

1st July 2026

ಬಳ್ಳಾರಿ, ಜು.1: ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಪ್ರತಿಯೊಬ್ಬ ಅರ್ಹ ಮತದಾರರೂ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಕರೆ ನೀಡಿದರು.
ನಗರದ ಕೋಟೆ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ತಾವು ಹಾಗೂ ಕುಟುಂಬದ ಸದಸ್ಯರ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಬಿಎಲ್ಒಗೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ ಹಾಗೂ ಸದೃಢಗೊಳಿಸುವ ಉದ್ದೇಶದಿಂದ ಚುನಾವಣಾ ಆಯೋಗ 24 ವರ್ಷಗಳ ಬಳಿಕ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನ ಹಮ್ಮಿಕೊಂಡಿದೆ.
ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿದೆಯೇ ಎಂದು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಆಧಾರ್ ಜೋಡಣೆ, ಭಾವಚಿತ್ರದ ಸ್ಪಷ್ಟತೆ ಹಾಗೂ ಎಸ್ಐಆರ್ ಮಾರ್ಗಸೂಚಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಅರ್ಜಿಗೆ ಪಾಸ್ಪೋರ್ಟ್ ಗಾತ್ರದ ಬಣ್ಣದ ಭಾವಚಿತ್ರವನ್ನೇ ಅಂಟಿಸಬೇಕು. ಭಾವಚಿತ್ರದಲ್ಲಿನ ಉಡುಪಿನ ಬಣ್ಣ ಹಾಗೂ ಹಿನ್ನೆಲೆಯ ಬಣ್ಣ ಒಂದೇ ರೀತಿಯಾಗಿರಬಾರದು. ಇದರಿಂದ ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಸ್ಪಷ್ಟವಾಗಿ ಮುದ್ರಣವಾಗಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಸಹಾಯಕ ಆಯುಕ್ತ ಎಚ್.ಡಿ. ರಾಜೇಶ್, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಹಾಗೂ ಅನರ್ಹರು ಪಟ್ಟಿಯಲ್ಲಿ ಉಳಿಯಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಎಸ್ಐಆರ್ ಅಭಿಯಾನ ಕೈಗೊಂಡಿದೆ.
ಎಲ್ಲ ಮತದಾರರು ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಬಿಎಲ್ಒಗಳಿಗೆ ಸಹಕರಿಸಬೇಕು. ಯಾವುದೇ ತೊಂದರೆ ಎದುರಾದರೆ ಸ್ಥಳದಲ್ಲೇ ಅಧಿಕಾರಿಗಳು ನೆರವು ನೀಡಲಿದ್ದು, ಎಸ್ಐಆರ್ ಕುರಿತು ತಪ್ಪು ಕಲ್ಪನೆಗಳಿಗೆ ಅವಕಾಶ ನೀಡದೆ ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರೇಖಾ, ಎಸ್ಐಆರ್ ಮೇಲುಸ್ತುವಾರಿ ಮಂಜುನಾಥ ತಳವಾರ, ಬಿಎಲ್ಒಗಳಾದ ಸುಪ್ರೀತ, ಗೋವರ್ಧನ್, ನಟರಾಜ್ ಗೌಡ, ನಾಗರಾಜ್, ಅರುಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೊರ್ತಿ-ಕೋಲಾರ ಸೇತುವೆ ಮೇಲೆ ಭೀಕರ ಅಪಘಾತ: ಕೃಷ್ಣಾ ನದಿಗೆ ಉರುಳಿದ ಟಿಪ್ಪರ್, ಓರ್ವ ರಕ್ಷಣೆ – ಮತ್ತೋರ್ವರಿಗಾಗಿ ಶೋಧ

ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸಂಘರ್ಷ ಸಮಿತಿ ಬಳ್ಳಾರಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ