


3rd December 2025
ಮಂಡ್ಯ: ನೀರು ಬಳಕೆದಾರರ ಸಹಕಾರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿಲಿ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ತಿಳಿಸಿದರು.
ಕೆ.ಆರ್.ಎಸ್. ಮತ್ತು ಹೇಮಾವತಿ ಜಲಾಶಯಗಳ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ವತಿಯಿಂದ ನಡೆದ ನೀರು ಬಳಕೆದಾರರ ಪುನಶ್ಚೇತನ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಸಹಭಾಗಿತ್ವದ ಅವಶ್ಯಕತೆ ಇದೆ. ಇದನ್ನೇ ಮನಗಂಡು ಸರ್ಕಾರ ಸಂಘಗಳನ್ನು ರಚನೆ ಮಾಡಿ ಕೆಲವು ನಿಯಮಗಳನ್ನು ರೂಪಿಸಿದೆ. ಸಂಘಗಳ ಚುನಾಯಿತ ಪ್ರತಿನಿಧಿಗಳು ಅರ್ಥೈಸಿಕೊಂಡು ನೀರು ನಿರ್ವಹಣೆಯ ಜವಾಬ್ದಾರಿಯ ಜೊತೆಗೆ ಪರಿಣಾಮಕಾರಿಯಾಗಿ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ಹೊಣೆಗಾರಿಕೆಯನ್ನು ಹೊಂದುವುದು ಅವಶ್ಯಕತೆ ಇದೆ ಎದು ಪ್ರತಿಪಾದಿಸಿದರು.
ಸಂಘಗಳು ಸರ್ಕಾರದ ಅನುದಾನಗಳನ್ನೇ ಅವಲಂಭಿಸದೆ ನಿರ್ವಹಣಾ ವೆಚ್ಚವನ್ನು ರೈತರಿಂದಲೇ ಪಡೆದು ನಾಲೆಗಳ ಸ್ವಚ್ಚತೆ ಮತ್ತು ಹೊಲಗಾಲುವೆ ಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ೪ ರಿಂದ ೫ ಸಾವಿರ ಅಚ್ಚುಕಟ್ಟುದಾರರ ಬೃಹತ್ ಸಮಾವೇಶವನ್ನು ಮಂಡ್ಯ ನಗರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನಿಮ್ಮ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಕೆ.ಆರ್.ಎಸ್.ಜಲಾಶಯ ಸಲಹಾ ಸಮಿತಿ ಸದಸ್ಯ ನಂಜೇಗೌಡ ಸಾವಯವ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ನೀರು ನಿರ್ವಹಣೆ ಜೊತೆಯಲ್ಲಿ ರಾಸಾಯನಿಕ ಗೊಬ್ಬರ ಮುಕ್ತ ರೈತರು ಜಮೀನನ್ನು ಹೊಂದಬೇಕು. ಇಸ್ರೇಲ್ ಮಾದರಿಯ ನೀರು ನಿರ್ವಹಣಾ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಮಂಗಲ ಎಂ. ಯೋಗೀಶ್, ಹೇಮಾವತಿ ನೀರು ಬಳಕೆದಾರರ ಸಹಕಾರ ಮಹಾ ಮಂಡಲದ ಅಧ್ಯಕ್ಷ ಆರ್.ಎ. ನಾಗಣ್ಣ, ಮನ್‌ಮುಲ್ ಮಾಜಿ ಅಧ್ಯಕ್ಷ ಎಲ್.ಸಿ. ಮಂಜುನಾಥ್, ಸಂಘಗಳ ಬಲವರ್ಧನೆ ಕುರಿತು ಮಾತನಾಡಿದರು.
ಕೆ.ಆರ್.ಎಸ್. ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಹಳುವಾಡಿ ಕೃಷ್ಣ ಮಾತನಾಡಿದರು. ಸಿಇಓ ಸುರೇಶ್ ಉಪಸ್ಥಿತರಿದ್ದರು.