

5th August 2025

ಬಳ್ಳಾರಿ ಆ 03. ಕೈಗಾರಿಕೆ ಸ್ಥಾಪನೆಗೆಂದು ರಾಜ್ಯ ಸರ್ಕಾರ 12 ಸಾವಿರಕ್ಕೂ ಅಧಿಕ ಭೂಮಿಯನ್ನು ವಶಪಡಿಸಿಕೊಂಡಿದ್ದು, ಇದುವರೆಗೆ ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಇನ್ನಾದರೂ ಕೈಗಾರಿಕೆ ಸ್ಥಾಪನೆ ಮಾಡಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು. ನ್ಯಾಯಾಲಯದ ಆದೇಶದಂತೆ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಬೆಲೆ ನೀಡಬೇಕೆಂದು ಒತ್ತಾಯಿಸಿ ಇದೇ ಆಗಸ್ಟ್ 7 ರಂದು ಕುಡಿತಿನಿಯಿಂದ ಸಂಡೂರಿಗೆ ಬೆಳಿಗ್ಗೆ 7 ರಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು.ಬಸವರಾಜ್ ಮತ್ತು ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಳ್ಳಾರಿ ಸಂಸದರು ಮತ್ತು ಸಂಡೂರು ಶಾಸಕರು ಮನೆ ಮುಂದೆ ಆ.8 ರಂದು ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದು, ರಾಜ್ಯದ ಕನ್ನಡಪರ ಸಂಘಟನೆಗಳು ಮತ್ತು ನಾಗರಿಕ ಸಂಘಟನೆಗಳು ಈ ಪಾದಯಾತ್ರೆ ಮತ್ತು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ ಎಂದರು.
ಬಳ್ಳಾರಿ ತಾಲೂಕಿನ ಕುಡತಿನಿ, ಹರಗಿನಡೋಣಿ, ವೇಣಿವೀರಾಪುರ, ಜಾನೇಕುಂಟೆ, ಕೊಳಗಲ್ಲು, ಎರಂಗಳಿ ಹಾಗೂ ಸಿದ್ದಮ್ಮನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕೃಷಿ ಭೂಮಿಯಲ್ಲಿ ರಾಜ್ಯ ಸರ್ಕಾರ ಕೆಐ-ಎಡಿಬಿ ಮೂಲಕ 3 ಘನ ಕೈಗಾರಿಕೆಗಳ ಸ್ಥಾಪನೆಗಾಗಿ 2010-14ರಲ್ಲಿ ಅರ್ಸೆಲ್ಲರ್ ಮಿತ್ತಲ್ ಇಂಡಿಯಾ ಪ್ರೈ. ಲಿ. ಗಾಗಿ 5368.83 ಎಕರೆ, ಉತ್ತಮ್ ಗಾಲ್ವಾ ಫೆರೋಸ್ ಲಿ. (ಬ್ರಾಹ್ಮಣಿ ಸ್ಟೀಲ್ಸ್)ಗಾಗಿ 4761.99 ಎಕರೆ ಜಮೀನು ಮತ್ತು ಎನ್.ಎಂ.ಡಿ.ಸಿ ಲಿಮಿಟೆಡ್ ಗಾಗಿ, 2744.22 ಸೇರಿ ಒಟ್ಟು 12,893 ಎಕರೆಗಳನ್ನು ಸ್ವಾಧೀನ ಪಡೆದುಕೊಂಡಿದೆ. ಸುಮಾರು 4,500 ಕುಟುಂಬಗಳಿಂದ ಸ್ಟೀಲ್ ಕೈಗಾರಿಕೆಗಳ ನಿರ್ಮಾಣ ಮಾಡುವುದಾಗಿ ಪ್ರಕಟಿಸಿ, ಬಲವಂತವಾಗಿ ಭೂ ಸ್ವಾಧೀನ ಮಾಡಲಾಗಿದೆ. ಸ್ವಾಧೀನಪಡಿಸಿಕೊಂಡು ಸುಮಾರು 15 ವರ್ಷಗಳಾಗುತ್ತಿದ್ದರೂ ಇಲ್ಲಿಯವರೆಗೂ ಯಾವುದೇ ಕಾರ್ಖಾನೆಗಳು ಸ್ಥಾಪನೆ ಆಗಲಿಲ್ಲ. ಭೂ ಸಂತ್ರಸ್ಥ ಕುಟುಂಬಗಳಿಗೆ ಉದ್ಯೋಗ ನೀಡಲಿಲ್ಲ. ಅದು ಮಾತ್ರವೇ ಅಲ್ಲಾ, ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಡಿ ಬರುವ ಬಹುತೇಕ ಈ ಎಲ್ಲ ಜಮೀನುಗಳು ಒಂದೇ ಪ್ಲಾಟಿನಡಿ ಬರುತ್ತಿವೆ. ಮಾರುಕಟ್ಟೆಯಲ್ಲಿ
ತಲಾ ಎಕರೆಗೆ 1.50 ಕೋಟಿ ರೂ. ರೂ. ಮೌಲ್ಯವನ್ನು ಹೊಂದಿವೆ. ಕೆ.ಐ.ಎ.ಡಿ.ಬಿ. ಹಾಗೂ ಅಂದಿನ ಬಿಜೆಪಿ ಸರಕಾರ ಮತ್ತು ರಾಜ-ಕಾರಣಿಗಳು ಕಂಪನಿಗಳೊಂದಿಗೆ ಶಾಮೀಲಾಗಿ ಅತ್ಯಂತ ಕಳಪೆಯ 5, 6, 8, 12, 16, 23 ಲಕ್ಷ ರೂ.ಗಳೆಂದು ಭಿನ್ನಭಿನ್ನವಾಗಿ ನಿಗದಿಪಡಿಸಿ ಅನ್ನದಾತರಿಗೆ ಭಾರೀ ಮೋಸ ಮಾಡಿದೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಹಾಗೂ ಭೂ ಸಂತ್ರಸ್ತ ರೈತರೊಂದಿಗೆ ಹಲವು ಜಂಟಿ ಸಭೆಗಳನ್ನು ನಡೆಸಲಾಗಿದೆ. ಇದಲ್ಲದೇ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಮಾಡುವುದಾಗಿಯೂ ಭರವಸೆ ನೀಡಿದ್ದರು.
ಸಂಡೂರು ಕ್ಷೇತ್ರದ ಅಂದಿನ ಶಾಸಕರಾದ ಇ.ತುಕಾರಾಂ ರವರು 2023ರಲ್ಲಿನ ವಿಧಾನಸಭಾ ಕಲಾಪಗಳಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದರು. ಕುಡಿತಿನಿ ಪ್ರದೇಶದ ಹೋರಾಟದ ಸ್ಥಳಕ್ಕೆ ಅಂದಿನ ಶಾಸಕರಾದ ಇ. ತುಕಾರಾಂ, ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರು ಭೇಟಿ ನೀಡಿ ಸಮಸ್ಯೆಗಳನ್ನು ಪರಿಹಾರ ಮಾಡುವುದಾಗಿ ಹೇಳಿದ್ದರು. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಗೌರವಾನ್ವಿತ ಗೋಪಾಲ್ಗೌಡರು, ಅಂದಿನ ಜಿಲ್ಲಾ ಮಾಜಿ ಉಸ್ತುವಾರಿ ಮಂತ್ರಿ ಬಿ.ನಾಗೇಂದ್ರ ಮತ್ತು ಮಾಜಿ ಲೋಕಸಭಾ ಸದಸ್ಯರು ಹಾಗೂ ವಕೀಲರಾದ ವಿ.ಎಸ್. ಉಗ್ರಪ್ಪ ರವರು, ಸಂಘಟನೆಯ ಮುಖಂಡರುಗಳು ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಸಮಾಲೋಚನೆ ಸಭೆ ನಡೆಸಿದ್ದರು.
ಬೃಹತ್ ರೈತ ಸಭೆಯಲ್ಲಿ ಭಾಗವಹಿಸಿ ಹಕ್ಕೊತ್ತಾಯಗಳು ನ್ಯಾಯಯುತವಾಗಿವೆ ಎಂದು ಸರಕಾರದ ಗಮನ ಸೆಳೆಯಲಾಗಿತ್ತು ಎಂದರು.
2023ರಲ್ಲಿ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಶಾಸಕರಾದ ಇ. ತುಕಾರಾಂ ರವರ ಕೋರಿಕೆಯ ಮೇರೆಗೆ, ಜಂಟಿ ಸಭೆಯನ್ನು ಆಯೋಜಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್, ಕೆ.ಐ.ಎ.ಡಿ.ಬಿ. ಮತ್ತು ಸಂಬಂಧಪಟ್ಟ ಅಧಿಕಾರಿಗಳು, ನಮ್ಮ ಮುಖಂಡರ ಜೊತೆ ಚರ್ಚಿಸಿ ಅಹವಾಲುಗಳನ್ನು ಆಲಿಸಿ, 3 ತಿಂಗಳಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದರು. ಜಿಲ್ಲೆಯ ಜನಪ್ರತಿನಿಧಿಗಳಾದ ಇ.ತುಕಾರಾಂ, ಬಿ.ನಾಗೇಂದ್ರ, ಜೆ.ಎನ್. ಗಣೇಶ್, ನಾರಾ ಭರತ್ ರೆಡ್ಡಿ ಅವರಿಗೆ ಇದರ ಕೂಲಂಕುಷ ಮಾಹಿತಿ ಮತ್ತು ರೈತರ ಹೋರಾಟದ ಬಗ್ಗೆ ಎಲ್ಲವೂ ಗೊತ್ತಿದ್ದರೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಲೋಕಸಭಾ ಚುನಾವಣೆ ನಡೆದಾಗ ಮತ್ತು ಸಂಡೂರು ಶಾಸಕರ ಉಪ ಚುನಾವಣೆಯ ಸಂದರ್ಭದಲ್ಲಿ ಮಾಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದರಾದ ಇ. ತುಕಾರಾಂ, ಕಾರ್ಮಿಕ ಮಂತ್ರಿ ಎಸ್. ಸಂತೋಷ್ ಲಾಡ್, ಇನ್ನಿತರ ಸಚಿವ ಸಂಪುಟದ ಸದಸ್ಯರುಗಳು ಕುಡತಿನಿಯ ಪ್ರತಿಭಟನಾ ಸ್ಥಳದಲ್ಲಿ ಭಾಗವಹಿಸಿ ಮರಳಿ ರೈತರಿಗೆ ನ್ಯಾಯ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರು. ಇದುವರೆಗೆ ಯಾವದೇ ಭರವಸೆಗಳು ಈಡೇರಸದೇ ಕಾಲಹರಣ ಮಾಡಲಾಗುತ್ತಿದೆ.
ಕೇವಲ ಭರವಸೆ ನೀಡುತ್ತಾ ನ್ಯಾಯ ಒದಗಿಸುವುದನ್ನು ಮುಂದೂಡುತ್ತಿರುವುದು ಎಂದು ತಮ್ಮ ತೀವ್ರ ಅಸಮಾಧಾನ ಖಂಡನೀಯವಾಗಿದೆ ವ್ಯಕ್ತಪಡಿಸಿದರು. ಕಳೆದ 960 ದಿನಗಳಿಂದಲೂ ಹಲವು ರೀತಿಯ ಹೋರಾಟಗಳು ನಡೆದಿವೆ. 2024ರ ಡಿ.16 ರಂದು ಕುಡಿತಿನಿ ಬಂದ್ ಯಶಸ್ವಿಯಾಗಿ ನಡೆಸಲಾಗಿತ್ತು. ರಸ್ತೆತಡೆ ಮತ್ತು ಹಲವು ರೀತಿಯ ಕಾರ್ಯಕ್ರಮಗಳು ಸಂಘಟಿಸಲಾಗಿತ್ತು. ಮಾತ್ರವಲ್ಲದೇ ಭೂ ಸಂತ್ರಸ್ಥರು ರೈತ ಸಂಘಟನೆಗಳು, ಕಾರ್ಮಿಕ ಸಂಘಗಳು, ಕನ್ನಡಪರ ಸಂಘಟನೆಗಳು, ಜನವಾದಿ ಮಹಿಳಾ ಸಂಘಟನೆ, ವಿದ್ಯಾರ್ಥಿ ಯುವಜನ ಸಂಘಟನೆಗಳು, ದೇವದಾಸಿ ಮಹಿಳಾ ವಿಮೋಚನೆಯ ಸಂಘಟನೆಗಳು ದಲಿತ ಹಕ್ಕುಗಳ ಹೋರಾಟ ಸಮಿತಿಯು, ದಲಿತಪರ ಸಂಘಟನೆಗಳು ಕಳೆದ ಮೂರು ವರ್ಷಗಳಲ್ಲಿ ಹಲವು ಹೋರಾಟಗಳು ಜಂಟಿಯಾಗಿ ನಡೆಸಿದ್ದೇವೆ. ಇದೀಗ ಆಗಸ್ಟ್ 7 ರಿಂದ ನಮ್ಮ ನ್ಯಾಯಯುತ ರೈತರ ಬೇಡಿಕೆಗಳನ್ನು ಪರಿಹರಿಸಲು ಒತ್ತಾಯಿಸಿ ಜನಪ್ರತಿನಿಧಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಬಹುಮುಖ್ಯವಾಗಿ ಮೋಸದ ಭೂ ಬೆಲೆಯನ್ನು ರದ್ದು ಮಾಡಬೇಕು, ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆಯೇ ರೈತರಿಗೆ ಭೂ ಬೆಲೆ ನೀಡಬೇಕು. ಉದ್ದೇಶಿತ ಮೂರು ಕಾರ್ಖಾನೆಗಳು ಕೂಡಲೇ ಸ್ಥಾಪನೆ ಮಾಡಬೇಕು. ಇಲ್ಲದಿದ್ದಲ್ಲಿ ನಮ್ಮ ಭೂಮಿಯನ್ನು ನಮಗೆ ವಾಪಸ್ಸು ನೀಡಬೇಕು. ನಿರುದ್ಯೋಗ ಪರಿಹಾರ ಭತ್ಯೆಯನ್ನು ಈ ಕೂಡಲೇ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದೇವೆ, ಸರ್ಕಾರವು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು ಅದನ್ನು ಖಂಡಿಸಿ ಕುಡತಿನಿ ಹೋರಾಟ ಸ್ಥಳದಿಂದ ಬಳ್ಳಾರಿ ಸಂಸದರು . ಮತ್ತು ಸಂಡೂರು ಶಾಸಕರ ಮನೆಯವರೆಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆಯನ್ನು ನಡೆಸಿ ಮನವಿ ಸಲ್ಲಿಸಲು ಉದ್ದೇಶಿಸಿದ್ದೇವೆ. ಈ ಪ್ರತಿಭಟನೆಯನ್ನು ಯಶಸ್ವಿ ಮಾಡಲು ಜಿಲ್ಲೆಯ ಎಲ್ಲಾ ರೈತರು, ಕಾರ್ಮಿಕರು, ಇನ್ನಿತರ ಸಂಘಟನೆಗಳು ಭಾಗವಹಿಸಿ ಹೋರಾಟವನ್ನು , ಯಶಸ್ವಿ ಮಾಡಬೇಕೆಂದು ವಿನಂತಿಸುವುದಾಗಿ ಅವರು ತಿಳಿಸಿದ್ದಾರೆ.
ಕುಡಿತಿನಿಯ ಭೂ ಸಂತ್ರಸ್ಥರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಅಪ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಮತ್ತು ಕನ್ನಡ ಪರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಪದಾಧಿಕಾ-ರಿಗಳಾದ ತಿಪ್ಪೇಸ್ವಾಮಿ ಎಂ., ಜಂಗ್ಲಿ ಸಾಬ್, ಸಂಪತ್, ಚಂದ್ರ, ದೊಡ್ಡ ಬಸಪ್ಪ, ಶೇಖರ್ ಮತ್ತು ತಿಮ್ಮಪ್ಪ ಇನ್ನಿತರರು ಪತ್ರಿಕಾ ಗೋಷ್ಠಿಯಲ್ಲಿದ್ದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ