

26th January 2026

ಗಂಗಾವತಿ.
ಬಳ್ಳಾರಿಯಲ್ಲಿ ಖಾಸಗಿ ಗನ್ಮ್ಯಾನ್ನಿಂದ ಫೈರಿಂಗ್, ಬಳ್ಳಾರಿಯಲ್ಲಿ ಮನೆಗೆ ಬೆಂಕಿ, ಶಿಡ್ಲಘಟ್ಟದಲ್ಲಿ ಪೌರಾಯುಕ್ತಿಗೆ ಧಮಕಿ, ಹುಬ್ಬಳ್ಳಿಯಲ್ಲಿ ಮಹಿಳೆಯ ಮೇಲೆ ಪೊಲೀಸ್ ದೌರ್ಜನ್ಯ, ಅಕ್ರಮ ಬಾಂಗ್ಲಾ ನುಸುಳುಕೊರರ ವಿರುದ್ಧ ಹೋರಾಟ ನಡೆಸುವವರ ಮೇಲೆ ಪ್ರಕರಣ ದಾಖಲಿಸುವುದು ಹೀಗೆ ನಿತ್ಯ ಹತ್ತಾರು ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಗುಂಡಾ ರಾಜ್ಯವಾಗಿ ಪರಿಣಮಿಸುತ್ತಿದ್ದು, ಕಾಂಗ್ರೆಸ್ಸಿಗರಿಂದ ಭಾರತ ಸಂವಿಧಾನದ ಆಶಯಕ್ಕೆ ಕೊಡಲಿಪೆಟ್ಟು ಕೊಡುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ನೇರವಾಗಿ ಆರೋಪಿಸಿದರು.
ಸೋಮವಾರ ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ೭೭ನೇ ಗಣರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ೨೦ ವರ್ಷದ ಹಿಂದಿನ ಬಿಹಾರ ರಾಜ್ಯವನ್ನು ನೆನಪು ಮಾಡಿಕೊಳ್ಳುವಂತಾಗಿದೆ. ಬಳ್ಳಾರಿಯಲ್ಲಿ ಗಲಭೆ ಎಬ್ಬಿಸಿ ತಮ್ಮ ಕಾಂಗ್ರೆಸ್ ಕಾರ್ಯಕರ್ತನಿಗೆ ಗುಂಡು ಹಾರಿಸಿದಂತಹ ಘಟನೆ ನಡೆಸಿದವರ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಮರ್ಥನೆ ಮಾಡಿಕೊಳ್ಳುತ್ತಾರೆ. ಜನಪ್ರತಿನಿಧಿಗಳಿಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದರೆ ಅಮರೇಕಾದಿಂದ ರಕ್ಷಣೆ ಪಡೆದುಕೊಳ್ಳಿ ಎಂದು ಉಡಾಫೆ ಮಾತನಾಡುತ್ತಾರೆ. ಇಲ್ಲಿ ಕೊಪ್ಪಳದ ಸಂಸದ ರಾಜಶೇಖರ ಹಿಟ್ನಾಳ್ ಆನೆಗೊಂದಿಯಲ್ಲಿ ನಡೆದ ವಿದೇಶಿ ಮಹಿಳೆಯರ ಅತ್ಯಾಚಾರ, ಕೊಲೆಯನ್ನು ಸಣ್ಣ ಘಟನೆ ಎಂದು ಉಡಾಫೆ ಹೇಳಿಕೆ ನೀಡುತ್ತಾನೆ. ಯಾವುದೇ ಜಿಲ್ಲೆಯಲ್ಲಿ ಹೋದರು ಕಾಂಗ್ರೆಸ್ ಶಾಸಕರ, ಸಚಿವರ ಮತ್ತು ಅವರ ಪಕ್ಷದ ಮುಖಂಡರು, ಯುವಕರು ಗುಂಡಾಗಳಂತೆ ವರ್ತಿಸುತ್ತಿದ್ದಾರೆ. ಡಾ.ಬಾಬಾ ಸಾಹೇಬ್ ಅವರ ಸಂವಿಧಾನದ ಆಶಯದಂತೆ ನಡೆದುಕೊಳ್ಳುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇಂತಹ ಸಂದರ್ಭದಲ್ಲೂ ನಾನು ಗಂಗಾವತಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದೇನೆ. ನಗರದ ಕನಕಗಿರಿ ರಸ್ತೆಯಲ್ಲಿ ಸ್ಯಾಟಲೈಟ್ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುತ್ತದೆ. ಅದೇ ರೀತಿ ಹೆಚ್ಕೆಡಿಬಿ ಅನುದಾನದಲ್ಲಿ ನಗರದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಅನುದಾನ ತರಲಾಗಿದೆ. ಗಣರಾಜ್ಯೋತ್ಸವದಂತಹ ಮಹತ್ವದ ಕಾರ್ಯಕ್ರಮದಲ್ಲಿ ಅಭಿವೃದ್ಧಿ, ಯುವಕರ ಆಶೋತ್ತರಕ್ಕೆ ತಕ್ಕಂತೆ ಚರ್ಚೆಯಾಗಬೇಕು. ಆದರೆ ಕಾಂಗ್ರೆಸ್ ಸರಕಾರದ ಅಕ್ರಮಣಕಾರಿ ನೀತಿಯಿಂದಾಗಿ ಇಂದು ದೌರ್ಜನ್ಯ, ಕೊಲೆ, ಅತ್ಯಾಚಾರದ ಬಗ್ಗೆ ಚರ್ಚೆ ಮಾಡುವಂತಾಗಿದೆ ಎಂದು ರೆಡ್ಡಿ ವಿಷಾದ ವ್ಯಕ್ತಪಡಿಸಿದರು.
ತಹಶೀಲ್ದಾರ ಯು.ನಾಗರಾಜ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದರು. ಸಂಚಾರಿ ಪಿಎಸ್ಐ ಶಾರದಮ್ಮ ನೇತೃತ್ವದಲ್ಲಿ ಪೊಲೀಸ್, ಎನ್ಸಿಸಿ, ಸ್ಕೌಟ್ ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಪಥ ಸಂಚಲನದ ಮೂಲಕ ಧ್ವಜ ವಂದನೆ ಸಲ್ಲಿಸಲಾಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿಯ ನೃತ್ಯ ಪ್ರದರ್ಶನ ಮಾಡಿದರು. ವಿವಿಧ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬಿಇಓ ಹೆಚ್.ಬಿ.ನಟೇಶ ಸ್ವಾಗತಿಸಿದರು. ಶಿಕ್ಷಕಿ ಜಯಶ್ರೀ ಹಕ್ಕಂಡಿ ನಿರ್ವಹಿಸಿದರು. ನಗರ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ, ತಾಪಂ ಇಓ ರಾಮಿರೆಡ್ಡಿ ಪಾಟೀಲ್ ಇದ್ದರು.
ಬಾಕ್ಸ್:
೨೦೨೮ರಲ್ಲೂ ಗಂಗಾವತಿಯಿಂದ ಸ್ಪರ್ಧೆ
ನನಗೆ ಗಂಗಾವತಿ ವಿಧಾನಸಭೆ ಕ್ಷೇತ್ರದ ಜನರು ರಾಜಕೀಯ ಪುನರ್ಜನ್ಮ ನೀಡಿದ್ದಾರೆ. ಹೀಗಾಗಿ ಬರುವ ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಳ್ಳಾರಿ ನನ್ನ ಸ್ವಂತ ಊರು ಆಗಿರುವುದರಿಂದ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿದ್ದೇನೆ. ಇತ್ತಿಚೀಗೆ ನಡೆದ ಘಟನೆಯಿಂದಾಗಿ ಅಲ್ಲಿ ಹೆಚ್ಚು ಗಮನ ಕೊಡಬೇಕಾಗಿದೆ. ಎರಡುವರೆ ವರ್ಷದಿಂದ ತಿರುಗಿ ನೋಡದ ಮಾಜಿ ಶಾಸಕ ಅನ್ಸಾರಿ ಕಳೆದ ದಿನ ಕ್ಷೇತ್ರದ ಇರಕಲ್ಗಡಾದಲ್ಲಿ ಬಾಗಿನ್ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷ ಮುಳುಗುತ್ತಿದೆ. ೨೦೨೮ರಲ್ಲಿ ಕಾಂಗ್ರೆಸ್ ಎಲ್ಲ ಕಡೆಗಳಲ್ಲಿ ಸರ್ವನಾಶವಾಗುತ್ತದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕ ಮಾಡಿರುವ ಗಲಭೆಗೆ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಹತ್ತಾರು ಘಟನೆಗಳನ್ನು ಜನ ನೋಡಿ ಕಾಂಗ್ರೆಸ್ ಬಗ್ಗೆ ರೋಷಿ ಹೋಗಿದ್ದಾರೆ.
ಗಾಲಿ ಜನಾರ್ಧನರೆಡ್ಡಿ, ಶಾಸಕರು, ಗಂಗಾವತಿ.

ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ- ಕಿಮ್ಸ್ ಆಡಳಿತಾಧಿಕಾರಿ ಬಿ ಕಲ್ಲೇಶ ಮನೆ ಹಾಗೂ ಕಾಲೇಜ್ ಗಳಲ್ಲಿ ಪರಿಶೀಲನೆ- ನವಚೇತನ ಕಾಲೇಜಿನಲ್ಲಿ ಕಂತೆ ಕಂತೆ ನೋಟು ಎಣಿಕೆ

ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಯಲ್ಲಿ- ಕಾಂಗ್ರೆಸ್ಸಿಗೆ ಸೋಲು: ಚಂದ್ರಶೇಖರ ನಾಲತ್ವಾಡ ವಿಷಾದ- ಸುಲಭ ಗೆಲುವ ಮರೆತ ನಾಯಕರು: ಕಾಂಗ್ರೆಸ್ಸಿಗೆ ಹಿನ್ನಡೆ

ಸ್ಥಳೀಯ ಸಂಸ್ಥೆಗಳ ಯೋಜನಾ ಸಮಿತಿ ಸದಸ್ಯರ ಚುನಾವಣೆ- ೬ ಸ್ಥಾನಕ್ಕೆ ೪ ಬಿಜೆಪಿ ೨ ಕಾಂಗ್ರೆಸ್ ಸದಸ್ಯರು ಆಯ್ಕೆ- ಬಿಜೆಪಿ ಮುಖಂಡರಿಗೆ ಹರ್ಷ: ಕಾಂಗ್ರೆಸ್ಸಿಗರಿಗೆ ಸೋಲಿನ ಮುಜುಗರ