


26th December 2025
ಜಮಖಂಡಿ: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ, ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ನಗರದ ತಾಲೂಕಾ ಆಡಳಿತ ಸೌಧ ದ್ವಾರದ ಬಳಿ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಅನೀಲ ಬಡಿಗೇರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಕಾನೂನು ಜಾರಿಗೆ ತರುವ ಹುನ್ನಾರ ನಡೆಸಿದೆ. 1975ರ ತುರ್ತು ಪರಿಸ್ಥಿತಿಯನ್ನು ಜನವಿರೋಧಿ ಕಾನೂನಿನ ಅಡಿಯಲ್ಲಿ ಜಾರಿಗೊಳಿಸಿ ಸಾರ್ವಜನಿಕರು, ವಿಪಕ್ಷಗಳು, ಮಾಧ್ಯಮಗಳ ಅಭಿವ್ಯಕ್ತಿ ಸ್ವತಂತ್ಯ್ರವನ್ನು ಹತ್ತಿಕ್ಕುವ ಯತ್ನದಲ್ಲಿ ತೊಡಗಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025ನ್ನು ತರಾತುರಿಯಲ್ಲಿ ಜಾರಿಗೆ ತಂದು ಒಂದು ಕೋಮಿನವರನ್ನು ಎತ್ತಿಕಟ್ಟುವ ಹುನ್ನಾರ ನಡೆಸಿದೆ.
ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರು ನೀಡದಿರುವ ಸಂವಿಧಾನದ 19 (1) ಪರಿಚ್ಛೇದ, (2) ಪರಿಚ್ಛೇದದಡಿ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ಯ್ರದ ಉಲ್ಲಂಘನೆ ಆಗಿದೆ. ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳಲು ಹೊರಟಿದೆ ಸರ್ಕಾರದ ಈ ಜನವಿರೋಧಿ ನೀತಿಯನ್ನು ಬಿಜೆಪಿ ಖಂಡಿಸುತ್ತದೆ ಹಾಗೂ ಕಾನೂನು ಜಾರಿಗೆ ತರದಂತೆ ರಾಜ್ಯಪಾಲರಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಶಾಶಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾರೂ ಮಾತನಾಡದಂತೆ ತಡೆಯುವ, ಜನವಿರೋಧಿ ಕಾನೂನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.
ಮುಖಂಡರಾದ ಸಿ.ಟಿ.ಉಪಾಧ್ಯಾಯ ಮಾತನಾಡಿ ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿ, ಮಾತ್ರವಲ್ಲ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನ. ನಡೆದಿದೆ. ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಗಳಿಗೆ ಜಾಮೀನು ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಈ ಕೀಳು ಮಟ್ಟದ ಕಾಯಿದೆ ನಮಗೆ ಅವಶ್ಯವಿಲ್ಲ ಎಂದು ತಿಳಿಸಿದರು.
ಯೋಗಪ್ಪ ಸವದಿ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಗಣೇಶ ಶಿರಗಣ್ಣವರ, ಡಾ.ವಿಜಯಲಕ್ಷ್ಮೀ ತುಂಗಳ, ಗೀತಾ ಸೂರ್ಯವಂಶಿ, ಯಮನೂರ ಮೂಲಂಗಿ, ಸಂಗಮೇಶ ದಳವಾಯಿ, ಈಶ್ವರ ಆದೆಪ್ಪನವರ, ಕುಶಾಲ ವಾಘಮೊರೆ, ಶ್ರೀಧರ ಕಂಬಿ, ಶಂಕರ ಕಾಳೆ, ರಾಜಾಸಾಬ ಕಡಕೊಳ, ಸುರೇಶಗೌಡ ಪಾಟೀಲ, ರಾಜುಗೌಡ ಪಾಟೀಲ ಬಸವರಾಜ ಬಿರಾದಾರ, ಕೃಷ್ಣಾ ತಳವಾರ, ರಮೇಶ ಆಳಬಾಳ, ರವಿ ತೊದಲಬಾಗಿ, ವೃಷಭನಾಥ ಆಲಗೂರ ಇತರರು ಇದ್ದರು.

30th August 2024
ಜಮಖಂಡಿ: ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅವಹೇಳನಾಕಾರ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿವಿಧ ಮುಸ್ಲಿಂಪರ ಸಂಘಟನೆಗಳಿಂದ ಶುಕ್ರವಾರ ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಗ್ರೇಡ್2 ತಹಶೀಲ್ದಾರ ಕೆ.ವಾಯ್.ಬಿದರಿ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮೌಲಾನಾ ಅಲ್ತಾಫಖಾನ ಮದನಿ ಮಾತನಾಡಿ, ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ ಅವರ ಕುರಿತು ಮಹಾಂತ ರಾಮಗಿರಿ ಮಹಾರಾಜರು ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅವರ ಕುರಿತಾಗಿ ರಾಮಗಿರಿ ಮಹಾರಾಜ ಅವಹೇಳನಕಾರಿ ಭಾಷಣ ಮಾಡಿದ್ದು, ಈ ಸ್ವಾಮೀಜಿ ಮೇಲೆ ಕಾನೂನು ರೀತಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಭಾರತದ ಸಂವಿಧಾನವು ಎಲ್ಲ ಧರ್ಮದ ಸಮಾಜ ಬಂಧುಗಳಿಗೆ ಸಮಾನ ರೀತಿಯಲ್ಲಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದರೂ ಮಹಾಂತ ರಾಮಗಿರಿ ಮಹಾರಾಜ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದು ಇಸ್ಲಾಂ ಸಮಾಜದ ಬಾಂಧವರಿಗೆ ತೀವ್ರ ನೋವನ್ನುಂಟಾಗುವದಲ್ಲದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಇಂತಹ ಸ್ವಾಮೀಜಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೌಲಾನಾ ಇಸಾ ಇನಾಮದಾರ, ಮೌಲಾನಾ ಅನೀಸ್ ಡಾಂಗೆ, ಮೌಲಾನಾ ಮುಫ್ತಿ ಹಾರೂನ, ಮೌಲಾನಾ ಫಾರೂಕ್, ಮೌಲಾನಾ ಮುಜಮ್ಮೀಲ ಶೆಖ, ಮೌಲಾನಾ ಅಲ್ತಾಫಖಾನ ಮದನಿ, ಮೌಲಾನಾ ಸರ್ಫರಾಜ, ರಾಜೆಸಾಬ ತಾಳಿಕೋಟಿ, ಖೀಜರ ಪೆಂಡಾರಿ, ಖಾಜಾಆಮೀನ ಕಂಕಣಪೀರ, ರಫೀಕ ಕಲಾದಗಿ, ಝಾಕೀರಹುಸೇನ್ ನಧಾಪ, ಅಬ್ದುಲ ಜಮಾದಾರ, ಸಮೀರ ಕಂಗನೋಳ್ಳಿ, ಅನ್ವರ ಮೋಮಿನ, ಮುಬಾರಕ ಅಪರಾದ, ನಸರೋದ್ದಿನ ಜಮಾದಾರ, ಉಸ್ಮಾನಸಾಬ ದಿಲಾವರ, ಮಕ್ಬೂಲ್ ಅಥಣಿಕರ, ಗುಡುಸಾಬ ಹೊನವಾಡ, ರಾಜು ಮಸಳಿ, ಮುಸ್ತಾಕ ಝೆಂಡೆ, ಅಯ್ಯುಬ ಗದಗ, ಅಸ್ಗರಅಲಿ ಝೆಂಡೆ ಇತರರು ಇದ್ದರು.

22nd August 2024
ಜಮಖಂಡಿ : ಪಿಎಂ. ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆಗೆ "Best Performing ULB-in Loan performance at State Level” ಪ್ರಶಸ್ತಿಯನ್ನು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಪೌರಾಯುಕ್ತ ಜ್ಯೋತಿ ಗಿರೀಶ್.ಎಸ್ ಅವರಿಗೆ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಪಿಎಂ ಸ್ವ-ನಿಧಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನಗರಸ್ಥಳೀಯ ಸಂಸ್ಥೆಗಳಿಗೆ ಸಂಬ0ಧಿಸಿದ0ತೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ಆಯೋಜಿಸಿದ್ದರು.
ಜಮಖಂಡಿ ನಗರಸಭೆಯಲ್ಲಿ ಈ ಯೋಜನೆಯನ್ನು ಯಶಸ್ವಿಗೊಳಿಸಲು ಸಮುದಾಯ ಸಂಘಟಕರಾದ ರುಪೇಶ ಘಾಟಗೆ ಶ್ರಮಿಸಿದ್ದರು.

16th August 2024
ಜಮಖಂಡಿ: ಆ.16 : ಇಲ್ಲಿನ ನಗರಸಭೆ ನೂತನ ಅಧ್ಯಕ್ಷರಾಗಿ ಪರಮಗೊಂಡ ಗವರೋಜಿ ಹಾಗೂ ಉಪಾಧ್ಯಕ್ಷೆಯಾಗಿ ರೇಖಾ ಕಾಂಬಳೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ತಿಳಿಸಿದರು.
31 ಸದಸ್ಯರ ಬಲದ ಜಮಖಂಡಿ ನಗರಸಭೆಯಲ್ಲಿ 20 ಕಾಂಗ್ರೆಸ್ ಮತ್ತು ಪಕ್ಷೇತರ ಸದಸ್ಯ, ಒಳಗೊಂಡ 24 ಮತಗಳಿಂದ ಕಾಂಗ್ರೆಸ್ ಸಂಪೂರ್ಣ ಬಹುಮತ ಹೊಂದಿದ್ದ ಕಾರಣ ನಿರೀಕ್ಷೆಯಂತೆಯೇ ಅದೇ ಪಕ್ಷದ ಸದಸ್ಯ ಪರಮಗೊಂಡ ಗವರೋಜಿ ಸುಲಭವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿ ನಗರ ಪ್ರಥಮ ಪ್ರಜೆಯ ಗೌರವಕ್ಕೆ ಪಾತ್ರರಾದರು. ಮತ್ತು ಉಪಾಧ್ಯಕ್ಷೆ ರೇಖಾ ಕಾಂಬಳೆ ಆಯ್ಕೆಯಾದರು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ 11ರ ಪರಮಗೊಂಡ ಗವರೋಜಿ ಅವರೊಂದಿಗೆ 6ನೇ ವಾರ್ಡಿನ ಬಿಜೆಪಿ ಸದಸ್ಯೆ ಅನುಸುಯಾ ಅಸುಗಡೆ, ಮತ್ತು ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ 13ನೇ ವಾರ್ಡಿನ ರೇಖಾ ಕಾಂಬಳೆ ಅವರೊಂದಿಗೆ 30ನೇ ವಾರ್ಡಿನ ಬಿಜೆಪಿಯ ಸದಸ್ಯ ಕುಶಾಲ ವಾಗಮೋರೆ ಕೂಡ ಆಕಾಂಕ್ಷಿಯಾಗಿದ್ದರು.
ನಗರಸಭೆ ಪೌರಾಯುಕ್ತ ಜ್ಯೋತಿ ಗಿರೀಶ್.ಎಸ್ ನೂತನ ಅಧ್ಯಕ್ಷ, ಉಪಾಧ್ಯಕ್ಷೆಯನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಚುನಾವಣೆಯಲ್ಲಿ ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡ, ಶಾಸಕ ಜಗದೀಶ ಗುಡಗುಂಟಿ ಭಾಗಿಯಾಗಿದ್ದರು.
ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಪರಮಗೊಂಡ ಗವರೋಜಿ ಹಾಗೂ ರೇಖಾ ಕಾಂಬಳೆ ಬೆಂಬಲಿಗರು ನಗರಸಭೆ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.