

14th January 2026

ಕುಷ್ಟಗಿ.
ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಆರು ಸ್ಥಾನಗಳನ್ನು ಗೆಲ್ಲುವ ಅವಕಾಶವಿದ್ದರೂ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆಲ್ಲುವಂತಾಗಿರುವುದು ಕಾಂಗ್ರೆಸ್ ಪಕ್ಷದ ದುರದೃಷ್ಟಕರ ಸಂಗತಿಯಾಗಿದೆ. ಸುಲಭ ಗೆಲುವನ್ನು ಮರೆತಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣರಾಗಿದ್ದಾರೆ. ಕಾರ್ಯಕರ್ತರನ್ನು ಗೆಲ್ಲಿಸಬೇಕೆಂಬ ಮನಸ್ಸು ಮಾಡಲು ಕಾರ್ಯತಂತ್ರ ಮಾಡದೇ ನಿರ್ಲಕ್ಷ ಮಾಡಿದ್ದಾರೆ ಎಂದು ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ ವಿಷಾದ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆದ ಚುನಾವಣೆ ನಂತರ ಅವರು ಈ ಸೋಲಿಗೆ ವಿಷಾದ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಟ್ಟು ೯೬ ಮತದಾರರ ಪೈಕಿ ೯೪ ಮತಗಳು ಚಲಾವಣೆಯಾಗಿವೆ. ಒಂದು ಮತ ತಿರಸ್ಕೃತವಾಗಿದೆ. ಇದರಲ್ಲಿ ಎಲ್ಲಾ ಆರು ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗುವ ಅವಕಾಶ ನಿಶ್ಚಿತವಾಗಿ ಇತ್ತು. ಆದರೆ ಸಿದ್ದೇಶಕುಮಾರ ಕಲ್ಲಬಾಗಿಲಮಠ ಮತ್ತು ಈಶಪ್ಪ ಅಮರಪ್ಪ ಮಾತ್ರ ಆಯ್ಕೆಯಾಗಿದ್ದಾರೆ. ಪಕ್ಷ ಬಹುಮತ ಹೊಂದಿದ್ದರೂ, ನಮ್ಮ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಲ್ಲಿ ವಿಫಲರಾಗಿರುವುದು ಆಶ್ಚರ್ಯ ಮೂಡಿದೆ ಮತ್ತು ಕಾರ್ಯಕರ್ತರ ಮನಸ್ಸಿಗೆ ಬೇಸರವಾಗಿದೆ. ಯೋಜನಾ ಸಮಿತಿಗೆ ಚುನಾವಣೆ ಘೋಷಣೆಯಾದಾಗಿನಿಂದಲೂ, ಚುನಾವಣೆ ತಂತ್ರ ರೂಪಿಸುವ ಗಂಭೀರ ಪ್ರಯತ್ನಗಳು ಜಿಲ್ಲಾ ಮುಖಂಡರಿಂದ ನಡೆಯಲೇ ಇಲ್ಲ. ಪಕ್ಷದ ಶಾಸಕರು, ಸಂಸದರು, ಹಾಗೂ ಜಿಲ್ಲಾ ಘಟಕ ಈ ಕುರಿತು ಸಮನ್ವಯದಿಂದ ಕಾರ್ಯತಂತ್ರ ರೂಪಿಸಲಿಲ್ಲ. ಮತದಾನದ ದಿನದ ಹಿಂದಿನ ದಿನವಾದರೂ ಈ ಕುರಿತು ಸಭೆ ನಡೆಸಿ, ಕಾರ್ಯತಂತ್ರ ರೂಪಿಸಿ, ಪಕ್ಷದ ಮತದಾರರಿಗೆ ಸ್ಪಷ್ಟ ಸಂದೇಶ ರವಾನಿಸದೇ ಕೈ ಚೆಲ್ಲಿ ಕುಳಿತುಕೊಂಡಿದ್ದರು. ನಾವೀಗ ಪಂಚಾಯತ ಚುನಾವಣೆಗಳ ಹೊಸ್ತಿಲಲ್ಲಿ ನಿಂತಿದ್ದೇವೆ. ಇಂತಹ ಸಮಯದಲ್ಲಿ, ಕೈಗೆಟಕಬಹುದಾಗಿದ್ದ ಗೆಲುವೊಂದನ್ನು ಬಿಟ್ಟುಕೊಟ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ವಿರೋಧ ಪಕ್ಷಕ್ಕೆ ಹಾಸ್ಯಾಸ್ಪದರಾಗಿದ್ದೇವೆ. ಬಹುಮತ ಇದ್ದಾಗ್ಯೂ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದ ನಮ್ಮನ್ನು ಮತದಾರರು ಪರಿಹಾಸ್ಯ ಮಾಡುತ್ತಿದ್ದಾರೆ. ಇದರಿಂದಾಗಿ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ನನ್ನಂಥವರು ಮುಜುಗರ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಯೋಜನಾ ಸಮಿತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎದುರಿಸಿದ ಸೋಲಿನ ಹೊಣೆಯನ್ನು ಈವರೆಗೆ ಯಾರೊಬ್ಬರೂ ಹೊತ್ತುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ, ಫಲಿತಾಂಶದ ಪರಾಮರ್ಶೆ ನಡೆಯಬೇಕು ಎಂಬುದು ನನ್ನ ಮತ್ತು ನನ್ನಂತಹ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಲ್ಲರ ಆಗ್ರಹವಾಗಿದೆ. ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾದವರನ್ನು ಗುರುತಿಸಿ, ಅವರ ವಿರುದ್ಧ ಪಕ್ಷದ ಹೈಕಮಾಂಡ್ಗೆ ವರದಿ ಸಲ್ಲಿಸಿ, ಪಕ್ಷದ ನಿಯಮಗಳಾನುಸಾರ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಚಂದ್ರಶೇಖರ ನಾಲತ್ವಾಡ ಅವರು ನೇರವಾಗಿ ಅಗ್ರಹಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಯೋಜನಾ ಸಮಿತಿ ಸದಸ್ಯರ ಚುನಾವಣೆ- ೬ ಸ್ಥಾನಕ್ಕೆ ೪ ಬಿಜೆಪಿ ೨ ಕಾಂಗ್ರೆಸ್ ಸದಸ್ಯರು ಆಯ್ಕೆ- ಬಿಜೆಪಿ ಮುಖಂಡರಿಗೆ ಹರ್ಷ: ಕಾಂಗ್ರೆಸ್ಸಿಗರಿಗೆ ಸೋಲಿನ ಮುಜುಗರ

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ