
29th July 2025
ಬಳ್ಳಾರಿ, ಜು.22: ಸಮುದಾಯ ಭವನ ನಿರ್ಮಿಬೇಕೆಂಬ ಮೋಚಿ ಸಮಾಜದ ಹಲವು ದಿನಗಳ ಪ್ರಯತ್ನಕ್ಕೆ ನಾನೂ ಕೈ ಜೋಡಿಸುವೆ, 25 ಲಕ್ಷ ರೂ.ಗಳ ಅನುದಾನವನ್ನು ಶೀಘ್ರ ಮಂಜೂರು ಮಾಡಿಸುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಮಂಗಳವಾರ ರೂಪನಗುಡಿ ರಸ್ತೆಯ ಮಣಿಕಂಠ ಕಾಲೋನಿಯಲ್ಲಿ ಶ್ರೀ ಶಾಂಭವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒಟ್ಟಾರೆ ಸಮಾಜದ ಯಾವುದೇ ಸಮುದಾಯದ ಜನರಿರಲಿ, ಅವರು ಎಷ್ಟು ಸಂಖ್ಯೆಯಲ್ಲಿದ್ದರೂ ಅವರ ಬೇಡಿಕೆ ಈಡೇರಿಸುವುದು ನನ್ನ ಆದ್ಯ ಕರ್ತವ್ಯ, ಒಂದು ಸಮುದಾಯದ ಒಬ್ಬನೇ ವ್ಯಕ್ತಿ ಇದ್ದರೂ ನಿರ್ಲಕ್ಷ್ಯ ಮಾಡಲಾರೆ ಎಂದರು.
ಎಲ್ಲ ಸಮುದಾಯದವರನ್ನು ಜೊತೆಗೂಡಿಸಿಕೊಂಡು ಹೋಗಬೇಕೆಂಬ ತೀರ್ಮಾನ ಮಾಡಿರುವೆ, ಅದರ ಪ್ರಕಾರ ಎಲ್ಲ ಜಾತಿ-ಧರ್ಮದವರ ಏಳಿಗೆಗೆ ಶ್ರಮಿಸುವೆ, ಇದರಲ್ಲಿ ಮತಬ್ಯಾಂಕ್ ಅಥವಾ ರಾಜಕೀಯದ ಉದ್ಧೇಶ ಇಲ್ಲ ಎಂದರು.
ಸಮುದಾಯ ಭವನದ ಹೊರತಾಗಿ ಬೇರೆ ಏನೇ ಬೇಡಿಕೆಗಳಿದ್ದರೂ ಕೇಳಿ, ಈಡೇರಿಸುವೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಮೋಚಿ ಸಮುದಾಯದ ಜನರ ಅಭಿವೃದ್ಧಿ ಆಗಬೇಕು, ಸಮುದಾಯದ ಯುವಕರು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಪಡೆಯಬೇಕು, ನಾನು ನಿಮ್ಮ ಸಮಾಜದ ಜೊತೆಗಿರುವೆ ಎಂದರು.
ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡ ಹೊನ್ನಪ್ಪ ಮಾತನಾಡಿ; ಶಾಸಕ ನಾರಾ ಭರತ್ ರೆಡ್ಡಿಯವರು ಕೊಡುಗೈ ದಾನಿಗಳು, ನಿಮ್ಮ ಬೇಡಿಕೆ ಅವರು ಈಡೇರಿಸುತ್ತಾರೆ, ಅವರ ಮೇಲೆ ಮೋಚಿ ಸಮಾಜದ ಆಶೀರ್ವಾದ ಸದಾ ಇರಬೇಕು ಎಂದರು.
ಮೋಚಿ ಸಮಾಜದ ಮುಖಂಡ, ಪಾಲಿಕೆಯ ಬಿಜೆಪಿ ಸದಸ್ಯ ಗುಡಿಗಂಟಿ ಹನಮಂತು ಮಾತನಾಡಿ; ಶಾಸಕ ಭರತ್ ರೆಡ್ಡಿಯವರು ಕಾಂಗ್ರೆಸ್ಸಿನವರಾದರೂ ಅಭಿವೃದ್ಧಿ ವಿಷಯದಲ್ಲಿ ಪಕ್ಷ ಭೇದ ಮಾಡುವವರಲ್ಲ, ಪಾಲಿಕೆಯ ಸದಸ್ಯರ ಪೈಕಿ ನನ್ನ ಮೇಲೆ ಅವರಿಗೆ ಅಪಾರ ಪ್ರೀತಿ, ನಮ್ಮ ಸಮಾಜದ ಬಗ್ಗೆಯೂ ಅಷ್ಟೇ ಪ್ರೀತಿ, ಅವರ ಸಹಕಾರ ನಮಗೆ ಇರುತ್ತದೆ, ಅದೇ ರೀತಿ ಅವರಿಗೆ ಮುಂಬರುವ ದಿನಗಳಲ್ಲಿ ನಾವು ಸಮಾಜದವರು ಸಹಕರಿಸಬೇಕು ಎಂದರು.
ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಸೀನಾ, ಕಾಂಗ್ರೆಸ್ ಮುಖಂಡರಾದ ಚಾನಾಳ್ ಶೇಖರ್, ಹಗರಿ ಗೋವಿಂದ, ಮೋಚಿ ಸಮಾಜದ ಮುಖಂಡರಾದ ರಾಮು, ದೇವಣ್ಣ ಮತ್ತಿತರರು ಹಾಜರಿದ್ದರು.
*‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ನಾರಾ ಭರತ್ ರೆಡ್ಡಿ* *ಸಾಮಾನ್ಯ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಸಹಕಾರಿ*
ಕೆಎಂಎಫ್ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧ ಆಯ್ಕೆ