
15th October 2025
ಕೊಪ್ಪಳ.
ಕೊಪ್ಪಳ ತಾಲೂಕಿನ ಯಲಮೇಗಿ ಗ್ರಾಮದ ದಲಿತ ಸಂಘಟನೆ ಮುಖಂಡ ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಸದಸ್ಯ ಗಾಳೆಪ್ಪ ಹಿರೇಮನಿ ಮೇಲೆ ಠಾಣೆಯಲ್ಲೇ ಜಾತಿ ನಿಂದನೆಯೊಂದಿಗೆ ಹಲ್ಲೆ ಮಾಡಿರುವ ಘಟನೆ ಗಂಭೀರ ಸ್ವರೂಪ ಪಡೆಯುವುದನ್ನು ಅರಿತ ಎಸ್ಪಿ ಡಾ|| ರಾಮ್ ಅರಸಿದ್ಧಿ ಅವರು ರಾತ್ರೋ ರಾತ್ರಿ ಕುಕನೂರ ಪೊಲೀಸ್ ಠಾಣೆ ಪಿಎಸ್ಐ ಗುರುರಾಜ್ ಅವರನ್ನು ಅಮಾನತ್ ಮಾಡಿ ವಾತಾವರಣ ತಿಳಿಗೊಳಿಸಿದ್ದಾರೆ.
ಮಂಗಳವಾರ ಸಂಜೆ ಘಟನೆ ನಡೆದಿದ್ದು, ಘಟನೆಯನ್ನು ಖಂಡಿಸಿ ಕೊಪ್ಪಳ ಜಿಲ್ಲೆಯ ಡಿಎಸ್ಎಸ್ ಮುಖಂಡ ಮಲ್ಲು ಪೂಜಾರ ಮತ್ತಿತರ ಕಾರ್ಯಕರ್ತರು ದಿಡೀರ್ ಕುಕನೂರ ಪೊಲೀಸ್ ಠಾಣೆಗೆ ಆಗಮಿಸಿ ಪಿಎಸ್ಐ ಮಾಡಿರುವ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ವಿಷಯ ಜಿಲ್ಲೆಯಾದ್ಯಂತ ಹರಡಿ ಗಂಭೀರ ಸ್ವರೂಪ ಪಡೆದುಕೊಳ್ಳುವಷ್ಟರಲ್ಲಿ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಯಲಬುರ್ಗಾ ಸಿಪಿಐ ಅವರ ವರದಿ ಮತ್ತು ಠಾಣೆಯಲ್ಲಿ ನಡೆದ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಂಗಳವಾರ ತಡರಾತ್ರಿ ಕುಕನೂರು ಠಾಣೆ ಪಿಎಸ್ಐನ್ನು ಅಮಾನತ್ ಮಾಡಿ ಆದೇಶಿಸಿದ್ದಾರೆ.
ಕೊಪ್ಪಳ ತಾಲೂಕಿನ ಯಲಮೇಗಿ ಗ್ರಾಮದ ಡಿಎಸ್ಎಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯರಾಗಿರುವ ಗಾಳೇಪ್ಪ ಹಿರೇಮನಿ ಮಂಗಳವಾರ ಕುಕನೂರ ಠಾಣೆಗೆ ಆಗಮಿಸಿ ತಮ್ಮ ಗ್ರಾಮದ ದಂಪತಿಗಳ ನಡುವೆ ಉಂಟಾದ ವಿವಾದ ಕುರಿತು ವಿಚಾರಿಸಲು ಆಗಮಿಸಿದ ಸಂದರ್ಭದಲ್ಲಿ ಪಿಎಸ್ಐ ಗುರುರಾಜ್ ಏಕಾ ಏಕಿ ಗಾಳೆಪ್ಪ ಹಿರೇಮನಿಗೆ ಅವಾಚ್ ಶಬ್ಧನಿಂದ ಮತ್ತು ಜಾತಿ ನಿಂದನೆ ಮಾಡಿ ಮಾರಾಣಾಂತಿಕವಾಗಿ ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಾಗುತ್ತಿದ್ದಂತೆ ಠಾಣೆಯಿಂದ ಹೊರ ಬಂದ ಗಾಳೆಪ್ಪ ತಮ್ಮ ಡಿಎಸ್ಎಸ್ ಸಂಘಟನೆಗಳ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ವಿಷಯ ತಿಳಿಸಿ ಮತ್ತು ಸಾಮಾಜಿಕ ತಾಣಗಳಲ್ಲಿ ವಿಡಿಯೋ ಮೂಲಕ ಪಿಎಸ್ಐ ನಡೆದುಕೊಂಡ ರೀತಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ತಕ್ಷಣ ಜಿಲ್ಲೆಯ ವಿವಿಧ ದಲಿತ ಮತ್ತು ಮಾದಿಗ ಸಮಾಜದ ಮುಖಂಡರು ಕುಕನೂರ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿ ಹಲ್ಲೆಯನ್ನು ಖಂಡಿಸಿದ್ದಾರಲ್ಲದೇ ಪಿಎಸ್ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಯಲಬುರ್ಗಾ ಸಿಪಿಐ ಎಸ್ಪಿಗೆ ಘಟನೆಯ ಮಾಹಿತಿ ರವಾನಿಸಿ ವರದಿ ಸಲ್ಲಿಸಿದ್ದಾರೆ. ದಲಿತ ಸಂಘಟನೆಯ ಮುಖಂಡರ ಆಕ್ರೋಶವನ್ನು ಅರಿತ ಎಸ್ಪಿ ಘಟನೆ ಜಿಲ್ಲೆಯಾದ್ಯಂತ ವಾತಾವರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಮುಂಚೆ ರಾತ್ರಿ ಪಿಎಸ್ಐ ಗುರುರಾಜ ಅವರನ್ನು ಅಮಾನತು ಮಾಡಿ ಆದೇಶಿಸಿ ಪ್ರತಿಭಟನೆಕಾರರನ್ನು ಸಮಾಧಾನಗೊಳಿಸಿದ್ದಾರೆ. ತಮ್ಮ ಪ್ರತಿಭಟನೆಗೆ ಸ್ಪಂದಿಸಿ ತಪ್ಪಿತಸ್ಥ ಪಿಎಸ್ಐ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದಕ್ಕೆ ದಲಿತ ಸಂಘಟನೆ ಮುಖಂಡರು ಎಸ್ಪಿಗೆ ಅಭಿನಂದಿಸಿದ್ದಾರೆ.
ಬಾಕ್ಸ್:
ಪಿಎಸ್ಐ ಗುರುರಾಜ್ ಧರ್ಪ ಮಾಡಿದ್ದಾರೆ
ನಮ್ಮ ಸಮಾಜದ ಹಾಗೂ ದಲಿತ ಸಂಘಟನೆ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಗಾಳೇಪ್ಪ ಹಿರೇಮನಿ ಅವರು ತಮ್ಮ ಗ್ರಾಮದ ದಂಪತಿಗಳ ವಿವಾದ ಕುರಿತು ವಿಚಾರಿಸಲು ಕುಕನೂರು ಠಾಣೆಗೆ ಬಂದಾಗ ಅಲ್ಲಿನ ಪಿಎಸ್ಐ ಗುರುರಾಜ ಶಾಂತತೆಯಿಂದ ವಿಷಯ ಸ್ಪಷ್ಟಪಡಿಸುವ ಬದಲು ಗಾಳೆಪ್ಪ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಮ್ಮ ಧರ್ಪ ತೋರಿದ್ದಾರೆ. ಠಾಣೆಯಲ್ಲೇ ಗಾಳೆಪ್ಪ ಮೇಲೆ ಹಲ್ಲೆ ಮಾಡುವಂತಹ ಮನಸ್ಥಿತಿ ಬಂದಿರುವುದು ಖಂಡನೀಯವಾಗಿದೆ. ಪಿಎಸ್ಐ ವರ್ತನೆಯನ್ನು ನಾವು ಖಂಡಿಸಿದ್ದರಿಂದ ಎಸ್ಪಿ ಅವರು ನಿಜ ಸಂಗತಿಯನ್ನು ಪರಿಶೀಲಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ. ದಲಿತ ಮುಖಂಡರ ಮೇಲೆ ಈ ರೀತಿ ವರ್ತಿಸಿರುವ ಪಿಎಸ್ಐ ಸಾಮಾನ್ಯ ಜನರು ಠಾಣೆಗೆ ಬಂದಾಗ ಯಾವ ರೀತಿ ವರ್ತಿಸಬಹುದು. ಪಿಎಸ್ಐ ವರ್ತನೆಗೆ ಸಾಮಾನ್ಯ ಜನರು ಭಯಭೀತರಾಗಿದ್ದಾರೆ. ಇಂತಹ ಅಧಿಕಾರಿಗಳನ್ನು ಕೇವಲ ಅಮಾನತ್ ಅಲ್ಲ ಡಿಸ್ಮಿಸ್ ಮಾಡಬೇಕು.
ಮಲ್ಲು ಪೂಜಾರ್ ದಲಿತ ಸಂಘಟನೆ ಮುಖಂಡ, ಕೊಪ್ಪಳ.
ನಾಳೆ ಕುಷ್ಟಗಿಯಲ್ಲಿ ನಡೆಯಲಿರುವ ಯುವ ಸಮ್ಮೇಳನ ಹಾಗೂ ಕೊಪ್ಪಳ ಜಿಲ್ಲಾ ಕಾರ್ಯಕಾರಣಿ ಸಭೆ.
ಗಂಗಾವತಿಯಲ್ಲಿ ಯುವಕನ ಭೀಕರ ಕೊಲೆ- ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷ ಕೆ.ವೆಂಕಟೇಶನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಜರ್ಮಿಗಳು
ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಸಚಿವ, ಸಂಸದ, ಶಾಸಕರು ಮೋಸಗಾರರು- ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಾಂಬ್: ಆಡಿಯೋ ಸಂದೇ- ಹಿಟ್ನಾಳ್ ಕುಟುಂಬ, ತಂಗಡಗಿ ಮತ್ತು ರಾಯರೆಡ್ಡಿ ವಿರುದ್ಧ ಗರ್ಂ
ಎಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿಗಳಿಗೆ ಖುಲಾಸೆ ಹುಲಿಹೈದರ ಹನುಮೇಶ ನಾಯಕ ಸೇರಿ 9 ಜನರು ನಿರ್ದೋಷಿ: ಜಿಲ್ಲಾ ನ್ಯಾಯಾಧದೀಶರ ಆದೇಶ
ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಗತವೈಭವ ಮರುಕಳಿಸಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್