

24th March 2026

ಕೊಪ್ಪಳ.
ಆರ್ಯ ಈಡಿಗ ಸಮಾಜದ ಗುರುಗಳಾದ ಪ್ರಣಾವನಂದ ಸ್ವಾಮಿಗಳು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ತಪ್ಪು ಸಂದೇಶದ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಸ್ವಾಮಿಗಳು ಎ.೬ ರಂದು ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ನೀಡಿರುವ ಹೇಳಿಕೆಯನ್ನು ಸಚಿವರ ಬೆಂಬಲಿಗರಾದ ನಾವುಗಳು ಖಂಡಿಸುತ್ತೇವೆ. ಸ್ವಾಮಿಗಳು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಸ್ವಾಗತಿಸುತ್ತೇವೆ. ಸಚಿವರ ವಿರುದ್ಧ ಮಾತನಾಡುವುದನ್ನು ನಾವು ಖಂಡಿಸುತ್ತೇವೆ ಎಂದರು.
ಸೋಮವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಟಿ ನಡೆಸಿ ಅವರು ಮಾತನಾಡಿದರು. ಆರ್ಯ ಈಡಿಗ ಸಮಾಜದ ಪ್ರಣಾವನಂದ ಸ್ವಾಮಿಗಳು ಈಡಿಗ ಸಮಾಜದ ಅಭಿವೃದ್ಧಿಗೆ ಹಲವು ಬೇಡಿಕೆಗಳೊಂದಿಗೆ ಬೀದರಿನಿಂದ ಬೆಂಗಳೂರವರೆಗೆ ಪಾದಯಾತ್ರೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಸಹ ಸಹಕಾರ ನೀಡಿ ನಮ್ಮ ಸಮಾಜ ಬೆಂಗಳೂರಿಗೆ ತೆರಳಲು ಬೆಂಬಲ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಆಗಮಿಸಿ ಸ್ವಾಮಿಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ. ಮತ್ತು ಮುಖ್ಯಮಂತ್ರಿಗಳು ಹಾಗೂ ನಮ್ಮ ಸಮಾಜದ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಅಧಿವೇಶನದ ನಂತರ ಈಡಿಗ ಬೇಡಿಕೆಗಳನ್ನು ಈಡೇರಿರುವ ಭರವಸೆ ನೀಡಿದ್ದಾರೆ. ಆದರೆ ಪ್ರಣಾವನಂದ ಸ್ವಾಮಿಗಳು ಕೊಪ್ಪಳಕ್ಕೆ ಆಗಮಿಸಿ ಸುದ್ದಿಗೋಷ್ಟಿಯಲ್ಲಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಸಚಿವರಾಗಿ ಅವರು ತಮ್ಮ ಜವಬ್ದಾರಿ ನಿಭಾಯಿಸಿದ್ದಾರೆ. ಸರಕಾರಕ್ಕೆ ಕಾಲವಕಾಶ ನೀಡದೇ ತಮ್ಮ ಮನಸ್ಸಿಗೆ ಬಂದಂತೆ ಮುಖ್ಯಮಂತ್ರಿಗಳು, ಸಚಿವರನ್ನು ನಿಂದನೆ ಮಾಡಿದರೆ ಹೇಗೆ. ಸಚಿವ ಶಿವರಾಜ ತಂಗಡಗಿ ಅವರು ಕನಕಗಿರಿ ಕ್ಷೇತ್ರದ ಈಡಿಗ ಸಮಾಜ ಹೆಚ್ಚಿರುವ ಬಸವಣ್ಣಕ್ಯಾಂಪ್, ಹೆಬ್ಬಾಳಕ್ಯಾಂಪ್ಗಳಿಗೆ ಕೋಟಿಗಟ್ಟಲೆ ಖರ್ಚು ಮಾಡಿ ರಸ್ತೆ ಮಾಡಿಸಿದ್ದಾರೆ. ಮತ್ತು ನಮ್ಮ ಸಮಾಜಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಇದನ್ನು ತಿಳಿದುಕೊಳ್ಳದೇ ಸ್ವಾಮಿಗಳು ಸಚಿವರ ಬಗ್ಗೆ ಸಿಂಗಲ್ ವರ್ಡ್ ಉಪಯೋಗಿಸಿ ಮಾತನಾಡಿರುವುದು ನಮಗೆಲ್ಲ ಬೇಸರವಾಗಿದೆ. ಈಡಿಗ ಸಮಾಜದ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರೂ ಸಚಿವ ಶಿವರಾಜ ತಂಗಡಗಿ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಸ್ವಾಮಿಗಳು ತಿಳಿಸಿರುವುದು ಸಚಿವರ ಬೆಂಬಲಿಗ ಈಡಿಗ ಸಮಾಜದವರೆಲ್ಲರೂ ವಿರೋಧಿಸುತ್ತಿದ್ದೇವೆ. ಅವರು ನಡೆಸುವ ಪ್ರತಿಭಟನೆಯಲ್ಲಿ ನಾವು ಭಾಗವಹಿಸುವುದಿಲ್ಲ. ಸ್ವಾಮಿಗಳು ರಾಜಕಾರಣಿಗಳಂತೆ ಮಾತನಾಡದೇ ಸಮಾಜದ ಅಭಿವೃದ್ಧಿಗೆ ಸೌಜನ್ಯದಿಂದ ಮಾತನಾಡಬೇಕು ಎಂದು ರೆಡ್ಡಿ ಶ್ರೀನಿವಾಸಿ ಮನವಿ ಮಾಡಿದ ಅವರು ಕಾಂಗ್ರೆಸ್ ಮುಖಂಡ ಹೆಚ್.ಆರ್.ಶ್ರೀನಾಥ ಅವರು ಸಚಿವರ ವಿರುದ್ಧ ಮಾತನಾಡಿರುವ ಸಂಗತಿ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಕಾರಟಗಿ ಈಡಿಗ ಸಮಾಜದ ಮುಖಂಡ ಹಾಗೂ ಪುರಸಭೆಯ ಸದಸ್ಯ ನಾಗರಾಜ ಈಡಿಗೇರ, ಉದಯಕುಮಾರ, ಮಂಗಳೇಶ ಈಡಿಗೇರ ಇದ್ದರು.