

6th July 2026

ಹೊಳಲ್ಕೆರೆ, ಜು. 6: ವಿಶೇಷ ಮತಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವನ್ನು ಕೇವಲ ಐದು ದಿನಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಅಮೃತಾಪುರ ಮತಗಟ್ಟೆಯ ಬಿ.ಎಲ್.ಒ. ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ. ಉಮೇಶ್ ಅವರನ್ನು ಹೊಳಲ್ಕೆರೆ ತಹಸಿಲ್ದಾರ ವಿಜಯಕುಮಾರ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ ವಿಜಯಕುಮಾರ್, "ಟಿ.ಪಿ. ಉಮೇಶ್ ಅವರು ತಮ್ಮ ವ್ಯಾಪ್ತಿಯ ಮತದಾರರ ಮಾಹಿತಿ ಸಂಗ್ರಹ, ದಾಖಲೆಗಳ ಪರಿಶೀಲನೆ ಹಾಗೂ ಎಸ್ಐಆರ್ ವಿಶೇಷ ಮತಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ಮತ್ತು ಸಮಯಪ್ರಜ್ಞೆಯಿಂದ ನಿರ್ವಹಿಸಿ ಕೇವಲ ಐದು ದಿನಗಳಲ್ಲೇ ಪೂರ್ಣಗೊಳಿಸಿದ್ದಾರೆ. ಅವರ ಕಾರ್ಯಶ್ರದ್ಧೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಇತರ ಬಿ.ಎಲ್.ಒ.ಗಳಿಗೆ ಮಾದರಿಯಾಗಿದೆ" ಎಂದು ಶ್ಲಾಘಿಸಿದರು.
"ಶಿಕ್ಷಕರಾಗಿ ಶಿಕ್ಷಣ ಇಲಾಖೆಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಉಮೇಶ್ ಅವರು, ಚುನಾವಣಾ ಇಲಾಖೆಯ ಕರ್ತವ್ಯಗಳನ್ನೂ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಸ್ಐಆರ್ ಕಾರ್ಯದ ಅವಧಿಯಲ್ಲಿ ಮನೆಗೆ ತೆರಳದೆ ಅಮೃತಾಪುರದಲ್ಲೇ ಹಗಲು-ರಾತ್ರಿ ಉಳಿದು ಪ್ರತಿಯೊಬ್ಬ ಮತದಾರರ ಮಾಹಿತಿಯನ್ನು ಖುದ್ದಾಗಿ ಸಂಗ್ರಹಿಸಿ ದಾಖಲಿಸಿದ್ದಾರೆ. ರಾಜ್ಯದಲ್ಲಿಯೇ ಅತ್ಯಂತ ವೇಗವಾಗಿ ಈ ಕಾರ್ಯವನ್ನು ಪೂರ್ಣಗೊಳಿಸಿರುವುದು ಅವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಅವರ ಈ ಸಾಧನೆಯನ್ನು ತಾಲ್ಲೂಕು ಆಡಳಿತ ಗೌರವದಿಂದ ಅಭಿನಂದಿಸುತ್ತದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಚುನಾವಣಾ ನೋಂದಣಾಧಿಕಾರಿ (ಆರ್.ಓ.) ಚಂದ್ರಕುಮಾರ್, ಗ್ರಾಮ ಆಡಳಿತಾಧಿಕಾರಿ ಮಹಂತೇಶ್ ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

ಉಪನ್ಯಾಸಕರಿಗೆ ಪ್ರೌಢಶಾಲಾ ಬೋಧನೆ ಕರಡು ತಿದ್ದುಪಡಿ ಹಿಂಪಡೆಯಲು ಆಗ್ರಹ: ಜು. 9ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ

ಸಾಲಬಾಧೆ ತಾಳಲಾರದೆ ಪತಿ, ಪತ್ನಿ, ಮಗ ನೇಣಿಗೆ ಶರಣು- ಸ್ಥಳಕ್ಕೆ-ಎಸ್.ಪಿ ರಾಮ್ ಅರಸಿದ್ದಿ ಭೇಟಿ