ಒಂದು ಕಾಲದಲ್ಲಿ ಕ್ರಿಕೆಟ್, ಹಾಕಿ, ಕಬಡ್ಡಿಯಂತಹ ಕ್ರೀಡೆಗಳ ನಡುವೆ ಹೆಚ್ಚು ಗಮನ ಸೆಳೆಯದಿದ್ದ ಜಿಮ್ನಾಸ್ಟಿಕ್ಸ್ ಇಂದು ಕರ್ನಾಟಕದಲ್ಲೂ ನಿಧಾನವಾಗಿ ತನ್ನದೇ ಆದ ಸ್ಥಾನವನ್ನು ರೂಪಿಸಿಕೊಳ್ಳುತ್ತಿದೆ. ದೈಹಿಕ ಸಾಮರ್ಥ್ಯ, ಸಮತೋಲನ, ನಮ್ಯತೆ ಮತ್ತು ಶಿಸ್ತನ್ನು ಒಟ್ಟಾಗಿ ಬೇಡುವ ಈ ಕ್ರೀಡೆ, ಈಗ ಮಕ್ಕಳಿಂದ ಹಿಡಿದು ಯುವಕರವರೆಗೆ ಹೊಸ ಆಸಕ್ತಿಯನ್ನು ಹುಟ್ಟುಹಾಕುತ್ತಿದೆ.
ಕರ್ನಾಟಕದ ಕ್ರೀಡಾ ವ್ಯವಸ್ಥೆಯಲ್ಲಿ ಜಿಮ್ನಾಸ್ಟಿಕ್ಸ್ಗೆ ಹಲವು ದಶಕಗಳ ಹಿಂದೆಯೇ ಸ್ಥಾನ ದೊರೆತಿತ್ತು. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ನ ಇತಿಹಾಸದ ಪ್ರಕಾರ, 1958ರಲ್ಲಿ ರಾಜ್ಯದ ವಿವಿಧ ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಸಂದರ್ಭದಲ್ಲಿ ಜಿಮ್ನಾಸ್ಟಿಕ್ಸ್ ಕೂಡ ಸೇರಿತ್ತು. 1966ರ ರಾಷ್ಟ್ರೀಯ ಕ್ರೀಡಾಕೂಟದ ಆಯೋಜನೆಯಲ್ಲಿಯೂ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು.
ಆದರೆ ಜಿಮ್ನಾಸ್ಟಿಕ್ಸ್ನ ಬೆಳವಣಿಗೆಯ ಹಾದಿ ಸುಲಭವಾಗಿರಲಿಲ್ಲ. ಉತ್ತಮ ತರಬೇತಿ, ಗುಣಮಟ್ಟದ ಉಪಕರಣಗಳು ಮತ್ತು ಸುರಕ್ಷಿತ ಅಭ್ಯಾಸದ ಸೌಲಭ್ಯಗಳ ಕೊರತೆ ಆಟಗಾರರಿಗೆ ಸವಾಲಾಗಿತ್ತು. ಕರ್ನಾಟಕದ ಜಿಮ್ನಾಸ್ಟ್ ಲೋಕೇಶ್ ನರಸಿಂಹಮೂರ್ತಿ ಅವರು 2016ರಲ್ಲಿ ರಾಜ್ಯದಲ್ಲಿ ತಾವು 1998ರಿಂದ ತರಬೇತಿ ಪಡೆಯುತ್ತಿದ್ದರೂ, ಜಿಮ್ನಾಸ್ಟಿಕ್ಸ್ನ ತರಬೇತಿ ಸೌಲಭ್ಯಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ ಎಂದು ಹೇಳಿದ್ದರು
ಆದರೂ ಕಾಲಕ್ರಮೇಣ ಪರಿಸ್ಥಿತಿ ಬದಲಾಗತೊಡಗಿತು. ಬೆಂಗಳೂರಿನಲ್ಲಿ ಖಾಸಗಿ ಜಿಮ್ನಾಸ್ಟಿಕ್ಸ್ ಕೇಂದ್ರಗಳು ಹೆಚ್ಚಾದವು. ಶಾಲೆಗಳು, ಕ್ರೀಡಾ ಕ್ಲಬ್ಗಳು ಮತ್ತು ವಿವಿಧ ತರಬೇತಿ ಕೇಂದ್ರಗಳಲ್ಲಿ ಮಕ್ಕಳು ಜಿಮ್ನಾಸ್ಟಿಕ್ಸ್ ಕಲಿಯಲು ಆರಂಭಿಸಿದರು. 2015ರ ನಂತರ ಬೆಂಗಳೂರಿನಲ್ಲಿ ಹಲವು ಒಳಾಂಗಣ ಜಿಮ್ನಾಸ್ಟಿಕ್ಸ್ ಕೇಂದ್ರಗಳು ಆರಂಭಗೊಂಡಿದ್ದವು ಎಂಬುದು ಈ ಬದಲಾವಣೆಯ ಒಂದು ಸೂಚನೆ
ಜಿಮ್ನಾಸ್ಟಿಕ್ಸ್ನ ಜನಪ್ರಿಯತೆ ಹೆಚ್ಚಲು ಭಾರತದ ಪ್ರಮುಖ ಆಟಗಾರರ ಸಾಧನೆಗಳೂ ಕಾರಣವಾಗಿವೆ. ವಿಶೇಷವಾಗಿ ದೀಪಾ ಕರ್ಮಾಕರ್ ಅವರ ಸಾಧನೆಯ ನಂತರ ಈ ಕ್ರೀಡೆಯತ್ತ ಪೋಷಕರು ಮತ್ತು ಮಕ್ಕಳು ಹೆಚ್ಚಿನ ಆಸಕ್ತಿ ತೋರಲು ಆರಂಭಿಸಿದರು
ಇಂದು ಕರ್ನಾಟಕದಲ್ಲಿ ಜಿಮ್ನಾಸ್ಟಿಕ್ಸ್ ಕೇವಲ ಸ್ಪರ್ಧಾತ್ಮಕ ಕ್ರೀಡೆಯಾಗಿ ಮಾತ್ರ ಉಳಿದಿಲ್ಲ. ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ, ಶಿಸ್ತು ಮತ್ತು ಪರಿಶ್ರಮ ಬೆಳೆಸುವ ಒಂದು ಮಾರ್ಗವಾಗಿಯೂ ಇದು ಬೆಳೆಯುತ್ತಿದೆ. 2026ರಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ದೀಥ್ಯಾ ಕೆ.ಎಂ. ರಾಷ್ಟ್ರೀಯ ರಿದಮಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಪದಕ ಗೆದ್ದು, ಕರ್ನಾಟಕದ ಈ ವಿಭಾಗದ ಬೆಳವಣಿಗೆಗೆ ಮತ್ತೊಂದು ಗಮನಾರ್ಹ ಅಧ್ಯಾಯ ಸೇರಿಸಿದ್ದಾರೆ





-1787395107205.png)