

25th June 2026

ಬಳ್ಳಾರಿ, ಜೂ.24: ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬುಧವಾರ ನಗರದಲ್ಲಿ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಿದರು.
ನಗರದ ಏಳುಮಕ್ಕಳ ತಾಯಮ್ಮ ಗುಡಿಯಿಂದ ಆರಂಭವಾದ ಪಾದಯಾತ್ರೆಯಲ್ಲಿ ಕಂಪ್ಲಿ ಹಾಗೂ ಕುರುಗೋಡು ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು ಭಾಗವಹಿಸಿದರು.
ಮೆರವಣಿಗೆ ಗವಿಯಪ್ಪ ಸರ್ಕಲ್ ಮೂಲಕ ಸಾಗಿದ್ದು, ಬಳಿಕ ಗಡಗಿ ಚನ್ನಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವಕ್ಕೆ ತಮ್ಮ ಆಗ್ರಹವನ್ನು ಸಲ್ಲಿಸಿದರು.
ಪ್ರತಿಭಟನಾಕಾರರು ಮಾತನಾಡಿ, ಜೆ.ಎನ್. ಗಣೇಶ್ ಅವರು ಎರಡು ಬಾರಿ ಕಂಪ್ಲಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಗ್ರಾಮೀಣ ಭಾಗಗಳ ರಸ್ತೆ, ಕುಡಿಯುವ ನೀರು, ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿರುವ ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ರೈತರ ಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಗಣೇಶ್ ಅವರು ಕೃಷಿ ಸಮಸ್ಯೆಗಳ ಪರಿಹಾರ, ನೀರಾವರಿ ಸೌಲಭ್ಯಗಳ ವಿಸ್ತರಣೆ ಹಾಗೂ ರೈತರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ವಿಧಾನಸಭೆಯಲ್ಲಿ ಪ್ರಬಲವಾಗಿ ಮಂಡಿಸಿದ್ದಾರೆ.
ಸಂಕಷ್ಟದ ಸಂದರ್ಭಗಳಲ್ಲಿ ರೈತರ ಬೆಂಬಲಕ್ಕೆ ನಿಂತು ಸರ್ಕಾರದ ಗಮನ ಸೆಳೆಯುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇದೇ ವೇಳೆ, ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಗೆಲುವಿಗೆ ಗಣೇಶ್ ಅವರು ಸಾಕಷ್ಟು ಶ್ರಮವಹಿಸಿದ್ದು, ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಅಖಂಡ ಬಳ್ಳಾರಿ ಜಿಲ್ಲೆಯ ಜನಪ್ರಿಯ ಯುವ ನಾಯಕರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡಿದರೆ ಬಳ್ಳಾರಿ–ವಿಜಯನಗರ ಅವಳಿ ಜಿಲ್ಲೆಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದ್ದು, ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಪರಿಣಾಮಕಾರಿ ಆಡಳಿತ ಸಾಧ್ಯವಾಗಲಿದೆ.
ಜೊತೆಗೆ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಲ್ಲಿ ಇನ್ನಷ್ಟು ಬಲಪಡಿಸಿ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ಅಖಂಡ ಬಳ್ಳಾರಿ ಜಿಲ್ಲೆಯ ಜನರ ಆಶಯಕ್ಕೆ ಸ್ಪಂದಿಸಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವವನ್ನು ಪ್ರತಿಭಟನೆಯ ಮೂಲಕ ಒತ್ತಾಯಿಸಲಾಯಿತು.
ಚಿತ್ರ ಶೀರ್ಷಿಕೆ: ಬಳ್ಳಾರಿಯಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೃಹತ್ ಪಾದಯಾತ್ರೆ ನಡೆಸಿದರು.

ಶ್ರೀ ಕ್ಷೇತ್ರ ಹುಲಿಗೇಮ್ಮ ದೇವಸ್ಥಾನ ಹುಂಡಿ ಎಣಿಕೆ 20 ದಿನದಲ್ಲಿ ರೂ.1.3 ಕೋಟಿ ಹಣ ಸಂಗ್ರಹ- 70 ಗ್ರಾಂ ಕಚ್ಚಾ ಬಂಗಾರ 3 ಕೆಜಿ ಬೆಳ್ಳಿ ದೇಣಿಗೆ