

25th June 2026

ಬಳ್ಳಾರಿ, ಜೂ.25: ಸಂತಕವಿ ಶ್ರೀ ಕನಕದಾಸರ ಜೀವನ, ತತ್ವ ಹಾಗೂ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ ನೃತ್ಯ ರೂಪಕ ನಾಟಕವು ಜೂ.27ರಂದು ಸಂಜೆ 6.30ಕ್ಕೆ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾ. ಪಿ. ಎಲ್. ಗಾದಿಲಿಂಗನ ಗೌಡ ತಿಳಿಸಿದರು.
ನಗರದ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಶ್ರೀ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಾಗೂ ರಂಗಜಂಗಮ ಸಂಸ್ಥೆಯ ಸಹಕಾರದೊಂದಿಗೆ ಈ ಅರ್ಥಪೂರ್ಣ ನಾಟಕವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಲಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್. ಎಂ. ರೇವಣ್ಣ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾತ ಚಿಕ್ಕಣ್ಣ, ಹಿರಿಯ ರಂಗ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಲೋಕೇಶ್ ವಿ. ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಾಮರಸ್ಯ, ಸಹಬಾಳ್ವೆ ಹಾಗೂ ಸೋದರತ್ವದ ಮೌಲ್ಯಗಳನ್ನು ತನ್ನ ನಡೆ-ನುಡಿಗಳ ಮೂಲಕ ಪ್ರತಿಪಾದಿಸಿದ ದಾರ್ಶನಿಕ ಹಾಗೂ ಭಕ್ತ ಕವಿ ಕನಕದಾಸರ ಬದುಕು ಮತ್ತು ಚಿಂತನೆಗಳನ್ನು ನಾಟಕದ ಮೂಲಕ ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ.
ಕುರುಬ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ವೀಕ್ಷಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಕೆ. ಮೋಹನ್, ಜಂಟಿ ಕಾರ್ಯದರ್ಶಿ ಆಂಜನೇಯ ಕೊಲಗಲ್, ಬಿ. ಎಂ. ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ

ಶ್ರೀ ಕ್ಷೇತ್ರ ಹುಲಿಗೇಮ್ಮ ದೇವಸ್ಥಾನ ಹುಂಡಿ ಎಣಿಕೆ 20 ದಿನದಲ್ಲಿ ರೂ.1.3 ಕೋಟಿ ಹಣ ಸಂಗ್ರಹ- 70 ಗ್ರಾಂ ಕಚ್ಚಾ ಬಂಗಾರ 3 ಕೆಜಿ ಬೆಳ್ಳಿ ದೇಣಿಗೆ