ದಾವಣಗೆರೆ*: ನಾಳೆ ಮತ್ತು ದಿನಾಂಕ 8 ಮತ್ತು 9ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಪ್ರಥಮ 'ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ' ವಿಜೃಂಭಣೆಯಿಂದ ಜರುಗಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಸುದೇವಪ್ಪ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ದಿನಾಂಕ 8ರ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ತದನಂತರ ಬೆಳಿಗ್ಗೆ 9 ಗಂಟೆಗೆ ವಿದ್ಯಾನಗರದ ಮಟ್ಟಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ವಿವಿಧ ಕಲಾತಂಡಗಳ ವೈಭವದೊಂದಿಗೆ ತಾಯಿ ಕನ್ನಡ ಭುವನೇಶ್ವರಿ ಹಾಗೂ ಸಮ್ಮೇಳನ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ ಕುವೆಂಪು ಕನ್ನಡ ಭವನದವರೆಗೆ ಸಾಗಲಿದೆ ಎಂದು ಹೇಳಿದರು.
ಈ ಐತಿಹಾಸಿಕ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 2 ಸಾವಿರದಿಂದ 2.5 ಸಾವಿರಕ್ಕೂ ಅಧಿಕ ಮಹಿಳಾ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಮಾತನಾಡಿ, ಅಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ಮಹಾಸಭೆಯ ಉದ್ಘಾಟನೆಯನ್ನು ಸಂಸದ ಡಾ. ಪ್ರಭಾ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮೀ ಚೌಧರಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಅಕ್ಷರ ಹೆಬ್ಬದ ಭಾಗವಾಗಿ ಮಹಾದ್ವಾರ, ಪುಸ್ತಕ ಮಳಿಗೆ, ಸಭಾಂಗಣ ಹಾಗೂ ವೇದಿಕೆ ಉದ್ಘಾಟನೆಗೊಳ್ಳಲಿವೆ. ಎರಡು ದಿನಗಳ ಕಾಲ ಸಾಹಿತ್ಯ ಚಿಂತನ-ಮಂಥನ ಗೋಷ್ಠಿಗಳು, ಹಿರಿಯ ಮತ್ತು ಕಿರಿಯ ಕವಿಗೋಷ್ಠಿಗಳು, ಗಾನ ವೈವಿಧ್ಯ ಹಾಗೂ ಜಾನಪದ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ ಎಂದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಜಿಲ್ಲೆಯ ಸಾಧಕಿಯರನ್ನು ಗುರುತಿಸಿ 'ದಾವಣಗೆರೆ ಜಿಲ್ಲಾ ಮಹಿಳಾ ಸಾಹಿತ್ಯ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಿದ್ಧಾರೂಢ ನಿಜಗುಣ ಆಶ್ರಮದ ಮಾತಾಜಿ ಶಿವದೇವಿ ತಾಯಿ ಸಮಾರೋಪ ಸಾನ್ನಿಧ್ಯ ವಹಿಸಿದ್ದು, ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಆಯು ಪ್ರೇಣೆ ಉಪನ್ಯಾಸಕರಾದ ನಾಗಶ್ರೀ ತ್ಯಾಗರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸರ್ವಾಧ್ಯಕ್ಷರಾದ ಬ್ರಹ್ಮಕುಮಾರಿ ಲೀಲಾಜಿ ಸಮ್ಮೇಳನದ ಅವಲೋಕನ ಮಾಡಲಿದ್ದಾರೆ.
ಜ್ಞಾನಾಸಕ್ತರಿಗಾಗಿ ವೈವಿಧ್ಯಮಯ ಪುಸ್ತಕ ಮಳಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಆಗಮಿಸುವ ಸಾಹಿತ್ಯ ಪ್ರೇಮಿಗಳಿಗೆ ಬೆಳಿಗಿನ ಉಪಹಾರ, ಮಧ್ಯಾಹ್ನದ ಸಿಹಿ ಊಟ ಹಾಗೂ ಸಂಜೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿ. ದಿಕ್ಷಪ್ಪ, ನೀಲಗುಂದ ಜಯಮ್ಮ, ಬಿಜೆಪಿ ಪ್ರಕಾಶ್, ಪಟೇಲ್ಪ್ಪ, ಲಿಂಗರಾಜ್ ಅನೇಕೊಂಡ, ಸತ್ಯಭಾಮ ಮಂಜುನಾಥ್, ಮಲ್ಲಮ್ಮ, ಕುಸುಮ ಲೋಕೇಶ್, ಸುನಂದ ವೆಂಕಟೇಶ್, ಟಿ.ಎಸ್. ಶೈಲಜಾ, ರಾಜೇಶ್ವರಿ ಉಪಸ್ಥಿತರಿದ್ದರು.







