

12th July 2026

ಬಳ್ಳಾರಿ, ಜು.12: ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಮಿಕರು, ಎಚ್ಐವಿ ಸೋಂಕಿತರು ಹಾಗೂ ಇತರ ವಂಚಿತ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡುವ ಉದ್ದೇಶದಿಂದ ಸ್ಥಾಪಿತಗೊಂಡಿರುವ ಸಮೃದ್ಧಿ ಫೌಂಡೇಶನ್ ಕಚೇರಿ ನಗರದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕಚೇರಿಯಲ್ಲಿ ಅಕ್ಕಯಮ್ಮ ಪದ್ಮಶಾಲಿ ಅವರ ಅಮೃತಹಸ್ತಗಳಿಂದ ಉದ್ಘಾಟನೆಯಾಯಿತು.
ಸಂಸ್ಥೆಯ ಸಂಸ್ಥಾಪಕಿ ವೀಣಾ ಅವರು ಮಾತನಾಡಿ, ಮೇ 30, 2026ರಂದು ಬಳ್ಳಾರಿ ಜಿಲ್ಲೆಯಲ್ಲಿ ಸಮೃದ್ಧಿ ಫೌಂಡೇಶನ್ ನೋಂದಣಿಯಾಗಿದ್ದು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಮಿಕರು, ಎಚ್ಐವಿ ಸೋಂಕಿತ ಸಮುದಾಯದ ಕುಟುಂಬಗಳ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ಅಂಗವಿಕಲರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಕಳಂಕ, ತಾರತಮ್ಯ ಹಾಗೂ ಲಿಂಗಭೇದ ನಿವಾರಣೆ, ಆರೋಗ್ಯ, ಶಿಕ್ಷಣ, ಉದ್ಯೋಗ, ಜೀವನೋಪಾಯ, ಸಾಮಾಜಿಕ ಭದ್ರತೆ ಮತ್ತು ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ವಕಾಲತ್ತು ಕಾರ್ಯಕ್ರಮಗಳ ಮೂಲಕ ಸಮಾನ ಅವಕಾಶ ಕಲ್ಪಿಸಲು ಫೌಂಡೇಶನ್ ಶ್ರಮಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿತ್ಯಜೀವನ ನೆಟ್ವರ್ಕ್ ನಿರ್ದೇಶಕ ಕುಮಾರ್ ಮಾತನಾಡಿ, 2004ರಿಂದ ಎಚ್ಐವಿ ಸೋಂಕಿತರಿಗೆ ಪೌಷ್ಟಿಕ ಆಹಾರ ಹಾಗೂ ಪುನರ್ವಸತಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಮೃದ್ಧಿ ಫೌಂಡೇಶನ್ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಸಮೃದ್ಧಿ ಫೌಂಡೇಶನ್ ಅಧ್ಯಕ್ಷ ಎಂ. ನಾಗರಾಜ್ ಮಾತನಾಡಿ, ಜಿಲ್ಲೆಯ ವಿವಿಧ ಸಮುದಾಯಗಳ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸೋಂಕಿತರಿಗೆ ಪೌಷ್ಟಿಕ ಆಹಾರ ಮತ್ತು ಉತ್ತಮ ಜೀವನ ನಿರ್ಮಾಣಕ್ಕೆ ಸಂಸ್ಥೆ ಸದಾ ಬದ್ಧವಾಗಿರಲಿದೆ ಎಂದರು.
ಕರ್ನಾಟಕ ರಾಜ್ಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ರಾಜ್ ಮಾತನಾಡಿ, ಸಮುದಾಯದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ಸಮುದಾಯ ಸೇವೆಯಲ್ಲಿ ಹಿನ್ನಡೆಯಾಗಬಾರದು. ಒಕ್ಕೂಟವು ಸದಾ ಸಮೃದ್ಧಿ ಫೌಂಡೇಶನ್ ಜೊತೆ ನಿಲ್ಲಲಿದೆ ಎಂದು ಹೇಳಿದರು.
ಒಂದೆಡೆ ಸಂಸ್ಥೆಯ ಉತ್ತರ ಕರ್ನಾಟಕ ಫೀಲ್ಡ್ ಕೋ-ಆರ್ಡಿನೇಟರ್ ಮಾಯಾ ಎಸ್.ಆರ್. ನಾಯಕ್ ಮಾತನಾಡಿ, ಸಂಸ್ಥೆ ಕಟ್ಟುವುದು ಮತ್ತು ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ಸವಾಲಿನ ಕೆಲಸವಾಗಿದ್ದು, ಸಮೃದ್ಧಿ ಫೌಂಡೇಶನ್ಗೆ ತಮ್ಮ ಸಂಸ್ಥೆಯ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.
ಕರ್ನಾಟಕ ಅಂತರ್ಲಿಂಗಿ ಅಸೋಸಿಯೇಷನ್ ಅಧ್ಯಕ್ಷೆ ಅಬೆದಾ ಬೇಗಂ ಮಾತನಾಡಿ, ಅಂತರ್ಲಿಂಗಿ ಸಮುದಾಯದ ಹಕ್ಕುಗಳಿಗಾಗಿ ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತಿದ್ದು, ಸಮೃದ್ಧಿ ಫೌಂಡೇಶನ್ ಜೊತೆಗೂಡಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಪ್ರಗತಿ ಸದಾ ಸೇವಾ ಸಂಸ್ಥೆಯ ಅಧ್ಯಕ್ಷೆ ಪರ್ವೀನ್ ಬಾನು ಮಾತನಾಡಿ, ಸಮಾಜದಲ್ಲಿ ಸವಾಲುಗಳಿದ್ದರೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಎಲ್ಲವನ್ನೂ ಸಾಧಿಸಬಹುದು ಎಂದು ಕರೆ ನೀಡಿದರು.
ಸುಪ್ರೀಂ ಕೋರ್ಟ್ ಸಮಾನ ಅವಕಾಶಗಳ ಸಮಿತಿ ಸದಸ್ಯೆ ಅಕ್ಕಯಮ್ಮ ಮಾತನಾಡಿ, ಬಳ್ಳಾರಿಯಲ್ಲಿ ಸಮೃದ್ಧಿ ಫೌಂಡೇಶನ್ ಸ್ಥಾಪನೆಯಾಗಿರುವುದು ಸಂತಸದ ಸಂಗತಿಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ನಡೆದ ಕಾನೂನು ಹೋರಾಟಗಳು, ಸುಪ್ರೀಂ ಕೋರ್ಟ್ ತೀರ್ಪುಗಳು ಹಾಗೂ ಇತ್ತೀಚಿನ ಕಾನೂನು ಬದಲಾವಣೆಗಳಿಂದ ಎದುರಾಗಿರುವ ಸವಾಲುಗಳ ಕುರಿತು ವಿವರಿಸಿದರು. ಸಮುದಾಯದವರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ, ಕರ್ನಾಟಕ ಅಂತರ್ಲಿಂಗಿ ಅಸೋಸಿಯೇಷನ್, ಒಂದೆಡೆ, ಪ್ರಕೃತಿಕಲಾ ಸೇವಾ ಸಮಿತಿ ಟ್ರಸ್ಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಎಚ್ಐವಿ/ಏಡ್ಸ್ ನಿಯಂತ್ರಣಾಧಿಕಾರಿ ಡಾ. ಇಂದ್ರಾಣಿ ಹಾಗೂ ಹಲವು ಸಾಮಾಜಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಸಮೃದ್ಧಿ ಫೌಂಡೇಶನ್ ಕಾರ್ಯಚಟುವಟಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ

ಅಂಜನಾದ್ರಿ ದೇವಸ್ಥಾನ: ಹುಂಡಿ ಎಣಿಕೆ- 64 ದಿನದಲ್ಲಿ ರೂ.71.77 ಲಕ್ಷ ಸಂಗ್ರಹ- ವಿದೇಶಿ ಕರೆನ್ಸಿ ದೇಣಿಗೆ

ಪ್ರೀತಿಸಿ ಕೈ ಕೊಟ್ಟ ಹುಡುಗಿ: ರೈಲ್ವೆಗೆ ತಲೆಕೊಟ್ಟ ಯುವಕ- ಕಾರಟಗಿಯ ಶಿವಕುಮಾರನ ದೇಹ ಪಿಸ್ ಪಿಸ್