

17th June 2026

ಹೊಳಲ್ಕೆರೆ, ಜೂ.17: ತಾಲೂಕಿನ ಚಿತ್ರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ಕುರಿತ ಸಮೀಕ್ಷೆ ಮತ್ತು ಪ್ರತ್ಯಕ್ಷಿಕತೆ ನಡೆಸುವ ಉದ್ದೇಶದಿಂದ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಿಗಾಗಿ ಬುಧವಾರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರವನ್ನು ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಎನ್. ಬಾಬು ಉದ್ಘಾಟಿಸಿ ಮಾತನಾಡಿ, ಕಸ ವಿಂಗಡಣೆ, ವಿಲೇವಾರಿ, ಸ್ವಚ್ಛತೆ ಮತ್ತು ನೈರ್ಮಲ್ಯದ ಮಹತ್ವವನ್ನು ವಿವರಿಸಿದರು. ದ್ರವ ಮತ್ತು ಘನ ತ್ಯಾಜ್ಯ ನಿರ್ವಹಣೆಯಲ್ಲಿ ಒಕ್ಕೂಟಗಳು ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಈ ಯೋಜನೆಯ ಮೂಲಕ ಮಹಿಳೆಯರು ತಮ್ಮ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಗೆ ಜನಜಾಗೃತಿ ಅಗತ್ಯವಾಗಿದ್ದು, ಯೋಜನೆಯ ಯಶಸ್ಸಿಗೆ ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚೂಡಾಮಣಿ, ಎನ್ಆರ್ಎಲ್ಎಂ ಜಿಲ್ಲಾ ವ್ಯವಸ್ಥಾಪಕ ರಮೇಶ್ ನಾಯ್ಕ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಂಜುನಾಥ ಟಿ., ತಾಲೂಕು ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು, ಐಇಸಿ ಸಂಯೋಜಕ ಉಮಾಶಂಕರ್, ಪಂಚಾಯತಿ ಸಿಬ್ಬಂದಿ, ಜಿಲ್ಲೆಯ 29 ಗ್ರಾಮ ಪಂಚಾಯಿತಿಗಳ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು, ಹೊಳಲ್ಕೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಹಾಗೂ ತಾಲೂಕು ಯುಸಿ ಸಂಯೋಜಕರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಸಮರ್ಪಕ ಅನುಷ್ಠಾನ, ಸಮೀಕ್ಷಾ ವಿಧಾನಗಳು ಹಾಗೂ ಗ್ರಾಮ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.

ಬಿ.ಕೆ. ಹರಿಪ್ರಸಾದ್ ಪದಗ್ರಹಣಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ: ಎ.ವಿ. ಉಮಾಪತಿ ಕರೆ