

22nd July 2026

ದಾವಣಗೆರೆ, ಜು. 21 : ದಾವಣಗೆರೆಯಲ್ಲಿ ಶೀಘ್ರದಲ್ಲೇ ನಡೆಯಲಿರುವ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಅವರನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆತಿಥ್ಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ವಿಶೇಷ ಆಯ್ಕೆ ಸಮಿತಿ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆಗೆ ಅನುಮೋದನೆ ದೊರೆತಿದ್ದು, ಬಳಿಕ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಲಾಯಿತು ಎಂದು ಸಮ್ಮೇಳನದ ಪ್ರಧಾನ ಸಂಚಾಲಕಿ ಶ್ರೀಮತಿ ವೀಣಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಸುಮಾರು ಐದು ದಶಕಗಳಿಂದ ಅಧ್ಯಾತ್ಮಿಕ, ಸಾಹಿತ್ಯ, ಶಿಕ್ಷಣ ಹಾಗೂ ಮೌಲ್ಯಾಧಾರಿತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಲೀಲಾಜಿ ಅವರ ಸೇವೆಯನ್ನು ಪರಿಗಣಿಸಿ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಮ್ಮೇಳನದ ಪ್ರಚಾರ ಸಮಿತಿ ಅಧ್ಯಕ್ಷೆ ಎ.ಬಿ. ರುದ್ರಮ್ಮ ತಿಳಿಸಿದ್ದಾರೆ.
ಸಮಾಜಮುಖಿ ಸೇವೆ
ಮೂಲತಃ ಧಾರವಾಡದವರಾದ ಲೀಲಾಜಿ ಕಳೆದ ನಾಲ್ಕು ದಶಕಗಳಿಂದ ದಾವಣಗೆರೆಯನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಪ್ರಧಾನ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ 80ಕ್ಕೂ ಹೆಚ್ಚು ಅಧ್ಯಾತ್ಮಿಕ ಶಿಕ್ಷಣ ಕೇಂದ್ರಗಳ ಸ್ಥಾಪನೆಗೆ ಅವರು ಮಾರ್ಗದರ್ಶನ ನೀಡಿದ್ದು, ಮೌಲ್ಯ ಶಿಕ್ಷಣ ಮತ್ತು ರಾಜಯೋಗದ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸುತ್ತಿದ್ದಾರೆ.
ಅರ್ಥಶಾಸ್ತ್ರ ಹಾಗೂ ಹಿಂದಿ ವಿಷಯಗಳಲ್ಲಿ ಪದವಿ ಪಡೆದಿರುವ ಅವರು, ಮೌಲ್ಯ ಶಿಕ್ಷಣ ಮತ್ತು ಅಧ್ಯಾತ್ಮಿಕ ಅಧ್ಯಯನದಲ್ಲಿಯೂ ಉನ್ನತ ಶಿಕ್ಷಣ ಪಡೆದಿದ್ದಾರೆ. ಕನ್ನಡ, ಹಿಂದಿ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರವೀಣರಾಗಿರುವ ಲೀಲಾಜಿ ವಿವಿಧ ವೇದಿಕೆಗಳಲ್ಲಿ ಉಪನ್ಯಾಸಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.
ಸಾಹಿತ್ಯ ಮತ್ತು ಜನಜಾಗೃತಿ
ಅಧ್ಯಾತ್ಮಿಕ ಚಿಂತನೆ, ನೈತಿಕ ಮೌಲ್ಯಗಳು ಹಾಗೂ ಹಬ್ಬಗಳ ಆಂತರಿಕ ಸಂದೇಶಗಳನ್ನು ಒಳಗೊಂಡ ಅನೇಕ ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಲೀಲಾಜಿ, ಈ-ಟಿವಿ ಮತ್ತು ಸಂಸ್ಕಾರ ವಾಹಿನಿಗಳಲ್ಲೂ ಹಲವು ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ್ದಾರೆ.
ಯುವಜನರಲ್ಲಿ ಮೌಲ್ಯಾಧಾರಿತ ಬದುಕಿನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘ಶರಣರು ಕಂಡ ಶಿವ’, ‘ಸ್ವರ್ಗದಲ್ಲಿ ಒಂದುಸೀಟು ಖಾಲಿ ಇದೆ’ ಹಾಗೂ ‘ಅಸತೋಮ ಸದ್ಗಮಯ’ ನಾಟಕಗಳ ರಚನೆ ಮತ್ತು ಪ್ರದರ್ಶನಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಇವುಗಳಲ್ಲಿ ‘ಸ್ವರ್ಗದಲ್ಲಿ ಒಂದು ಸೀಟು ಖಾಲಿ ಇದೆ’ ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.
ಆರೋಗ್ಯ ಮತ್ತು ನಶಾಮುಕ್ತಿ ಕಾರ್ಯ
ಯುವಜನರನ್ನು ದುಶ್ಚಟಗಳಿಂದ ದೂರವಿರಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಅವರು, ‘ಆರೋಗ್ಯಧಾಮ’ ನಶಾಮುಕ್ತಿ ಕೇಂದ್ರದ ಮೂಲಕ ಉಚಿತ ಔಷಧೋಪಚಾರ ಮತ್ತು ರಾಜಯೋಗ ತರಬೇತಿ ನೀಡುತ್ತಿದ್ದಾರೆ. ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬ್ರಹ್ಮಾಕುಮಾರಿ ಸಂಸ್ಥೆಯ ಪ್ರತಿನಿಧಿಯಾಗಿ ಈ ಗೌರವಕ್ಕೆ ಪಾತ್ರರಾದ ಮೊದಲ ವ್ಯಕ್ತಿಗಳಲ್ಲಿ ಲೀಲಾಜಿ ಒಬ್ಬರಾಗಿರುವುದು ವಿಶೇಷವೆಂದು ಸಾಹಿತ್ಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಜಿಲ್ಲಾ ವಕೀಲರ ಸಂಘದ ಚುನಾವಣೆ ಫಲಿತಾಂಶ- ಜಿಲ್ಲಾಧ್ಯಕ್ಷರಾಗಿ ಪ್ರಕಾಶ ಆನಂದಳ್ಳಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಸಜ್ಜನ ಗೆಲುವು- ಉಪಾಧ್ಯಕ್ಷರಾಗಿ ಅಂದಾನಗೌಡ, ಜಂಟಿ ಕಾರ್ಯದರ್ಶಿಯಾಗಿ ಮೇಲುಸಕ್ಕರಿ, ಖಜಾಂಚಿಯಾಗಿ ಪುಷ್ಷಾ ಬೇವೂರಗೆ ಆಯ್ಕೆ