

22nd September 2025

ಕೊಪ್ಪಳ.
ಅಧಿಕಾರಕ್ಕೆ ಬಂದು ಎರಡು ವರೆ ವರ್ಷವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಅನವಶ್ಯಕವಾದ ಯೋಜನೆಗಳನ್ನು ತಂದು ಆರ್ಥಿಕ ದಿವಾಳಯಾಗಿದೆ. ಎರಡುವರೆ ವರ್ಷ ಪೂರ್ಣಗೊಂಡರು ಯಾವುದೇ ಕ್ಷೇತ್ರದಲ್ಲೂ ಒಂದು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅವೈಜ್ಞಾನಿಕವಾದ ಜಾತಿ ಸಮೀಕ್ಷೆ ಮಾಡಲು ಹೊರಟಿದೆ. ಇದು ಎಷ್ಟರ ಮಟ್ಟಿಗೆ ಲಾಭವಾಗುತ್ತದೆ ಎಂಬುದು ಸ್ವತಃ ಸರಕಾರಕ್ಕೆ ಮಾಹಿತಿ ಇಲ್ಲ. ಸರಕಾರೆ ಕೆಲವ ಸಚಿವರು ಕೂಡಾ ಇದನ್ನು ವಿರೋಧಿಸಿದ್ದಾರೆ. ಆದರೆ ಸಮಾಜಗಳನ್ನು ಒಡೆಯುವ ಛಾಳಿ ಇರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರತಿಷ್ಟೆಗಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೆಸರಿನಲ್ಲಿ ಜಾತಿಗಳ ಸಮೀಕ್ಷೆ ಮಾಡಲು ಹೊರಟಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರಕಾರದ ನಡೆಯನ್ನು ಆರೋಪಿಸಿರುವ ಮಾಜಿ ಸಚಿವ ಬಿಜೆಪಿ ಹಿರಿಯ ಮುಖಂಡ ಹಾಲಪ್ಪ ಆಚಾರ ಸಮೀಕ್ಷೆಗೆ ಬಂದಾಗ ಪ್ರತಿಯೊಂದು ಜಾತಿಯವರು ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು ಎಂದು ಕರೆ ನೀಡಿದರು.
ಸೋಮವಾರ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದಿಂದ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರ ಈ ವರ್ಷ ಜನಗಣತಿ ಪ್ರಾರಂಭಿಸಲಿದ್ದು, ಅದರಲ್ಲಿ ಜಾತಿ ಗಣತಿಯನ್ನು ನಡೆಸುವುದಾಗಿ ಸ್ಪಷ್ಟಪಡಿಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಈಗ ಏಕಾ ಏಕಿ ಜಾತಿ ಸಮೀಕ್ಷೆಗೆ ಮುಂದಾಗಿದ್ದು, ಹದಿನೈದು ದಿನಗಳಲ್ಲಿ ಏಳು ಕೋಟಿ ಜನರ ಮಾಹಿತಿ ಸಂಗ್ರಹಿಸಲು ಹೇಗೆ ಸಾಧ್ಯ ಎಂಬ ಪರಿಜ್ಞಾನ ಇಲ್ಲ. ೨೦೧೩ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ವೀರಶೈವ ಲಿಂಗಾಯತರನ್ನು ಇಬ್ಭಾಗ ಮಾಡಲು ಮುಂದಾಗಿದ್ದರು. ಈಗ ರಾಜ್ಯದಲ್ಲಿ ಹಿಂದೂ ಸಮಾಜವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಎಂದು ಹೇಳುವ ಸಿಎಂ ಮತ್ತು ಸಚಿವರು ಹಿಂದುಳಿದ ಆಯೋಗದ ಮೂಲಕ ಧರ್ಮ, ಜಾತಿಗಳ ಪಟ್ಟಿ ಮಾಡಿ ಹೊರಗೆ ಬಿಡುತ್ತಿದೆ. ಇಲ್ಲದ ಉಸಾಬರಿಗೆ ಹೊರಟಿರುವ ಸರಕಾರ ಹಿಂದೂ ಸಮಾಜದಲ್ಲಿ ಜಾತಿಗಳನ್ನು ಕ್ರಿಶ್ಚಯನ್ ಧರ್ಮಕ್ಕೆ ಸೇರಿಸಲು ಷಡ್ಯಂತರ ಮಾಡುತ್ತಿದೆ. ಇದನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಮತ್ತು ರಾಜ್ಯದ ಜನರು ಸರಕಾರ ಛಾಟಿ ಬೀಸಿರುವ ಪರಿಣಾಮ ಈಗ ಕ್ರಿಶ್ಚಿಯನ್ನ ಧರ್ಮಗಳಲ್ಲಿ ಹಿಂದೂ ಜಾತಿಗಳ ಪಟ್ಟಿಯನ್ನು ಕೈಬಿಟ್ಟಿರುವುದಾಗಿ ತಿಳಿಸಿದೆ. ಸರಕಾರ ಸಮೀಕ್ಷೆ ಪ್ರಾರಂಭಿಸುವ ಮೊದಲು ಅದರಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂದು ಹಾಲಪ್ಪ ಒತ್ತಾಯಿಸಿದರು.
ಮುಂದುವರೆದು ಮಾತನಾಡಿದ ಅವರು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಎನು ಹೇಳಿಕೆ ನೀಡುತ್ತಾರೆ ಎಂಬುದೇ ಅವರಿಗೆ ಗೊತ್ತಿರಲ್ಲ. ಲಿಂಗಾಯತ ಧರ್ಮ ಎಂದು ಹೇಳುವ ಅವರ ಶೈಕ್ಷಣಿಕ ಪ್ರಮಾಣ ಪತ್ರದಲ್ಲಿ ಎನು ಇದೆ ಎಂದು ಪರಿಶೀಲಿಸಲಿ. ಒಟ್ಟಾರೆಯಾಗಿ ಜಾತಿ ಸಮೀಕ್ಷೆಯಲ್ಲಿ ಇವರು ಕೂಡಾ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ರೆಡ್ಡಿ ಎಂದು ನಮ್ಮ ರೆಡ್ಡಿ ಸಮುದಾಯ ತಿಳಿಸಿದೆ. ಇದನ್ನು ಎಲ್ಲರು ಒಪ್ಪಿದ್ದಾರೆ. ಆದರೆ ರಾಯರೆಡ್ಡಿ ಇದಕ್ಕೆ ತದ್ವಿರುದ್ಧವಾಗಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ರೂ.೧೭೫೦ ಕೋಟಿ ಅನುದಾನ ತಂದು ಶೇ.೯೦ ರಷ್ಟು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಟಾನ ಮಾಡಿದ್ದೆ. ಕೇವಲ ಶೇ.೧೦ ರಷ್ಟು ಉಳಿದಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಿ ತಾನು ಮಾಡಿದ್ದೇನೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಕೆಲವೊಂದು ಕಟ್ಟಡಗಳನ್ನು ಅಭಿವೃದ್ಧಿಯಲ್ಲಿ ದೇಶದಲ್ಲೇ ತಾವು ಮುಂಚೂಣಿಯಲ್ಲಿದ್ದೇನೆ ಎಂದು ಸ್ವಯಂ ಘೊಷಣೆ ಮಾಡಿಕೊಳ್ಳುತ್ತಿದ್ದಾರೆ. ಅವರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ಕ್ಷೇತ್ರದ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದ ಅವರು ಪ್ರಧಾನಿ ಮೋದಿ ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ ದೇಶದ ಜನರಿಗೆ ಆರ್ಥಿಕ ಹೊರೆ ತಗ್ಗಿಸುವಂತಹ ಮಹತ್ತರವಾದ ಹೆಜ್ಜೆ ಇಟ್ಟಿದ್ದು, ಜಿಎಸ್ಟಿ ಕಡಿತಗೊಳಿಸುವ ಮೂಲಕ ಅಭೂತಪೂರ್ವ ಕಾರ್ಯ ಮಾಡಿದ್ದಾರೆ. ಜನರು ಬಳಸುವ ವಸ್ತುಗಳ ಬೆಲೆ ದಿಡೀರ್ ಕಡಿಮೆಯಾಗುತ್ತಿದ್ದು, ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಕೇಂದ್ರ ಸರಕಾರದ ಜಿಎಸ್ಟಿ ಕಡಿತದ ಕಾರ್ಯವನ್ನು ಶ್ಲಾಘಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಮಾತನಾಡಿ, ಹಿಂದುಳಿದ ವರ್ಗದ ಇಲಾಖೆಯ ಮತ್ತು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಹಾಸ್ಟೇಲ್ ಮಕ್ಕಳ ಯೋಜನೆಯಲ್ಲೂ ಕಮಿಷನ್ ಪಡೆಯುತ್ತಿದ್ದಾರೆ. ಸ್ವತಃ ತಮ್ಮ ಕನಕಗಿರಿ ಕ್ಷೇತ್ರದಲ್ಲಿ ಕಳಪೆ ರಸ್ತೆ ಕಾಮಗಾರಿ ಮಾಡಿ ಅನುದಾನ ದುರುಪೋಗಪಡಿಸಿಕೊಂಡಿರುವುದು ಕ್ಷೇತ್ರದ ಜನರೇ ಬಹಿರಂಗಪಡಿಸಿದ್ದಾರೆ. ನಮ್ಮ ಅವಧಿಯಲ್ಲಿನ ರೂ.೨೦೦ ಕೋಟಿ ಕಾಮಗಾರಿಗಳನ್ನು ತಾವು ಮಾಡಿರುವುದಾಗಿ ಹೇಳಿಕೊಂಡು ಮುಖ್ಯಮಂತ್ರಿಗಳಿಂದ ಅವುಗಳನ್ನು ಉದ್ಘಾಟನೆ ಮಾಡಲು ಹೊರಟಿದ್ದಾರೆ. ಕನಕಗಿರಿ ಕ್ಷೇತ್ರದ ರಸ್ತೆಗಳಷ್ಟೇ ಅಲ್ಲ ಜಿಲ್ಲೆಯ ಎಲ್ಲಾ ಕ್ಷೇತ್ರದ ರಸ್ತೆಗಳು ಹಾಳಾಗಿದ್ದು, ಜನರು ಶಾಪ್ ಹಾಕುತ್ತಿದ್ದಾರೆ. ಬಲ್ಡೋಟಾ ಕಾರ್ಖಾನೆ ಬಂದ್ ಮಾಡಿಸುವುದಾಗಿ ಜಿಲ್ಲೆಯ ಮುಖಂಡರ ನಿಯೋಗವನ್ನು ಕರೆದುಕೊಂಡು ಸಿಎಂ ಅವರ ಮುಂದೆ ನಿಂತರು. ಆದರೆ ಈಗ ಅದೇ ಕಾರ್ಖಾನೆಯಲ್ಲಿ ಕಮಿಷನ್ ವಸೂಲಿ ಮಾಡಿ ಪರಿಸರ ಕಾಳಜಿ ಹೊಂದಿರುವ ಗವಿಸಿದ್ದೇಶ್ವರ ಸ್ವಾಮಿಗಳನ್ನು ಮತ್ತು ಬಿಜೆಪಿ ಮುಖಂಡರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ನೇರವಾಗಿ ದಢೇಸೂಗೂರು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಜಿಎಸ್ಟಿ ಕಡಿತ ದೇಶಕ್ಕೆ ವರದಾನವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಜನರೊಂದಿಗೆ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಬಲ್ಡೋಟಾ ಕಾರ್ಖಾನೆ ಬಂದ್ ಮಾಡಿಸುವ ವಿಷಯದಲ್ಲಿ ಕಾಂಗ್ರೆಸ್ ಸರಕಾರದ ನಿಲುವು ಸರಿಯಿಲ್ಲ. ಸಿಎಂ ಒಂದು ಹೇಳಿಕದರೆ ಕೈಗಾರಿಕೆ ಸಚಿವರು ಒಂದು ಹೇಳುತ್ತಿದ್ದಾರೆ ಎಂದು ಗುಡುಗಿದರು.
ಗೋಷ್ಟಿಯಲ್ಲಿ ಮಾಜಿ ಶಾಸಕ ಜಿ.ವೀರಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ|| ಬಸವರಾಜ ಕ್ಯಾವಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅರಿಕೇರಿ, ಮುಖಂಡ ಗಣೇಶ ಹೊರತಟ್ನಾಳ್, ಮಹೇಶ ಮತ್ತಿತರು ಇದ್ದರು.
ಬಾಕ್ಸ್:
ಜಿಎಸ್ಟಿ ಕಡಿತ ಐತಿಹಾಸಿಕ ನಿರ್ಣಯ
ಕೇಂದ್ರ ಸರಕಾರ ಜಿಎಸ್ಟಿ ತೆರಿಗೆಯಲ್ಲಿ ಭಾರಿ ಕಡಿತ ಮಾಡಿ ಜನ ಸಾಮಾನ್ಯರ ಬದುಕಿಗೆ ಸಾಕಷ್ಟು ಅನುಕೂಲ ಮಾಡಿದೆ. ಪ್ರಧಾನಿ ಮೋದಿ ಅವರು ೨೦೧೭ರಲ್ಲೆ ಕೆಲವು ಬದಲಾವಣೆ ತರುವುದಾಗಿ ಭರವಸೆ ನೀಡಿದ್ದು, ಇಂದು ಅದನ್ನು ಜಾರಿಗೊಳಿಸಿ ದೇಶದ ಜನರ ಬೇಡಿಕೆಗೆ ಮನ್ನಣೆ ನೀಡಿದ್ದಾರೆ. ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು, ಜನರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರಕ್ಕೆ ಅಭಿನಂದಿಸುತ್ತಿದ್ದಾರೆ.
ಶರಣು ತಳ್ಳಿಕೇರಿ, ಬಿಜೆಪಿ ರಾಜ್ಯ ಕಾರ್ಯದರ್ಶಿ

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*