ಸುಮಾರು 60 ವರ್ಷ ವಯಸ್ಸಿನ ಸಿದ್ಧಯ್ಯ, ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ, ಓರ್ವ ಪುತ್ರಿ, ಅಳಿಯ ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಬುಧವಾರ ಮಧ್ಯಾಹ್ನ ಗ್ಲಾಸ್ ಹತ್ತಿರದ ಶಾಮನೂರು ರುದ್ರಭೂಮಿಯಲ್ಲಿ ನಡೆಯಿತು.
ಮೃದು ಭಾಷಿ, ಸರಳ - ಸಜ್ಜನಿಕೆಯ ಸಿದ್ಧಯ್ಯ, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಪತ್ರಕರ್ತರ ಸಂಘಟನೆ ಸೇರಿದಂತೆ, ವಿವಿಧ ಸಂಘಟನೆಗಳಲ್ಲಿ ಸಕ್ರಿಯ ಪದಾಧಿಕಾರಿಗಳಾಗಿದ್ದ ಅವರು, ಪತ್ರಿಕೋದ್ಯಮ, ನಾಡು - ನುಡಿಗೆ ಸಲ್ಲಿಸಿದ್ದ ಸೇವೆಯನ್ನು ಪರಿಗಣಿಸಿ, ಮಹಾನಗರ ಪಾಲಿಕೆ, ಜಿಲ್ಲಾಡಳಿತವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದವು. ವಿವಿಧ ಸಾಮಾಜಿಕ ಸಂಘಟನೆಗಳೂ ಅವರನ್ನು ಸನ್ಮಾನಿಸಿದ್ದವು.
ಸಚಿವ ಕೆ.ಎಸ್. ಬಸವಂತಪ್ಪ, ‘ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಇನ್ಸೈಟ್ಸ್ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಸೇರಿದಂತೆ, ಅನೇಕ ಪತ್ರಕರ್ತರು, ಗಣ್ಯರು, ಹಿತೈಷಿಗಳು ಮೃತರ ನಿವಾಸಕ್ಕೆ ಭೇಟಿ ನೀಡಿ ಸಿದ್ಧಯ್ಯ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವನ್ನರ್ಪಿಸಿ ಅಂತಿಮ ದರ್ಶನ ಪಡೆದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ್, ವರದಿಗಾರರ ಕೂಟದ ಜಿಲ್ಲಾಧ್ಯಕ್ಷ ನಾಗರಾಜ್ ಬಡದಾಳ್, ಹಿರಿಯ ಪತ್ರಕರ್ತರುಗಳಾದ ಬಿ.ಎನ್. ಮಲ್ಲೇಶ್, ಬಾ.ಮ. ಬಸವರಾಜಯ್ಯ, ಸದಾನಂದ ಹೆಗಡೆ, ಎಂ.ಎಸ್. ಶಿವಶರಣಪ್ಪ, ಬಕ್ಕೇಶ್ ನಾಗನೂರು, ಮಲ್ಲಿಕಾರ್ಜುನ ಕಬ್ಬೂರು ಮತ್ತಿತರರು ಸಿದ್ಧಯ್ಯ ಅವರ ಅಂತಿಮ ದರ್ಶನ ಪ
ಡೆದರು.







