
23rd August 2025
ಕೊಪ್ಪಳ
ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಕೊಪ್ಪಳ ಗ್ರಾಮೀಣ ಪೊಲೀಸರು ತಾಲೂಕಿನ ನಾಲ್ಕು ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದು, ಅದೇ ರೀತಿ ಗಾಂಜಾ ಸೇವನೆ ಪ್ರಕರಣದಲ್ಲಿ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಎಸ್ ಪಿ ಕಚೇರಿಯಿಂದ ಮಾಹಿತಿ ಲಭ್ಯವಾಗಿದ್ದು, ಶುಕ್ರವಾರ ಕೊಪ್ಪಳ ಮತ್ತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಇರಕಲ್ಲಗಡಾ ಹೊರವಲಯದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಹಿತಿ ಮೇರೆಗೆ ದಾಳಿ ಮಾಡಿ ಇರಕಲ್ಲ ಗಡಾ ಗ್ರಾಮದ 1ನೇ ವಾರ್ಡ್ ನ 50 ವರ್ಷದ ನಿಂಗಪ್ಪ ತಂದೆ ಮರಿಯಪ್ಪ ಗುರಿಕಾರ, 26 ವರ್ಷದ ಮಾರುತಿ ತಂದೆ ನಿಂಗಪ್ಪ ಗುರಿಕಾರ, 20 ವರ್ಷದ ರವಿ ತಂದೆ ನಿಂಗಪ್ಪ ಗುರಿಕಾರ ಮತ್ತು 38 ವರ್ಷದ ನಾಗಪ್ಪ ತಂದೆ ಸಣ್ಣ ಯಮನೂರಪ್ಪ ಕುದುರಿಮೋತಿ ಇವರನ್ನು ದಸ್ತಗಿರಿ ಮಾಡಿ ಇವರಿಂದ ರೂ. 25,200/- ರೂ ಬೆಲೆ ಬಾಳುವ 630 ಗ್ರಾಂ ಗಾಂಜಾ ಮತ್ತು 15 ಗಂಜಾ ಗಿಡ ಸಸಿಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಇದೇ ರೀತಿ ಶುಕ್ರವಾರ ರಾತ್ರಿ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಸಂಗಾಪುರ-ಮಲ್ಲಾಪುರ ರಸ್ತೆಯ ಸಂಗಾಪುರ ಟವರ್ ಹತ್ತಿರ ಗಾಂಜಾ ಸೇದುತ್ತಾ ನಿಂತಿದ್ದ ಆನೆಗೊಂದಿಯ 23 ವರ್ಷದ ಮಂಜುನಾಥ ತಂದೆ ಯಲ್ಲಪ್ಪ ಮಲ್ಲಿನಕೇರಿ, ಸಂಗಾಪುರ ಗ್ರಾಮದ 20 ವರ್ಷದ ದುರಗೇಶ ತಂದೆ ಬಾಲಪ್ಪ ಹೊಟೇಲ್, ಶರಣಬಸವೇಶ್ವರ ಕ್ಯಾಂಪ್ ಉಪಕಾಲುವೆ ದಂಡೆಯ ಮೇಲೆ ಗಾಂಜಾ ಸೇದುತ್ತಾ ನಿಂತಿದ್ದ ಗಂಗಾವತಿ ನಗರದ ಲಿಂಗರಾಜ್ ಕ್ಯಾಂಪಿನ 20 ವರ್ಷದ ಸೋಹೇಬ್ ತಂದೆ ಶರ್ಮುದ್ದೀನ್ ಮತ್ತು 22 ವರ್ಷದ ದಾವಲಸಾಬ ತಂದೆ ಚಂದುಸಾಬ ಸೇರಿ ನಾಲ್ವರನ್ನು ವಶಕ್ಕೆ ಪಡೆದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿ ಗಾಂಜಾ ಸೇವನೆ ಮಾಡಿರುವುದು ಖಚಿತಪಡಿಸಿಕೊಂಡು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣಗಳ ಪತ್ತೆ ಕುರಿತು ಶ್ರಮಿಸಿ, ಉತ್ತಮ ಕರ್ತವ್ಯ ನಿರ್ವಹಿಸಿದ ಕೊಪ್ಪಳ ಮತ್ತು ಗಂಗಾವತಿ ಡಿವೈಎಸ್ ಪಿ, ಕೊಪ್ಪಳ ಗ್ರಾಮೀಣ ಸಿಪಿಐ ಸುರೇಶ, ಪಿಎಸ್ ಐ ವಿರೇಶ, ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್ ಐ ವೆಂಕಟೇಶ ಚೌವ್ಹಾಣ ಸೇರಿದಂತೆ ಎರಡು ಠಾಣೆಯ ಪೊಲೀಸ್ ಸಿಬ್ಬಂದಿಗಳಾದ , ಲಕ್ಕಪ್ಪ, ಶಿವಪುತ್ರಪ್ಪ, ಮಹೇಶ ಸಜ್ಜನ, ತಾಜುದ್ದೀನ, ಅಂದಿಗಾಲಪ್ಪ, ಶರಣಪ್ಪ, ಕನಕರಾಯ, ಚಿದಾನಂದ, ಉಮೇಶ, ಶ್ರೀಕಾಂತ, ಕಾವೇರಿ, ಶ್ವೇತಾ, ಮಹಿಬೂಬ್, ನಾಗರಾಜ, ರಮೇಶ, ಮರಿಯಪ್ಪ, ಮುತ್ತುರಾಜ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ
ಬೆಳಗಾವಿ ದರ್ಪಣ ರೋಟರಿ ಕ್ಲಬ್ – “ಜೀವನ ಆರಿಸಿ, ವ್ಯಸನ ಬಿಡಿ” ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ