


30th September 2025
ಬೆಳಗಾವಿ* : ಎಂ.ಕೆ.ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದೇ ನಮ್ಮ ಗುರಿ. ಕಾರ್ಖಾನೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಚುನಾವಣೆ ಎಂದರೆ ಜಿದ್ದಾಜಿದ್ದಿ ಇದ್ದೇ ಇರುತ್ತದೆ. ಸೋಲು ಗೆಲುವು ಸಾಮಾನ್ಯ. ಸೋತಾಗ ಕುಗ್ಗಬಾರದು. ಗೆದ್ದಾಗ ಹಿಗ್ಗಬಾರದು ಎಂದು ಹೇಳಿದರು.
ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ನೇತೃತ್ವದ ತಂಡ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದು, ಕಾರ್ಖಾನೆಯ ಅಭಿವೃದ್ದಿಗೆ ನಮ್ಮ ತಂಡ ಹಗಲಿರುಳು ಶ್ರಮಿಸಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಮಲಪ್ರಭಾ ಸಕ್ಕರೆ ಕಾರ್ಖಾನೆ ಏಷ್ಯಾದಲ್ಲೇ ನಂಬರ್ ಒನ್ ಕಾರ್ಖಾನೆ ಆಗಿತ್ತು. ಹೊಸ ಆಡಳಿತ ಮಂಡಳಿ ಕಾರ್ಖಾನೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದೆ. ಈ ಭಾಗದ ಜೀವನಾಡಿಯಾಗಿರುವ ಮಲಪ್ರಭಾ ಕಾರ್ಖಾನೆಯ ಅಭಿವೃದ್ದಿಯೇ ನಮ್ಮ ತಂಡದ ಗುರಿ ಎಂದರು.
ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳು ಸಾಲದಲ್ಲೇ ಇವೆ. 220 ಕೋಟಿ ಸಾಲವಿದ್ದು, ಈ ಸಾಲ ತೀರಿಸುವುದರ ಜೊತೆಗೆ ರೈತರ ಆಶೋತ್ತರಗಳನ್ನು ಈಡೇರಿಸಬೇಕಿದೆ. ಅಲ್ಲದೆ, ನೌಕರರ ಹಿತ ರಕ್ಷಣೆ ಕಾಯುವುದೇ ನಮ್ಮ ಗುರಿ. ಶೀಘ್ರವಾಗಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಹೇಳಿದರು.
ಚನ್ನರಾಜ್ ಹಟ್ಟಿಹೊಳಿ ಅವರು ಕಳೆದ 15 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
* ರೈತರ ಒಳಿಗೆ ಆದ್ಯತೆ : ಚನ್ನರಾಜ್ ಹಟ್ಟಿಹೊಳಿ
ಅಭೂತಪೂರ್ವ ಗೆಲುವನ್ನು ರೈತರು, ಶೇರುದಾರರು ನಮಗೆ ನೀಡಿದ್ದಾರೆ. ಕಾರ್ಖಾನೆಯನ್ನು ಸರಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಸಣ್ಣ ಹಾಗೂ ದೊಡ್ಡ ಪ್ರಮಾಣದ ರೈತರು ಕಾರ್ಖಾನೆಯಲ್ಲಿದ್ದಾರೆ. ರೈತರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಕ್ರಮವಹಿಸಲಿದ್ದೇವೆ ಎಂದರು.
ಕಾರ್ಖಾನೆಯಲ್ಲಿ ಆಡಳಿತ ನಡೆಸಿರುವ ಅನುಭವ ಹೊಂದಿದ್ದು, ಕಳೆದ 6-7 ವರ್ಷಗಳಿಂದ ಕಾರ್ಖಾನೆ ಆಡಳಿತ ನೋಡುತ್ತಿದ್ದೇನೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಕಾರ್ಖಾನೆಗೆ ರೈತರು ಕಬ್ಬು ನೀಡಿದ 10 ರಿಂದ 15 ದಿನಗಳ ಒಳಗಾಗಿ ಬಿಲ್ ಪಾವತಿಸಲಾಗುವುದು ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಎಲ್ಲರ ವಿಶ್ವಾಸಗಳಿಸುವುದೇ ನಮ್ಮ ಗುರಿ, ನಮ್ಮ ಪ್ಯಾನೆಲ್ ಮಾರ್ಗದರ್ಶನದಂತೆ ಆಡಳಿತ ನಡೆಸುವುದೇ ನಮ್ಮ ಗುರಿ. ಕಾರ್ಮಿಕರಿಗೆ, ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡುವ ಭರವಸೆ ನೀಡಿದರು.

30th September 2025
ಮಿಸ್ ನಿವೇದಿತಾ ಶಿವಕಾಂತ ಸಿದ್ನಾಳ ಅವರಿಗೆ ಗೌರವಾನ್ವಿತ ಯುವ ಉದ್ಯಮಿ ಪ್ರಶಸ್ತಿ – ಮಾನ್ಯ ಶಾಸಕ ರಾಜು ಶೇಠ ಅವರಿಂದ ಪ್ರದಾನ
ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪಣದಿಂದ ಉದ್ಯಮಶೀಲತೆ ಮತ್ತು ನಾಯಕತ್ವಕ್ಕೆ ಗೌರವ
ಬೆಳಗಾವಿ, 24 ಸೆಪ್ಟೆಂಬರ್ 2025: ನವೀನತೆ ಮತ್ತು ನಾಯಕತ್ವವನ್ನು ಸ್ಮರಿಸುವ ಉತ್ಸವದ ಅಂಗವಾಗಿ, ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪಣವು ಮಿಸ್ ನಿವೇದಿತಾ ಶಿವಕಾಂತ ಸಿದ್ನಾಳ ಅವರಿಗೆ ಯುವ ಉದ್ಯಮಿ ಪ್ರಶಸ್ತಿ ಪ್ರದಾನ ಮಾಡಿ, ವ್ಯಾಪಾರ ಕ್ಷೇತ್ರಕ್ಕೆ ಅವರ ಮಹತ್ವದ ಕೊಡುಗೆಯನ್ನು ಗೌರವಿಸಿತು.
ವಿಜಯಕಾಂತ ಡೈರಿ & ಫುಡ್ ಪ್ರೊಡಕ್ಟ್ಸ್ ಲಿಮಿಟೆಡ್ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಿಸ್ ನಿವೇದಿತಾ ಸಿದ್ನಾಳ ಅವರು ಉತ್ಪಾದನೆ ಹೆಚ್ಚಿಸುವುದು, ಗುಣಮಟ್ಟವನ್ನು ಬಲಪಡಿಸುವುದು ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಮಹತ್ತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತಹ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಸ್ಥಿರವಾದ ಉದ್ಯಮಶೀಲತೆಯೊಂದಿಗೆ ಅವರ ದೃಷ್ಟಿಕೋನವು ಕರ್ನಾಟಕದ ಯುವ ಉದ್ಯಮಿಗಳಲ್ಲಿ ವಿಶೇಷ ಸ್ಥಾನ ಪಡೆದಿದೆ.
ಈ ಪ್ರಶಸ್ತಿಯನ್ನು ಮಿಲ್ಲೇನಿಯಂ ಗಾರ್ಡನ್, ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ಸರ್ಕಾರದ ಮಾನ್ಯ ಶಾಸಕರಾದ ಶ್ರೀ ಅಸಿಫ್ (ರಾಜು) ಅಣ್ಣಾ ಶೆಟ್ ಅವರು, ಡಿ.ಸಿ.ಪಿ. ಶ್ರೀ ನರಾಯಣ ಬರಮನಿ ಸರ್ ಅವರ ಸಮ್ಮುಖದಲ್ಲಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವಿಜಯಕಾಂತ ಡೈರಿ & ಫುಡ್ ಪ್ರೊಡಕ್ಟ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ದೀಪಾ ಶಿವಕಾಂತ ಸಿದ್ನಾಳ, ಹಾಗೂ ರೋಟರಿ ಗಣ್ಯರಾದ ಅಧ್ಯಕ್ಷೆ ರೊ. ಅಡ್ವೊ. ವಿಜಯಲಕ್ಷ್ಮಿ ಮಾನ್ನಿಕೇರಿ, ಕಾರ್ಯದರ್ಶಿ ರೊ. ಕಾವೇರಿ ಕರುರ್, ಅಸಿಸ್ಟೆಂಟ್ ಗವರ್ನರ್ ರೊ. ಉದಯ ಜೋಶಿ, ಡಿ.ಜಿ.ಎನ್. ರೊ. ಅಶೋಕ್ ನಾಯ್ಕ, ವೊಕೆಷನಲ್ ಸರ್ವಿಸ್ ಡೈರೆಕ್ಟರ್ ರೊ. ಶೀಲಾ ಪಾಟೀಲ ಮತ್ತು ಈ ಕಾರ್ಯಕ್ರಮದ ಅಧ್ಯಕ್ಷೆ ರೊ. ಸುರೇಖಾ ಮುಮ್ಮಿಗಟ್ಟಿ ಉಪಸ್ಥಿತರಿದ್ದರು.
ಈ ಗೌರವವು ಮಿಸ್ ನಿವೇದಿತಾ ಸಿದ್ನಾಳ ಅವರ ಜೀವನಯಾತ್ರೆಯಲ್ಲಿ ಮಹತ್ವದ ಘಟ್ಟವಾಗಿದ್ದು, ಬೆಳವಣಿಗೆ, ಶ್ರೇಷ್ಠತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಒಟ್ಟುಗೂಡಿಸುವ ಯುವ ನಾಯಕತ್ವದ ಮಾದರಿಯನ್ನು ಪ್ರತಿಬಿಂಬಿಸುತ್ತದೆ.

3rd August 2025
ಕಲಿತ ಶಾಲೆಯನ್ನು ನಾನೂ ಮರೆತಿಲ್ಲ,ನೀವೂ ಮರೆಯಬೇಡಿ- ಶಾಸಕ ಬಾಬಾಸಾಹೇಬ್ ಪಾಟೀಲ
ಬೆಳಗಾವಿ- ಬದುಕಿಗೆ ಬುನಾದಿ ಹಾಕುವ ಕಲಿತ ಶಾಲೆಯನ್ನು ಕಲಿಸಿದ ಗುರುಗಳನ್ನು ಹಾಗೂ ಸಹಪಾಠಿ ಗೆಳೆಯರನ್ನು ಎಂದಿಗೂ ಮರೆಯಬಾರದು.ಸಂಕಷ್ಟ ಬಂದಾಗ ಎಲ್ಲರಿಗಿಂತ ಮೊದಲು ಸಹಾಯಕ್ಕೆ ಸಹಪಾಠಿ ಗೆಳೆಯರು ಬರುತ್ತಾರೆ ಅದಕ್ಕಾಗಿ ನಾನೆಂದಿಗೂ ಅವರನ್ನು ಮರೆತಿಲ್ಲ ನೀವೂ ಮರೆಯಬೇಡಿ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಹೇಳಿದರು.
ಬೆಳಗಾವಿಯ ಕನ್ನಡ ಭವನದಲ್ಲಿ ಎಂ.ಕೆ ಹುಬ್ಬಳ್ಳಿಯ ಶ್ರೀ ಕಲ್ಮೇಶ್ವರ ಇಂಗ್ಲಿಷ್ ಹೈಸ್ಕೂಲಿನ ಹಳೆಯ ವಿಧ್ಯಾರ್ಥಿಗಳ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಾಯ ಸವಲತ್ತುಗಳನ್ನು ನೀಡುತ್ತೇನೆ. ಹಳೆಯ ವಿಧ್ಯಾರ್ಥಿಗಳು ಸಹ ಕಲಿತ ಶಾಲೆಯ ಪ್ರಗತಿಗೆ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ಹಿರಿಯ ಗುರುಗಳಾದ ಗಂಗಾಧರ ಕೋಟಗಿ ಅವರು ಮಾತನಾಡಿ,ಶಿಕ್ಷಕನಿಗೆ ನಿವೃತ್ತಿ ಎಂಬುದಿಲ್ಲ. ಗುರು-ಶಿಷ್ಯನ ಸಂಬಂಧ ಅಳೆಯಲು ಸಾಧ್ಯವಿಲ್ಲ. ಅದು ಎಲ್ಲಿಯವರೆಗೆ ಗಟ್ಟಿಯಾಗಿರುತ್ತದೋ ಆವತ್ತಿನವರೆಗೂ ಶಿಕ್ಷಕನ ಸೇವೆ ನಿರಂತರವಾಗಿರುತ್ತದೆ. ಕಲಿಸಿದ ಗುರುಗಳನ್ನು ಸ್ಮರಿಸಿಕೊಂಡು ಯಾವುದೇ ಕೆಲಸ ಮಾಡಿದರೂ ಆ ಕಾರ್ಯ ಸಿದ್ಧಿಯಾಗುತ್ತದೆ ಎಂದು ಹೇಳಿದರು.
ಕಲ್ಮೇಶ್ವರ ಪ್ರೌಢಶಾಲೆ ಬಹಳಷ್ಟು ಜನ ಹಿರಿಯರಯ ಸೇರಿ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಇಲ್ಲಿ ಕಲಿತ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಶಾಲೆಯು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದೆ. ಇಲ್ಲಿ ಕಲಿತ ಹಲವಾರು ಜನ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಎಲ್ಲ ಸಾಧಕರನ್ನು ಶಾಲೆಗೆ ಕರೆದು ಗೌರವಿಸಲು ವಿಶೇಷವಾದ ಕಾರ್ಯಕ್ರಮವನ್ನು ಶೀಘ್ರ ಮಾಡಲಾಗುವುದು ಎಂದ ಅವರು, ಈ ಶಾಲೆಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲೆಯ ಶ್ರೇಯೋಭಿವೃದ್ಧಿಗೆ ಚಿಂತನೆ ಮಾಡಬೇಕು ಎಂದು ಗಂಗಾಧರ ಕೋಟಗಿ ಹೇಳಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಾಧ್ಯಕ್ಷ ಪ್ರಸಿದ್ಧ ನ್ಯಾಯವಾದಿ ದಿನೇಶ್ ಎಂ ಪಾಟೀಲ ಮಾತನಾಡಿ, 60 ದಶಕದಲ್ಲಿ ಹಿರಿಯರು ಕಲ್ಮೇಶ್ವರ ಇಂಗ್ಲಿಷ್ ಮಿಡಿಯಂ ಹೈಸ್ಕೂಲ್ ಆರಂಭಿಸಿದರು. ಬದುಕಿನಲ್ಲಿ ಇಂಗ್ಲಿಷ್ ಎಷ್ಟು ಅವಶ್ಯಕತೆ ಇದೆ ಅನ್ನೋದನ್ನು ಅವರು ಆಗಿನ ಸಮಯದಲ್ಲೇ ಅರಿತುಕೊಂಡಿದ್ದರು. ಇದರ ಪರಿಣಾಮ ಈ ಶಾಲೆಯಲ್ಲಿ ಕಲಿತ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಒಂದೇ ಒಂದೇ ವೇದಿಕೆಗೆ ಕರೆತರುವ ಕಾರ್ಯವನ್ನು ಹಳೆಯ ವಿದ್ಯಾರ್ಥಿಗಳ ಸಂಘ ಮಾಡುತ್ತಿದೆ. ಕಲ್ಮೇಶ್ವರ ಹೈಸ್ಕೂಲಿನಲ್ಲಿ ಕಲಿತ ವಿದ್ಯಾರ್ಥಿಗಳು ಒಂದೇ ಕಡೆ ಸೇರಿಸುವ ಸಂಕಲ್ಪ ಮಾಡಿದ್ದೀರಿ. ಇದಕ್ಕೆ ಎಲ್ಲ ವಿದ್ಯಾರ್ಥಿಗಳ ಸಹಕಾರ ನೀಡಬೇಕು ಎಂದು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಬೇರೆ ಸಮಯದಲ್ಲಿ ಹಮ್ಮಿಕೊಳ್ಳುವ ಉದ್ದೇಶ ಇತ್ತು. ಆದರೆ ಇಂದು ಫ್ರಂಡ್ಶಿಪ್ ಡೇ ಇರುವುದರಿಂದ ಇವತ್ತಿನ ದಿನವೇ ಕಾರ್ಯಕ್ರಮ ಮಾಡೋದು ಸೂಕ್ತ ಎಂದು ನಿರ್ಧರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆಯ ಸಂಬಂಧ, ಗುರುವಿನ ದೀಕ್ಷೆ, ಆ ಸಮಯದ ಗೆಳೆಯರ ಒಡನಾಟವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸಾಯೋವರೆಗೂ ಆ ನೆನಪು ಅಚ್ಚಳಿಯೇ ಉಳಿಯುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಕಲ್ಲೇಶ್ವರ ಹೈಸ್ಕೂಲಿನಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು, ಶಾಲೆಯ ಶಿಕ್ಷಕರನ್ನು ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರನ್ನು ಸತ್ಕರಿಸಿ ಗೌರವಿಸಲಾಯಿತು.
ಎಸ್ ಎಸ್ ಗಂಗಾಧರಮಠ,ಜಿ.ಎಸ್ ಹಲಸಗಿ, ಎನ್ ಬಿ ಬಳಿಗಾರ ಉಪಸ್ಥಿತರಿದ್ದರು

29th June 2025
ಹಿಂದೆಲ್ಲ ವೈದ್ಯರ ಸಂಖ್ಯೆಯೂ ಕಡಿಮೆ ಇತ್ತು, ರೋಗಗಳ ಸಂಖ್ಯೆಯೂ ಕಡಿಮೆ ಇತ್ತು. ಆದರ ಇತ್ತೀಚಿನ ದಿನಗಳಲ್ಲಿ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ, ಹಾಗೆಯೇ ರೋಗಗಳ ಸಂಖ್ಯೆಯೂ ಬೆಳೆಯುತ್ತಿದೆ. ಆಸ್ಪತ್ರೆಗೆ ಬಂದ ರೋಗಿ ಆದಷ್ಟು ಬೇಗ ಮನೆಗೆ ಮರಳಬೇಕೆಂದು ಬಯಸುತ್ತಾನೆ. ಜನರು ವೈದ್ಯರಲ್ಲಿ ದೇವರ ಸ್ವರೂಪ ಕಾಣುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.ಭಾನುವಾರ ಬೆಳಗಾವಿಯ ಶಗುನ್ ಗಾರ್ಡನ್ ನಲ್ಲಿ ನಡೆದ ಸೆಂಟ್ರಾಕೇರ್ ಆಸ್ಪತ್ರೆಯ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಳಗಾವಿಯ ಜನರಿಗೆ ಉತ್ತಮ ಸೇವೆ ಸಲ್ಲಿಸಬೇಕೆನ್ನುವ ಮಹದಾಸೆಯಿಂದ ಡಾ.ನೀತಾ ದೇಶಪಾಂಡೆ ಮತ್ತು ತಂಡದವರು ನೂತನ ಆಸ್ಪತ್ರೆ ಆರಂಭಿಸಿದ್ದಾರೆ. ಇದರಿಂದ ಅವರಿಗೂ, ಬೆಳಗಾವಿಯ ಜನರಿಗೂ ಒಳ್ಳೆಯದಾಗಲಿ. ರೋಗ ಬರುವುದನ್ನು ತಡೆಯುವುದಕ್ಕೇ ಮೊದಲ ಆದ್ಯತೆ ಎನ್ನುವ ಸೆಂಟ್ರಾಕೇರ್ ಆಸ್ಪತ್ರೆಯ ಧ್ಯೇಯ ಉತ್ತಮವಾಗಿದೆ. ಜನರು ಇದರ ಸದುಪಯೋಗಪಡಿಸಿಕೊಂಡು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲಿ ಎಂದು ಸಚಿವರು ಹೇಳಿದರು.
ನಾನಾ ಪಾಟೇಕರ್ ಮತ್ತು ಸಂಭಾಜಿ ಭಿಡೆ ಗುರೂಜಿ ನಿಸ್ವಾರ್ಥದಿಂದ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಡಾ.ಪ್ರಭಾಕರ ಕೋರೆ ಬೆಳಗಾವಿಯ ಹೆಸರು ಜಾಗತಿಕ ನಕ್ಷೆಯಲ್ಲಿ ಮೂಡುವಂತೆ ಮಾಡಿದ್ದಾರೆ. ಅವರೆಲ್ಲ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೆಬ್ಬಾಳಕರ್ ಪ್ರಶಂಸಿಸಿದರು.
ಖ್ಯಾತ ನಟ ನಾನಾ ಪಾಟೇಕರ್, ಶಿವಪ್ರತಿಷ್ಠಾನ್ ಹಿಂದುಸ್ತಾನ್ ಸಂಸ್ಥಾಪಕ ಸಂಭಾಜಿ ಭಿಡೆ ಗುರೂಜಿ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕ ಆಸೀಫ್ ಸೇಠ್, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ನೀತಾ ದೇಶಪಾಂಡೆ, ಡಾ.ಅಮೃತಾ ರಾಠೆ, ರೋಹಿತ್ ದೇಶಪಾಂಡೆ, ದೀಪಕ್ ಕರಂಜಿಕರ್ ಮೊದಲಾದವರು ಇದ್ದರು.