
26th April 2025
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ಕೇರಳ ರಾಜ್ಯದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಮಾಡುವ ಅತ್ಯುನ್ನತ ಗೌರವ ಬಸವರತ್ನ ಪುರಸ್ಕಾರಕ್ಕೆ ಮಾಜಿ ಸಾರಿಗೆ ಸಚಿವ, ಲೋಕನಾಯಕ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕೇರಳದ ತಿರುವನಂತಪುರA ಜಿಲ್ಲೆಯ ವಟ್ಟಾಪ್ಪುರದಲ್ಲಿರುವ ವೀರಶೈವ ಭವನದಲ್ಲಿ ಮೇ ೪ರಂದು ನಡೆಯಲಿರುವ ಬಸವ ಜಯತಿ ಕಾರ್ಯಕ್ರಮದ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಭೀಮಣ್ಣ ಖಂಡ್ರೆ ಅವರ ಬದಲಿಗೆ ಅವರ ಪುತ್ರ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ವೀಕರಿಸಲಿದ್ದಾರೆ ಎಂದು ಕೇರಳ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಭೀನು ಕೆ ಶಂಕರ್ ತಿಳಿಸಿದ್ದಾರೆ.
ಶತಾಯುಷಿ ಭೀಮಣ್ಣ ಖಂಡ್ರೆ ಅವರು ಮಹಾಸಭಾದ ಹಿರಿಯ ನಾಯಕರಷ್ಟೇ ಅಲ್ಲ, ಬದ್ಧತೆಯ ಸಮಾಜ ಸೇವಕರಾಗದ್ದಾರೆ ಜತೆಗೆ ಮುತ್ಸದ್ದಿ ರಾಜಕಾರಣಿಯಾದ ಅವರು, ಬಸವ ತತ್ವ ಅನುಯಾಯಿಯಾಗಿದ್ದಾರೆ. ಭೀಮಣ್ಣ ಖಂಡ್ರೆ ಅವರ ಬದುಕು ಮತ್ತು ಕೃತಿ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಿದೆ. ಇಂತಹ ಮಹಾನ್ ನಾಯಕರಿಗೆ ಕೇರಳ ರಾಜ್ಯ ಘಟಕದ ಪರಮೋಚ್ಛ ಪುರಸ್ಕಾರ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
26th April 2025
ಬೀದರ. ಏ. 25 :- ಬೆಂಗಳೂರಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಬಸವ ಜಯಂತಿ ದಿನದಂದೇ ಪಂಚಾಚಾರ್ಯರ ಯುಗಮಾನೋತ್ಸವ ಹಮ್ಮಿಕೊಂಡಿರುವುದನ್ನು ವಿರೋಧಿಸಿ ಜಿಲ್ಲೆಯ ಮಠಾಧೀಶರು ಹಾಗೂ ಬಸವ ಪರ ಸಂಘಟನೆಗಳಿಂದ ಏಪ್ರಿಲ್ 26 ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿಗಂಜ್ನ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಬಸವ ಜಯಂತಿಯ ದಿನ ಪಂಚಾಚಾರ್ಯರ ಯುಗಮಾನೋತ್ಸವ ಹಮ್ಮಿಕೊಳ್ಳುವ ಮೂಲಕ ಬಸವ ಜಯಂತಿಯ ವಿಶೇಷತೆ, ಮಹತ್ವ ಹಾಗೂ ಐತಿಹಾಸಿಕತೆಯನ್ನು ಕುಬ್ಜಗೊಳಿಸುವ ಹುನ್ನಾರಕ್ಕೆ ಈಗಾಗಲೇ ನಾಡಿನಾದ್ಯಂತ ಅನೇಕ ಮಠಾಧೀಶರು ಹಾಗೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಅದಾಗಿಯೂ ಬಸವ ಜಯಂತಿ ಜತೆ ಪಂಚಾಚಾರ್ಯರ ಯುಗಮಾನೋತ್ಸವ ಏರ್ಪಡಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.
ಬೆಳಿಗ್ಗೆ 9ಕ್ಕೆ ಬಸವೇಶ್ವರ ವೃತ್ತದ ಬಳಿ ಜಮಾಯಿಸಿ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲೆಯ ಮಠಾಧೀಶರು, ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಬಸವಾನುಯಾಯಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಜೈರಾಜ ಖಂಡ್ರೆ, ಮಹಾಸಭಾ ಜಿಲ್ಲಾ ಘಟಕದ ಖಜಾಂಚಿ ವೀರಭದ್ರಪ್ಪ ಬುಯ್ಯಾ, ಗೌರವ ಸಲಹೆಗಾರ ಅಣ್ಣಾರಾವ್ ಮೊಗಶೆಟ್ಟಿ, ಕಾರ್ಯಕಾರಿಣಿ ಸದಸ್ಯ ರಾಜೇಂದ್ರಕುಮಾರ ಗಂದಗೆ, ರಾಷ್ಟ್ರೀಯ ಬಸವ ದಳದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜುಕುಮಾರ ಪಾಟೀಲ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಗಣೇಶ ಬಿರಾದಾರ, ಮುಖಂಡರಾದ ವಿಶ್ವನಾಥ ಕಾಜಿ, ವಿಜಯಕುಮಾರ ಪಾಟೀಲ ಯರನಳ್ಳಿ, ಶಿವಕುಮಾರ ಕಟ್ಟೆ, ಸಿದ್ದು ಶೆಟಕಾರ್, ಉಮೇಶ ಗಾಯತೊಂಡೆ, ವೀರಶೆಟ್ಟಿ ಮರಕಲ್, ಯೋಗೇಶ ಸಿರಿಗಿರಿ, ವೀರಭದ್ರಪ್ಪ ಉಪ್ಪಿನ್, ರಾಜು ಕಮಠಾಣೆ ಮತ್ತಿತರರು ಇದ್ದರು.
26th April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಏ.25-ಜಿಲ್ಲಾ ಕೇಂದ್ರ ಬಾಗಲಕೋಟೆಗೆ ಹತ್ತಿರವಿರುವ ಗದ್ದನಕೇರಿ ಕ್ರಾಸ್ ವಲಯ ದಿನೇ ದಿನೇ ಬೆಳೆಯುತ್ತಿದ್ದು ಅದರ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷ. ಜೆ.ಟಿ.ಪಾಟೀ¯ ಹೇಳಿದರು.
ಗುರುವಾರ ಗದ್ದನಕೇರಿ ಕ್ರಾಸ್ನಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳಲ್ಲಿ ಸಿಸಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೀಳಗಿ ಮತಕ್ಷೇತ್ರದ ಅರಕೇರಿ, ಕೊಪ,್ಪ ಚಿಕ್ಕಾಲಗುಂಡಿ, ಸೋರಕೊಪ,್ಪ ಬನ್ನಿದಿನ್ನಿ, ಗದ್ದನಕೇರಿ ಕ್ರಾಸ್ ಹಾಗೂ ಮೂರನಾಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ತಮ್ಮ ಗ್ರಾಮಗಳಿಗೆ ನೀಡಿರುವ ಕಾಮಗಾರಿಗಳನ್ನು ತಾವೇ ಉಸ್ತುವಾರಿ ವಹಿಸಿಕೊಂಡು ಉತ್ತಮ ಗುಣಮಟ್ಟದ ಕಾರ್ಯವನ್ನು ನಿರ್ವಹಿಸಿಕೊಳ್ಳಬೇಕು ಎಂದು ಹೇಳಿದ ಜೆ.ಟಿ.ಪಾಟೀಲ, ಗದ್ದನಕೇರಿ ಕ್ರಾಸಿಗೆ ಬಸ್ ನಿಲ್ದಾಣ, ಆರೋಗ್ಯ ಕೇಂದ್ರ, ಮಾರುಕಟ್ಟೆ, ಪೊಲೀಸ್ ಠಾಣೆ ಸೇರಿದಂತೆ ಅನೇಕ ಕಾರ್ಯಗಳು ಆಗಬೇಕಿವೆ ಎಂದು ಹೇಳಿದರು.
ಗದ್ದನಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾ ಸಂಗಪ್ಪ ನಾಲತ್ತವಾಡ, ಸದಸ್ಯರಾದ ಚಂದ್ರಶೇಖರ್ ಸಾಲಗುಂದಿ, ಸಂಭಾಜಿ ಕೊಕಾಟೆ, ಸಂಗಣ್ಣ ನಾಲತ್ತವಾಡ, ಅಹ್ಮದ್ ಕಿರಸೂರ, ಜಾವೇದ್ ಮುಜಾವರ, ಶೌಕತ್ತಲಿ ಪಗಡಿ, ಹುಸೇನ್ ಬಂದ್ಕೇರಿ, ಸಿದ್ದಣ್ಣ ಛಬ್ಬಿ, ಶಿವು ರಾಥೋಡ ಹಾಗೂ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಇದ್ದರು.
26th April 2025
ಬೀದರ. ಏ. 25 :- 'ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ದೂರು ಬಂದ ಕಡೆಗಳಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು' ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸೂಚಿಸಿದರು.
ಬೀದರ್ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಜನ, ಜಾನುವಾರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಿ, ಕಾರ್ಯಗತಗೊಳಿಸಬೇಕು. ಗ್ರಾಮಗಳ ಜಲ ಮೂಲಗಳ ಮಾಹಿತಿ ಪಡೆಯಬೇಕು. ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ವಾರದೊಳಗೆ ಕೈಗೊಳ್ಳಬೇಕು. ಕೊಳವೆಬಾವಿಗಳ ಸಮರ್ಪಕ ಕಾರ್ಯ ನಿರ್ವಹಣೆ ಬಗ್ಗೆ ಗಮನ ಹರಿಸಬೇಕು. ಚೆಕ್ ಡ್ಯಾಂಗಳ ನಿರ್ಮಾಣದ ಮೂಲಕ ಅಂತರ್ಜಲ ಹೆಚ್ಚಿಸಬೇಕು ಎಂದು ಹೇಳಿದರು.
ಸಮಸ್ಯಾತ್ಮಕ ಗ್ರಾಮಗಳು ಹಾಗೂ ವಸತಿ ನಿಲಯಗಳಿಗೆ ಕೂಡಲೇ ನೀರು ಪೂರೈಸಬೇಕು. ಗೋಶಾಲೆಗಳಿಗೆ ಮೇವು ಒದಗಿಸಬೇಕು. ಗ್ರಾಮಗಳಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಿ, ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ದಿಸೆಯಲ್ಲಿ ವಿಶೇಷ ನಿಗಾ ವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಿರಣ ಪಾಟೀಲ, ಸಹಾಯಕ ನಿರ್ದೇಶಕರಾದ ಸಂಜುಕುಮಾರ ಕಾಡವಾದ್, ಸುದೇಶ್ ಇದ್ದರು.
26th April 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಡಾ. ರಾಜ್ಕುಮಾರ್ ರವರು ಕೇವಲ ಕಲಾವಿಧರಾಗಿ ಹಾಗೂ ಕನ್ನಡ ಕಲಾ ಅರಾಧಕರಾಗಿ ಉಳಿಯದೇ ಅವರು ಕನ್ನಡ ಭಾಷಾಭಿಮಾನವನ್ನು ಬೆಳೆಸಿದ್ದರು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜುಮದಾರ ಹೇಳಿದರು.
ಅವರು ಗುರುವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಚಲಚಿತ್ರ ರಂಗ ಕಂಡ ಮೆರು ನಟ, ನಟ ಸಾರ್ವಭೌಮ, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್ಕುಮಾರ್ ರವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ. ರಾಜ್ಕುಮಾರ್ ರವರು ಎಲ್ಲರಿಗೂ ಆದರ್ಶ ವ್ಯಕ್ತಿಗಳಾಗಿದ್ದರು. ಆಗಿನ ಕಾಲದಲ್ಲಿ ತುಂಬಾ ಜನ ರಾಜ್ಕುಮಾರ್ ರವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಬದಲಾಗಿದ್ದಾರೆ. ಕರ್ನಾಟಕ ರಾಜ್ಯ ಹಾಗೂ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಅರಣ್ಯಕ್ಕೆ ಸಂಬಂಧಿಸಿ ಮೊಟ್ಟ ಮೊದಲ ಚಲನಚಿತ್ರ ಮಾಡಿದವರೇ ಡಾ. ರಾಜ್ಕುಮಾರ್. ಅವರು ಕೇವಲ ನಟರಾಗದೇ ಗೋಕಾಕ್ ಚಳುವಳಿ ಮೂಲಕ ಇಡಿ ಕನ್ನಡ ಚಿತ್ರರಂಗ ಹಾಗೂ ಎಲ್ಲಾ ಸಾಹಿತಿಗಳ ಜೊತೆಗೆ ಕರ್ನಾಟಕ ರಾಜ್ಯವನ್ನು ಸುತ್ತಿ ಕನ್ನಡ ಭಾಷಾಭಿಮಾನ ಬೆಳೆಸಿದ್ದರು. ನಮ್ಮ ಅನ್ನದ ಭಾಷೆ ಯಾಕೆ ಬೇಕು, ನಮ್ಮ ಜೀವನದಲ್ಲಿ ಈ ಭಾಷೆಯ ಮಹತ್ವ ಏನು ಎಂಬುವುದನ್ನು ತೋರಿಸಿಕೊಟ್ಟಿದ್ದರು ಎಂದರು.
ಬೆರೆ ರಾಜ್ಯದ ದೊಡ್ಡ-ದೊಡ್ಡ ನಟರೆಲ್ಲಾ ರಾಜಕಾರಣಕ್ಕೆ ಹೋಗಿದ್ದಾರೆ. ಡಾ. ರಾಜ್ಕುಮಾರ್ ರವರು ಮನಸ್ಸು ಮಾಡಿದರೆ, ಅವರು ರಾಜಕಾರಣಿಯಾಗಿ ಇಡಿ ಕರ್ನಾಟಕವನ್ನು ಆಳಬಹುದಾಗಿತ್ತು. ಆದರೆ, ಅವರು ಕೇವಲ ಕಲಾವಿಧರಾಗಿ, ಕನ್ನಡ ಕಲಾ ಅರಾಧಕರಾಗಿ ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಉಳಿದಿದ್ದಾರೆ. ಬೇರೆ ಭಾಷೆಗಳಲ್ಲಿ ಅವಕಾಶಗಳು ಸಿಕ್ಕರು ಸಹ ಕನ್ನಡ ಭಾಷೆಯನ್ನು ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದರು. ಅವರ ಕಲೆ ಕನ್ನಡ ಭಾಷೆಗೆ ಮಾತ್ರ ಸಿಮಿತವಾಗಿತ್ತು. ರಾಜ್ಕುಮಾರ್ ರವರು ಕನ್ನಡದ ಆಸ್ತಿ, ಶಕ್ತಿ, ಕನ್ನಡದ ಅಸ್ಮಿತೆಯಾಗಿದ್ದಾರೆ. ಅವರ ಕುಟುಂಬದವರು ಚಿತ್ರರಂಗಕ್ಕೆ ಅಷ್ಟೆ ಅಲ್ಲದೇ ಸಾಮಾಜಿಕವಾಗಿಯೂ ಸಹ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಡಾ. ರಾಜ್ಕುಮಾರ್ ರವರು ಕನ್ನಡ ಚಲನ ಚಿತ್ರರಂಗದಲ್ಲಿ ಅತ್ಯಂತ ಪ್ರಭಾವಿ ನಟರಾಗಿ ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮದೆ ಆದ ಚಾಪನ್ನು ಮೂಡಿಸಿದ್ದರು. ನಾಟಕ ಕಂಪನಿಗಳಿಂದ ಹಿಡಿದು ಸಿನಿಮಾ ಕಂಪನಿಗಳವರೆಗೆಗೂ ತಮ್ಮ ಪ್ರತಿಭೆಯನ್ನು ತೋರಿಸಿ, ಇತರರಿಗೆ ಮಾರ್ಗದರ್ಶಕರಾಗಿದ್ದರು. ದಾರಿ ತಪ್ಪಿದ ಮಗ, ಬಡವರ ಬಂಧು, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಅಜರಾಮರವಾಗಿದ್ದಾರೆ. ಚಲನ ಚಿತ್ರಗಳಲ್ಲಿನ ಅವರ ನಟನೆ, ಸಂಭಾಷಣೆ, ಸಂಗೀತ, ಸ್ವರ ಸಂಯೋಜನೆ ಅರ್ಥಗರ್ಭಿತವಾಗಿದ್ದವು. ಡಾ. ರಾಜ್ಕುಮಾರ್ ರವರು ಕನ್ನಡ ಚಿತ್ರರಂಗಕ್ಕೆ ವಿಶೇಷವಾದ ಸ್ಥಾನ-ಮಾನ ತಂದು ಕೊಟ್ಟವರಾಗಿದ್ದಾರೆ ಎಂದರು.
26th April 2025
ಬೀದರ. ಏ. 25 :- ಕರ್ನಾಟಕ ಜಾನಪದ ಅಕಾಡೆಮಿ ಕೇಂದ್ರ ಕಛೇರಿಯಲ್ಲಿ ಇತ್ತಿಚೆಗೆ ನಡೆದ ಸಭೆಯಲ್ಲಿ ಸರ್ವಸದಸ್ಯರ ನಿರ್ಣಯದಂತೆ 2025-2026ನೇ ಸಾಲಿನ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ರಜಿಸ್ಟರ್ ನಮ್ರತಾ ಅವರು ತಿಳಿಸಿದ್ದಾರೆ.
ಆದರಿಂದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಹಿರಿಯ ಕಲಾವಿದ ಶಂಭುಲಿಂಗ ವಾಲದೊಡ್ಡಿ, ಪ್ರಮುಖರಾದ ಸುನೀಲ ಕಡ್ಡೆ, ದೇವದಾಸ ಚಿಮಕೋಡೆ, ಪತ್ರಕರ್ತ ಸುನೀಲ ಭಾವಿಕಟ್ಟಿ, ರವಿ ಕಾಂಬಳೆ, ಮಾರುತಿ ಮಾಸ್ಟರ್, ಮಾರುತಿ ಏಣಕೂರೆ, ಚಂದ್ರಕಾಂತ ಹಳ್ಳಿಖೇಡ್ಕರ್, ಸಂತೋಷ ಏಣಕೂರೆ, ಅಂಬರೀಷ ಮಲ್ಲೇಶಿ, ಸೇರಿದಂತೆ ಜಿಲ್ಲೆಯ ಕಲಾವಿದರು, ಸಾಹಿತಿಗಳು, ಪ್ರಗತಿಪರ ಚಿಂತಕರು ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.
26th April 2025
ತಾಳಿಕೋಟಿ: ಪಟ್ಟಣದ ಶ್ರೀ ವಿರಕ್ತೇಶ್ವರ ಭರತನಾಟ್ಯ ಸಂಸ್ಥೆ ತಾಳಿಕೋಟಿ ತನ್ನ 6ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ನಾಡಿನ ನೆಲ,ಜಲ, ಭಾಷೆ,ಸಾಹಿತ್ಯ,ಸಂಗೀತ, ನೃತ್ಯ, ಶಿಕ್ಷಣ,ಮಾದ್ಯಮ,ಚಿತ್ರಕಲೆ, ಸಮಾಜ ಸೇವೆ, ರಂಗಭೂಮಿ, ಕ್ರೀಡೆ,ವೈದ್ಯಕೀಯ ಸೇವೆ,ಜನಪದ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 2025 ನೇ ಸಾಲಿನ ಪ್ರಶಸ್ತಿಗೆ ಸ್ಥಳೀಯ ಎಸ್.ಕೆ.ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷಕ ಡಾ.ಅನಿಲಕುಮಾರ ಇರಾಜ ಅವರು
ರಾಜ್ಯ ಶಿಕ್ಷಣ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರಿಗೆ ಮೇ 3 ರಂದು ಶನಿವಾರ ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ವಿರಕ್ತೇಶ್ವರ ಭರತನಾಟ್ಯ ಸಂಸ್ಥೆಯ ಪ್ರಕಟಿಸಿದೆ.
ಡಾ. ಇರಾಜ ಅವರು ಕಳೆದ 32 ವರ್ಷಗಳಿಂದ ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಗಳಲ್ಲಿ ಹಿಂದಿ ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ನಾಡಿನ ಹಲವಾರು ಕಡೆ ಮಕ್ಕಳಿಗೆ ಬೋಧಿಸಿದ್ದಾರೆ , ಲೇಖಕರಾಗಿ , ಭಾಷಣಕಾರರಾಗಿ, ನಿರೂಪಕರಾಗಿ ಗುರುತಿಸಲ್ಪಡುವ ಇವರು ಅಸಂಖ್ಯ ಶಿಷ್ಯಂದಿರ ಪ್ರೀತಿಯ ಗುರುಗಳಾಗಿದ್ದಾರೆ.
ಇವರಿಗೆ ಬಂದ ಪ್ರಶಸ್ತಿ ಗಾಗಿ ವೀ.ವಿ.ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ, ಕಾರ್ಯದರ್ಶಿ ಎಮ್.ಎಸ್.ಸರಶೆಟ್ಟಿ, ಸಹಕಾರ್ಯದರ್ಶಿ ಕೆ.ಎಸ್.ಮುರಾಳ, ಪ್ರೌಢಶಾಲಾ ಚೇರಮನ್ ರಾದ ಎಮ.ಎಮ್.ವಾಲಿ, ಆಯ್.ಬಿ.ಬಿಳೆಭಾವಿ ಪ್ರಾಚಾರ್ಯ ಡಾ.ಡಿ.ಬಿ.ಮೂಗಡ್ಲಿಮಠ, ಕೆ.ಕಿಶೋರಕುಮಾರ ,ಜೆ.ಎಸ್.ಕಟ್ಟಿಮನಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
26th April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಏ.25-ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಯಶಸ್ವಿಗೊಳಿಸಲು ಮುಖ್ಯ ಮಾರ್ಗವೆಂದರೆ ಗ್ರಾಮಮಟ್ಟದಲ್ಲಿ ಯೋಜನೆಗಳ ಕುರಿತು ಪ್ರಚಾರ ಮಾಡುವುದಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಎಸ್.ಎಚ್. ತೆಕ್ಕೆನ್ನವರ ಹೇಳಿದರು.
ಜಿಲ್ಲಾ ಪಂಚಾಯತ ಹಳೆಯ ಸಭಾಭವನದಲ್ಲಿ ಶುಕ್ರವಾರ ಜರುಗಿದ ಪಂಚ ಗ್ಯಾರಂಟಿ ಯೋಜನೆ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಗ್ಯಾರಂಟಿ ಯೋಜನೆಯ ಫಲಾನುಭವಿಗಳನ್ನು ಒಟ್ಟುಗೂಡಿಸಿ ಅವರ ಮೂಲಕ ಯೋಜನೆಯ ಉಪಯೋಗ ಹಾಗೂ ದುರುಪಯೋಗಗಳನ್ನು ಕಂಡುಹಿಡಿಯಬಹುದು ಎಂದರು.
ಯುವ ನಿಧಿ ಹಾಗೂ ಗ್ರಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಗುರುತಿಸಲು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಸಮಿತಿಯ ಎಲ್ಲಾ ಸದಸ್ಯರಿಗೆ ನೀಡಲಾಗುವುದು. ಇದರಿಂದ ಫಲಾನುಭವಿಗಳ ಸಂಖ್ಯೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಜೊತೆಗೆ ಈ ಯೋಜನೆಯಿಂದ ದೊರೆಯುವ ಅನುಕೂಲ ಹಾಗೂ ಅನಾನುಕೂಲಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಪರಿಣಾಮವಾಗಿ ಯೋಜನೆಯ ಉತ್ತಮ ಅನುಷ್ಟಾನಕ್ಕೆ ಅವಕಾಶ ಕಲ್ಪಿಸಬಹುದು ಎಂದು ಅವರು ಹೇಳಿದರು.
ಸಮಿತಿಯ ಎಲ್ಲಾ ಸದಸ್ಯರು ಗ್ರಾಮಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಕ್ರಮಗಳನ್ನು ರೂಪಿಸಿ ಜನಸಾಮಾನ್ಯರಲ್ಲಿ ಪ್ರಚಾರ ಮಾಡಬೇಕು. ಜನರ ಸಮಸ್ಯೆಗಳನ್ನು ಅರಿತುಕೊಳ್ಳುವುದು ಹಾಗೂ ಅವರ ಅನುಭವಗಳನ್ನು ಸಂಗ್ರಹಿಸುವುದು ಅಗತ್ಯ, ಎಂದು ಅವರು ಸಲಹೆ ನೀಡಿದರು.
ತಾಲೂಕು ಮಟ್ಟದ ಕಾರ್ಯಕ್ರಮಗಳಲ್ಲಿ ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಕಾರ್ಯಕ್ರಮಗಳಲ್ಲಿ ಸಮಿತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಭಾಗವಹಿಸಿ ಯೋಜನೆಯ ಬಗ್ಗೆ ಪ್ರಚಾರ ಮಾಡಬೇಕು ಎಂದು ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಮನವಿ ಮಾಡಿದರಲ್ಲದೇ, ಯೋಜನೆಯ ಫಲಾನುಭವಿಗಳನ್ನು ಗುರುತಿಸಲು ನಮಗೆ ಐದು ಯೋಜನೆಗಳ ಸಂಪೂರ್ಣ ಮಾಹಿತಿಯ ಅಗತ್ಯವಿದೆ. ಆದ್ದರಿಂದ ಮಾಹಿತಿ ಶೀಘ್ರದಲ್ಲಿ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಿತಿಯ ಎಲ್ಲಾ ಸದಸ್ಯರು, ತಾಲೂಕು ಅಧ್ಯಕ್ಷರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
26th April 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಲಿಂಗರಾಜು ಹೇಳಿದರು
ಅವರು ಶುಕ್ರವಾರ ಕೊಪ್ಪಳ ನಗರದ ಹಳೆ ಜನರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ-2025ರ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಮಲೇರಿಯಾ ರೋಗದ ಹರಡುವಿಕೆ ನಿಯಂತ್ರಣ ಹಾಗೂ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲೇರಿಯಾ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎಲ್ಲಾ ರೀತಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವರ್ಷ ‘ಏಪ್ರಿಲ್ 25’ರಂದು ಪ್ರಪಂಚದಾದ್ಯಂತ ‘ವಿಶ್ವ ಮಲೇರಿಯ ದಿನ’ ವನ್ನಾಗಿ ಆಚರಿಸಲಾಗುತ್ತಿದೆ. ಈಗ ಮಳೆಗಾಲ ಪ್ರಾರಂಭವಾಗುತ್ತಿದ್ದು, ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟು ಸೊಳ್ಳೆಗಳ ಸಂತತಿ ಹೆಚ್ಚಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾದಂತಹ ರೋಗಗಳ ಹೆಚ್ಚಳವಾಗುವ ಎಲ್ಲಾ ಸಾದ್ಯತೆ ಇರುತ್ತದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲೇರಿಯಾ ರೋಗಕ್ಕೆ ನಿರ್ಧಿಷ್ಟ ಚಿಕಿತ್ಸೆ ಇದ್ದು, ಜನರೂ ಭಯಪಡುವ ಅವಶ್ಯಕತೆ ಇಲ್ಲ. ಯಾವುದೇ ಜ್ವರ ಇರಲಿ ಶೀಘ್ರವೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಲು ಜನಸಮುದಾಯಕ್ಕೆ ಕರೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ.ವೆಂಕಟೇಶ್ ಅವರು ಮಾತನಾಡಿ, ಇಡಿ ದೇಶದಾದ್ಯಂತ 2030 ರೊಳಗಾಗಿ ಮಲೇರಿಯಾ ರೋಗವನ್ನು ಸಂಪೂರ್ಣ ನಿವಾರಣೆಗೊಳಿಸಲು ಗುರಿ ನಿಗಧಿಪಡಿಸಿ ರಾಷ್ಟ್ರೀಯ ಮಲೇರಿಯಾ ನಿವಾರಣಾ ಮಾರ್ಗದರ್ಶಿ (National Frame Work For Malaria Elimination NFME) ಯನ್ನು ಅನಾವರಣಗೊಳಿಸಲಾಗಿದೆ. ಅದರಂತೆ ಕರ್ನಾಟಕ ಸರಕಾರವು ಕೂಡ ರಾಜ್ಯದಲ್ಲಿ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣಗೊಳಿಸಿದ್ದು, ಅದರನ್ವಯ ರಾಜ್ಯದಲ್ಲಿ 2027ನೇ ಇಸ್ವಿ ವೇಳೆಗೆ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ನಿಗಧಿಪಡಿಸಲಾಗಿದೆ ಎಂದರು.
2025ನೇ ಸಾಲಿನ ‘ವಿಶ್ವ ಮಲೇರಿಯ ದಿನಾಚರಣೆ’ಯ ಘೋಷಣೆಯು “ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಮರು ಹೂಡಿಕೆ, ಮರು ಕಲ್ಪನೆ, ಮರು ಉತ್ತೇಜನ ನೀಡೋಣ” ಎಂಬುದಾಗಿರುತ್ತದೆ. ಅದರಂತೆ ಕೊಪ್ಪಳ ಜಲ್ಲೆಯನ್ನು 2027ರ ವೇಳೆಗೆ ಸಂಪೂರ್ಣ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸರ್ವರ ಸಹಕಾರ ಅಗತ್ಯವಾಗಿದೆ. ಮಲೇರಿಯಾ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದು ಸೋಂಕಿತ ಅನಾಫಿಲಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಹಾಗೂ ಈ ಸೊಳ್ಳೆಗಳು ಬಹುತೇಕ ಸಂಜೆ ಹೊತ್ತಿನಲ್ಲಿಯೇ ಕಚ್ಚುತ್ತವೆ ಹಾಗಾಗಿ ಜನಸಮುದಾಯವು ಸ್ವಯಂ ರಕ್ಷಣ ವಿಧಾನಗಳನ್ನು ಬಳಸಿ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರಬೇಕು ಎಂದು ಹೇಳಿದರು.
ಅನಾಫಿಲಿಸ್ ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ, ಕೆರೆ, ಬಾವಿ, ಹೊಂಡ, ಕಾಲುವೆ ಮುಂತಾದ ನಿಂತ ನೀರಿನ ತಾಣಗಳಲ್ಲಿ ಮೊಟ್ಟೆಗಳನ್ನು ಇಟ್ಟು ಸಂತಾನಭಿವೃದ್ಧಿ ಮಾಡುತ್ತವೆ. ಆದ್ದರಿಂದ ಮನೆಯ ಒಳಗೆ ಮತ್ತು ಹೊರಗೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಹಾಗೂ ನೀರು ಶೇಖರಣೆ ಸಲಕರಣೆಗಳನ್ನು ಸದಕಾಲ ಮುಚ್ಚಿಡಬೇಕು. ಕೊಪ್ಪಳ ಜಿಲ್ಲೆಯಲ್ಲಿ 2005 ರಲ್ಲಿ 6634 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು, 2017 ರಲ್ಲಿ ಕೇವಲ 159 ಮಲೇರಿಯಾ ಪ್ರಕರಣಗಳು 2019 ರಲ್ಲಿ 15 ಪ್ರಕರಣಗಳು ವರದಿಯಾಗಿವೆ. ಆದರೇ 2020 ರಿಂದ 2024-25 ರವರೆಗೆ ಯಾವುದೇ ಸ್ಥಳೀಯ ಮಲೇರಿಯಾ ಪ್ರಕರಣಗಳು ವರದಿಯಾಗಿರುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಶೂನ್ಯ ಮಲೇರಿಯಾ ಸ್ಥಿತಿಯನ್ನು ಕಾಪಾಡಿಕೊಂಡು ಉತ್ತರಕರ್ನಾಟಕ ಜಿಲ್ಲೆಗಳಲ್ಲಿ ಶೂನ್ಯ ಮಲೇರಿಯಾ ಸ್ಥಿತಿಯನ್ನು ಕಾಪಾಡಿಕೊಂಡಿರುವ ಉತ್ತರ ಕರ್ನಾಟಕದ ಏಕೈಕ ಜಿಲ್ಲೆಯಾಗಿದ್ದು, ಕೊಪ್ಪಳ ಜಿಲ್ಲಾಢಳಿತದ ಸಹಕಾರ ಹಾಗೂ ಆರೋಗ್ಯ ಇಲಾಖೆಯ ಪರಿಶ್ರಮ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಪ್ರಕಾಶ್ ವಿ., ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ನಂದಕುಮಾರ್, ಜಿಲ್ಲಾ ಕುಷ್ಟರೋಗ ನಿವಾರಣಾ ಅಧಿಕಾರಿ ಡಾ. ಪ್ರಕಾಶ್, ಜಿಲ್ಲಾ ಕುಷ್ಟರೋಗ ನಿವಾರಣಾ ಅಧಿಕಾರಿ ಡಾ. ಶಶಿಧರ್, ಕೊಪ್ಪಳ ತಾಲೂಕ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಸೇರಿದಂತೆ ಜಿಲ್ಲಾ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ನಗರ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು & ಸಿಬ್ಬಂದಿಗಳು ಉಪಸ್ಥಿತರಿಸಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಅವರು ಎಲ್ಲರಿಗೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇದೆ ವೇಳೆ ಎಲ್ಲರೂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಕೊಪ್ಪಳ ನಗರದಾದ್ಯಂತ ವಿಜೃಂಭಣೆಯಿಂದ ಸಂಚರಿಸಿದ ಜನ ಜಾಗೃತಿ ಜಾಥದಲ್ಲಿ ತೆರೆದ ವಾಹನದಲ್ಲಿ ಮಲೇರಿಯಾ ವಿರೋಧಿ ಜಾಗೃತಿ ಗೀತೆಗಳನ್ನು ಹಾಡುವುದರ ಮೂಲಕ ಹಾಗೂ ಜನಜಾಗೃತಿ ಕರಪತ್ರಗಳನ್ನು ಹಂಚುವುದು, ಭ್ಯಾನರ್ ಮತ್ತು ಪೋಸ್ಟರ್ಗಳನ್ನು ಪ್ರದರ್ಶಿಸಿಸುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
26th April 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಜಿಲ್ಲೆಯ ಕೊಪ್ಪಳ ಮತ್ತು ಕುಷ್ಟಗಿ ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳಿಗೆ 2025-26ನೇ ಸಾಲಿನ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಹಾಜರಾಗುವಂತೆ ಕೊಪ್ಪಳ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ರವಿ ಪೂಜಾರ ಅವರು ತಿಳಿಸಿದ್ದಾರೆ.
ಈ ಪ್ರವೇಶ ಪರೀಕ್ಷೆಯು ಏಪ್ರಿಲ್ 27 ರಂದು ಜಿಲ್ಲೆಯ ಕೊಪ್ಪಳ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿ ನಡೆಯಲಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಪ್ರವೇಶ ಪತ್ರ ವೆಬ್ಸೈಟ್ https://domgok.in/Admission/StudentHallticket ನಲ್ಲಿ ಡೌನ್ಲೋಡ್ ಮಾಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಹಾಜರಾಗಬೇಕು.
ಪರೀಕ್ಷಾ ಕೇಂದ್ರಗಳ ವಿವರ: ಕೊಪ್ಪಳದ ಒಟ್ಟು 5 ಪರೀಕ್ಷಾ ಕೇಂದ್ರಗಳಿದ್ದು, ಮೌಲಾನಾ ಅಜಾದ್ ಮಾದರಿ ಶಾಲೆ ದಿಡ್ಡಿಕೇರಿ ಕೊಪ್ಪಳ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ತಾಲ್ಲೂಕು ಕ್ರೀಡಾಂಗಣ ಕೊಪ್ಪಳ. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಟಣಕನಕಲ್ (ಕೊಪ್ಪಳ). ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ತಾಲ್ಲೂಕು ಕ್ರೀಡಾಂಗಣ ಕೊಪ್ಪಳ (ಶಾಲಾ ವಿಭಾಗ). ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಕೊಪ್ಪಳ.
ಕುಷ್ಟಗಿಯ ಒಟ್ಟು 6 ಪರೀಕ್ಷಾ ಕೇಂದ್ರಗಳಿದ್ದು, ಸರ್ಕಾರಿ ಬಾಲಕಿಯರ ಪ್ರೌಡ ಶಾಲೆ ರೇಣುಕಾಚಾರ್ಯ ಕಲ್ಯಾಣ ಮಂಟಪ ಹತ್ತೀರ ಕೊಪ್ಪಳ ರಸ್ತೆ ಕುಷ್ಟಗಿ. ಬುತ್ತಿ ಬಸವೇಶ್ವರ ಪದವಿ ಪೂರ್ವ ಕಾಲೇಜು ಹನಮಸಾಗರ ರಸ್ತೆ ಕುಷ್ಟಗಿ. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹನಮಸಾಗರ ರಸ್ತೆ ಕುಷ್ಟಗಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿ.ಇ.ಒ ಕಛೇರಿ ಹತ್ತೀರ ಕುಷ್ಟಗಿ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ರೇಣುಕಾಚಾರ್ಯ ಕಲ್ಯಾಣ ಮಂಟಪ ಹತ್ತೀರ ಕೊಪ್ಪಳ ರಸ್ತೆ ಕುಷ್ಟಗಿ. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿರೇಬನ್ನಿಗೋಳ ಕುಷ್ಟಗಿ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಾಗೂ ಕೊಪ್ಪಳ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಕೊಪ್ಪಳ, ಮೌಲಾನಾ ಆಜಾದ್ ಭವನ ಹೊಸಪೇಟೆ ರಸ್ತೆ ಕೊಪ್ಪಳ-583231 ದೂರವಾಣಿ ಸಂಖ್ಯೆ: 8088894549 ಮತ್ತು ಕುಷ್ಟಗಿ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ದೂರವಾಣಿ ಸಂಖ್ಯೆ: 8861610578 ಗೆ ಸಂಪರ್ಕಿಸಲು ಅಥವಾ ಹತ್ತೀರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಮಾಹಿತಿ ಪಡೆಯಬೇಕು ಎಂದು ಕೊಪ್ಪಳ ತಾಲೂಕು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ರವಿ ಪೂಜಾರ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.