

11th February 2025

ಯಾದಗಿರಿ...
ಕಳೆದ ವರ್ಷದ ಎಸ್ಸೆಸ್ಸೆಲ್ಸಿಯಲ್ಲಿ ಶೇ.91ರಷ್ಟು ಫಲಿತಾಂಶ ಪಡೆದ ಸುದ್ದಿ ತಿಳಿದು ತುಂಬಾ ಖುಷಿ ಆಯಿತು. ಈ ವರ್ಷದಲ್ಲಿ ಪ್ರತಿಶತ ನೂರರಷ್ಟು ಸಾಧನೆ ಮಾಡಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ವಸತಿ ಶಾಲಾ ಮಕ್ಕಳಿಗೆ ಪ್ರೋತ್ಸಾಹಿಸಿದರು.
ತಾಲೂಕಿನ ಸೈದಾಪುರದ ಸಮೀಪ ಇರುವ ರಾಚನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮಕ್ಕಳು ಚನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯಬೇಕು ನಿಮಗೆ ಬೇಕಾದ ಅವಶ್ಯ ಸೌಲಭ್ಯಗಳನ್ನು ಒದಗಿಸಲು ನಾನು ಬದ್ಧನಾಗಿದ್ದೇನೆ. ಇದು ವಸತಿ ಶಾಲಾ ಆಗಿರುವ ಹಿನ್ನಲೆಯಲ್ಲಿ ಶಿಕ್ಷಕರು ಬೋಧನೆಯ ಜತೆಗೆ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ರಸ್ತೆಯಿಂದ ವಸತಿ ಶಾಲೆಗೆ ಬರುವ ರಸ್ತೆ ತೀರಾ ಅದ್ವಾನವಾಗಿದೆ. ಇದೀಗ ನೀಡಲಾದ ಅನುದಾನದಿಂದ ಪೂರ್ಣ ಪ್ರಮಾಣದ ರಸ್ತೆ ನಿರ್ಮಾಣ ಸಾದ್ಯವಿಲ್ಲ. ಇದಕ್ಕಾಗಿ ಡಾಂಬರು ರೋಡ್ ನಿರ್ಮಾಣ ಮಾಡುವುದು ನನ್ನ ಜವಾಬ್ದಾರಿ. ಅಧಿಕಾರಿಗಳು ಕೂಡಲೇ ಅಂದಾಜು ವೆಚ್ಚ ಪಟ್ಟಿ ಸಿದ್ಧಪಡಿಸಬೇಕು. ಮುಂಬರುವ ಜೂನ ತಿಂಗಳ ಒಳಗಾಗಿ ಡಾಂಬರು ರಸ್ತೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದಣ್ಣ ಅಣಬಿ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಶಿವರಾಜ, ಪ್ರಾಂಶುಪಾಲರಾದ ಶ್ರೀಶೈಲ ಕೊರಳ್ಳಿ, ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮುಖಂಡರಾದ ಬಸರಾಜಪ್ಪಗೌಡ ಗೊಂದಡಗಿ, ಚಂದ್ರುಗೌಡ ಸೈದಾಪುರ, ನರಸಪ್ಪ ಕವಡೆ ಬದ್ದೇಪಲ್ಲಿ, ಚನ್ನರೆಡ್ಡಿಗೌಡ ಸೈದಾಪುರ, ರಾಜು ಉಡುಪಿ, ಡಿ.ತಾಯಪ್ಪ, ಜಗದೀಶ ಕಲಾಲ, ಯಂಕೋಬ್ ತುರುಕಾನದೊಡ್ಡಿ, ವಿಶ್ವನಾಥ ಘಂಟಿ, ಲಕ್ಷ್ಮಣರೆಡ್ಡಿಗೌಡ, ಆನಂದ ವಾರದ, ಮಲ್ಲೇಶ ನಾಯಕ, ಲಕ್ಷ್ಮಣ ನಾಯಕ ಕೂಡ್ಲೂರ, ವಾರ್ಡನ್ ನಾಗಮ್ಮ ಅವಟೆ, ಶಿಕ್ಷಕರಾದ ಲಕ್ಷ್ಮಣ, ಮಹಿಬೂಬ ಪಟೇಲ್ ಜಿನಕೇರಾ, ವೀರೇಶ ಸೇಡಂ, ತಿಪ್ಪಣ್ಣ, ಮಲ್ಲಿಕಾರ್ಜುನ, ಸಿದ್ದಣ್ಣ, ಜಯಶ್ರೀ, ಸುಮಂಗಲ, ಭಾರತಿ, ಮರೆಮ್ಮ ಸೇರಿದಂತೆ ಮುಂತಾದವರಿದ್ದರು.
ವಿವಿಧ ಕಾಮಗಾರಿಗಳಿಗೆ ಶಾಸಕ ಕಂದಕೂರ ಅಡಿಗಲ್ಲು
ಗುರುಮಠಕಲ್ ಮತಕ್ಷೇತ್ರದ ಸೈದಾಪುರ ಗ್ರಾಮದಲ್ಲಿ ರೂ.40ಲಕ್ಷ ವೆಚ್ಚದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಒಳಗಡೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ರೂ. 60ಲಕ್ಷ ಮೊತ್ತದಲ್ಲಿ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ 4 ಕೋಣೆಗಳ ನಿರ್ಮಾಣ, ಕ್ಯಾತನಾಳ ಇಂದಿರಾನಗರದಲ್ಲಿ ರೂ.10ಲಕ್ಷ ಮೊತ್ತದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಎಸ್ಟಿ ವಾರ್ಡನಲ್ಲಿ ರೂ.10ಲಕ್ಷ ಮೊತ್ತದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಶೆಟ್ಟಹಳ್ಳಿ ಗ್ರಾಮದಲ್ಲಿ ರೂ.10ಲಕ್ಷ ಮೊತ್ತದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಸೈದಾಪುರ ಸ್ಟೇಷನ್ ನ ಸೇವಾಲಾಲ್ ನಗರದಲ್ಲಿ ರೂ.10ಲಕ್ಷ ಮೊತ್ತದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಸೈದಾಪುರ ಸಮೀಪದ ರಾಚನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ರೂ.15ಲಕ್ಷ ಮೊತ್ತದ ಶುದ್ಧ ನೀರಿನ ಕುಡಿಯುವ ಘಟಕ ನಿರ್ಮಾಣ, ಮುಖ್ಯರಸ್ತೆ ಯಿಂದ
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ 20ಲಕ್ಷ ಮೊತ್ತದ ಅಡಿಗಲ್ಲು ಸಮಾರಂಭವನ್ನು ಮಂಗಳವಾರ ಶಾಸಕ ಶರಣಗೌಡ ಕಂದಕೂರ ಅವರು ನೆರವೇರಿಸಿದರು
18 ವರ್ಷಕ್ಕೂ ಮುನ್ನ ಮದುವೆ ಆಗ್ಬೇಡಿ...!
ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗು ಆಗಿದ್ದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪಾಧವಾಗಿದೆ. ಆದಾಗ್ಯೂ ಗ್ರಾಮೀಣ ಭಾಗದಲ್ಲಿ ವಯಸ್ಸಿಗೆ ಮುನ್ನ ಮದುವೆ ಪ್ರಕರಣಗಳು ಕಂಡುಬರುತ್ತಿರುವುದು ಅತ್ಯಂತ ನೋವಿನ ಸಂಗತಿ. ವಿದ್ಯಾವಂತ ಮಕ್ಕಳಾದ ನೀವು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ, ಸಮಾಜದಲ್ಲಿ ಹೆಸರು ಪಡೆಯಬೇಕು. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ಕೊಡಬೇಡಿ. ಚಿಕ್ಕ ವಯಸ್ಸಿನಲ್ಲಿ ವಿವಾಹ ಆಗುವುದರಿಂದ ಭವಿಷ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ ಇದರ ಬಗ್ಗೆ ಜಾಗೃತಿ ವಹಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಸೈದಾಪುರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಮಕ್ಕಳಿಗೆ ಕಿವಿ ಮಾತು ಹೇಳಿದರು.
. ಶಾಸಕ ಕಂದಕೂರ ಭೋಜನ
ಸೈದಾಪುರ ಸಮೀಪದ ರಾಚನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಮಂಗಳವಾರ ಆಗಮಿಸಿದ್ದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಮಕ್ಕಳೊಂದಿಗೆ ಪ್ರಾರ್ಥನೆ ಸಲ್ಲಿಸಿ ಅವರೊಟ್ಟಿಗೆ ಕುಳಿತು ಮಧ್ಯಾಹ್ನದ ಊಟ ಸವಿದರು. ಇದೇ ವೇಳೆ ಪ್ರತಿನಿತ್ಯ ಮೆನು ಚಾರ್ಟ್ ಪ್ರಕಾರ ಊಟ, ತರಗತಿಗಳಲ್ಲಿ ಬೋಧನೆ ಒಳಗೊಂಡಂತೆ ಮೂಲ ಸೌಲಭ್ಯಗಳ ಪೂರೈಕೆ ಸಮರ್ಪಕವಾಗಿ ಮಾಡಲಾಗುತ್ತಿರುವ ಕುರಿತು ವಿದ್ಯಾರ್ಥಿಗಳ ಜತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ