತ ವಾರಪತ್ರಿಕೆಯ ಸಂಪಾದಕರಾದ ಹೊನ್ನುರಸ್ವಾಮಿ ಕೆ.ಟಿ. ಅವರಿಗೆ ಪ್ರತಿಷ್ಠಿತ “ನಿರ್ಭೀತ ವರದಿಗಾರ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಹೊನ್ನುರಸ್ವಾಮಿ ಕೆ.ಟಿ. ಅವರು ಮಾತನಾಡಿ, “ಮಾಧ್ಯಮ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಧೈರ್ಯ ಮತ್ತು ಜನಪರ ಬದ್ಧತೆಯನ್ನು ಉಳಿಸಿಕೊಂಡು ಪತ್ರಿಕೋದ್ಯಮವನ್ನು ಜನರ ಧ್ವನಿಯನ್ನಾಗಿ ರೂಪಿಸುವ ಕಾರ್ಯದಲ್ಲಿ ಸೂರ್ಯ ನ್ಯೂಸ್ ಕನ್ನಡ ಮಹತ್ತರ ಪಾತ್ರ ವಹಿಸುತ್ತಿದೆ. ವಿಶೇಷವಾಗಿ ಸಂಪಾದಕರಾದ ಹೇಮಂತ್ ರಾಜ್ ಅವರು ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬುತ್ತಿದ್ದಾರೆ. ನನ್ನಂತಹ ಸಾಮಾನ್ಯ ಪತ್ರಕರ್ತನ ಸೇವೆಯನ್ನು ಗುರುತಿಸಿ ‘ನಿರ್ಭೀತ ವರದಿಗಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಿರುವುದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಗೌರವವನ್ನು ನಾನು ಜನಸೇವೆ, ಸತ್ಯನಿಷ್ಠೆ ಹಾಗೂ ಪತ್ರಿಕೋದ್ಯಮದ ಮೌಲ್ಯಗಳಿಗೆ ಸಮರ್ಪಿಸುತ್ತೇನೆ” ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಮ.ನಿ. ಪ್ರಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾ ಮಠ, ಸೋಮಸಮುದ್ರ ಹಾಗೂ ಪರಮ ಪೂಜ್ಯ ಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಶಾಖಾ ವಿರಕ್ತ ಮಠ, ಶ್ರೀಧರಗಡ್ಡೆ ವಹಿಸಿದ್ದರು.
ಕಾರ್ಯಕ್ರಮವನ್ನು ಶ್ರೀ ಪಿ. ಗಾದೆಪ್ಪ, ಮಹಾಪೌರರು, ಮಹಾನಗರ ಪಾಲಿಕೆ ಬಳ್ಳಾರಿ ಹಾಗೂ ಶ್ರೀಯುತ ಜಿ.ಕೆ. ಸ್ವಾಮಿ, ಸಂಸ್ಥಾಪಕರು, ಜಿ.ಹೆಚ್. ಫೌಂಡೇಶನ್, ಬಳ್ಳಾರಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀಧರ್ ಭಾರೀಕರ್, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತ್ ಬಳ್ಳಾರಿ ಭಾಗವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಶ್ರೀಮತಿ ಎಂ. ರಾಜೇಶ್ವರಿ ಸುಬ್ಬಾರಾಯುಡು, ಮಾಜಿ ಮಹಾಪೌರರು ಹಾಗೂ ಹಾಲಿ ಸದಸ್ಯರು, ಮಹಾನಗರ ಪಾಲಿಕೆ ಬಳ್ಳಾರಿ, ಅರುಣ್ ಭೂಪಾಲ್, ಬಿಪಿ ನ್ಯೂಸ್ ಸಂಪಾದಕರು, ಕೃಷ್ಣ ಮೋಹನ್ ಶೆಟ್ಟಿ, ಚಲನಚಿತ್ರ ನಿರ್ದೇಶಕರು ಹಾಗೂ ಹೇಮಂತ್ ರಾಜ್, ಸಂಪಾದಕರು, ಸೂರ್ಯ ನ್ಯೂಸ್ ಕನ್ನಡ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಪ್ರೋ. ಗೀರೀಶ್ ಕುಮಾರ್, ಸಾಮಾಜಿಕ ಹೋರಾಟಗಾರರಾದ ಸಂಗನಕಲ್ಲು ವಿಜಯ್, ಸಿದ್ದೇಶ್, ಈರಣ್ಣಗೌಡ, ಇಶಾಕ್, ಧನಂಜಯ, ಎಂ.ಜಿ. ಕನಕ ಸೇರಿದಂತೆ ಹಲವಾರು ಗಣ್ಯರು ಹೊನ್ನುರಸ್ವಾಮಿ ಕೆ.ಟಿ. ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.