
29th July 2025
ಬೆಂಗಳೂರು/ಬಳ್ಳಾರಿ ಜುಲೈ 22. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರ ಅವರ ಆದೇಶವನ್ನು ಸ್ವಾಗತಿಸುತ್ತೇವೆ. ಮುಖ್ಯಮಂತ್ರಿಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಸದಾ ಸಂವಿಧಾನ ಮತ್ತು ನೆಲದ ಕಾನೂನಿಗೆ ತಲೆಬಾಗುತ್ತಾ ಬಂದವರು. ಈ ನಂಬಿಕೆಯನ್ನು ಸುಪ್ರೀಂ ಕೋರ್ಟ್ ಆದೇಶ ಉಳಿಸಿಕೊಂಡು ಕಾಪಾಡಿದೆ.
ರಾಜಕೀಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎದುರಿಸಲಾಗದ ಭಾರತೀಯ ಜನತಾ ಪಕ್ಷ ಮತ್ತು ಅದರ ಸಂಗಾತಿಗಳು ಸಾಂವಿಧಾನಿಕ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ಹಾಗೂ ಅವರ ಪತ್ನಿಯ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಿ, ನೀಡಿರುವ ಕಿರುಕುಳ ಅತ್ಯಂತ ಹೇಯವಾದುದು. ಇದರಿಂದ ಸಿಎಂ ಮತ್ತು ಅವರ ಕುಟುಂಬ ಅನುಭವಿಸಿದ ಮಾನಸಿಕವಾದ ಕಿರುಕುಳವನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ.
ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾದ ಗೌರವಾನ್ವಿತ ಗವಾಯಿ ಅವರ ‘’ರಾಜಕೀಯ ಸಮರಕ್ಕೆ ಮತದಾರರನ್ನು ಬಳಸಕೊಳ್ಳಬೇಕೇ ಹೊರತು, ಇದಕ್ಕಾಗಿ ಜಾರಿ ನಿರ್ದೇಶನಾಲಯದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಬಾರದು‘’ ಎಂಬ ಅವರ ಮಾತುಗಳು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಅಭಿಪ್ರಾಯವಾಗಿದೆ.
ಕಳೆದ 10-11 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಐಟಿ, ಸಿಬಿಐ ಮತ್ತು ಇಡಿಯ ದುರ್ಬಳಕೆ ಮೂಲಕ ಸಾಧಿಸುತ್ತಿರುವ ರಾಜಕೀಯ ದ್ವೇಷಕ್ಕೆ ಬಲಿಯಾದವರೆಲ್ಲರಲ್ಲಿಯೂ ಈ ತೀರ್ಪು ಸಮಾಧಾನ ಉಂಟುಮಾಡಿದೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ.
ಸುಪ್ರೀಂಕೋರ್ಟ್ನ ಈ ಕಣ್ಣುತೆರೆಸುವ ಆದೇಶದ ನಂತರವಾದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಎಚ್ಚೆತ್ತುಕೊಂಡು ಐಟಿ, ಸಿಬಿಐ ಮತ್ತು ಇ.ಡಿ.ಯಂತಹ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯನ್ನು ನಿಲ್ಲಿಸಿ ಅವುಗಳಿಗೆ ಇರಬೇಕಾಗಿರುವ ಸ್ವಾಯತ್ತತೆಯನ್ನು ಕೊಟ್ಟು ತಮ್ಮ ಪಾಪ ತೊಳೆದುಕೊಳ್ಳಬೇಕು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಾ ಬಂದಿರುವ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಕಿಂಚಿತ್ತಾದರೂ ಮಾನ-ಮರ್ಯಾದೆ ಎನ್ನುವುದು ಉಳಿದುಕೊಂಡಿದ್ದರೆ ಅವರೆಲ್ಲರೂ ತಕ್ಷಣ ತಮ್ಮ ತಪ್ಪಿಗಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಅಭಿಪ್ರಾಯ ಪಟ್ಟರು.
29th July 2025
ಬಳ್ಳಾರಿ ಜುಲೈ 23. ಮಾಜಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರು ತಮ್ಮ ನಿವಾಸದ ಕಚೇರಿಗೆ ಮಂಗಳವಾರ ರಂದು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೂಡಲೇ ಹಲವು ಸಮಸ್ಯೆಗಳನ್ನು ಬಗೆಹರಿಸಿದರು. ಇನ್ನು ಕೆಲವು ಸಮಸ್ಯೆಗಳಿಗೆ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಕುಡಿಯುವ ನೀರಿನ ಪೂರೈಕೆ, ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಹಣಕಾಸಿನ ಸಹಾಯ, ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ವಿವಿಧ ಶಾಲೆಗಳ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ತಮ್ಮ ಶಾಲೆಗೆ ಬೇಕಾದ ಸೌಲಭ್ಯ ಕುರಿತು ಮನವಿ ಸಲ್ಲಿಕೆ, ವಿದ್ಯುತ್ ಸಂಪರ್ಕ ತಾಲ್ಲೂಕು ಪಂಚಾಯ್ತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದರು.
ಸಾರ್ವಜನಿಕರಿಂದ ಸಾಮೂಹಿಕ ಹಾಗೂ ವೈಯಕ್ತಿಕ ಅಹವಾಲುಗಳ ಮನವಿ ಸೇರಿದಂತೆ ಸಾರ್ವಜನಿಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಅನಾಯೋಗ್ಯ ಕಾರಣ ಶಸ್ತ್ರಚಿಕಿತ್ಸೆ ಸಹಾಯ ಕೋರಿ ಅಹವಾಲು ತೋಡಿಕೊಂಡರು. ನಂತರ ಅವರಿಗೆ ಮಾಜಿ ಸಚಿವ ಬಿ.ನಾಗೇಂದ್ರ ಅವರು ಹಣದ ನೆರವು ನೀಡಿದರು.
ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆ ಮೇಲಾಧಿಕಾರಿಗಳಿಗೆ ಫೋನ್ ಕರೆ ಮೂಲಕ ತಿಳಿಸಿ, ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಲು ಮಾಜಿ ಸಚಿವ ಬಿ.ನಾಗೇಂದ್ರ ಅವರು ಸೂಚಿಸಿದರು.
29th July 2025
*ಅಹಿಂದ ನೂತನ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಚೇಳ್ಳಗುರ್ಕಿ ಹೆಚ್.ಆಂಜನೇಯ್ಯ ನೇಮಕ*
*ಬಳ್ಳಾರಿ:ಜುಲೈ.23. ನಗರದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಬಿ.ನಾಗೇಂದ್ರ ಅವರ ನಿವಾಸದ ಕಚೇರಿಯಲ್ಲಿ ಕರ್ನಾಟಕ ಅಹಿಂದ ಜನ ಸಂಘದ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರ ನೇತೃತ್ವದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಬಿ.ನಾಗೇಂದ್ರ ಅವರ ಕೃಪಾ ಆಶೀರ್ವಾದದೊಂದಿಗೆ ಜಿಲ್ಲಾ ಕಾರ್ಮಿಕ ಘಟಕದ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು.
ನೂತನ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಚೇಳ್ಳಗುರ್ಕಿ ಹೆಚ್. ಆಂಜನೇಯ್ಯ, ಉಪಾಧ್ಯಕ್ಷರಾಗಿ ಟಿ.ಕ್ರಾಂತಿ ಕುಮಾರ್, ಕಾರ್ಯದರ್ಶಿಯಾಗಿ ಹೆಚ್, ಎಂ.ಹೊನ್ನೂರಸ್ವಾಮಿ, ಹೆಚ್.ರಮೇಶ್ ಮತ್ತು ಬಳ್ಳಾರಿ ಗ್ರಾಮಾಂತರ ತಾಲೂಕು ಕಾರ್ಮಿಕ ವಿಭಾಗದ ಅಧ್ಯಕ್ಷರನ್ನಾಗಿ ಚೇಳ್ಳಗುರ್ಕಿ ರಾಮಕೃಷ್ಣ ಇವರುಗಳಿಗೆ ಮಾಜಿ ಸಚಿವರಾದ ಬಿ.ನಾಗೇಂದ್ರ ಅವರು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಹಿಂದ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ. ಕನಕ ಅವರು ಕಾರ್ಯಕ್ರಮವನ್ನು ಮುಂದಾಳತ್ವವನ್ನು ವಹಿಸಿದ್ದರು.
ನಂತರ ಮಾತನಾಡಿದ ಮಾಜಿ ಸಚಿವಾದ ಬಿ.ನಾಗೇಂದ್ರ ಅವರು ಕರ್ನಾಟಕ ಅಹಿಂದ ಜನ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಮಿಕ ಘಟಕದ ಸಂಘಟನೆ ಕಟ್ಟುವಲ್ಲಿ ಉತ್ಸಾಹ ತುಂಬಿದ್ದು ಇದೇ ಉತ್ಸಹವನ್ನು ಮುಂದೆ ಹೋರಾಟ, ಸಮಾಜ ಸೇವೆ ಸೇರಿದ ವಿವಿಧ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಶೋಷಿತ ಸಮುದಾಯಗಳ ಪರ ಹಾಗೂ ಎಲ್ಲಾ ಜಾತಿ ಜನಾಂಗದವರ ಪರವಾಗಿ ಕೆಲಸ ಮಾಡಬೇಕು. ಅಲ್ಲದೆ ಮುಂದೆ ಬರುವಂತ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪೂಜಿಸುವಂತಹ ಕೆಲಸ ಮಾಡಬೇಕಾದರೆ ಅವರು ಹಮ್ಮಿಕೊಂಡಿರುವ ಯೋಜನೆಗಳನ್ನು ಪ್ರತಿಯೊಂದು ಗ್ರಾಮದಲ್ಲಿ ಜನಗಳಿಗೆ ತಲುಪಿಸುವಂತ ಕೆಲಸ ಮಾಡಬೇಕೆಂದು ತಿಳಿಸಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ನನ್ನ ಸಮಾಜ ಸೇವೆ ಕಂಡು ನನಗೆ ಅಹಿಂದ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರಿಗೆ ಹಾಗೂ ಅಹಿಂದ ಎಲ್ಲಾ ಪದಾಧಿಕಾರಿಗಳಿಗೆ ಹೃತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಮತ್ತು ಅಹಿಂದ ಸಂಘದ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ, ಸಂಘದ ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದು ಚೇಳ್ಳಗುರ್ಕಿ ಹೆಚ್.ಆಂಜನೇಯ್ಯ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷರಾದ ಬಿ.ಮಾರುತಿ, ಪ್ರಧಾನ ಕಾರ್ಯದರ್ಶಿ ಉಮಾರ್ ಫಾರೂಕ್, ಜಿಲ್ಲಾ ಉಪಾಧ್ಯಕ್ಷರಾದ ಚೇಳ್ಳಗುರ್ಕೀ ನಾಗರಾಜ್, ಯುವ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್, ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷರಾದ ಆಪ್ತಮಿತ್ರ ಭಾಷಾ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಸಿ.ಗಂಗಾಧರ್, ನಗರ ಉಪಾಧ್ಯಕ್ಷರಾದ ಮೆಹಬೂಬ್, ಬಾಷಾ, ನಗರ ಉಪಾಧ್ಯಕ್ಷರಾದ ಖಾಲಿದ್ ಬಾಷ ಹಾಗೂ ಯುವ ಘಟಕದ ಗ್ರಾಮಾಂತರ ಅಧ್ಯಕ್ಷರಾದ ವೈಫೈ ಶಿವು, ಬಾಷ, ಸುನೀಲ್, ಭೀಮ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
29th July 2025
ಬಳ್ಳಾರಿ ಜುಲೈ 24. ಗಣಿನಾಡು ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುವ ಅವಕಾಶ ನಮ್ಮೆಲ್ಲರಿಗೂ ದೊರೆತಿದ್ದು, ಅತ್ಯಂತ ಅರ್ಥಪೂರ್ಣವಾಗಿ ಅದ್ದೂರಿಯಾಗಿ ಆಚರಿಸಿ ಇತಿಹಾಸ ನಿರ್ಮಿಸಬೇಕು ಎಂದು ಇಲ್ಲಿನ ಕರ್ನಾಟಕ ಜನ ಸೈನ್ಯ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ ಅವರು, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಎನ್.ಮಹೇಶ್ ಅವರಿಗೆ ಮನವಿ ಮಾಡಿದರು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಗುರುವಾರ ಅವರನ್ನು ಭೇಟಿ ಮಾಡಿ, ಈ ಬಾರಿ ನಮ್ಮ ಜಿಲ್ಲೆಯಲ್ಲಿ ಕನ್ನಡಾಂಬೆಯ ಸೇವೆ ಮಾಡಲು, ನಮ್ಮೆಲ್ಲರಿಗೂ ಅವಕಾಶ ದೊರೆತಿದ್ದು,ಅತ್ಯಂತ ಸಂತಸ ಮೂಡಿಸಿದೆ. ಎಲ್ಲ ಕನ್ನಡಪರ ಸಂಘಂಟನೆಗಳು, ಸಾಹಿತ್ಯಾಸಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅದ್ದೂರಿಯಾಗಿ ಹಬ್ಬದಂತೆ ಸಮ್ಮೇಳನವನ್ನು ಆಚರಿಸೋಣ, ಈಗಿನಿಂದಲೇ ಸಮ್ಮೇಳನ ಆಯೋಜನೆ ಕುರಿತು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಮೂಲಕ ಬಳ್ಳಾರಿಯಲ್ಲಿ ಇತಿಹಾಸ ಸೃಷ್ಟಿಸೋಣ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
29th July 2025
ಬಳ್ಳಾರಿ ಜುಲೈ 24. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 16ನೇ ಸಂಸ್ಥಾಪನ ದಿನಾಚರಣೆ ಪ್ರಯುಕ್ತ ವಿಶ್ವವಿದ್ಯಾಲಯದ ಬೋದಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಕ್ರೀಡೆಗಳು ಏರ್ಪಡಿಸಿದ್ದು , ಕ್ರಿಕೆಟ್ ರೋಚಕ ಸ್ಪರ್ಧೆಯಲ್ಲಿ ಬೋಧಕ ಸಿಬ್ಬಂದಿ "ಕ್ಲಾಸಿಕ್ 11" ತಂಡ ಸೆಮಿಫೈನಲ್ಗೆ ತೆರಳಿದ್ದು.ಇಂದು ಕ್ರಿಕೆಟ್ ಆಟದಲ್ಲಿ ಅತ್ಯುತ್ತಮ ಆಟಗಾರ ಮತ್ತು ಕ್ಯಾಚ್ ಹಿಡಿದು ಆಟಕ್ಕೆ ಸ್ಪೂರ್ತಿ ತಂದ ಸಮಾಜ ಶಾಸ್ತ್ರ ವಿಭಾಗದ ಡಾ.ರಾಜೇಂದ್ರ ಪ್ರಸಾದ್ರವರು ಮತ್ತು ಪ್ರದರ್ಶನ ಕಲೆ ನಾಟಕ ವಿಭಾಗದ ಅಸೂಟಿ ಶ್ರೀನಿವಾಸ . ತಂಡದ ನಾಯಕರು ಚೆಲುವಾದಿ ಚೆನ್ನಬಸಪ್ಪ ಇನ್ನೂ ಮುಂತಾದ ವಿಭಾಗದ ಬೋಧಕ ಸಿಬ್ಬಂದಿಯವರು ಭಾಗವಹಿಸಿದ್ದರು.
29th July 2025
ಬಳ್ಳಾರಿ, ಜು.28. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣ ಬಾಜಪೇಯಿ (ಐಎಎಸ್) ಅವರು ನೇಮಕಗೊಂಡಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರವೀಂದ್ರ ಕರಲಿಂಗಣ್ಣವರ್ (ಕೆಎಎಸ್) ಅವರು ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ ಕೃಷ್ಣ ಬಾಜಪೇಯಿ ಅವರನ್ನು ನೇಮಕ ಮಾಡಲಾಗಿದೆ. ಕೃಷ್ಣ ಬಾಜಪೇಯಿ ಅವರು ಈ ಹಿಂದೆ ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
29th July 2025
ಬಳ್ಳಾರಿ ಜುಲೈ 28. ಬಳ್ಳಾರಿಯಿಂದ ತೆಕ್ಕಲಕೋಟೆಗೆ ತೆರಳುವಾಗ ಬೈಕು ಮತ್ತು ಕಾರು ಆಕ್ಸಿಡೆಂಟ್ ಆಗಿ ರೋಡ್ ನಲ್ಲಿ ಕಾಲು ಕಟ್ಟಾಗಿ ಬಿದ್ದಿರುವುದನ್ನು ನೋಡಿ ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪನ ಪುತ್ರ, ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷರಾದ ಎಂ.ಎಸ್.ಸಿದ್ದಪ್ಪ ತಕ್ಷಣನೆ ಕಾರನ್ನು ನಿಲ್ಲಿಸಿ ತೆಕ್ಕಲಕೋಟೆ ನಿವಾಸಿಯಾದ ಈರಣ್ಣ ತಂದೆ ಬುಳ್ಳಪ್ಪ (ವಯಸ್ಸು 30) ಅವರನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿಕೊಡಲಾಯಿತು. ಇದನ್ನು ಕಂಡ ಜನತೆ ಸಿದ್ದಪ್ಪನ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
29th July 2025
ರಸಗೊಬ್ಬರ ಪೂರೈಕೆ, ಉತ್ಪಾದನೆಯ ಹೊಣೆ ಕೇಂದ್ರ ಸರ್ಕಾರದ್ದು ಎಂಬ ಕನಿಷ್ಠ ಜ್ಞಾನ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಇದ್ದಂತೆ ಕಾಣುತ್ತಿಲ್ಲ.
ಬಿಜೆಪಿ ನಾಯಕರು ಯಾವಾಗಲೂ ತಮ್ಮ ಜವಾಬ್ದಾರಿ ವಿಚಾರ ಬಂದಾಗ ಕಾಂಗ್ರೆಸ್ ಇಲ್ಲವೇ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ನಾಯಕರು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.
ಇದೀಗ ರಸಗೊಬ್ಬರ ವಿಷಯದಲ್ಲಿ ಇಂತಹುದ್ದೇ ರಾಜಕಾರಣ ಮಾಡುತ್ತಿದೆ. ಇವರಿಗೆ ಈ ಹಿಂದೆ ತಮ್ಮದೇ ಸರ್ಕಾರ ಇದ್ದಾಗ ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿದ ಮಹನೀಯರು ಇಂದು ರೈತರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ.
ರಾಸಾಯನಿಕ ಗೊಬ್ಬರ ಪೂರೈಕೆ ಮಾಡುವ ಕೆಲಸ ಕೇಂದ್ರ ಸರ್ಕಾರದ್ದು. ಕೇಂದ್ರ ಸರ್ಕಾರಕ್ಕೆ ದೇಶದಲ್ಲಿರುವ ಕೃಷಿ ವಿಷಯ ತಿಳಿದೆ ಇಲ್ಲ. ಎಷ್ಟು ಗೊಬ್ಬರ, ಬೀಜ ಬೇಕು ಎಂಬುದರ ಬಗ್ಗೆ ಪೂರ್ಣ ಜ್ಞಾನ ಇಲ್ಲ. ಇದೆ ಕಾರಣಕ್ಕೆ ಇಂದು ಗೊಬ್ಬರ ಕೊರತೆ ಎದುರಾಗಿದೆ.
ಇನ್ನು ಯೂರಿಯ ಬದಲು ನ್ಯಾನೋ ಯೂರಿಯ ಬಳಸಿ ಎಂದು ಕೇಂದ್ರ ಸರ್ಕಾರ ಬಲವಂತವಾಗಿ ನ್ಯಾನೋ ಯೂರಿಯ ಬಳಕೆಗೆ ಒತ್ತುನೀಡಲು ಇಲಾಖೆ ಅಧಿಕಾರಿ, ರೈತರಿಗೆ ಒತ್ತಾಯ ಮಾಡುತ್ತಿದೆ. ಆದ್ರೆ ಬಳಕೆ ಮಾಡುವುದು ಹೇಗೆ ಎಂದು ಎಂಬುದನ್ನು ತಿಳಿಹೇಳುವ ಕನಿಷ್ಠ ಜ್ಞಾನ ಹೊಂದಿಲ್ಲ.ಅನ್ಯ ವಿಷಗಳಿಗೆ ಸಿಕ್ಕಾಪಟ್ಟೆ ಜಾಹಿರಾತು ನೀಡಿ ಪ್ರಚಾರ ಮಾಡುವ ಕೇಂದ್ರ ಸರ್ಕಾರ ಸಬ್ಸಿಡಿ ಉಳಿಸಲು ನ್ಯಾನೋ ಗೊಬ್ಬರ ತಂದ ವಿಷಯವನ್ನು ರೈತರಿಗೆ ತಿಳಿಸಲು ಒಂದೇ ಒಂದು ಸಣ್ಣ ಜಾಹಿರಾತು ನೀಡಿಲ್ಲ. ಇದರ ಮಧ್ಯೆ ನಮ್ಮ ಸರ್ಕಾರ ಕೃಷಿ ಇಲಾಖೆ ಮೂಲಕ ರೈತರಲ್ಲಿ ಅರಿವು ಮೂಡಿಸುತ್ತಾ ಬಂದಿದೆ. ಆದರೂ ನ್ಯಾನೋ ಬಳಕೆಗೆ ಇನ್ನು ರೈತರು ಜಾಗರೂಕರಾಗಿಲ್ಲ. ಇದರ ಬಗ್ಗೆ ರಾಮುಲು ಅವರು ತುಟಿ ಬಿಚ್ಚಲ್ಲ.
ಯಾವುದೋ ಮತ್ತೊಂದು ಕಾರ್ಪೊರೇಟ್ ಕಂಪನಿಗೆ ಒಳಿತು ಮಾಡಲು ಅವರ ಮೂಲಕ ನ್ಯಾನೋ ಗೊಬ್ಬರ ಉತ್ಪಾದಿಸಿ ಅದನ್ನು ಮಾರಾಟ ಮಾಡಿ, ಲಾಭ ಗಳಿಸುವ ಹುನ್ನಾರದಿಂದ ಈ ರೀತಿ ರೈತರಿಗೆ ವಂಚನೆ ಮಾಡುವ ಕೆಲಸವನ್ನು ತಮ್ಮ ಕೇಂದ್ರ ಸರ್ಕಾರ ಮಾಡುತ್ತಿದೆ ಎಂಬುದನ್ನು ರಾಮುಲು ಅವರು ತಿಳಿಯಬೇಕು ಎಂದು ವೆಂಕಟೇಶ್ ಹೆಗಡೆ ಆಗ್ರಹವನ್ನು ವ್ಯಕ್ತ ಪಡಿಸಿದ್ದಾರೆ.
ರಾಜ್ಯ ಸರ್ಕಾರ ಎಂತಹ ಆಡಳಿತ ನೀಡುತ್ತಿದೆ ಎಂಬುದು ನಿಮಗೆ ಅದಾಗಲೇ ಅರಿವಿಗೆ ಬಂದಿದೆ. ಕೇಂದ್ರದ ಹಣಕಾಸು ಇಲಾಖೆ ಹೇಳಿದ ಹಾಗೆ ತಲಾ ಆದಾಯದ ವಿಷಯದಲ್ಲಿ ಇಡೀ ದೇಶಕ್ಕೆ ನಂ.1 ಆಗಿದೆ. ಇದು ಜನಪರ ಕಾಳಜಿಗೆ ಹಿಡಿದ ಕನ್ನಡಿ ಆಗಿದೆ. ಇಂಥ ಆಡಳಿತದ ಬಗ್ಗೆ ಮಾತನಾಡುವುದು ಎಷ್ಟು ಸಮಂಜಸ ಎಂಬುದನ್ನು ರಾಮುಲು ಅರಿಯಲಿ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 2531 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ 167 ಮಂದಿಯನ್ನು ಹೊರತುಪಡಿಸಿ ಇನ್ನೆಲ್ಲ ರೈತ ಕುಟುಂಬಗಳಿಗೂ ಪರಿಹಾರ ಸಿಕ್ಕಿದೆ ಎಂದು ಸರ್ಕಾರವೇ ವಿಧಾನಸಭೆಯಲ್ಲಿ ಹೇಳಿದೆ.
ಇನ್ನು ಈ ವರ್ಷ (ಮಾರ್ಚ್ ವರೆಗೆ) ರಾಜ್ಯದಲ್ಲಿ 527 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಲ್ಲಿ 28 ಮಂದಿಯನ್ನು ಹೊರತುಪಡಿಸಿ ಇನ್ನೆಲ್ಲರಿಗೂ ಪರಿಹಾರ ಸಿಕ್ಕಿದೆ.
ಆದರೆ ಮೃತ ರೈತರಿಗೆ ಪರಿಹಾರವೇ ಸಿಗುತ್ತಿಲ್ಲ ಎಂಬ ರಾಮುಲು ಆರೋಪಕ್ಕೆ ಆಧಾರವೇ ಇಲ್ಲ. ಸುಳ್ಳು ಹೇಳುವುದಕ್ಕೂ ಒಂದು ಮಿತಿಬೇಡವೇ?
29th July 2025
ಬಳ್ಳಾರಿ ಜುಲೈ 29. ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಗೊಬ್ಬರದ ಅಭಾವವಿದ್ದು, ರೈತರಿಗೆ ಸಮರ್ಪಕವಾಗಿ ಗೊಬ್ಬರವನ್ನು ಪೂರೈಸಲು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಬಿ.ಜೆ.ಪಿ. ರೈತ ಮೋರ್ಚಾ ವತಿಯಿಂದ ಹಳೆಯ ತಾಲ್ಲೂಕು ಕಛೇರಿ ಕಾಪೌಂಡ್ನಲ್ಲಿರುವ ಜಂಟಿ ಕೃಷಿ ನಿರ್ದೇಶಕರು, ಬಳ್ಳಾರಿ. ಕಛೇರಿಯ ಮುಂದೆ ದಿನಾಂಕ: 31-07-2025 ರಂದು ಬೆಳಿಗ್ಗೆ 10.00 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಪಕ್ಷದ ಮುಖಂಡರು ರೈತ ಮುಖಂಡರು, ರೈತರು ಭಾಗವಹಿಸಿ ಪ್ರತಿಭಟನೆಯನ್ನ ಯಶಸ್ವಿಗೊಳಿಸಬೇಕಾಗಿ ಗಣಪಾಲ ಐನಾಥರೆಡ್ಡಿ, ಜಿಲ್ಲಾಧ್ಯಕ್ಷರು, ಬಿ.ಜೆ.ಪಿ. ರೈತ ಮೋರ್ಚಾ, ಬಳ್ಳಾರಿ ಜಿಲ್ಲೆ ಇವರು ಕಳಕಳಿಯ ವಿನಂತಿಯನ್ನು ಮಾಡಿದ್ದಾರೆ.
29th July 2025
ಬಳ್ಳಾರಿ ಜುಲೈ 29. ಬಳ್ಳಾರಿ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದಿದೆ. ಮೂರು ವರ್ಷದ ಬಾಲಕ ವಿಕ್ಕಿ ಸಾವನ್ನಪ್ಪಿರುವ ಬಾಲಕ ಎಂದು ಗುರುತಿಸಲಾಗಿದೆ.
ಅತಿ ವೇಗ ಹಾಗೂ ಚಾಲಕನ ಅಜಾಗರೂಕತೆಯಿಂದ ಮಗು ಬಲಿಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳ್ಳಾರಿಯ ಬಾಪೂಜಿ ನಗರದ ಸಮರ ಹಾಗೂ ಶೈಲಜಾ ದಂಪತಿಯ ಎನ್ನುವವರ ಮಗು ಎಂದು ತಿಳಿದು ಬಂದಿದೆ.
ಬಾಪುಜಿ ನಗರದಲ್ಲಿ ಕಸ ಸಂಗ್ರಹಿಸಲು ತೆರಳಿದ್ದ ವಾಹನವು, ರಸ್ತೆ ಬದಿ ಆಟ ಆಡುತ್ತಿದ್ದ ವಿಕ್ಕಿ ತಲೆ ಮೇಲೆ ಹರಿದಿದೆ. ಕೂಡಲೇ ಗಾಯಳು ಮಗುವನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದ್ರೇ ಆಸ್ಪತ್ರೆ ಮುಟ್ಟುವುದರಲ್ಲೇ ಮಗು ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳ್ಳಾರಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪಾಲಿಕೆ ಮೇಯರ್ ನಂದೀಶ್ ಹಾಗೂ ಪೊಲೀಸರ ದೌಡಾಯಿಸಿದ್ದರು.