

27th January 2025

ಯಾದಗಿರಿ..
ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ
ಉಸಿರು ನಿಂತರೂ ಹೆಸರು ಉಳಿಸಿಕೊಂಡ ಧಿಮಂತ ನಾಯಕ ನಾಗನಗೌಡ ಕಂದಕೂರ.
ಹುಟ್ಟಿದ ಪ್ರತಿ ಜೀವಿ ಶ್ರೇಷ್ಠನಾಗಲ್ಲ. ಶ್ರೇಷ್ಠನಾಗುವುದು ಸರ್ವರಿಗೂ ಸಾಧ್ಯವಿಲ್ಲ. ಜನಸಾಮಾನ್ಯರಂತೆಯೇ ಈ ಭೂವಿಗೆ ಬಂದರೂ ಅಸಾಮಾನ್ಯರಂತೇ ಬಾಳಿ ಉಸಿರು ಬಿಟ್ಟರೂ ಹೆಸರು ಉಳಿಸಿಕೊಂಡವರೇ ನಮ್ಮ ಲಿಂ. ನಾಗನಗೌಡ ಕಂದಕೂರ.
ಸುಮಾರು 75 ವರ್ಷ ನಮ್ಮೊಂದಿಗೆ ಇದ್ದ ನಾಗನಗೌಡರ ಬದುಕು ರೋಚಕ ಮತ್ತು ರೋಮಾಂಚಕ.
ಗೌಡ್ಕಿ ಮನೆತನದಲ್ಲಿ ಜನಿಸಿ, ತಾವಾಯಿತು, ತಮ್ಮ ಸಂಸಾರವಾಯಿತೆಂದು ಇದ್ದರೇ ಹತ್ತರಲ್ಲಿ ಹನ್ನೊಂದು ಎನ್ನುವಂತೆಯೇ ಇವರೊಬ್ಬರಾಗುತ್ತಿದ್ದರು. ಆದರೇ ಸಮಾಜಮುಖಿ ಕುಟುಂಬದಿಂದ ಬಂದ ಇವರಿಗೆ ಜೀವಪರ ಕಾಳಜಿ ಇತ್ತು. ಅಂತೆಯೇ ತನ್ನೊಂದಿಗೆ ಸರ್ವರ ಹಿತವೂ ಮುಖ್ಯವೆಂದು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು ಸುಮಾರು ಐವತ್ತು ವರ್ಷಗಳ ಕಾಲ ಅಧಿಕಾರವಿಲ್ಲದೇ ಸೇವೆಗೈದ ಧಿಮಂತಿಕೆಯ ವ್ಯಕ್ತಿ ನಾಗನಗೌಡ ಕಂದಕೂರು.
ಜಿಲ್ಲಾ ಪಂಚಾಯಿತಿ ಸದಸ್ಯರಾಗಿ,ಆಗಿನ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಹಾಗೂ ಗುರುಮಠಕಲ್ ಕ್ಷೇತ್ರದ ಶಾಸಕರಾಗಿ ಜನಾನುರಾಗಿ ಜನನಾಯಕನಾಗಿ ಜನಸೇವೆ ಮಾಡಿದ ಧಿಮಂತ ವ್ಯಕ್ತಿ
ಗೌಡರು ಸಾಗಿಬಂದ ಸಾರ್ವಜನಿಕ ಜೀವನವೇನು ರತ್ನಗಂಬಳಿಯ ಹಾಸಿಗೆ ಆಗಿರಲಿಲ್ಲ. ಬದಲಿಗೆ ಮುಳ್ಳು ಹಾಸಿಗೆಯ ಹೊದಿಕೆಯೇ ಆಗಿತ್ತು.
ಅಬ್ಬಾ, ಈ ದಾರಿಯಲ್ಲಿ ನಡೆದ ಆ ದಿನಗಳ ಬಗ್ಗೆ ಬಲ್ಲವರು ಮೇಲಕು ಹಾಕಿದರೇ ಕೇಳಿದವರ ಜೀವ ಝಲ್ ಎನ್ನದೇ ಇರದು.
ಸ್ವಚ್ಛ, ಶಿಸ್ತಿನ ಶ್ವೇತಧಾರಿ:
ನಾಗನಗೌಡರು ಜೀವನದಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.
ಆಳೇತ್ತರ ಮನುಷ್ಯ. ಸದಾ ಸ್ವಚ್ಛ, ಶಿಸ್ತಿನಿಂದ ಇರುತ್ತಿದ್ದ ಇವರು ಶ್ವೇತಧಾರಿ.
ಬಿಳಿ ಬಣ್ಣದ ಖಾದಿ ಬಟ್ಟೆಗಳನ್ನೇ ಧರಿಸುತ್ತಿದ್ದರು, ಸಮಯ ಪಾಲನೆಗೆ ಮೊದಲ ಆದ್ಯತೆ.
ಎಷ್ಟು ಎತ್ತರ ಮತ್ತು ವಿಶಾಲ ದೇಹ ಹೊಂದಿದ್ದರೋ ಅಷ್ಠೆ ಅವರ ಮನಸ್ಸು ಕೂಡಾ ದೊಡ್ಡದಾಗಿತ್ತು.
ಹೋರಾಟ - ಬಡಿದಾಟ ಇವರು ಉಸಿರು:
ಅಣ್ಣ ಲಿಂ.ಸದಾಶಿವರಡ್ಡಿ ಕಂದಕೂರ ಅವರ ನೆರಳಲ್ಲಿಯೇ ಮಾಗಿದ್ದ ನಾಗನಗೌಡರು 1970 ದಶಕದಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು ಇಹಲೋಕ ತ್ಯಜಿಸುವವರೆಗೂ ಹಿಂದಿರುಗಿ ನೋಡಿದ್ದೇ ಇಲ್ಲ. ಅಣ್ಣನ ಆರ್ದಶಗಳು ಮೈಗೂಡಿಸಿಕೊಂಡೆ ಸಮಾಜ ಸೇವೆಗೆ ಇಳಿದ ಇವರು, 28 ರ ಹರೆಯದಲ್ಲಿಯೇ ವಿಎಸ್ ಎಸ್ ಎನ್ ಅಧ್ಯಕ್ಷ, 1986 ರಲ್ಲಿ ಕಂದಕೂರ ಕ್ಷೇತ್ರದ ಜಿಪಂ ಸದಸ್ಯರಾಗಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ, 1998 ರಲ್ಲಿ ಎಪಿಎಂಸಿ ಅಧ್ಯಕ್ಷ ಸ್ಥಾನ ಮತ್ತು 2007 ರಲ್ಲಿ ಹೈಕ ಮಂಡಳಿ ಅಧ್ಯಕ್ಷ ಸ್ಥಾನ ಹೀಗೆ ಒಂದು ಕಡೆ ಸಿಕ್ಕ ಅಧಿಕಾರದಿಂದ ಜನಸೇವೆ ಮಾಡಿದರೇ,ಇನ್ನೊಂದು ಕಡೆ ಅಧಿಕಾರರಹಿತ ಜನಮುಖಿ ಹೋರಾಟ ಇವರ ಮುಖ್ಯ ಕಾಯಕವಾಯಿತು.
ದೇವೇಗೌಡರ ಕುಟುಂಬಕ್ಕೆ ಪರಮಾಪ್ತರು :
ಅಣ್ಣ ಸದಾಶಿವ ರಡ್ಡಿ ಕಂದಕೂರ ತಮ್ಮ ನಾಗನಗೌಡ ಕಂದಕೂರ ಅವರು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಕಳೆದ ಸುಮಾರು ಆರು ದಶಕಗಳಿಂದ ಪರಮಾಪ್ತರು.
ಇವರ ಕುಟುಂಬದ ಮೇಲೆ ಗೌಡರ ಕುಟುಂಬದ ನಿಷ್ಠೆ ಬಗ್ಗೆ ವರ್ಣಿಸಲು ಶಬ್ದಗಳಿಲ್ಲ. ಇವರೂ ಅಷ್ಠೆ, ಯಾವುದೇ ಆಮಿಷ, ಅಧಿಕಾರಕ್ಕೆ ಒಳಗಾಗದೇ ವ್ಯಕ್ತಿ ಮತ್ತು ಪಕ್ಷ ನಿಷ್ಠೆಯೊಂದಿಗೇ ಇಂದಿಗೂ ಅವರೊಂದಿಗೆ ಇರುವುದು ಅಪರೂಪದ ಸಂಗತಿ.
ನಾಗನಗೌಡರಿಗೆ ಗುರುಮಠಕಲ್ ಕ್ಷೇತ್ರದಲ್ಲಿ ಬಲ್ಯಾಡ ಎನಿಸಿಕೊಂಡುವರು ಕೊಟ್ಟ ಕಿರುಕುಳ ಇದೆಯಲ್ಲ, ಇದು ಯಾರೋಬ್ಬರು ಸಹಿಸಲು ಸಾಧ್ಯವಿಲ್ಲ.
ಮನೆತನದ ಹೋರಾಟದ ಕಿಚ್ಚು ಮಡಿಲಲ್ಲಿ ಕಟ್ಟಿಕೊಂಡೇ, ಅನ್ಯಾಯ, ಅತ್ಯಾಚಾರ, ದರ್ಪ, ದೌರ್ಜನ್ಯಗಳ ವಿರುದ್ದ ಸಿಡಿದೆದ್ದು ಅವಿರತ ಹೋರಾಟ ಮಾಡಿ, 20 ಕ್ಕೂ ಹೆಚ್ಚು ಸುಳ್ಳು ಕೇಸ್ ಗಳನ್ನು ಎದುರಿಸಿ, ಗುರುಮಠಕಲ್ ಮತ್ತು ಯಾದಗಿರಿ ತಾಲೂಕಿನಲ್ಲಿ ತನ್ನನ್ನು ನಂಬಿದ ಜನರ ಬೆಂಬಲಕ್ಕೆ ಸದಾ ನಿಂತ ಕೆಚ್ಚೆದೆಯ ಗಂಡು ಈ ಗೌಡರು.
ಜನರಿಗಾಗಿ, ಅಭಿವೃದ್ಧಿಗಾಗಿ ಮನೆ,ಮಠ ತೊರೆದು ಬೀದಿಗಿಳಿದು ಜನಪರ ಹೋರಾಟಗಳನ್ನು ಮಾಡಿದಾಗ ಸಿಕ್ಕ ಬಹುಮಾನವೆಂದರೇ ಸುಳ್ಳು ಕೇಸುಗಳು ಮತ್ತು ಇನ್ನಿಲ್ಲದ ಕಿರುಕುಳಗಳು.
ದೇವೇಗೌಡರ ಬಲ, ಬೆಂಬಲವಿದ್ದರೂ ಎಂದಿಗೂ ಅದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಬದಲಿಗೆ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ತಮ್ಮವರು ಎಂದು ಇರುವ ಗಟ್ಟಿಕಾಳಿನಂತಹ ಕೆಲವರೊಂದಿಗೆ ನಿಲ್ಲದ ಹೋರಾಟ ಮಾಡಿದ ಹುಲಿಯಂತಹ ಶಕ್ತಿವಂತ, ಆನೆಯಂತಹ ಬಲವಂತ ಈ ನಾಗನಗೌಡರು.
ಜನತಾ ಪಕ್ಷ, ಜನತಾ ದಳ ಹೀಗೆ ದೇವೇಗೌಡರ ಗರಡಿಯಲ್ಲಿಯೇ ನಿಷ್ಠೆಯಿಟ್ಟು ಇಲ್ಲಿಯವರೆಗೂ ಬಂದಿರುವ ಬೆರಳೆಣಿಕೆಯಷ್ಟು ಜನರಲ್ಲಿ ಕಲ್ಯಾಣ ಕರ್ನಾಟಕದ ಗಿರಿಜಿಲ್ಲೆಯ ಈ ಕುಟುಂಬವು ಒಂದು.
ಗುರುಮಠಕಲ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಎದುರಾಳಿ ನಡಗುವಂತೇ ಪ್ರಚಾರ ಮತ್ತು ಕೆಲಸ ಮಾಡುತ್ತ ಬಂದ ನಾಗನಗೌಡರು, ಬದಲಾದ ಮೀಸಲಾತಿಯಿಂದಾಗಿ 2008
ಮತ್ತು 2013 ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಸ್ವರ್ಧಿಸಿ ಸೋತರು, ಮುಂದೇ 2018ರಲ್ಲಿ ಮತ್ತೇ ಕಣಕ್ಕೆ ಇಳಿದಾಗ ಇವರ ಪುತ್ರ, ಹಾಲಿ ಶಾಸಕ ಶರಣಗೌಡ ಕಂದಕೂರ ಮಾಡಿದ ಸಾಹಸದ ಮ್ಯಾಜಿಕ್ ನಿಂದಾಗಿ ಮತದಾರರು ಭಾರಿ ಮತಗಳ ಅಂತರದಿಂದ ಇವರನ್ನು ಗೆಲ್ಲಿಸಿ ಶಾಸಕರಾಗಿ ಆಯ್ಕೆ ಮಾಡಿದರು.
40 ವರ್ಷಗಳ ತಪಸ್ಸಿನಂತಹ ಹೋರಾಟ, ರಾಜಕಾರಣ ಮಾಡಿದ ಮೇಲೆ ಸಿಕ್ಕ ಅಧಿಕಾರದಿಂದ ಇಡಿ ಗುರುಮಠಕಲ್ ಕ್ಷೇತ್ರವನ್ನು ರಾಜ್ಯದ ಜನ ತಿರುಗಿ ನೋಡುವಂತೆಯೇ ಅಧಿವೃದ್ಧಿ ಕೆಲಸಗಳು ಮಾಡಿದರು, ಕುಮಾರಸ್ವಾಮಿ ಸಿಎಂ ಇದ್ದಷ್ಟು ದಿನ ಅನೇಕ ಹೊಸ, ಹೊಸ ಕೆಲಸಗಳಿಗೆ ಅನುದಾನ ತಂದರು, ಕರ್ನಾಟಕ ಕೊಳಚೆ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದರು. ಆದರೇ ಅಧಿಕಾರ ಸಿಕ್ಕಿದೆ ಎಂದು ಮನೆ ಬೊಕ್ಕಸ್ ತುಂಬಿಕೊಳ್ಳದ ಪ್ರಮಾಣಿಕ ಎಂಎಲ್ ಎ ಎನ್ನುವಷ್ಟರ ಮಟ್ಟಿಗೆ ಕೆಲಸ ಮಾಡಿದವರು ನಾಗನಗೌಡರು. ಇವರ ಜಾಗದಲ್ಲಿ ಬೇರೆಯವರು ಎಂಎಲ್ ಎ, ಮಂಡಳಿ ಅಧ್ಯಕ್ಷರಾಗಿದ್ದರೇ ಕ್ಷೇತ್ರ ಮರೆತು ಕಳೆದುಕೊಂಡಿದ್ದನ್ನು ತುಂಬಿಕೊಳ್ಳುತ್ತಿದ್ದರು. ಕಾರಣ ಗೌಡರ ಕುಟುಂಬದ ಕುಡಿ ಕುಮಾರಸ್ವಾಮಿಯೇ ಸಿಎಂ ಇರಬೇಕಾದರೇ ಇವರು ಬೇಡಿದಲ್ಲವೂ ಸಿಗುತ್ತಿತ್ತು. ಆದರೇ ಹಸನಾದ ಜೀವನ ಮಾಡಿದ ಈ ಗೌಡರಿಗೇ ಅಪಮಾನದ ರಾಜಕೀಯ ಬೇಡವೇ ಬೇಡ ಎಂದು ಸ್ವಚ್ಛ ರಾಜಕಾರಣ ಮಾಡುವ ಮೂಲಕ ಇಂದಿಗೂ ಅಳಿಯದ ಛಾಪು ಉಳಿಸಿಕೊಂಡಿದ್ದಾರೆ.
ಇಂತಹ ಹೋರಾಟಗಾರ, ರಾಜಕಾರಣಿ ಮತ್ತು ಜೀವಪರ ಕಾಳಜಿ ಇರುವ ವ್ಯಕ್ತಿಗಳನ್ನು ಹಗಲು ಹೊತ್ತಿನಲ್ಲಿಯೇ ದೀಪ ಹಿಡಿದು ಹುಡುಕುವಂತ ಸ್ಥಿತಿಯಲ್ಲಿ ಶ್ವೇತವರ್ಣದ ಶಿಲೆಯಂತೆಯೇ ಇವರು ಹೊರಹೊಮ್ಮಿದ್ದಾರೆ.
--- ಗೌಡಪ್ಪಗೌಡ ಮಾಲಿಪಾಟೀಲ್ ಮದರಕಲ್.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ