


14th January 2026
ಕುಷ್ಟಗಿ.
ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಆರು ಸ್ಥಾನಗಳನ್ನು ಗೆಲ್ಲುವ ಅವಕಾಶವಿದ್ದರೂ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆಲ್ಲುವಂತಾಗಿರುವುದು ಕಾಂಗ್ರೆಸ್ ಪಕ್ಷದ ದುರದೃಷ್ಟಕರ ಸಂಗತಿಯಾಗಿದೆ. ಸುಲಭ ಗೆಲುವನ್ನು ಮರೆತಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣರಾಗಿದ್ದಾರೆ. ಕಾರ್ಯಕರ್ತರನ್ನು ಗೆಲ್ಲಿಸಬೇಕೆಂಬ ಮನಸ್ಸು ಮಾಡಲು ಕಾರ್ಯತಂತ್ರ ಮಾಡದೇ ನಿರ್ಲಕ್ಷ ಮಾಡಿದ್ದಾರೆ ಎಂದು ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ ವಿಷಾದ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆದ ಚುನಾವಣೆ ನಂತರ ಅವರು ಈ ಸೋಲಿಗೆ ವಿಷಾದ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಟ್ಟು ೯೬ ಮತದಾರರ ಪೈಕಿ ೯೪ ಮತಗಳು ಚಲಾವಣೆಯಾಗಿವೆ. ಒಂದು ಮತ ತಿರಸ್ಕೃತವಾಗಿದೆ. ಇದರಲ್ಲಿ ಎಲ್ಲಾ ಆರು ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗುವ ಅವಕಾಶ ನಿಶ್ಚಿತವಾಗಿ ಇತ್ತು. ಆದರೆ ಸಿದ್ದೇಶಕುಮಾರ ಕಲ್ಲಬಾಗಿಲಮಠ ಮತ್ತು ಈಶಪ್ಪ ಅಮರಪ್ಪ ಮಾತ್ರ ಆಯ್ಕೆಯಾಗಿದ್ದಾರೆ. ಪಕ್ಷ ಬಹುಮತ ಹೊಂದಿದ್ದರೂ, ನಮ್ಮ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಲ್ಲಿ ವಿಫಲರಾಗಿರುವುದು ಆಶ್ಚರ್ಯ ಮೂಡಿದೆ ಮತ್ತು ಕಾರ್ಯಕರ್ತರ ಮನಸ್ಸಿಗೆ ಬೇಸರವಾಗಿದೆ. ಯೋಜನಾ ಸಮಿತಿಗೆ ಚುನಾವಣೆ ಘೋಷಣೆಯಾದಾಗಿನಿಂದಲೂ, ಚುನಾವಣೆ ತಂತ್ರ ರೂಪಿಸುವ ಗಂಭೀರ ಪ್ರಯತ್ನಗಳು ಜಿಲ್ಲಾ ಮುಖಂಡರಿಂದ ನಡೆಯಲೇ ಇಲ್ಲ. ಪಕ್ಷದ ಶಾಸಕರು, ಸಂಸದರು, ಹಾಗೂ ಜಿಲ್ಲಾ ಘಟಕ ಈ ಕುರಿತು ಸಮನ್ವಯದಿಂದ ಕಾರ್ಯತಂತ್ರ ರೂಪಿಸಲಿಲ್ಲ. ಮತದಾನದ ದಿನದ ಹಿಂದಿನ ದಿನವಾದರೂ ಈ ಕುರಿತು ಸಭೆ ನಡೆಸಿ, ಕಾರ್ಯತಂತ್ರ ರೂಪಿಸಿ, ಪಕ್ಷದ ಮತದಾರರಿಗೆ ಸ್ಪಷ್ಟ ಸಂದೇಶ ರವಾನಿಸದೇ ಕೈ ಚೆಲ್ಲಿ ಕುಳಿತುಕೊಂಡಿದ್ದರು. ನಾವೀಗ ಪಂಚಾಯತ ಚುನಾವಣೆಗಳ ಹೊಸ್ತಿಲಲ್ಲಿ ನಿಂತಿದ್ದೇವೆ. ಇಂತಹ ಸಮಯದಲ್ಲಿ, ಕೈಗೆಟಕಬಹುದಾಗಿದ್ದ ಗೆಲುವೊಂದನ್ನು ಬಿಟ್ಟುಕೊಟ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ವಿರೋಧ ಪಕ್ಷಕ್ಕೆ ಹಾಸ್ಯಾಸ್ಪದರಾಗಿದ್ದೇವೆ. ಬಹುಮತ ಇದ್ದಾಗ್ಯೂ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದ ನಮ್ಮನ್ನು ಮತದಾರರು ಪರಿಹಾಸ್ಯ ಮಾಡುತ್ತಿದ್ದಾರೆ. ಇದರಿಂದಾಗಿ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ನನ್ನಂಥವರು ಮುಜುಗರ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಯೋಜನಾ ಸಮಿತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎದುರಿಸಿದ ಸೋಲಿನ ಹೊಣೆಯನ್ನು ಈವರೆಗೆ ಯಾರೊಬ್ಬರೂ ಹೊತ್ತುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ, ಫಲಿತಾಂಶದ ಪರಾಮರ್ಶೆ ನಡೆಯಬೇಕು ಎಂಬುದು ನನ್ನ ಮತ್ತು ನನ್ನಂತಹ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಲ್ಲರ ಆಗ್ರಹವಾಗಿದೆ. ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾದವರನ್ನು ಗುರುತಿಸಿ, ಅವರ ವಿರುದ್ಧ ಪಕ್ಷದ ಹೈಕಮಾಂಡ್ಗೆ ವರದಿ ಸಲ್ಲಿಸಿ, ಪಕ್ಷದ ನಿಯಮಗಳಾನುಸಾರ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಚಂದ್ರಶೇಖರ ನಾಲತ್ವಾಡ ಅವರು ನೇರವಾಗಿ ಅಗ್ರಹಿಸಿದ್ದಾರೆ.

14th January 2026
ಕೊಪ್ಪಳ.
ಜಿಪಂ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಲ್ಲಿ ಬರುವ ವಿವಿಧ ಯೋಜನೆಗಳ ಅನುಷ್ಟಾನದ ಪ್ರಗತಿಯನ್ನು ಪರಿಶೀಲಿಸಲು ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್( ಜಿಲ್ಲಾ ಯೋಜನಾ ಸಮಿತಿಯ) ಜಿಲ್ಲೆಯ ಪುರಸಭೆ ಮತಕ್ಷೇತ್ರಗಳ ನಗರ ಮತ್ತು ಪಟ್ಟಣ ಪಂಚಾಯತ್ ಸ್ಥಳೀಯ ಸಂಸ್ಥೆಗಳ ಸದಸ್ಯರಲ್ಲಿ ಆರು ಜನ ಸದಸ್ಯರನ್ನು ಯೋಜನಾ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ನಾಲ್ಕು ಜನ ಬಿಜೆಪಿ ಮತ್ತು ಇಬ್ಬರು ಕಾಂಗ್ರೆಸ್ ಸದಸ್ಯರು ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಲ್ಲಿ ಅತೀ ಹೆಚ್ಚು ಮತದಾರ ಸದಸ್ಯರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಮತ್ತು ಮಂಡಲ ಬಿಜೆಪಿ ಮುಖಂಡರಿಗೆ ಹರ್ಷವಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರಿಗೆ ಸೋಲಿನ ಮುಜುಗರ ಎದುರಿಸುವಂತಾಗಿದೆ.
ಮಂಗಳವಾರ ಜಿಲ್ಲಾಡಳಿತ ಭವನದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ಚುನಾವಣೆಯ ಮತದಾನ ಪ್ರಕ್ರೀಯೆ ನಂತರ ಸಂಜೆ ಸದಸ್ಯರ ಆಯ್ಕೆಯನ್ನು ಪ್ರಕಟಿಸಲಾಯಿತು. ಜಿಲ್ಲೆಯ ಕಾರಟಗಿ ಪುರಸಭೆ, ಭಾಗ್ಯನಗರ, ಕುಕನೂರು, ಕನಕಗಿರಿ ಮತ್ತು ತಾವರಗೇರಿ ಪಟ್ಟಣ ಪಂಚಾಯತ್ನಲ್ಲಿರುವ ಒಟ್ಟು ೯೪ ಸದಸ್ಯರು ಮತದಾರರಾಗಿದ್ದು, ಆರು ಸ್ಥಾನದ ಆಯ್ಕೆ ನಡೆಸಲಾಗಿದೆ. ಆರು ಸ್ಥಾನಕ್ಕೆ ೧೧ ಜನ ಸ್ಪರ್ಧೆ ಮಾಡಿದ್ದರು. ವಿಶೇಷವಾಗಿ ೯೪ ಸದಸ್ಯರ ಪೈಕಿ ೫೬ ಅತಿ ಹೆಚ್ಚು ಮತದಾರರು ಕಾಂಗ್ರೆಸ್ ಪಕ್ಷದವರಾಗಿದ್ದರೂ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಸದಸ್ಯರು ಅತಿ ಹೆಚ್ಚು ಮತ ಪಡೆದು ಗೆಲುವು ಸಾಧಿಸಿದ್ದಾರೆ. ಆದರೆ ಕಾಂಗ್ರೆಸ್ಸಿನ ಇಬ್ಬರು ಮಾತ್ರ ಆಯ್ಕೆಯಾಗಿರುವುದು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿಡಿತ ಕಡಿಮೆಯಾಗುತ್ತಿರುವುದು ಗೋಚರವಾಗುತ್ತಿದೆ.
ಆರು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಭಾಗ್ಯನಗರ ಪಂಪ ಸದಸ್ಯ ಪರಶುರಾಮನಾಯಕ(೪೬ ಮತ) ಕುಕನೂರು ಪಂಪಂನ ಬಾಲರಾಜ ಗಾಳಿ(೪೯ಮತ) ತಾವರಗೇರಿ ಪಂಪಣ ಶಿವನಗೌಡ(೪೬ಮತ) ಮತ್ತು ಕಾರಟಗಿ ಪುರಸಭೆಯ ಬಿಜೆಪಿ ಸದಸ್ಯ ಸೋಮಶೇಖರಪ್ಪ ಬೆರಿಗಿ (೫೧ ಮತ) ಗೆಲುವು ಸಾಧಿಸಿದ್ದರೆ. ಕಾಂಗ್ರೆಸ್ ಪಕ್ಷದ ಕಾರಟಗಿ ಪುರಸಭೆಯ ಈಶಪ್ಪ ಇಟ್ಟಂಗಿ (೪೬ಮತ) ಮತ್ತು ಕನಕಗಿರಿ ಪಂಪಂನ ಸಿದ್ಧೇಶಕುಮಾರ ಕಲಬಾಲುಮಠ (೫೪ ಮತ)ಗೆಲುವು ಸಾಧಿಸಿದ್ದಾರೆ.
ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ ಬಿಜೆಪಿ ಮುಖಂಡರು ಜಿಲ್ಲಾಡಳಿತ ಕಚೇರಿ ಬಿಜೆಪಿ ಸದಸ್ಯರ ವಿಜಯೋತ್ಸವದಲ್ಲಿ ಎಂಎಲ್ಸಿ ಹೇಮಲತಾ ನಾಯಕ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ, ಬಿಜೆಪಿ ಮುಖಂಡ ಡಾ.ಬಸವರಾಜ.ಕೆ ಮತ್ತಿತರ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಆರು ಜನ ಸದಸ್ಯರು ತಮ್ಮ ಪಕ್ಷದವರೇ ಆಯ್ಕೆಯಾಗುವ ಅವಕಾಶವಿದ್ದರೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರ ನಿರ್ಲಕ್ಷದಿಂದ ಸೋಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಬಾಕ್ಸ್:
ಕಾಂಗ್ರೆಸ್ ಪಕ್ಷದ ದುರಾದುಷ್ಟ
ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಉಸ್ತುವಾರಿ, ಸಂಸದರು, ಶಾಸಕರು ಇದ್ದು, ಐದು ಸ್ಥಳೀಯ ಸಂಸ್ಥೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಪಕ್ಷದ ಸದಸ್ಯರು ಇದ್ದರೂ ಸಹ ಜಿಲ್ಲಾ ಅನುಷ್ಟಾನ ಸಮಿತಿ ಸದಸ್ಯರ ಚುನಾವಣೆಯ ಆರು ಸ್ಥಾನದಲ್ಲಿ ಕೇವಲ ಇಬ್ಬರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷದ ದುರಾದುಷ್ಟಕರ ಸಂಗತಿಯಾಗಿದೆ. ಮೂರು ಭಾರಿ ಶಾಸಕರಾಗಿ ಈಗ ಜಿಲ್ಲಾಧ್ಯಕ್ಷರಾಗಿರುವ ಅಮರೇಗೌಡ ಬಯ್ಯಾಪುರ, ಸಚಿವ ತಂಗಡಗಿ, ಸಂಸದ, ಶಾಸರಕಾಗಿರುವ ಹಿಟ್ನಾಳ್ ಸಹೋದರರು ಜಿಲ್ಲಾ ಕಾಂಗ್ರೆಸ್ಸಿಗೆ ಶಕ್ತಿ ತುಂಬುವಲ್ಲಿ ನಿರ್ಲಕ್ಷ ಮಾಡಿದ್ದಾರೆ. ಈ ಸೋಲು ಪಕ್ಷಕ್ಕೆ ಮುಜುಗರವಾಗಿದೆ.
ಚಂದ್ರಶೇಖರ ನಾಲತ್ವಾಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕುಷ್ಟಗಿ.

24th November 2025
ಗಂಗಾವತಿ.
ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಶೀಘ್ರದಲ್ಲೇ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜಸ್ವಾಮಿ ಮಳಿಮಠ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ೨೦೨೩ರ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ೧೪೦ ಸ್ಥಾನಗಳೊಂದಿಗೆ ಸರಕಾರ ರಚಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ಅವರು ಅತ್ಯಂತ ಚಾಣಕ್ಷಣತನದಿಂದ ಮತ್ತು ಶಕ್ತಿಮೀರಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುವುದು ದೊಡ್ಡ ಪ್ರಯತ್ನ ಮಾಡಿದ್ದಾರೆ. ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡುವ ಭರವಸೆ ಈ ಹಿಂದೆ ನೀಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಡುವೆ ಅತ್ಯಂತ ಸಮನ್ವಯತೆ ಇದೆ. ಹೀಗಾಗಿ ಸರಕಾರ ಎರಡುವರೆ ವರ್ಷದಲ್ಲಿ ಯಶಸ್ವಿಯಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದೆ. ಹೈಕಮಾಂಡ್ ನಿರ್ಧಾರದಂತೆ ಎರಡುವರೆ ವರ್ಷದ ನಂತರ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುವ ವಿಶ್ವಾಸ ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೆ. ಹೀಗಾಗಿ ಶೀಘ್ರ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದೆ ಎಂದು ಮಳಿಮಠ ತಿಳಿಸಿದ್ದಾರೆ.

19th October 2025
ಕೊಪ್ಪಳ.
ಇತ್ತಿಚಿಗೆ ಗಂಗಾವತಿ ನಗರದಲ್ಲಿ ನಡೆದಿರುವ ಬಿಜೆಪಿ ಯುವ ಮೋರ್ಚಾ ಮುಖಂಡ ಕೆ.ವೆಂಕಟೇಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ರವಿ ಪತ್ನಿ ಚೈತ್ರಾ ಸೇರಿ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ರವಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಇದುವರೆಗೂ ರವಿ ಪತ್ತೆಯಾಗಿಲ್ಲ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಕಳೆದ ಅ.೮ ರಂದು ಕೆ.ವೆಂಕಟೇಶನನ್ನು ಗಂಗಾವತಿ ನಗರದ ರಾಯಚೂರು ರಸ್ತೆಯಲ್ಲಿ ಐದಾರು ಜನ ಆರೋಪಿಗಳು ಮಚ್ಚಿನಿಂದ ಕೊಲೆ ಮಾಡಿದ್ದರು. ಮರುದಿನವೇ ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ಆದರೆ ಈ ಪ್ರಕರಣದಲ್ಲಿ ರವಿ ಎಂಬ ವ್ಯಕ್ತಿ ಮತ್ತು ಆತನ ಕೆಲವು ಸಹಚರರು ಭಾಗಿಯಾಗಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಲೆಯಾದ ವೆಂಕಟೇಶ ತಂದೆ ದೂರು ನೀಡಿದ್ದರು. ಹೀಗಾಗಿ ರವಿ ಬಂಧನಕ್ಕೆ ಗಂಗಾವತಿ ಪೊಲೀಸರು ಸ್ಕೆಚ್ ಹಾಕಿದ್ದರೂ ಇದುವರೆಗೂ ರವಿ ಸಿಗದೇ ತಲೆ ಮರೆಸಿಕೊಂಡಿದ್ದಾನೆ. ಈ ನಡುವೆ ಬಳ್ಳಾರಿಯ ರಾಘವೇಂದ್ರ ಕಾಲೋನಿಯ ಮಹ್ಮದ್ ಅಲ್ತಫ್ ತಂದೆ ಮೆಹಬೂಬ್ ಪಾಷಾ, ದಾದಾಫೀರ್ ತಂದೆ ಅಬ್ದುಲ್ ರವೂಫ್ ಮತ್ತು ಗಂಗಾವತಿ ನಗರದ ಲಿಂಗರಾಜ ಕ್ಯಾಂಪಿನ ಪ್ರಸ್ತುತ ಬಳ್ಳಾರಿ ರಾಘವೇಂದ್ರ ಕಾಲೋನಿಯಲ್ಲಿ ವಾಸವಾಗಿದ್ದ ಚೈತ್ರ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ರಾಮ ಅರಸಿದ್ದಿ ಅವರು ಮಾಹಿತಿ ನೀಡಿದ್ದು, ಕೆ.ವೆಂಕಟೇಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ನಾಲ್ವರು ಕೊಲೆಯಾದ ದಿನವೇ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದು, ಇಂದು ಮೂರು ಜನರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರವಿಯನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದರು.

15th October 2025
ಕೊಪ್ಪಳ.
ಕೊಪ್ಪಳ ತಾಲೂಕಿನ ಯಲಮೇಗಿ ಗ್ರಾಮದ ದಲಿತ ಸಂಘಟನೆ ಮುಖಂಡ ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಸದಸ್ಯ ಗಾಳೆಪ್ಪ ಹಿರೇಮನಿ ಮೇಲೆ ಠಾಣೆಯಲ್ಲೇ ಜಾತಿ ನಿಂದನೆಯೊಂದಿಗೆ ಹಲ್ಲೆ ಮಾಡಿರುವ ಘಟನೆ ಗಂಭೀರ ಸ್ವರೂಪ ಪಡೆಯುವುದನ್ನು ಅರಿತ ಎಸ್ಪಿ ಡಾ|| ರಾಮ್ ಅರಸಿದ್ಧಿ ಅವರು ರಾತ್ರೋ ರಾತ್ರಿ ಕುಕನೂರ ಪೊಲೀಸ್ ಠಾಣೆ ಪಿಎಸ್ಐ ಗುರುರಾಜ್ ಅವರನ್ನು ಅಮಾನತ್ ಮಾಡಿ ವಾತಾವರಣ ತಿಳಿಗೊಳಿಸಿದ್ದಾರೆ.
ಮಂಗಳವಾರ ಸಂಜೆ ಘಟನೆ ನಡೆದಿದ್ದು, ಘಟನೆಯನ್ನು ಖಂಡಿಸಿ ಕೊಪ್ಪಳ ಜಿಲ್ಲೆಯ ಡಿಎಸ್ಎಸ್ ಮುಖಂಡ ಮಲ್ಲು ಪೂಜಾರ ಮತ್ತಿತರ ಕಾರ್ಯಕರ್ತರು ದಿಡೀರ್ ಕುಕನೂರ ಪೊಲೀಸ್ ಠಾಣೆಗೆ ಆಗಮಿಸಿ ಪಿಎಸ್ಐ ಮಾಡಿರುವ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ವಿಷಯ ಜಿಲ್ಲೆಯಾದ್ಯಂತ ಹರಡಿ ಗಂಭೀರ ಸ್ವರೂಪ ಪಡೆದುಕೊಳ್ಳುವಷ್ಟರಲ್ಲಿ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಯಲಬುರ್ಗಾ ಸಿಪಿಐ ಅವರ ವರದಿ ಮತ್ತು ಠಾಣೆಯಲ್ಲಿ ನಡೆದ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಂಗಳವಾರ ತಡರಾತ್ರಿ ಕುಕನೂರು ಠಾಣೆ ಪಿಎಸ್ಐನ್ನು ಅಮಾನತ್ ಮಾಡಿ ಆದೇಶಿಸಿದ್ದಾರೆ.
ಕೊಪ್ಪಳ ತಾಲೂಕಿನ ಯಲಮೇಗಿ ಗ್ರಾಮದ ಡಿಎಸ್ಎಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯರಾಗಿರುವ ಗಾಳೇಪ್ಪ ಹಿರೇಮನಿ ಮಂಗಳವಾರ ಕುಕನೂರ ಠಾಣೆಗೆ ಆಗಮಿಸಿ ತಮ್ಮ ಗ್ರಾಮದ ದಂಪತಿಗಳ ನಡುವೆ ಉಂಟಾದ ವಿವಾದ ಕುರಿತು ವಿಚಾರಿಸಲು ಆಗಮಿಸಿದ ಸಂದರ್ಭದಲ್ಲಿ ಪಿಎಸ್ಐ ಗುರುರಾಜ್ ಏಕಾ ಏಕಿ ಗಾಳೆಪ್ಪ ಹಿರೇಮನಿಗೆ ಅವಾಚ್ ಶಬ್ಧನಿಂದ ಮತ್ತು ಜಾತಿ ನಿಂದನೆ ಮಾಡಿ ಮಾರಾಣಾಂತಿಕವಾಗಿ ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಾಗುತ್ತಿದ್ದಂತೆ ಠಾಣೆಯಿಂದ ಹೊರ ಬಂದ ಗಾಳೆಪ್ಪ ತಮ್ಮ ಡಿಎಸ್ಎಸ್ ಸಂಘಟನೆಗಳ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ವಿಷಯ ತಿಳಿಸಿ ಮತ್ತು ಸಾಮಾಜಿಕ ತಾಣಗಳಲ್ಲಿ ವಿಡಿಯೋ ಮೂಲಕ ಪಿಎಸ್ಐ ನಡೆದುಕೊಂಡ ರೀತಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ತಕ್ಷಣ ಜಿಲ್ಲೆಯ ವಿವಿಧ ದಲಿತ ಮತ್ತು ಮಾದಿಗ ಸಮಾಜದ ಮುಖಂಡರು ಕುಕನೂರ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿ ಹಲ್ಲೆಯನ್ನು ಖಂಡಿಸಿದ್ದಾರಲ್ಲದೇ ಪಿಎಸ್ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಯಲಬುರ್ಗಾ ಸಿಪಿಐ ಎಸ್ಪಿಗೆ ಘಟನೆಯ ಮಾಹಿತಿ ರವಾನಿಸಿ ವರದಿ ಸಲ್ಲಿಸಿದ್ದಾರೆ. ದಲಿತ ಸಂಘಟನೆಯ ಮುಖಂಡರ ಆಕ್ರೋಶವನ್ನು ಅರಿತ ಎಸ್ಪಿ ಘಟನೆ ಜಿಲ್ಲೆಯಾದ್ಯಂತ ವಾತಾವರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಮುಂಚೆ ರಾತ್ರಿ ಪಿಎಸ್ಐ ಗುರುರಾಜ ಅವರನ್ನು ಅಮಾನತು ಮಾಡಿ ಆದೇಶಿಸಿ ಪ್ರತಿಭಟನೆಕಾರರನ್ನು ಸಮಾಧಾನಗೊಳಿಸಿದ್ದಾರೆ. ತಮ್ಮ ಪ್ರತಿಭಟನೆಗೆ ಸ್ಪಂದಿಸಿ ತಪ್ಪಿತಸ್ಥ ಪಿಎಸ್ಐ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದಕ್ಕೆ ದಲಿತ ಸಂಘಟನೆ ಮುಖಂಡರು ಎಸ್ಪಿಗೆ ಅಭಿನಂದಿಸಿದ್ದಾರೆ.
ಬಾಕ್ಸ್:
ಪಿಎಸ್ಐ ಗುರುರಾಜ್ ಧರ್ಪ ಮಾಡಿದ್ದಾರೆ
ನಮ್ಮ ಸಮಾಜದ ಹಾಗೂ ದಲಿತ ಸಂಘಟನೆ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಗಾಳೇಪ್ಪ ಹಿರೇಮನಿ ಅವರು ತಮ್ಮ ಗ್ರಾಮದ ದಂಪತಿಗಳ ವಿವಾದ ಕುರಿತು ವಿಚಾರಿಸಲು ಕುಕನೂರು ಠಾಣೆಗೆ ಬಂದಾಗ ಅಲ್ಲಿನ ಪಿಎಸ್ಐ ಗುರುರಾಜ ಶಾಂತತೆಯಿಂದ ವಿಷಯ ಸ್ಪಷ್ಟಪಡಿಸುವ ಬದಲು ಗಾಳೆಪ್ಪ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಮ್ಮ ಧರ್ಪ ತೋರಿದ್ದಾರೆ. ಠಾಣೆಯಲ್ಲೇ ಗಾಳೆಪ್ಪ ಮೇಲೆ ಹಲ್ಲೆ ಮಾಡುವಂತಹ ಮನಸ್ಥಿತಿ ಬಂದಿರುವುದು ಖಂಡನೀಯವಾಗಿದೆ. ಪಿಎಸ್ಐ ವರ್ತನೆಯನ್ನು ನಾವು ಖಂಡಿಸಿದ್ದರಿಂದ ಎಸ್ಪಿ ಅವರು ನಿಜ ಸಂಗತಿಯನ್ನು ಪರಿಶೀಲಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ. ದಲಿತ ಮುಖಂಡರ ಮೇಲೆ ಈ ರೀತಿ ವರ್ತಿಸಿರುವ ಪಿಎಸ್ಐ ಸಾಮಾನ್ಯ ಜನರು ಠಾಣೆಗೆ ಬಂದಾಗ ಯಾವ ರೀತಿ ವರ್ತಿಸಬಹುದು. ಪಿಎಸ್ಐ ವರ್ತನೆಗೆ ಸಾಮಾನ್ಯ ಜನರು ಭಯಭೀತರಾಗಿದ್ದಾರೆ. ಇಂತಹ ಅಧಿಕಾರಿಗಳನ್ನು ಕೇವಲ ಅಮಾನತ್ ಅಲ್ಲ ಡಿಸ್ಮಿಸ್ ಮಾಡಬೇಕು.
ಮಲ್ಲು ಪೂಜಾರ್ ದಲಿತ ಸಂಘಟನೆ ಮುಖಂಡ, ಕೊಪ್ಪಳ.

8th October 2025
ಗಂಗಾವತಿ.
ನಗರದ ಬಿಜೆಪಿ ಯುವ ಮೊರ್ಚಾ ನಗರ ಅಧ್ಯಕ್ಷ ಕೆ. ವೆಂಕಟೇಶ ಎಂಬ ಯುವಕನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕಳೆದ ದಿನ ಮಧ್ಯರಾತ್ರಿ ನಗರದ ರಾಯಚೂರು ರಸ್ತೆಯ ರಿಲೈನ್ಸ್ ಮಾರ್ಟ್ ಹತ್ತಿರ ಘಟನೆ ನಡೆದಿದೆ. ರಾತ್ರಿ 1.ಗಂಟೆ ಸುಮಾರಿಗೆ ಬೈಕ್ ಹೊರಟಿದ್ದ ಸಮಯದಲ್ಲಿ ಮನಾಲ್ಕೈದು ಯುವಕರ ತಂಡ ಬಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ಗೊತ್ತಾಗಿಲ್ಲ. ಮತ್ತು ಕೊಲೆ ಮಾಡಿದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ರಾತ್ರಿ ಎಸ್.ಪಿ. ಡಾ.ರಾಮ ಅರಸಿದ್ದಿ ಗಂಗಾವತಿಯಲ್ಲೆ ಬಿಡುಬಿಟ್ಟಿದ್ದು ಕೊಲೆ ಮಾಡಿದ ದುಷ್ಕರ್ಮಿಗಳ ಪತ್ತೆಗೆ ಬಲೆ ಬಿಸಿದ್ದಾರೆ. ಘಟನೆಗೆ ಗಂಗಾವತಿ ಜನತೆ ಬೆಚ್ಚಿಬಿದ್ದಿದ್ದು, ಗಂಭಿರ ಪರಿಸ್ಥಿತಿ ನಿರ್ಮಾಣವಾಗಿದೆ.

6th October 2025
ಕೊಪ್ಪಳ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಲೋಕಸಭೆ ಕ್ಷೇತ್ರದ ಸಂಸದ ರಾಜಶೇಖರ ಹಿಟ್ನಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಯಲಬುರ್ಗಾ ಕ್ಷೇತ್ರದ ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಗೆದ್ದ ಕಾಂಗ್ರೆಸ್ ಜನಪ್ರತಿನಿಧಿಗಳು ಮೋಸಗಾರರು. ಕಾಂಗ್ರೆಸ್ ಹೈಕಮಾಂಡ್ ಮುಂದೆ ರೀಲ್ ಬಿಡುವ ಮೂಲಕ ಜನತೆಗೆ ಮತ್ತು ನನಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗುಡುಗಿದ್ದು, ಮುಖ್ಯಮಂತ್ರಿ ಬರುವ ದಿನದಂದೆ ಆಡಿಯೋ ಮೂಲಕ ಜಿಲ್ಲೆಯ ಜನತೆಗೆ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳ ಬಣ್ಣ ಬಯಲು ಮಾಡಿದ್ದಾರೆ.
ಜಿಲ್ಲೆಯ ರೂ.೨೦೦೦ ಕೋಟಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸುತ್ತಿರುವ ಬೆನ್ನೆಲ್ಲೆ ಜಿಲ್ಲೆಯ ಕಾಂಗ್ರೆಸ್ ಹಿಡಿತ ಹೊಂದಿರುವ ತಂಗಡಗಿ, ಹಿಟ್ನಾಳ್ ಕುಟುಂಬ ಮತ್ತು ರಾಯರೆಡ್ಡಿ ವಿರುದ್ಧ ಅನ್ಸಾರಿ ಧ್ವನಿ ಎತ್ತುವ ಮೂಲಕ ಆಡಿಯೋ ಮೂಲಕ ತಮ್ಮ ಮುಸ್ಲಿಂ ಸಮಾಜಕ್ಕೆ ಮತ್ತು ಬೆಂಬಲಿಗರಿಗೆ ಆಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.
ಹಿಟ್ನಾಳ್ ಕುಟುಂಬದ ಸಂಸದರು, ಶಾಸಕರು, ಕನಕಗಿರಿ ಕ್ಷೇತ್ರದಿಂದ ಗೆದ್ದು ಸಚಿವರಾಗಿರುವ ತಂಗಡಗಿ, ಮತ್ತು ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅವರು ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಹೈಕಮಾಂಡ್ಗೆ ಜಿಲ್ಲೆಯಲ್ಲಿ ನಡೆಯುವ ಸತ್ಯ ಸಂಗತಿಗಳನ್ನು ಮರೆ ಮಾಚಿ ಸುಳ್ಳಿನ ರೀಲ್ ಬಿಡುತ್ತಿದ್ದಾರೆ ಎಂದು ಅನ್ಸಾರಿ ಬಾಂಬ್ ಹಾಕಿರುವುದು ಕಾಂಗ್ರೆಸ್ ವಲಯದಲ್ಲಿ ಭಾರಿ ಸಂಚಲನ ಮೂಡಿದೆ. ತಮ್ಮ ಬೆಂಬಲಿಗ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಕೊಪ್ಪಳ ಜಿಲ್ಲೆಯ ಜನತೆಯನ್ನು ಉದ್ದೇಶಿಸಿ ಇಕ್ಬಾಲ್ ಅನ್ಸಾರಿ ಅ.೫ ರಂದು ಆಡಿಯೋ ಸಂದೇಶ ರವಾನಿಸಿದ್ದು, ಅ.೬ ರಂದು ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬರುತ್ತಿರುವ ಮುಖ್ಯಮಂತ್ರಿಗಳ ಸಾಧನ ಸಮಾವೇಶಕ್ಕೆ ಪ್ರತಿಯೊಂದು ಗ್ರಾಮದ ಫಲಾನುಭವಿಗಳನ್ನು ನಮ್ಮ ಬೆಂಬಲಿಗ ಕಾರ್ಯಕರ್ತರು ಕರೆದುಕೊಂಡು ಹೋಗಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಅತ್ಯುತ್ತಮ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಐದು ಗ್ಯಾರಂಟಿ ಗಿನ್ನಿಸ್ ದಾಖಲೆಯಾಗಿದೆ ಇದನ್ನು ನಾವೆಲ್ಲರು ತುಂಬು ಹೃದಯದಿಂದ ಸ್ವಾಗತಿಸಿ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ ಕೊಪ್ಪಳ ಜಿಲ್ಲೆಯ ಸಚಿವ, ಸಂಸದ, ಶಾಸಕ ಮತ್ತು ಆರ್ಥಿಕ ಸಲಹೆಗಾರ ಮಾಡಿರುವ ಮೋಸವನ್ನು ಸಹಿಸುವುದಿಲ್ಲ. ಅವರು ನನ್ನ ಬಗ್ಗೆ ಮುಖ್ಯಮಂತ್ರಿ ಬಳಿ ಸುಳ್ಳಿನ ಕಂತೆ ಹೆಣೆಯುತ್ತಿದ್ದಾರೆ. ಸಂಸದ ರಾಜಶೇಖರ ಹಿಟ್ನಾಳ್ ಪರ ಚುನಾವಣೆಯಲ್ಲಿ ಕೆಲಸ ಮಾಡುವ ಮನಸ್ಸು ನನಗೆ ಇದ್ದಿಲ್ಲ. ಆದರೆ ಮುಖ್ಯಮಂತ್ರಿಯವರ ಮಾತಿಗೆ ನಾನು ಬೆಲೆ ಕೊಟ್ಟು ಗಂಗಾವತಿಯಲ್ಲಿ ೧೬ ಸಾವಿರ ಮತಗಳ ಲೀಡ್ ಆಗುವಂತೆ ಕೆಲಸ ಮಾಡಿದ್ದಾರೆ. ಆದರೆ ಗೆದ್ದ ನಂತರ ಹಿಟ್ನಾಳ್ ಸಹೋದರರು, ಇವರೊಂದಿಗೆ ಸಚಿವ ಹಾಗೂ ರಾಯರೆಡ್ಡಿ ಸಿಎಂ ಮುಂದೆ ನನ್ನ ವಿರುದ್ಧ ಕ್ಯಾಸೆಟ್ ಹಾಕುತ್ತಾರೆ. ಗಂಗಾವತಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿಗೆ ಬೆಂಬಲಿಸಿ ನನ್ನ ವಿರುದ್ಧ ಮಸಲತ್ತು ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಇವರ ಕುತುಂತ್ರದ ಬಣ್ಣ ಬಯಲು ಮಾಡಲು ನಾನು ಸಿದ್ಧನಿದ್ದೇನೆ. ಮುಂದಿನ ದಿನಗಳಲ್ಲಿ ಕೇಲವ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅಲ್ಲ ರಾಜ್ಯಾದ್ಯಂತ ನಮ್ಮ ಬೆಂಬಲಿಗರು ಮತ್ತು ಮುಸ್ಲಿಂ ಸಮಾಜಕ್ಕೆ ಹಿಟ್ನಾಳ್ ಕುಟುಂಬ, ತಂಗಡಗಿ ಮತ್ತು ರಾಯರೆಡ್ಡಿ ಮಾಡಿರುವ ಮೋಸವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಇಂದು ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಜನತೆ ಮತ್ತು ಫಲಾನನುಭವಿಗಳು ಹೋಗಿಬನ್ನಿ. ಆದರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ನಂಬಬೇಡಿ. ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಯಾವತ್ತು ನಂಬಬೇಡಿ ಎಂದು ಸಚಿವ ತಂಗಡಗಿ, ಸಂಸದ, ಶಾಸಕ ಹಿಟ್ನಾಳ್ ಸಹೋದರರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ ವಿರುದ್ಧ ಏಕ ವಚನದಲ್ಲಿ ಅನ್ಸಾರಿ ಆಕ್ರೊಶ ಹೊರ ಹಾಕಿರುವುದು ಇಂದು ಕೊಪ್ಪಳದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಾಗಿದೆ.
ಬಾಕ್ಸ್:
ಸಿಎಂ ಕಾರ್ಯಕ್ರಮಕ್ಕೆ ಹೋಗಿ ಬನ್ನಿ
ಆದರೆ ಕಾಂಗ್ರೆಸ್ ಮುಖಂಡರನ್ನು ನಂಬಬೇಡಿ
ಇಂದು ಕೊಪ್ಪಳದಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ನನ್ನ ಬೆಂಬಲಿಗ ಕಾರ್ಯಕರ್ತರು ಹೋಗಿ ಬನ್ನಿ. ಆದರೆ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಸದ, ಶಾಸಕ, ಸಚಿವ ಹಾಗೂ ಸಿಎಂ ಆರ್ಥಿಕ ಸಲಹೆಗಾರನನ್ನು ನಂಬಬೇಡಿ. ಅವರೆಲ್ಲರೂ ಮೋಸಗಾರರು. ನನಗೆ ನೇರವಾಗಿ ಇವರೆಲ್ಲರೂ ಸೇರಿ ಮೋಸ ಮಾಡಿದ್ದಾರೆ. ಮತ್ತು ಇಂದಿನ ಕಾರ್ಯಕ್ರಮಕ್ಕೆ ನನಗೆ ಮಾಹಿತಿ ನೀಡಿಲ್ಲ.
ಇಕ್ಬಾಲ್ ಅನ್ಸಾರಿ, ಮಾಜಿ ಸಚಿವ, ಗಂಗಾವತಿ.

3rd October 2025
ಕೊಪ್ಪಳ
2015 ರಲ್ಲಿ ರಾಜ್ಯಾದಾದ್ಯಂತ ಸದ್ದು ಮಾಡಿದ್ದ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ವ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಸಚಿವ ಶಿವರಾಜ ತಂಗಡಗಿ ಬೆಂಬಲಿತ ಮಾಜಿ ಜಿಪಂ ಸದಸ್ಯ ಹನುಮೇಶ ನಾಯಕ ಸೇರು 9 ಆರೋಪಿಗಳು ನಿರ್ದೂಷಿ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.
ಸದ್ಯ 10 ವರ್ಷ 8 ತಿಂಗಳ ಸುದಿರ್ಘ ವಿಚಾರಣೆಯ ಬಳಿಕ, ಹನುಮೇಶ ನಾಯಕ ಸೇರಿ 9 ಜನರು ನಿರ್ದೂಷಿ ಎಂದು ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆದೇಶ ಹೊರಡಿಸಿ, ಪ್ರಕರಣ ಖುಲಾಸೆ ಗೊಳಿಸಿದ್ದಾರೆ. ಆದೇಶದ ಬಳಿಕ ಪ್ರಕರಣದ ವಕಾಲತ್ತು ವಹಿಸಿಕೊಂಡಿದ್ದ ವಕೀಲ ಗಂಗಾಧರ ಮಾದ್ಯಮಗಳಿಗೆ ಮಾಹಿತಿ ನೀಡಿದ್ದು, ರಾಜಕಿದ ದುರುದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು, ಈ ಹಿನ್ನೆಲೆ ಸಾಕ್ಷಾಧಾರಗಳ ಕೊರತೆಯ ಹಿನ್ನೆಲೆ ಕೇಸ್ ಖುಲಾಸೆಯಾಗಿದೆ ಎಂದು ತಿಳಿಸಿದ್ದಾರೆ...
2015 ಜನೆವರಿ 11 ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಕನಕಾಪುರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗನ ಶವ ಪತ್ತೆಯಾಗಿತ್ತು, ಈ ಕೊಲೆಯ ಆರೋಪವನ್ನ ಕಾಂಗ್ರೆಸ್ ಮುಖಂಡ, ಸಚಿವ ಶಿವರಾಜ ತಂಗಡಗಿ ಬೆಂಬಲಿಗ ಹನುಮೇಶ ನಾಯಕ ಕುಟುಂಬ ಹಾಗೂ ಅವರ ಬೆಂಬಲಿಗರ ಮೇಲೆ ಹಾಕಲಾಗಿತ್ತು, ವಿದ್ಯಾರ್ಥಿ ಯಲ್ಲಾಲಿಂಗ ಕೊಲೆಯಾಗೊ ಮುಂಚೆ ಗ್ರಾಮದ ಅವ್ಯವಸ್ಥೆಯ ಬಗ್ಗೆ ಸರ್ಕಾರದ ವಿರುದ್ದ ಮಾತನಾಡಿದ್ದ, ಅಸಮಾಧಾನ ಹೊರಹಾಕಿದ್ದ, ಇದಾದ ಬಳಿಕ ಕೆಲವು ದಿನಗಳ ನಂತರ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿತ್ತು, ಸಚಿವ ಶಿವರಾಜ ತಂಗಡಗಿ ಬೆಂಬಲಿಗ ಹನುಮೇಶ ನಾಯಕ ಕುಟುಂಭದವರು ಹಾಗೂ ಬೆಂಬಲಿಗರೂ ಕೊಲೆ ಮಾಡಿದ ಆರೋಪ ಎದುರಿಸಿದ್ದರು, ಅಷ್ಟೆ ಅಲ್ಲದೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಬಳಿಕ, ಸಿಐಡಿ ತನಿಖೆಗೆ ಒತ್ತಾಯಿಸಿ ಕೊಪ್ಪಳದಿಂದ ಕನಕಗಿರಿ ಯಿಂದ ಕನಕಾಪುರ ಗ್ರಾಮದ ವರೆಗೆ ಬಿಜೆಪಿ ನಾಯಕರಾದ, ಮಾಜಿ ಸಿ ಎಂ ಯಡಿಯೂರಪ್ಪ, ಮಾಜಿ ಡಿ ಎಂ ಕೆ ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಶ್ರೀರಾಮುಲು ಸೇರಿ ರಾಜ್ಯ ಬಿಜೆಪಿ ನಾಯಕರು ಪಾದಯಾತ್ರೆ ನಡೆಸಿ, ಸಿಐಡಿ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ರು, ಇದಾದ ಬಳಿಕ ಸಚಿವ ಸಂಪುಟ ವಿಸ್ತರಣೆಯ ವೇಳೆ ಸಚಿವ ಶಿವರಾಜ ತಂಗಡಗಿ ಸಚಿವ ಸ್ಥಾನ ಕಳೆದುಕೊಳ್ಳುವಲ್ಲಿ ಯಲ್ಲಾಲಿಂಗ ಕೊಲೆ ಪ್ರಕರಣ ಸದ್ದು ಮಾಡಿತ್ತು,
ಕೆಸ್ ಖುಲಾಸೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಹನುಮೇಶ ನಾಯಕ ಮತ್ತು ಸಹೊದರ ರಮೇಶ ನಾಯಕ ಮಾತನಾಡಿ, ನಮ್ಮ ಕುಟುಂಭದ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದರು. ಯಲ್ಲಾಲಿಂಗ ಕೊಲೆ ಕೇಸ್ ನಲ್ಲಿ ನಮ್ಮ ಯಾವುದೆ ಪಾತ್ರವಿಲ್ಲ, ಕೊನೆಗೂ ನ್ಯಾಯ ನಮ್ಮ ಪರವಾಗಿದೆ ಎಂದರು.

22nd September 2025
ಕೊಪ್ಪಳ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರಾಗಿ ಪರಶುರಾಮ್ ಕೆರೆಹಳ್ಳಿ ನೇಮಕಗೊಂಡಿದ್ದಾರೆ.
ನಗರದ ಕಾಂಗ್ರೆಸ್ ನ ಕಚೇರಿಯಲ್ಲಿ ನಡೆದ ಎಸ್ ಸಿ ಘಟಕದ ರಾಜ್ಯ ಕಮಿಟಿ ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಪರಶುರಾಮ್ ಕೆರೆಹಳ್ಳಿ ಅವರು ನೇಮಕ ಗೊಂಡಿದ್ದಾರೆ.
ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹಾಗೂ ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಆರ್.ಧರ್ಮಸೇನ್ ಅವರ ಆದೇಶ ಮೇರೆರೆ ಹಾಗೂ ಎಸ್ ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಹೆಚ್. ಪೂಜಾರ್ ಅವರು ಸಚಿವ ಶಿವರಾಜ್ ಎಸ್ ತಂಗಡಗಿ, ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಕೆ.ರಾಘವೇಂದ್ರ ಹಿಟ್ನಾಳ್ ಅವರ ಸೂಚನೆಯಂತೆ ನೇಮಕಾತಿ ಆದೇಶದ ಪತ್ರ ನೀಡಲಾಯಿತು.
ಪರಶುರಾಮ್ ಕೆರೆಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದಲೂ ನಿರಂತರವಾಗಿ ಪಕ್ಷದ ಸಂಘಟನೆ,ಬಲವರ್ಧನೆಗಾಗಿ ಶ್ರಮಿಸಿದ್ದು, ಒಬ್ಬ ನಿಷ್ಠಾವಂತ ಪ್ರಾಮಾಣಿಕ, ಕಾಂಗ್ರೆಸ್ ಕಾರ್ಯಕರ್ತನಾಗಿ, ಸಕ್ರಿಯವಾಗಿ ಪಕ್ಷದಲ್ಲಿ ತೊಡಸಿಕೊಂಡು, ಕಾಂಗ್ರೆಸ್ ಪಕ್ಷವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಪಕ್ಷ ಸಂಘಟನೆಯಲ್ಲಿ ಭಾಗವಹಿಸಿ ಪಕ್ಷ ಕಟ್ಟಲು ಶ್ರಮಿಸಿದ್ದಾರೆ. ಕೊಪ್ಪಳ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿ ಹಳ್ಳಿ, ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ .ಅವರ ಸಂಘಟನಾ ಸಾಮರ್ಥ್ಯವನ್ನು ಅರಿತು ಪಕ್ಷದ ಮುಖಂಡರು ಈ ಹುದ್ದೆ ನೀಡಿದ್ದಾರೆ. ಆದೇಶ ಪತ್ರಪಡೆದ ಕೆರೆಹಳ್ಳಿ ಪಕ್ಷದ ಸಂಘಟನೆ ಬಲಗೊಳಿಸುವುದಾಗಿ ಹೇಳಿ ಮುಖಂಡರು, ಕಾರ್ಯಕರ್ತರಿಗೆ ಅಭಿನಂದಿಸಿದರು.
ಸಭೆಯಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್ , ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗೂಳಪ್ಪ ಹಲಗೇರಿ, ಎಸ್ ಸಿ ಘಟಕದ ರಾಜ್ಯ ಉಪಾಧ್ಯಕ್ಷ ಕನ್ನಿರಾಮ್ ರಾಥೋಡ್ ಗುಲ್ಬರ್ಗಾ, ಕೆಪಿಸಿಸಿ ರಾಜ್ಯ ಸಂಚಾಲಕ ನಾಗರಾಜ್ ನಾಯಕ್ ಚೆನ್ನಗಿರಿ , ಕೆಪಿಸಿಸಿ ಸಂಚಾಲಕ ಕಾಳಯ್ಯ ಮೈಸೂರ, ಎಸ್ ಸಿ ರಾಜ್ಯ ಕಮಿಟಿ ಸದಸ್ಯ, ಶುಕ್ರರಾಜ್ ತಾಳಕೇರಿ, ದೇವೇಂದ್ರಪ್ಪ ಎಚ್ ಪೂಜಾರ್ ದದೆಗಲ್, ಶರಣಮ್ಮ ಯಲಬುರ್ಗಾ, ಜಿಲ್ಲಾ ಉಪಾಧ್ಯಕ್ಷರಾದ ತಿಪ್ಪಣ್ಣ ಚಲವಾದಿ ಮ್ಯಾಗೇರಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ ಸಿಂದೋಗಿ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಮೂಲಿಮನಿ ಮೋಚಿ, ಬಸವರಾಜ ಬೇವಿನಕಟ್ಟಿ ಕುಷ್ಟಗಿ, ರಮೇಶ ಚಲವಾದಿ ಯಲಬುರ್ಗಾ, ಎಲ್ಲಾ ಎಸ್ ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ, ಈಶಪ್ಪ ಕೂಕನೂರು, ಚಂದ್ರು ಕುಷ್ಟಗಿ, ಶಿವಾನಂದ್ ಬಣಕಾರ್ ಯಲಬುರ್ಗಾ, ಶಾಂತಪ್ಪ ಬಸರಿಗಿಡ ಕನಕಗಿರಿ, ಮಾಂತೇಶ ವಡ್ಡರ್ ಹನುಮಸಾಗರ, ಶಿವಕುಮಾರ್ ಇಳಿಗಿನೂರು ಕಾರಟಗಿ, ಯಮನೂರಪ್ಪ ದನಕನದೊಡ್ಡಿ ಗಂಗಾವತಿ, ಲಲಿತ್ ಕುಮಾರ ಮ್ಯಾಗೇರಿ ಚಲವಾದಿ ಕೊಪ್ಪಳ , ಕಳಕೇಶ ಸೂಡಿ ಯಲಬುರ್ಗಾ, ಪಾಮಣ್ಣ ಕನಕಗಿರಿ, ಮಲ್ಲೇಶ್ ದೇವರಮನಿ ಗಂಗಾವತಿ ಮತ್ತಿತರು.

22nd September 2025
ಕೊಪ್ಪಳ.
ಅಧಿಕಾರಕ್ಕೆ ಬಂದು ಎರಡು ವರೆ ವರ್ಷವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಅನವಶ್ಯಕವಾದ ಯೋಜನೆಗಳನ್ನು ತಂದು ಆರ್ಥಿಕ ದಿವಾಳಯಾಗಿದೆ. ಎರಡುವರೆ ವರ್ಷ ಪೂರ್ಣಗೊಂಡರು ಯಾವುದೇ ಕ್ಷೇತ್ರದಲ್ಲೂ ಒಂದು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅವೈಜ್ಞಾನಿಕವಾದ ಜಾತಿ ಸಮೀಕ್ಷೆ ಮಾಡಲು ಹೊರಟಿದೆ. ಇದು ಎಷ್ಟರ ಮಟ್ಟಿಗೆ ಲಾಭವಾಗುತ್ತದೆ ಎಂಬುದು ಸ್ವತಃ ಸರಕಾರಕ್ಕೆ ಮಾಹಿತಿ ಇಲ್ಲ. ಸರಕಾರೆ ಕೆಲವ ಸಚಿವರು ಕೂಡಾ ಇದನ್ನು ವಿರೋಧಿಸಿದ್ದಾರೆ. ಆದರೆ ಸಮಾಜಗಳನ್ನು ಒಡೆಯುವ ಛಾಳಿ ಇರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರತಿಷ್ಟೆಗಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೆಸರಿನಲ್ಲಿ ಜಾತಿಗಳ ಸಮೀಕ್ಷೆ ಮಾಡಲು ಹೊರಟಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರಕಾರದ ನಡೆಯನ್ನು ಆರೋಪಿಸಿರುವ ಮಾಜಿ ಸಚಿವ ಬಿಜೆಪಿ ಹಿರಿಯ ಮುಖಂಡ ಹಾಲಪ್ಪ ಆಚಾರ ಸಮೀಕ್ಷೆಗೆ ಬಂದಾಗ ಪ್ರತಿಯೊಂದು ಜಾತಿಯವರು ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು ಎಂದು ಕರೆ ನೀಡಿದರು.
ಸೋಮವಾರ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದಿಂದ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರ ಈ ವರ್ಷ ಜನಗಣತಿ ಪ್ರಾರಂಭಿಸಲಿದ್ದು, ಅದರಲ್ಲಿ ಜಾತಿ ಗಣತಿಯನ್ನು ನಡೆಸುವುದಾಗಿ ಸ್ಪಷ್ಟಪಡಿಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಈಗ ಏಕಾ ಏಕಿ ಜಾತಿ ಸಮೀಕ್ಷೆಗೆ ಮುಂದಾಗಿದ್ದು, ಹದಿನೈದು ದಿನಗಳಲ್ಲಿ ಏಳು ಕೋಟಿ ಜನರ ಮಾಹಿತಿ ಸಂಗ್ರಹಿಸಲು ಹೇಗೆ ಸಾಧ್ಯ ಎಂಬ ಪರಿಜ್ಞಾನ ಇಲ್ಲ. ೨೦೧೩ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ವೀರಶೈವ ಲಿಂಗಾಯತರನ್ನು ಇಬ್ಭಾಗ ಮಾಡಲು ಮುಂದಾಗಿದ್ದರು. ಈಗ ರಾಜ್ಯದಲ್ಲಿ ಹಿಂದೂ ಸಮಾಜವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಎಂದು ಹೇಳುವ ಸಿಎಂ ಮತ್ತು ಸಚಿವರು ಹಿಂದುಳಿದ ಆಯೋಗದ ಮೂಲಕ ಧರ್ಮ, ಜಾತಿಗಳ ಪಟ್ಟಿ ಮಾಡಿ ಹೊರಗೆ ಬಿಡುತ್ತಿದೆ. ಇಲ್ಲದ ಉಸಾಬರಿಗೆ ಹೊರಟಿರುವ ಸರಕಾರ ಹಿಂದೂ ಸಮಾಜದಲ್ಲಿ ಜಾತಿಗಳನ್ನು ಕ್ರಿಶ್ಚಯನ್ ಧರ್ಮಕ್ಕೆ ಸೇರಿಸಲು ಷಡ್ಯಂತರ ಮಾಡುತ್ತಿದೆ. ಇದನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಮತ್ತು ರಾಜ್ಯದ ಜನರು ಸರಕಾರ ಛಾಟಿ ಬೀಸಿರುವ ಪರಿಣಾಮ ಈಗ ಕ್ರಿಶ್ಚಿಯನ್ನ ಧರ್ಮಗಳಲ್ಲಿ ಹಿಂದೂ ಜಾತಿಗಳ ಪಟ್ಟಿಯನ್ನು ಕೈಬಿಟ್ಟಿರುವುದಾಗಿ ತಿಳಿಸಿದೆ. ಸರಕಾರ ಸಮೀಕ್ಷೆ ಪ್ರಾರಂಭಿಸುವ ಮೊದಲು ಅದರಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂದು ಹಾಲಪ್ಪ ಒತ್ತಾಯಿಸಿದರು.
ಮುಂದುವರೆದು ಮಾತನಾಡಿದ ಅವರು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಎನು ಹೇಳಿಕೆ ನೀಡುತ್ತಾರೆ ಎಂಬುದೇ ಅವರಿಗೆ ಗೊತ್ತಿರಲ್ಲ. ಲಿಂಗಾಯತ ಧರ್ಮ ಎಂದು ಹೇಳುವ ಅವರ ಶೈಕ್ಷಣಿಕ ಪ್ರಮಾಣ ಪತ್ರದಲ್ಲಿ ಎನು ಇದೆ ಎಂದು ಪರಿಶೀಲಿಸಲಿ. ಒಟ್ಟಾರೆಯಾಗಿ ಜಾತಿ ಸಮೀಕ್ಷೆಯಲ್ಲಿ ಇವರು ಕೂಡಾ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ರೆಡ್ಡಿ ಎಂದು ನಮ್ಮ ರೆಡ್ಡಿ ಸಮುದಾಯ ತಿಳಿಸಿದೆ. ಇದನ್ನು ಎಲ್ಲರು ಒಪ್ಪಿದ್ದಾರೆ. ಆದರೆ ರಾಯರೆಡ್ಡಿ ಇದಕ್ಕೆ ತದ್ವಿರುದ್ಧವಾಗಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ರೂ.೧೭೫೦ ಕೋಟಿ ಅನುದಾನ ತಂದು ಶೇ.೯೦ ರಷ್ಟು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಟಾನ ಮಾಡಿದ್ದೆ. ಕೇವಲ ಶೇ.೧೦ ರಷ್ಟು ಉಳಿದಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಿ ತಾನು ಮಾಡಿದ್ದೇನೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಕೆಲವೊಂದು ಕಟ್ಟಡಗಳನ್ನು ಅಭಿವೃದ್ಧಿಯಲ್ಲಿ ದೇಶದಲ್ಲೇ ತಾವು ಮುಂಚೂಣಿಯಲ್ಲಿದ್ದೇನೆ ಎಂದು ಸ್ವಯಂ ಘೊಷಣೆ ಮಾಡಿಕೊಳ್ಳುತ್ತಿದ್ದಾರೆ. ಅವರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ಕ್ಷೇತ್ರದ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದ ಅವರು ಪ್ರಧಾನಿ ಮೋದಿ ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ ದೇಶದ ಜನರಿಗೆ ಆರ್ಥಿಕ ಹೊರೆ ತಗ್ಗಿಸುವಂತಹ ಮಹತ್ತರವಾದ ಹೆಜ್ಜೆ ಇಟ್ಟಿದ್ದು, ಜಿಎಸ್ಟಿ ಕಡಿತಗೊಳಿಸುವ ಮೂಲಕ ಅಭೂತಪೂರ್ವ ಕಾರ್ಯ ಮಾಡಿದ್ದಾರೆ. ಜನರು ಬಳಸುವ ವಸ್ತುಗಳ ಬೆಲೆ ದಿಡೀರ್ ಕಡಿಮೆಯಾಗುತ್ತಿದ್ದು, ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಕೇಂದ್ರ ಸರಕಾರದ ಜಿಎಸ್ಟಿ ಕಡಿತದ ಕಾರ್ಯವನ್ನು ಶ್ಲಾಘಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಮಾತನಾಡಿ, ಹಿಂದುಳಿದ ವರ್ಗದ ಇಲಾಖೆಯ ಮತ್ತು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಹಾಸ್ಟೇಲ್ ಮಕ್ಕಳ ಯೋಜನೆಯಲ್ಲೂ ಕಮಿಷನ್ ಪಡೆಯುತ್ತಿದ್ದಾರೆ. ಸ್ವತಃ ತಮ್ಮ ಕನಕಗಿರಿ ಕ್ಷೇತ್ರದಲ್ಲಿ ಕಳಪೆ ರಸ್ತೆ ಕಾಮಗಾರಿ ಮಾಡಿ ಅನುದಾನ ದುರುಪೋಗಪಡಿಸಿಕೊಂಡಿರುವುದು ಕ್ಷೇತ್ರದ ಜನರೇ ಬಹಿರಂಗಪಡಿಸಿದ್ದಾರೆ. ನಮ್ಮ ಅವಧಿಯಲ್ಲಿನ ರೂ.೨೦೦ ಕೋಟಿ ಕಾಮಗಾರಿಗಳನ್ನು ತಾವು ಮಾಡಿರುವುದಾಗಿ ಹೇಳಿಕೊಂಡು ಮುಖ್ಯಮಂತ್ರಿಗಳಿಂದ ಅವುಗಳನ್ನು ಉದ್ಘಾಟನೆ ಮಾಡಲು ಹೊರಟಿದ್ದಾರೆ. ಕನಕಗಿರಿ ಕ್ಷೇತ್ರದ ರಸ್ತೆಗಳಷ್ಟೇ ಅಲ್ಲ ಜಿಲ್ಲೆಯ ಎಲ್ಲಾ ಕ್ಷೇತ್ರದ ರಸ್ತೆಗಳು ಹಾಳಾಗಿದ್ದು, ಜನರು ಶಾಪ್ ಹಾಕುತ್ತಿದ್ದಾರೆ. ಬಲ್ಡೋಟಾ ಕಾರ್ಖಾನೆ ಬಂದ್ ಮಾಡಿಸುವುದಾಗಿ ಜಿಲ್ಲೆಯ ಮುಖಂಡರ ನಿಯೋಗವನ್ನು ಕರೆದುಕೊಂಡು ಸಿಎಂ ಅವರ ಮುಂದೆ ನಿಂತರು. ಆದರೆ ಈಗ ಅದೇ ಕಾರ್ಖಾನೆಯಲ್ಲಿ ಕಮಿಷನ್ ವಸೂಲಿ ಮಾಡಿ ಪರಿಸರ ಕಾಳಜಿ ಹೊಂದಿರುವ ಗವಿಸಿದ್ದೇಶ್ವರ ಸ್ವಾಮಿಗಳನ್ನು ಮತ್ತು ಬಿಜೆಪಿ ಮುಖಂಡರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ನೇರವಾಗಿ ದಢೇಸೂಗೂರು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಜಿಎಸ್ಟಿ ಕಡಿತ ದೇಶಕ್ಕೆ ವರದಾನವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಜನರೊಂದಿಗೆ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಬಲ್ಡೋಟಾ ಕಾರ್ಖಾನೆ ಬಂದ್ ಮಾಡಿಸುವ ವಿಷಯದಲ್ಲಿ ಕಾಂಗ್ರೆಸ್ ಸರಕಾರದ ನಿಲುವು ಸರಿಯಿಲ್ಲ. ಸಿಎಂ ಒಂದು ಹೇಳಿಕದರೆ ಕೈಗಾರಿಕೆ ಸಚಿವರು ಒಂದು ಹೇಳುತ್ತಿದ್ದಾರೆ ಎಂದು ಗುಡುಗಿದರು.
ಗೋಷ್ಟಿಯಲ್ಲಿ ಮಾಜಿ ಶಾಸಕ ಜಿ.ವೀರಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ|| ಬಸವರಾಜ ಕ್ಯಾವಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅರಿಕೇರಿ, ಮುಖಂಡ ಗಣೇಶ ಹೊರತಟ್ನಾಳ್, ಮಹೇಶ ಮತ್ತಿತರು ಇದ್ದರು.
ಬಾಕ್ಸ್:
ಜಿಎಸ್ಟಿ ಕಡಿತ ಐತಿಹಾಸಿಕ ನಿರ್ಣಯ
ಕೇಂದ್ರ ಸರಕಾರ ಜಿಎಸ್ಟಿ ತೆರಿಗೆಯಲ್ಲಿ ಭಾರಿ ಕಡಿತ ಮಾಡಿ ಜನ ಸಾಮಾನ್ಯರ ಬದುಕಿಗೆ ಸಾಕಷ್ಟು ಅನುಕೂಲ ಮಾಡಿದೆ. ಪ್ರಧಾನಿ ಮೋದಿ ಅವರು ೨೦೧೭ರಲ್ಲೆ ಕೆಲವು ಬದಲಾವಣೆ ತರುವುದಾಗಿ ಭರವಸೆ ನೀಡಿದ್ದು, ಇಂದು ಅದನ್ನು ಜಾರಿಗೊಳಿಸಿ ದೇಶದ ಜನರ ಬೇಡಿಕೆಗೆ ಮನ್ನಣೆ ನೀಡಿದ್ದಾರೆ. ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು, ಜನರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರಕ್ಕೆ ಅಭಿನಂದಿಸುತ್ತಿದ್ದಾರೆ.
ಶರಣು ತಳ್ಳಿಕೇರಿ, ಬಿಜೆಪಿ ರಾಜ್ಯ ಕಾರ್ಯದರ್ಶಿ