

1st July 2026

ವಿಜಯಪುರ, ಜು. 1: ವಿಜಯಪುರ ಜಿಲ್ಲೆಯ ಕೊರ್ತಿ-ಕೋಲಾರ ಸೇತುವೆ ಮೇಲೆ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟಿಪ್ಪರ್ ಲಾರಿಯೊಂದು ನಿಯಂತ್ರಣ ತಪ್ಪಿ ಕೃಷ್ಣಾ ನದಿಗೆ ಉರುಳಿದ ಘಟನೆ ನಡೆದಿದೆ.
ಲಭ್ಯ ಮಾಹಿತಿಯಂತೆ, ಕಾರನ್ನು ಓವರ್ಟೇಕ್ ಮಾಡಲು ಯತ್ನಿಸಿದ ವೇಳೆ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಸೇತುವೆಯ ತಡೆಗೋಡೆಗೆ ಅಪ್ಪಳಿಸಿದೆ. ಬಳಿಕ ಸೇತುವೆಯಿಂದ ಕೆಳಗೆ ಬೋರ್ಗರೆಯುತ್ತಿದ್ದ ಕೃಷ್ಣಾ ನದಿಗೆ ಉರುಳಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಬೀಳಗಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ತಕ್ಷಣ ಜಲವಾಹನದೊಂದಿಗೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿಯವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
ಸ್ಥಳೀಯರ ಸಹಕಾರದೊಂದಿಗೆ ನದಿಯಲ್ಲಿ ಸಿಲುಕಿದ್ದ ಒಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದ್ದು, ಮತ್ತೋರ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಪ್ರಕಾಶ್ ಪವಾರ್, ಆನಂದ ಚಿನಗುಂಡಿ, ರಂಗಪ್ಪ ನಕರಗುಂದಿ, ಬಸವರಾಜ್ ಹೂಗಾರ್, ರವಿ ಚವಾಣ್, ಫಾರೂಕ್ ಹುಡೇದ, ಸಂಗಪ್ಪ ಕಟಗೇರಿ, ಶಿವಗೀನಪ್ಪ ಕುಂಬಾರ್, ಆನಂದ ನಂದಗಿ, ಕಲ್ಲಪ್ಪ ಮಾದರ್, ಶಿವರಾಜ್ ಕುಮಾರ್ ಬಗಲಿ ಹಾಗೂ ಲಿಂಗಾರೂಡ ಹಳ್ಳೂರು ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು.
ಅಪಘಾತದ ಕುರಿತು ಸಂಬಂಧಪಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸಂಘರ್ಷ ಸಮಿತಿ ಬಳ್ಳಾರಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ